ಗೆಳೆಯರ ಜತೆ ಗಂಗಡಿಕಲ್ ಚಾರಣದ ಕಥೆ
ಕುದುರೆಮುಖ ಪರ್ವತ ಶ್ರೇಣಿಯಲ್ಲಿ ಇನ್ನೂ ಹೆಚ್ಚು ಜನರ ಗಮನಕ್ಕೆ ಬಾರದ, ಆದರೆ ಪ್ರಕೃತಿಪ್ರಿಯರ ಹೃದಯ ಗೆಲ್ಲುವ ತಾಣವೇ ಗಂಗಡಿಕಲ್ ಶಿಖರ. ಈ ಶಿಖರವು ಸುಮಾರು 4,806 ಅಡಿ ಎತ್ತರದಲ್ಲಿದೆ. ಸಾಹಸ, ಸೌಂದರ್ಯ ಮತ್ತು ನೆಮ್ಮದಿಯನ್ನು ಒಂದೆಡೆ ಕಾಪಿಟ್ಟುಕೊಂಡಿರುವ ಸ್ಥಳ. ವಿಶೇಷವೆಂದರೆ ಚಾರಣ ಆರಂಭವಾದ ಕ್ಷಣದಿಂದ ಶಿಖರದವರೆಗೆ ಸಂಪೂರ್ಣ ಗಂಗಡಿಕಲ್ ಶಿಖರ ನಮ್ಮ ಕಣ್ಣಿಗೆ ಕಾಣಿಸುತ್ತಲೇ ಇರುತ್ತದೆ. ಪ್ರತಿ ಹೆಜ್ಜೆಯೂ ಶಿಖರದತ್ತ ನಮ್ಮನ್ನು ಹತ್ತಿರ ಕೊಂಡೊಯ್ಯುವ ಅನುಭವ ನೀಡುತ್ತದೆ.
- ಶರಣು ಬಸರಕೋಡ
ಗೆಳೆಯರೊಂದಿಗೆ ಚಾರಣಕ್ಕೆ ಹೋಗುವುದು ನನಗಿಷ್ಟ. ಇದು ಹೊಸ ಅನುಭವಗಳನ್ನು ಸಂಗ್ರಹಿಸುತ್ತಾ, ಪ್ರಕೃತಿಯೊಂದಿಗೆ ಬೆರೆಯುವುದು ಮತ್ತು ಸ್ನೇಹದ ಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಬದುಕಿನ ಒಂದು ಸುಂದರ ಅಧ್ಯಾಯ. ಅಂಥ ಮರೆಯಲಾಗದ ಅನುಭವವನ್ನು ನಮಗೆ ನೀಡಿದ್ದು ಪಶ್ಚಿಮ ಘಟ್ಟಗಳ ಮಡಿಲಲ್ಲಿರುವ ಗಂಗಡಿಕಲ್ ಚಾರಣ.
ಕರ್ನಾಟಕದ ಪಶ್ಚಿಮ ಘಟ್ಟ ಕುದುರೆಮುಖ ಪರ್ವತ ಶ್ರೇಣಿಯಲ್ಲಿರುವ ಗಂಗಡಿಕಲ್, ತನ್ನ ಅದ್ಭುತ ನೈಸರ್ಗಿಕ ಸೌಂದರ್ಯದಿಂದ ಪ್ರತಿಯೊಬ್ಬ ಪ್ರಕೃತಿ ಪ್ರಿಯನನ್ನೂ ಕೈಬೀಸಿ ಕರೆಯುವ ತಾಣ. ಹಸಿರಿನಿಂದ ಕಂಗೊಳಿಸುವ ಬೆಟ್ಟಗಳ ಸಾಲು, ಮೋಡಗಳ ಹೊದಿಕೆಯಲ್ಲಿ ಮರೆಯಾಗುವ ಶಿಖರಗಳು, ಮೈಗೆ ತಾಕುವ ಜಡಿಮಳೆ ಮತ್ತು ಹೆಜ್ಜೆ ಹೆಜ್ಜೆಗೂ ಉತ್ಸಾಹ ತುಂಬುವ ತಂಗಾಳಿ ಈ ಎಲ್ಲವೂ ಸೇರಿ ನಮ್ಮ ಚಾರಣವನ್ನು ಒಂದು ಅಪೂರ್ವ ಅನುಭವವನ್ನಾಗಿ ಮಾಡಿದ್ದವು.
ಇದನ್ನೂ ಓದಿ: ಆಲ್ಟಿಟ್ಯೂಡ್ ಸಿಕ್‌ನೆಸ್!
ತಳದಿಂದ ಶಿಖರ ಕಾಣಬಹುದು
ಕುದುರೆಮುಖ ಪರ್ವತ ಶ್ರೇಣಿಯಲ್ಲಿ ಇನ್ನೂ ಹೆಚ್ಚು ಜನರ ಗಮನಕ್ಕೆ ಬಾರದ, ಆದರೆ ಪ್ರಕೃತಿಪ್ರಿಯರ ಹೃದಯ ಗೆಲ್ಲುವ ತಾಣವೇ ಗಂಗಡಿಕಲ್ ಶಿಖರ. ಈ ಶಿಖರವು ಸುಮಾರು 4,806 ಅಡಿ ಎತ್ತರದಲ್ಲಿದೆ. ಸಾಹಸ, ಸೌಂದರ್ಯ ಮತ್ತು ನೆಮ್ಮದಿಯನ್ನು ಒಂದೆಡೆ ಕಾಪಿಟ್ಟುಕೊಂಡಿರುವ ಸ್ಥಳ. ವಿಶೇಷವೆಂದರೆ ಚಾರಣ ಆರಂಭವಾದ ಕ್ಷಣದಿಂದ ಶಿಖರದವರೆಗೆ ಸಂಪೂರ್ಣ ಗಂಗಡಿಕಲ್ ಶಿಖರ ನಮ್ಮ ಕಣ್ಣಿಗೆ ಕಾಣಿಸುತ್ತಲೇ ಇರುತ್ತದೆ. ಪ್ರತಿ ಹೆಜ್ಜೆಯೂ ಶಿಖರದತ್ತ ನಮ್ಮನ್ನು ಹತ್ತಿರ ಕೊಂಡೊಯ್ಯುವ ಅನುಭವ ನೀಡುತ್ತದೆ. ಅರಣ್ಯ ಇಲಾಖೆಯ ಚೆಕ್‌ಪೋಸ್ಟ್‌ನಿಂದ ಈ ಚಾರಣ ಆರಂಭವಾಗುತ್ತದೆ. ಮೊದಲ ಹಂತವು ದಟ್ಟ ನಿತ್ಯಹರಿದ್ವರ್ಣದ ಶೋಲಾ ಕಾಡಿನೊಳಗೆ ಸಾಗುತ್ತದೆ. ಎತ್ತರದ ಮರಗಳು, ತೇವಮಯ ಮಣ್ಣು, ಪಕ್ಷಿಗಳ ಕಲರವ ಮತ್ತು ಎಲೆಗಳ ನಡುವೆ ಜಾರಿಬರುವ ಸೂರ್ಯನ ಕಿರಣಗಳು ಈ ಪಯಣವನ್ನು ಮೋಹಕಗೊಳಿಸುತ್ತವೆ. ಸ್ವಲ್ಪ ದೂರ ಸಾಗಿದ ನಂತರ ಹಸಿರು ಹುಲ್ಲುಗಾವಲುಗಳು ಆರಂಭವಾಗುತ್ತವೆ. ಅಲ್ಲಿಂದ ಮೊದಲ ಬಾರಿಗೆ ಕಾಣುವ ಗಂಗಡಿಕಲ್ ಶಿಖರ ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.

ಮಂಜಿನ ತೆರೆ ಸರಿದಾಗ ಕಾಣುವ ಶಿಖರಗಳು ಪ್ರಕೃತಿಯ ಅದ್ಭುತ ಕಲಾಕೃತಿಯಂತೆ ಭಾಸವಾಗುತ್ತವೆ. ನಮ್ಮ ಚಾರಣ ಆರಂಭವಾದ ಕ್ಷಣದಿಂದಲೇ ಪ್ರಕೃತಿ ತನ್ನ ವೈಭವವನ್ನು ತೆರೆದಿಟ್ಟಿತು. ಕೆಲವೊಮ್ಮೆ ಮಂಜು ದಾರಿಯನ್ನೇ ಆವರಿಸಿತು. ಇನ್ನೊಮ್ಮೆ ಮೋಡಗಳ ನಡುವೆ ಹಸಿರು ಕಣಿವೆಗಳು ಕಣ್ಣಿಗೆ ಹಬ್ಬದಂತೆ ಗೋಚರಿಸಿದವು. ಮಳೆಯ ಹನಿಗಳು ಮುಖವನ್ನು ಸವರಿದರೆ, ತಂಪಾದ ಗಾಳಿ ಆಯಾಸವನ್ನು ಮರೆಮಾಚುತ್ತಿತ್ತು. ಪ್ರತಿಯೊಂದು ಹೆಜ್ಜೆಯೂ ಹೊಸ ಸೌಂದರ್ಯದ ಅನಾವರಣವಾಗಿತ್ತು.
ಕಡಿದಾದ ಹಾದಿಗಳಲ್ಲಿ ಚಾರಣ
ಗಂಗಡಿಕಲ್ ಚಾರಣವು ತಾಂತ್ರಿಕವಾಗಿ ತುಂಬಾ ಕಠಿಣವಲ್ಲ. ಆದರೆ ಕೊನೆಯ ಭಾಗದಲ್ಲಿ ಇರುವ ಕಡಿದಾದ ಏರುದಾರಿ ಮತ್ತು ಕಬ್ಬಿಣದ ಅಂಶ ಹೆಚ್ಚಿರುವ ಸಡಿಲ ಕಲ್ಲು- ಜಲ್ಲಿಗಳಿರುವ ಹಾದಿಯಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಸಾಗಬೇಕು. ಗಂಗಡಿಕಲ್‌ನ ದಾರಿಗಳು ಸವಾಲಿನಿಂದ ಕೂಡಿದ್ದರೂ, ಗೆಳೆಯರ ಜತೆಯಿದ್ದಾಗ ಆ ಸವಾಲುಗಳೂ ಸಂತಸದ ಕ್ಷಣಗಳಾಗಿ ಬದಲಾಗಿದ್ದವು. ಒಬ್ಬರಿಗೊಬ್ಬರು ಧೈರ್ಯ ತುಂಬುತ್ತಾ, ನಗುತ್ತಾ, ತಮಾಷೆ ಮಾಡುತ್ತಾ ಸಾಗಿದ ಹೆಜ್ಜೆಗಳು ಸ್ನೇಹದ ನಿಜವಾದ ಅರ್ಥವನ್ನು ಮತ್ತೊಮ್ಮೆ ನೆನಪಿಸಿದವು. ಪ್ರಕೃತಿಯ ಮಡಿಲಲ್ಲಿ ಕಳೆದ ಆ ಕೆಲವು ಗಂಟೆಗಳು, ಬದುಕಿನ ಅನೇಕ ಗದ್ದಲಗಳನ್ನು ಮರೆಸುವಷ್ಟು ನೆಮ್ಮದಿಯನ್ನು ನೀಡಿದವು. ಈ ಚಾರಣದ ಅತ್ಯಂತ ರೋಚಕ ಭಾಗ ಎರಡೂ ಬದಿಗಳಲ್ಲೂ ಆಳವಾದ ಕಣಿವೆಗಳಿದ್ದು, ಮಧ್ಯದಲ್ಲಿ ಕಿರಿದಾದ ಹಾದಿಯಲ್ಲಿ ನಡೆಯುವುದು. ಅದು ಜೀವನದಲ್ಲಿ ಮರೆಯಲಾಗದ ಸಾಹಸವಾಗಿ ಉಳಿಯುತ್ತದೆ.
ಶಿಖರದ ಮೇಲೆರುವಾಗ ಸಿಗುವ ಅನುಭವ ವರ್ಣನಾತೀತ. ಮೋಡಗಳ ನಡುವೆ ತಲೆಯೆತ್ತಿ ನಿಂತ ಪರ್ವತಗಳು, ಎಲ್ಲೆಲ್ಲೂ ಹರಡಿಕೊಂಡ ಹಸಿರು ಹೊದಿಕೆ ಮತ್ತು ಕಿವಿಗೆ ಸಂಗೀತದಂತೆ ಕೇಳಿಬರುವ ಗಾಳಿಯ ಸದ್ದು ಇವೆಲ್ಲವೂ ಸೇರಿ ಮನಸನ್ನು ಒಂದು ವಿಭಿನ್ನ ಲೋಕಕ್ಕೆ ಕರೆದೊಯ್ದವು.
ಶಿಖರ ತಲುಪಿದಾಗ
ಗಂಗಡಿಕಲ್ ಗುಡ್ಡದ ಮೇಲೆ ತಲುಪಿದ ಕ್ಷಣದಲ್ಲಿ ಆಯಾಸ ಮರೆಯಾಗುತ್ತದೆ. ಎದುರಿಗೆ ಹಸಿರಿನಿಂದ ಆವೃತ ಕುದುರೆಮುಖ ಪರ್ವತ ಶ್ರೇಣಿ, ದೂರದವರೆಗೆ ಹರಡಿಕೊಂಡಿರುವ ಶೋಲಾ ಕಾಡು, ಗಾಳಿಗೆ ತೂಗುವ ಹುಲ್ಲುಗಾವಲುಗಳು—ಇವೆಲ್ಲವೂ ಕಣ್ಣಿಗೆ ಹಬ್ಬದಂತಿರುತ್ತವೆ. ಗಂಗಡಿಕಲ್ ಗುಡ್ಡದ ಒಂದು ಬದಿಯಲ್ಲಿ ಕ್ಯಾತನಮಕ್ಕಿ ಬೆಟ್ಟಗಳು, ಮತ್ತೊಂದು ಬದಿಯಲ್ಲಿ ಕುರಿಂಜಲ್ ಮತ್ತು ವಳಿಕುಂಜ (ಅಜಿಕುಂಜ) ಶಿಖರಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಅದರಲ್ಲೂ ಶಿಖರದಿಂದ ಕಾಣುವ ಲಖ್ಯಾ ಅಣೆಕಟ್ಟಿನ ಹಿನ್ನೀರು ಈ ಚಾರಣದ ಪ್ರಮುಖ ಆಕರ್ಷಣೆ. ಹಸಿರು ಹುಲ್ಲುಗಾವಲುಗಳ ನಡುವೆ ನೀಲಿಯಾಗಿ ಹರಡಿಕೊಂಡಿರುವ ಆ ಹಿನ್ನೀರಿನ ದೃಶ್ಯ ಒಂದು ಚಿತ್ರದಂತಿರುತ್ತದೆ. ಹವಾಮಾನ ಸ್ಪಷ್ಟವಾಗಿದ್ದರೆ ಹಳೆಯ ಕುದುರೆಮುಖ ಗಣಿಗಾರಿಕೆ ಪಟ್ಟಣವೂ ಕಣ್ಣಿಗೆ ಬೀಳುತ್ತದೆ. ಗಂಗಡಿಕಲ್‌ನಿಂದ ನಮ್ಮ ದೇಹ ಹಿಂದಿರುಗಿದೆ; ಮನಸು ಇನ್ನೂ ಅಲ್ಲಿನ ಮಂಜಿನ ಹೊದಿಕೆಯಲ್ಲಿ, ಹಸಿರು ಪರ್ವತಗಳ ನಡುವೆ ಮತ್ತು ತಂಗಾಳಿಯ ಸ್ಪರ್ಶದಲ್ಲೇ ವಿಹರಿಸುತ್ತಿದೆ.

ಇಂದಿನ ಯಾಂತ್ರಿಕ ಬದುಕಿನಲ್ಲಿ ಗೆಳೆಯರೊಂದಿಗೆ ಚಾರಣವೆಂದರೆ ಕೇವಲ ಪ್ರವಾಸವಲ್ಲ; ಅದು ಆತ್ಮಾವಲೋಕನದ ಪಯಣ. ಪ್ರಕೃತಿಯ ಮಹತ್ವವನ್ನು ಅರಿಯುವ ಅವಕಾಶ. ಸ್ನೇಹದ ಮೌಲ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಕ್ಷಣ. ಬದುಕಿನ ಓಟದಲ್ಲಿ ಸ್ವಲ್ಪ ಹೊತ್ತು ನಿಂತು ನಮ್ಮೊಳಗಿನ ನಮ್ಮನ್ನೇ ಕಾಣುವ ಅಪರೂಪದ ಅನುಭವ. ಅವಕಾಶ ಸಿಕ್ಕಾಗ ಮಿಸ್ ಮಾಡಬಾರದಷ್ಟೆ.
ದಾರಿ ಹೇಗೆ?
ಬೆಂಗಳೂರಿನಿಂದ ಗಂಗಡಿಕಲ್ ಬೇಸ್ ಪಾಯಿಂಟ್ ಸುಮಾರು 350 ಕಿಮೀ ದೂರದಲ್ಲಿದೆ. ನೇರ ಬಸ್ ಸಂಚಾರ ಇಲ್ಲವಾದ್ದರಿಂದ ಹೊರನಾಡು ಮಾರ್ಗವಾಗಿ ಸಂಚರಿಸುವ ಬಸ್‌ಗಳ ಮೂಲಕ ಕಳಸ ತಲುಪಿ, ಅಲ್ಲಿಂದ ಸ್ಥಳೀಯ ವಾಹನಗಳ ಮೂಲಕ ಬೇಸ್ ಪಾಯಿಂಟ್ ತಲುಪಬಹುದು.