Tuesday, May 12, 2026
Tuesday, May 12, 2026

ʻಮಡಿಕೇರಿ ಗದ್ದುಗೆʼ

ಕೊಡಗನ್ನು ಹಾಲೇರಿ ರಾಜವಂಶ 17-19ನೆಯ ಶತಮಾನದವರೆಗೆ ಆಳಿತು. ಈ ವಂಶದ ಸ್ಥಾಪಕ ಮುದ್ದುರಾಜ. ಇವನು ಕರ್ನಾಟಕದ ಇಕ್ಕೇರಿ ಪ್ರದೇಶದಿಂದ ಇಲ್ಲಿಗೆ ವಲಸೆ ಬಂದ ಕೆಳದಿಯ ನಾಯಕ. ಇಲ್ಲಿನ ರಾಜಕೀಯ ಅಸ್ಥಿರತೆಯನ್ನು ಬಳಸಿಕೊಂಡು ತನ್ನ ರಾಜವಂಶವನ್ನು ಸ್ಥಾಪಿಸಿದ. ಆತ ಕೊಡಗಿನ ಮೊದಲ ರಾಜನಾಗಿದ್ದು, ಮಡಿಕೇರಿ ನಗರವನ್ನು ಸ್ಥಾಪಿಸಿದನು. ಹಾಗಾಗಿ ಮಡಿಕೇರಿಯನ್ನು ಹಿಂದಿನ ಕಾಲದಲ್ಲಿ ʻಮುದ್ದುರಾಜಕೇರಿʼ ಎಂದು ಕರೆಯಲಾಗುತ್ತಿತ್ತು.

  • ಡಾ. ಕೆ. ಬಿ. ಸೂರ್ಯ ಕುಮಾರ್, ಮಡಿಕೇರಿ

ಕೊಡಗು ಜಿಲ್ಲೆಯ ಮಡಿಕೇರಿ ನಗರದ ಹಸಿರು ಬೆಟ್ಟಗಳ ನಡುವೆ ನಿಂತಿರುವ 'ರಾಜರ ಗದ್ದುಗೆ' ಇದೆ. ಇದು ಕೇವಲ ಒಂದು ಸಮಾಧಿ ಸ್ಥಳವಲ್ಲ; ಕೊಡಗಿನ ಹಾಲೇರಿ ರಾಜವಂಶದ ಐತಿಹಾಸಿಕ ಘನತೆ, ಧಾರ್ಮಿಕ ಸಾಮರಸ್ಯ ಮತ್ತು ವಾಸ್ತುಶಿಲ್ಪದ ಸಂಯೋಜನೆಯ ಸಾಕ್ಷಿಯಾಗಿದೆ. ನಗರದ ಉತ್ತರ ಭಾಗದ ಮಹದೇವಪೇಟೆ ಪ್ರದೇಶದಲ್ಲಿ ಈ ತಾಣವಿದ್ದು, ಪ್ರವಾಸಿಗರಿಗೆ ಇತಿಹಾಸದೊಂದಿಗೆ ಪ್ರಕೃತಿಯ ಸೌಂದರ್ಯವನ್ನು ಒಟ್ಟಿಗೆ ಅನುಭವಿಸುವ ಅವಕಾಶ ನೀಡುತ್ತದೆ. 19ನೆಯ ಶತಮಾನದ ಆರಂಭದಲ್ಲಿ ಈ ಸ್ಮಾರಕಗಳು ನಿರ್ಮಾಣವಾಗಿ, ಹಾಲೇರಿ ವಂಶದ ಪ್ರಮುಖ ರಾಜರುಗಳ ನೆನಪುಗಳನ್ನು ಇರಿಸಿವೆ.

ಇದನ್ನೂ ಓದಿ: ಕೊಡಗಿನ ಕೋಟೆ ಬೆಟ್ಟದಲ್ಲೂ ಅಪರೂದ ನೀಲಕುರಂಜಿ

ಕೊಡಗನ್ನು ಕಟ್ಟಿ ಆಳಿದ ರಾಜವಂಶ

ಕೊಡಗನ್ನು ಹಾಲೇರಿ ರಾಜವಂಶ 17-19ನೆಯ ಶತಮಾನದವರೆಗೆ ಆಳಿತು. ಈ ವಂಶದ ಸ್ಥಾಪಕ ಮುದ್ದುರಾಜ. ಇವನು ಕರ್ನಾಟಕದ ಇಕ್ಕೇರಿ ಪ್ರದೇಶದಿಂದ ಇಲ್ಲಿಗೆ ವಲಸೆ ಬಂದ ಕೆಳದಿಯ ನಾಯಕ. ಇಲ್ಲಿನ ರಾಜಕೀಯ ಅಸ್ಥಿರತೆಯನ್ನು ಬಳಸಿಕೊಂಡು ತನ್ನ ರಾಜವಂಶವನ್ನು ಸ್ಥಾಪಿಸಿದ. ಆತ ಕೊಡಗಿನ ಮೊದಲ ರಾಜನಾಗಿದ್ದು, ಮಡಿಕೇರಿ ನಗರವನ್ನು ಸ್ಥಾಪಿಸಿದನು. ಹಾಗಾಗಿ ಮಡಿಕೇರಿಯನ್ನು ಹಿಂದಿನ ಕಾಲದಲ್ಲಿ ʻಮುದ್ದುರಾಜಕೇರಿʼ ಎಂದು ಕರೆಯಲಾಗುತ್ತಿತ್ತು. ಆತ ಇಲ್ಲಿನ ಕೋಟೆ, ಅರಮನೆ ನಿರ್ಮಿಸಿ ಆಡಳಿತವನ್ನು ಬಲಪಡಿಸಿದನು.

ಬ್ರಿಟಿಷರ ವಶವಾದ ಕೊಡಗು

ಮುದ್ದುರಾಜನ ನಂತರ ಆಡಳಿತಕ್ಕೆ ಬಂದ ದೊಡ್ಡ ವೀರರಾಜೇಂದ್ರ, ಧೈರ್ಯಶಾಲಿ ಮತ್ತು ಯುದ್ಧಕೌಶಲ್ಯ ಪರಿಣತನಾಗಿದ್ದನು. ಟಿಪ್ಪು ಸುಲ್ತಾನನ ವಿರುದ್ಧ ಹೋರಾಡಿ ಮಡಿಕೇರಿಯನ್ನು ರಾಜಧಾನಿಯಾಗಿ ಮಾಡಿಕೊಂಡನು. ಮುಂದಿನ ದಿನಗಳಲ್ಲಿ ಎರಡನೆಯ ಲಿಂಗರಾಜೇಂದ್ರ ಆಡಳಿತದಲ್ಲಿ ಸುಧಾರಣೆಗಳನ್ನು ಮಾಡಿ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದನು. ಆದರೆ ಕೊಡಗಿನ ಕೊನೆಯ ರಾಜನಾದ ಚಿಕ್ಕ ವೀರರಾಜೇಂದ್ರನ ಆಡಳಿತದಲ್ಲಿ ಒಳರಾಜಕೀಯ ಸಮಸ್ಯೆಗಳು, ಅಸಮಾಧಾನಗಳು ಹೆಚ್ಚಾದವು. ಇದರಿಂದಾಗಿ ಬ್ರಿಟಿಷರು 1834ರಲ್ಲಿ ಕೊಡಗನ್ನು ತಮ್ಮ ಆಡಳಿತಕ್ಕೆ ತೆಗೆದುಕೊಂಡರು.

New Project (19)

ಮಡಿಕೇರಿ ಗದ್ದುಗೆ

ಕೊಡಗನ್ನು ಕಟ್ಟಿ ಆಳಿದ ಹಾಲೇರಿ ರಾಜರ ಸಮಾಧಿಗಳೇ ಇಂದು ನಾವು ನೋಡುತ್ತಿರುವ ʻಮಡಿಕೇರಿಯ ಗದ್ದುಗೆʼ. ಇಲ್ಲಿ ಒಟ್ಟು ಮೂರು ಪ್ರಮುಖ ಸಮಾಧಿ ಕಟ್ಟಡಗಳಿವೆ. ಅವುಗಳಲ್ಲಿ ಒಂದು ಸಾರ್ವಜನಿಕರಿಗೆ ತೆರೆದಿದ್ದು, ಇನ್ನೆರಡು ಮುಚ್ಚಲ್ಪಟ್ಟಿವೆ. ಈ ಸ್ಥಳವನ್ನು ಭಾರತೀಯ ಪುರಾತತ್ವ ಇಲಾಖೆ ಸಂರಕ್ಷಿಸಿದೆ. ಗದ್ದುಗೆಯ ಮಧ್ಯಭಾಗದಲ್ಲಿನ ದೊಡ್ಡ ಕಟ್ಟಡ ದೊಡ್ಡ ವೀರರಾಜೇಂದ್ರರ ಸಮಾಧಿ. ಇದು 1820ರಲ್ಲಿ ನಿರ್ಮಿಸಲ್ಪಟ್ಟಿತು. ಅವರ ಪತ್ನಿ ಮಹದೇವಮ್ಮನವರ ಸಮಾಧಿಯೂ ಇದರಲ್ಲಿದೆ. ದೊಡ್ಡ ವೀರರಾಜೇಂದ್ರರ ಸಮಾಧಿಯ ಪಕ್ಕದಲ್ಲಿ ಲಿಂಗರಾಜೇಂದ್ರರ ಸಮಾಧಿ ಇದೆ. ಇದನ್ನು ಅವರ ಪುತ್ರ ಚಿಕ್ಕವೀರರಾಜೇಂದ್ರರು 1820ರಲ್ಲಿ ಕಟ್ಟಿಸಿದರು. ಇವುಗಳ ಜತೆಗೆ 1834ರಲ್ಲಿ ಕಟ್ಟಿಸಿದ ರಾಜಗುರು ರುದ್ರಪ್ಪನವರ ಸಮಾಧಿ ಮತ್ತು ಕೆಲವು ಬ್ರಿಟಿಷ್ ಅಧಿಕಾರಿಗಳ ಸಮಾಧಿಗಳೂ ಇಲ್ಲಿವೆ. ಇದು ಕೊಡಗಿನ ರಾಜವಂಶದ ಕೊನೆಯ ಘಟ್ಟಗಳು ಮತ್ತು ಬ್ರಿಟಿಷ್ ಪ್ರಭಾವದ ಸಂಕೇತವಾಗಿದೆ.

ಅಪರೂಪದ ವಾಸ್ತುಶಿಲ್ಪ ಶೈಲಿ

ರಾಜರ ಗದ್ದುಗೆಯ ವಾಸ್ತುಶಿಲ್ಪವು ಇಂಡೋ-ಸಾರ್ಸೆನಿಕ್ ಶೈಲಿಯಲ್ಲಿದೆ. ಹಿಂದೂ ಮತ್ತು ಇಸ್ಲಾಮಿಕ್ ವಾಸ್ತಶಿಲ್ಪದ ಸುಂದರ ಸಂಯೋಜನೆಯನ್ನು ಇಲ್ಲಿ ಕಾಣಬಹುದು. ಇದರಲ್ಲಿನ ಗುಮ್ಮಟಗಳು ಮತ್ತು ನಾಲ್ಕು ಸಣ್ಣ ಗೋಪುರಗಳಿಂದ ದೂರದಿಂದ ನೋಡಲು ಮೊಘಲ್ ಶೈಲಿಯ ಮಸೀದಿಯಂತೆ ಕಾಣುತ್ತದೆ. ಆದರೆ ಕಿಟಕಿಗಳ ಮೇಲಿನ ಕಮಾನುಗಳು, ಕಂಬಗಳಲ್ಲಿನ ದಕ್ಷಿಣ ಭಾರತೀಯ ಶೈಲಿಯ ಕೆತ್ತನೆಗಳು ಮತ್ತು ವಿಶೇಷವಾಗಿ ಗುಮ್ಮಟಗಳ ಮೇಲ್ಭಾಗದಲ್ಲಿ ಸ್ಥಾಪಿಸಲಾದ ನಂದಿಯ ವಿಗ್ರಹಗಳು ಶೈವ ಸಂಪ್ರದಾಯವನ್ನು ಪ್ರತಿಬಿಂಬಿಸುತ್ತವೆ. ಕಬ್ಬಿಣದ ಸರಳುಗಳು, ಸುಂದರ ಕೆತ್ತನೆಗಳು ಮತ್ತು ಹಿತ್ತಾಳೆ ಕುಸುರಿ ಕೆಲಸಗಳು ಅಂದಿನ ಕಲಾಪ್ರೌಢಿಮೆಯನ್ನು ತೋರಿಸುತ್ತವೆ. ಇದು ಕೇವಲ ಸ್ಮಶಾನವಲ್ಲ, ಕಲಾತ್ಮಕ ಮಂದಿರದಂತೆ ನಿರ್ಮಿಸಲಾಗಿದೆ.

New Project (18)

ಪ್ರವಾಸಿಗರಿಗೆ ಆಕರ್ಷಣೆ

ಮಡಿಕೇರಿ ಗದ್ದುಗೆ ಬೆಟ್ಟದ ಮೇಲಿದೆ. ಹಾಗಾಗಿ ಇಲ್ಲಿಂದ ಮಡಿಕೇರಿ ನಗರದ ಸಂಪೂರ್ಣ ಪ್ಯಾನೊರಮಿಕ್ ವ್ಯೂ ನೋಡಬಹುದು. ಸುತ್ತಲೂ ಹಸಿರು ಉದ್ಯಾನ, ಹೂಗಿಡಗಳು, ಚೆನ್ನಾಗಿ ನಿರ್ವಹಿಸಲ್ಪಟ್ಟ ಹುಲ್ಲುಗಾವಲುಗಳು ಮತ್ತು ಶಾಂತ ವಾತಾವರಣವಿದೆ. ಪ್ರಕೃತಿ ಪ್ರೇಮಿಗಳಿಗೆ ವಿಶ್ರಾಂತಿ ಪಡೆಯಲು ಇದೊಂದು ಅತ್ಯುತ್ತಮ ಸ್ಥಳ.

ರಾಜರ ಗದ್ದುಗೆಯು ಕೊಡಗಿನ ವೀರ ಪರಂಪರೆ, ಧಾರ್ಮಿಕ ಸಹಜೀವನ ಮತ್ತು ಕಲಾ ಸೌಂದರ್ಯದ ಸಂಕೇತವಾಗಿ ನಿಂತಿದೆ. ಮಡಿಕೇರಿಗೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಯೂ ಈ ಮೌನ ಸಾಕ್ಷಿಯನ್ನು ನೋಡಿ ಇತಿಹಾಸದೊಂದಿಗೆ ಸಂಪರ್ಕ ಸಾಧಿಸುವ ಪ್ರಯತ್ನ ಮಾಡಬೇಕು. ಅವಕಾಶ ಸಿಕ್ಕಾಗ ಹೋಗಿಬನ್ನಿ.

ಸಮಯ: ಪ್ರತಿದಿನ ಬೆಳಗ್ಗೆ 8:30 - ಸಂಜೆ 6:00ರವರೆಗೆ ತೆರೆದಿರುತ್ತದೆ.

ಪ್ರವೇಶ ಶುಲ್ಕ: ಕೇವಲ 10 ರು.

ಬೆಳಗ್ಗೆ ಅಥವಾ ಸಂಜೆಯಲ್ಲಿ ಭೇಟಿ ನೀಡಿದರೆ ಉತ್ತಮ. ಆಗ ವಾತಾವರಣ ಹೆಚ್ಚು ಆಹ್ಲಾದಕರವಾಗಿರುತ್ತದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..