Friday, September 26, 2025
Friday, September 26, 2025

ಕಳೆಗುಂದಿರುವ ಗಂಡುಗಲಿ ಕುಮಾರ ರಾಮನ ಕೋಟೆ

ವಿಜಯನಗರ ಸಾಮ್ರಾಜ್ಯದ ಉದಯಕ್ಕೆ ಹಕ್ಕಬುಕ್ಕರ ಕೊಡುಗೆ ನೀಡಿದ ಬಳ್ಳಾರಿ ಜಿಲ್ಲೆಯ ಕಂಪ್ಲಿಯ ನಾಯಕ ಗಂಡುಗಲಿ ಕುಮಾರ ರಾಮನ ಕೋಟೆ ಇಂದು ಪುರಾತತ್ವ ಇಲಾಖೆಯ ಕಣ್ಣಿಗೆ ಬಿದ್ದರೂ ಬೀಳದಂತೆ ಕಳ್ಳಿ, ಮುಳ್ಳುಗಳು, ನಿಧಿ ಕಳ್ಳರ ಹಾವಳಿ, ಗಾಳಿ - ಮಳೆ, ಒತ್ತುವರಿಯಂತ ಕಂತೆ ಕಂತೆ ಕಷ್ಟಗಳನ್ನು ಕಂಡು ಕರಗಿ ಸೊರಗುತ್ತಿದೆ.

  • ಜಡೇಶ ಎಮ್ಮಿಗನೂರು

ನಾಡ ಹಬ್ಬ ದಸರಾ ಹತ್ತಿರದಲ್ಲೇ ಇದೆ. ಈ ಉತ್ಸವದ ಭಾಗವಾಗಿ ಮೈಸೂರಿನಲ್ಲಿ ಜರುಗುವ ಜಂಬೂ ಸವಾರಿ ವಿಶ್ವ ಪ್ರಸಿದ್ಧ. ಸಿಂಗರಿಸಿದ ಆನೆಗಳ ಸಂಗದಲ್ಲಿ ಅಪ್ಪಟ ಚಿನ್ನದ ಅಂಬಾರಿ, ಅದರೊಳಗೆ ನಾಡ ಅಧಿ ದೇವತೆ ಚಾಮುಂಡೇಶ್ವರಿ ಹೊತ್ತು ಅಭಿಮನ್ಯು ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಾನೆ. ಸಾಗುವ ದಾರಿ, ಜನರ ಸಂಭ್ರಮ ಸಡಗರ, ಇವುಗಳನ್ನೆಲ್ಲ ನೋಡಲು ನೂರು ಕಣ್ಣು ಸಾಲದು. ಇದರಿಂದಲೇ ನಮ್ಮ ನಾಡ ಹಬ್ಬವಾಗಿ ದಸರಾ ಪ್ರಸಿದ್ಧಿ ಪಡೆದಿರುವುದು. ಇಂಥ ಮಹೋನ್ನತ ಉತ್ಸವದ ಆದಿ ಪುರುಷರ ನೆನೆಯಲು ಇದಕ್ಕಿಂತ ಸಕಾರಣ ಮತ್ತೇನು ಬೇಕು ಅಲ್ಲವೇ?

ಇತಿಹಾಸದ ಪುಟಗಳನ್ನು ಅರಸುತ್ತಾ ಹೊರಟರೆ ಮೈಸೂರು ದಸರಾ ವಿಶ್ವದಾದ್ಯಂತ ಖ್ಯಾತಿ ಪಡೆದಿದೆ. ಈ ಉತ್ಸವದ ಮೂಲ ಪುರುಷರ ಕುರಿತು ಮಾತನಾಡುವಾಗ ಎದೆಯುಬ್ಬಿ ಬರುತ್ತದೆ. ಸದ್ಯ ಪುಣ್ಯ ಪುರುಷನಾಳಿದ ನೆಲವು ಇತಿಹಾಸದಿಂದಲೇ ಅಳಿಸಿ ಹೋಗುವ ವಿಷಮ ಪರಿಸ್ಥಿತಿಯನ್ನು ಎದುರಿಸುತ್ತಿದೆ. ನಾವೀಗ ನೆನೆಸುತ್ತಿರುವುದು ವಿಜಯನಗರ ಸಾಮ್ರಾಜ್ಯದ ಉದಯಕ್ಕೆ ಹಕ್ಕಬುಕ್ಕರ ಕೊಡುಗೆ ನೀಡಿದ ಕಂಪಿಲಿ ಅಂದರೆ ಇಂದಿನ ಬಳ್ಳಾರಿ ಜಿಲ್ಲೆಯ ಕಂಪ್ಲಿಯ ನಾಯಕರ ಕುರಿತು. ಅಲ್ಲಿನ ಗಂಡುಗಲಿ ಕುಮಾರ ರಾಮನ ಕೋಟೆ ಇಂದು ಪುರಾತತ್ವ ಇಲಾಖೆಯ ಕಣ್ಣಿಗೆ ಬಿದ್ದರೂ ಬೀಳದಂತೆ ಕಳ್ಳಿ, ಮುಳ್ಳುಗಳು, ನಿಧಿ ಕಳ್ಳರ ಹಾವಳಿ, ಗಾಳಿ - ಮಳೆ, ಒತ್ತುವರಿಯಂತ ಕಂತೆ ಕಂತೆ ಕಷ್ಟಗಳನ್ನು ಕಂಡು ಕರಗಿ ಸೊರಗುತ್ತಿದೆ. ಕುಮ್ಮಟದುರ್ಗದ ಕೋಟೆ, ಅರಮನೆಯ ಅವಶೇಷಗಳು, ಬೆಟ್ಟದಲ್ಲಿನ ಜೈನ ಬಸದಿ, ಕುದುರೆ ಲಾಳ ಹೀಗೆ ಅನೇಕ ಸ್ಮಾರಕಗಳು ಅಳಿವಿನ ಅಂಚಿನಲ್ಲಿ ನಿಂತು ಪುರಾತತ್ವ ಇಲಾಖೆ, ಸರಕಾರದ ಹಸ್ತಲಾಘವವನ್ನು ಅರಸುತ್ತ ನಿಂತಿವೆ.

Gandugali Kumara Ram Fort ೨

ʼಪರನಾರಿ ಸಹೋದರʼ ಎಂದು ಇತಿಹಾಸದ ಪುಟಗಳಲ್ಲಿ ಶ್ರೀರಾಮನಂತೆ ಚಾರಿತ್ರಿಕ ಶ್ರೀಮಂತ ಪುರುಷನಾಗಿ, ರಾಮಸ್ವಾಮಿ, ಕುಮಾರರಾಮ ಎಂದು ಸ್ಥಳೀಯರಿಂದ ಪೂಜೆಗೊಳ್ಳುವ ಗಂಡುಗಲಿ ಕುಮಾರರಾಮ ಇಲ್ಲಿನ ಜಬ್ಬಲಗುಡ್ಡ, ಮುಕ್ಕುಂಪಿ ಗುಡ್ಡ, ಆಗೋಲಿ, ಹೇಮಗುಡ್ಡ, ಕುಮ್ಮಟದುರ್ಗ ಹಾಗೂ ಹಳೆಕುಮ್ಮಟ ಸೇರಿ ಒಟ್ಟು ಏಳು ಬೆಟ್ಟಗಳ ನಟ್ಟ ನಡುವೆ ದೇವರಂತೆ ಪೂಜಿಸಲ್ಪಡುತ್ತಾನೆ. ಹೀಗೆ ಐತಿಹಾಸಿಕ ಪುರುಷನ ಹಿನ್ನೆಲೆ ಜತೆಗೆ ಪ್ರಾಕೃತಿಕ ಸೌಂದರ್ಯಕ್ಕೂ ಸೈ ಎನ್ನುವಂತೆ ಟೊಂಕಕಟ್ಟಿ ನಿಂತ ಅಚ್ಚಹಸಿರಿನ ಗುಡ್ಡಗಾಡು ಚಾರಣಿಗರನ್ನು ಕೈ ಬೀಸಿ ಕರೆಯುತ್ತಿದೆ. ಸಿಸಿ ರಸ್ತೆಯ ಮೂಲಕ ಸಾಗಿ ಗುಡ್ಡ ಪ್ರದೇಶ ತಲುಪಿ ದುರ್ಗಗಳನ್ನು ತಲುಪುವ ಚಾರಣದ ಮಧ್ಯೆ ಆಗಾಗ್ಗೆ ಸಿಗುವ ಕವಳಿ ಹಣ್ಣು, ಬಿಕ್ಕಿ ಹಣ್ಣು, ಸೀತಾಫಲ ಹೀಗೆ ಕಾಡು ಹಣ್ಣುಗಳನ್ನು ಸವಿಯುತ್ತ, ಸುತ್ತಲಿನ ಅರಣ್ಯ ಪ್ರದೇಶವನ್ನು ಕಣ್ಮನಗಳಲ್ಲಿ ಸವಿಯುತ್ತ ಅಲೆದಾಡುವಾಗ ಸಾಹಸದ ಅನುಭವ ಆಗದಿರದು.

ಗಂಡುಗಲಿಯ ಕೋಟೆ

ಕಂಪಿಲಿ ರಾಯನ ಹೆಸರನ್ನು ಕಂಪ್ಲಿಗೆ ಮತ್ತು ಗಂಡುಗಲಿ ಕುಮಾರ ರಾಮನ ಹೆಸರಿನಿಂದಲೇ ಕೋಟೆಯನ್ನು ಇಂದಿಗೂ ಕರೆಯಲಾಗುತ್ತಿದೆ. ಕಂಪ್ಲಿ ಮಾರ್ಗವಾಗಿ ಭತ್ತದನಾಡು ಗಂಗಾವತಿ ತಲುಪುವಾಗ ಈ ಕೋಟೆಯ ಬಾಗಿಲನ್ನು ಕಾಣಬಹುದು. ಇಲ್ಲಿ ಇಂದಿಗೆ ಕೊರವ, ನಾಯಕ, ಗಂಗಾ ಮತಸ್ಥ ಹೀಗೆ ಬೇರೆ ಬೇರೆ ಸಮುದಾಯದ ಜನ ವಾಸವಿದ್ದಾರೆ. ತಟದಲ್ಲೇ ತುಂಗಭದ್ರ ನದಿಯಯಿದ್ದು ಕೆಲ ಜನರು ಮೀನುಗಾರಿಕೆಯನ್ನು ವೃತ್ತಿಯಾಗಿ ಅವಲಂಬಿಸಿಕೊಂಡಿದ್ದಾರೆ.

Gandugali Kumara Ram Fort ೧

ಜತೆಗಿಟ್ಟುಕೊಳ್ಳಿ

ಕೋಟೆ ತಲುಪುವ ಮಾರ್ಗ ಮಧ್ಯೆ ಸಣ್ಣ ಸಣ್ಣ ನೀರಿನ ಕೊಳಗಳಿವೆ ಆದರು ಪಾನಯೋಗ್ಯ ಎನ್ನುವಂತಿಲ್ಲ ಹಾಗಾಗಿ ನೀರಿನ ವ್ಯವಸ್ಥೆ, ಬಿಸಿಲಿನಿಂದ ಬಚಾವಾಗಲು ಕ್ಯಾಪ್, ಅದ್ಭುತ ದೃಶ್ಯಗಳನ್ನು ಸೆರೆಹಿಡಿಯಲು ಕ್ಯಾಮೆರಾ ಜತೆಗೆ ಸ್ಥಳೀಯ ಗೈಡ್‌ಗಳನ್ನು ಕರೆದೊಯ್ದರೆ ಉತ್ತಮ.

ದಾರಿ ಹೇಗೆ?

ಬಳ್ಳಾರಿ, ಹೊಸಪೇಟೆ, ದರೋಜಿ ಹತ್ತಿರದ ರೈಲು ನಿಲ್ದಾಣ ತಾಣಗಳಾಗಿದ್ದು, ಇಲ್ಲಿಂದ ನೇರ ಕಂಪ್ಲಿಗೆ ಸರಕಾರಿ ಬಸ್‌ ಸಾರಿಗೆ ವ್ಯವಸ್ಥೆ ಇದೆ. ಕಂಪ್ಲಿಯಿಂದ ಸ್ಥಳೀಯ ಆಟೋಗಳ ಸಹಾಯ ಪಡೆದು ಈ ಕೋಟೆ ಪ್ರದೇಶವನ್ನು ತಲುಪಬಹುದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..