ಕೊಡಗಿನ ಕೋಟೆ ಬೆಟ್ಟದಲ್ಲೂ ಅಪರೂದ ನೀಲಕುರಂಜಿ
ಬೆಟ್ಟದ ತುದಿಯನ್ನು ತಲುಪಿದ ಕ್ಷಣವೇ ಶೀತಲ ಗಾಳಿ ಮುಖಕ್ಕೆ ತಾಕಿ, ದೇಹದಷ್ಟೇ ಅಲ್ಲ, ಮನಸಿನ ಸುಸ್ತನ್ನೂ ತೊಳೆದುಹಾಕುತ್ತದೆ. ಇಲ್ಲಿರುವ ಪುರಾತನ ಶಿವನ ದೇವಾಲಯ ಅತ್ಯಂತ ಪವಿತ್ರವಾದ ಸ್ಥಳ. ಈ ದೇವಾಲಯದ ಸುತ್ತಲಿನ ಮೌನವೇ ಧ್ಯಾನದ ಅನುಭವ ನೀಡುತ್ತದೆ.
- ಡಾ. ಕೆ.ಬಿ.ಸೂರ್ಯ ಕುಮಾರ್ ಮಡಿಕೇರಿ
ಕೊಡಗು ಜಿಲ್ಲೆ ಎಂದ ಕೂಡಲೇ ಮನಸಿನಲ್ಲಿ ಮೂಡುವುದು ಹಚ್ಚ ಹಸಿರಿನ ಕಾಫಿ ತೋಟಗಳು, ಮಂಜು ಆವರಿಸಿದ ಬೆಟ್ಟಗಳು ಮತ್ತು ಅಲ್ಲಿನ ಜೀವನಶೈಲಿ. ಈ ಸುಂದರ ಜಿಲ್ಲೆಯ ಪ್ರಸಿದ್ಧ ಶಿಖರಗಳ ನಡುವಿನ ಸೋಮವಾರಪೇಟೆ ತಾಲೂಕಿನಲ್ಲಿರುವ ‘ಕೋಟೆ ಬೆಟ್ಟ’ ವಿಶಿಷ್ಟ ಸೌಂದರ್ಯದಿಂದ ಚಾರಣಿಗರನ್ನೂ ಪ್ರಕೃತಿ ಪ್ರೇಮಿಗಳನ್ನೂ ಸೆಳೆಯುತ್ತಿದೆ.
ಸಮುದ್ರ ಮಟ್ಟದಿಂದ ಸುಮಾರು 1470 ಮೀ ಎತ್ತರವಿದ್ದು, ಕೊಡಗಿನ ಮೂರನೇ ಅತಿ ಎತ್ತರದ ಶಿಖರವಾಗಿದೆ. ದೂರದಿಂದ ನೋಡಿದಾಗ ಕೋಟೆಯ ಆಕಾರವನ್ನು ಹೋಲುವುದರಿಂದ ಈ ಬೆಟ್ಟಕ್ಕೆ ‘ಕೋಟೆ ಬೆಟ್ಟ’ ಎಂಬ ಹೆಸರು ಬಂದಿದೆ ಎನ್ನಲಾಗಿದೆ.
ಇದನ್ನೂ ಓದಿ: ಕೆನಡಾದ ಹೃದಯವಿದು ಬಡಿತ ನಿಲ್ಲಿಸದು
ಚಾರಣದ ನಡುವೆ ನಿಸರ್ಗದ ಚಾಮರ ಬೀಸಿ
ಕೋಟೆ ಬೆಟ್ಟದ ಚಾರಣ ಕೇವಲ ದೈಹಿಕ ಪ್ರಯಾಣವಲ್ಲ. ಅದು ಮನಸನ್ನು ಮುದುಗೊಳಿಸುವ ಒಂದು ಯಾತ್ರೆಯೂ ಹೌದು. ಈ ಕೋಟೆ ಬೆಟ್ಟದ ಚಾರಣವನ್ನು ಸಾಮಾನ್ಯವಾಗಿ ಸೋಮವಾರಪೇಟೆಯಿಂದ ಸುಮಾರು 15ಕಿಮೀ ದೂರದಲ್ಲಿರುವ ಮಾದಾಪುರ ಗ್ರಾಮದಿಂದ ಆರಂಭಿಸುತ್ತಾರೆ. ಆರಂಭದ ಕೆಲವೇ ಕಿಮೀ ದೂರದಲ್ಲಿ ಕಾಫಿ ತೋಟಗಳ ನಡುವೆ ಸಾಗುವ ದಾರಿ ಮನಸಿಗೆ ಹಿತ ನೀಡುತ್ತದೆ. ಮುಂದೆ ಸಾಗಿದಂತೆ ದಟ್ಟ ಅರಣ್ಯ, ಹಕ್ಕಿಗಳ ಕಲರವ, ಸಣ್ಣ ತೊರೆಗಳ ಮೃದುವಾದ ಶಬ್ಧಗಳು ಚಾರಣದ ದಣಿವನ್ನೇ ಮರೆಸಿಬಿಡುತ್ತವೆ. ಚಾರಣದ ಒಟ್ಟು ದೂರವು ಹೋಗಿ–ಬರಲು ಸುಮಾರು 10 ಕಿಮೀ ಇದ್ದು, ಇದು ಸಾಧಾರಣ ಮಟ್ಟದ (Moderate) ಚಾರಣವೆಂದು ಪರಿಗಣಿಸಲಾಗುತ್ತದೆ. ಸ್ವಲ್ಪ ದೈಹಿಕ ಸಾಮರ್ಥ್ಯ ಹೊಂದಿರುವವರೂ ಸುಲಭವಾಗಿ ಈ ಚಾರಣವನ್ನು ಅನುಭವಿಸಬಹುದು.

ಶಿಖರದ ತುದಿಯಲ್ಲಿ ಶಿವನಿದ್ದಾನೆ
ಬೆಟ್ಟದ ತುದಿಯನ್ನು ತಲುಪಿದ ಕ್ಷಣವೇ ಶೀತಲ ಗಾಳಿ ಮುಖಕ್ಕೆ ತಾಕಿ, ದೇಹದಷ್ಟೇ ಅಲ್ಲ, ಮನಸಿನ ಸುಸ್ತನ್ನೂ ತೊಳೆದುಹಾಕುತ್ತದೆ. ಇಲ್ಲಿರುವ ಪುರಾತನ ಶಿವನ ದೇವಾಲಯ ಅತ್ಯಂತ ಪವಿತ್ರವಾದ ಸ್ಥಳ. ಈ ದೇವಾಲಯದ ಸುತ್ತಲಿನ ಮೌನವೇ ಧ್ಯಾನದ ಅನುಭವ ನೀಡುತ್ತದೆ.
ಶಿಖರದಿಂದ ದೂರದಲ್ಲಿ ಕಾಣುವ ಹಾರಂಗಿ ಜಲಾಶಯ, ಹಸಿರು ಕಣಿವೆಗಳು ಮತ್ತು ಪಶ್ಚಿಮ ಘಟ್ಟಗಳ ಅಸೀಮ ವಿಸ್ತಾರ ಕಣ್ಣಿಗೆ ಹಬ್ಬದಂತಿರುತ್ತದೆ. ಬೆಳಗಿನ ಸಮಯದಲ್ಲಿ ಮಂಜಿನ ಹೊದಿಕೆಯಲ್ಲಿ ಮುಚ್ಚಿದ ದೃಶ್ಯ, ಸೂರ್ಯಾಸ್ತದ ಹೊತ್ತಿನ ಚಿನ್ನದಂಥ ಬೆಳಕು – ಎರಡೂ ಕ್ಷಣಗಳು ಕ್ಯಾಮೆರಾಕ್ಕಿಂತ ಮನಸಿನಲ್ಲಿ ಹೆಚ್ಚು ಉಳಿಯುತ್ತವೆ. ವಿಶೇಷವೆಂದರೆ ಇಲ್ಲಿಯೂ ಅಪರೂಪದಲ್ಲಿ ಕಾಣಲು ಸಿಗುವ ನೀಲಕುರುಂಜಿ ಜಾತಿಯ ಹೂವಿನ ಸಂಭ್ರಮ ಕಾಣಲು ಸಿಗುತ್ತದೆ. ಅವುಗಳು ಅರಳಿ ನಿಂತಾಗ ಕಣ್ತುಂಬಿಕೊಳ್ಳಲು ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ದೇಶ ವಿದೇಶದಿಂದ ಇಲ್ಲಿಗೆ ಬರುತ್ತಾರೆ.
ಭೇಟಿಗೆ ಸೂಕ್ತ ಸಮಯ ಮತ್ತು ಸಲಹೆ
ಅಕ್ಟೋಬರ್‌ನಿಂದ ಮಾರ್ಚ್ ಸಮಯ ಭೇಟಿ ನೀಡಲು ಅತ್ಯುತ್ತಮ. ಮಳೆಗಾಲದಲ್ಲಿ ಜಿಗಣೆಗಳ ಕಾಟ ಹೆಚ್ಚಿರುವುದರಿಂದ ಎಚ್ಚರ ಅಗತ್ಯ. ಕುಡಿಯುವ ನೀರು, ಲಘು ಆಹಾರ, ಸೂಕ್ತ ಚಾರಣ ಶೂಗಳು ಅಗತ್ಯ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಿಸಾಡಬೇಡಿ.
ನಗರದ ಗದ್ದಲದಿಂದ ದೂರಾಗಿ, ನಿಸರ್ಗದ ಮಧ್ಯೆ ಸಮಯ ಕಳೆಯಲು ಬಯಸುವವರಿಗೆ ʻಕೋಟೆ ಬೆಟ್ಟʼ ಒಂದು ಪರಿಪೂರ್ಣ ತಾಣ. ಇದು ಕೇವಲ ಒಂದು ಚಾರಣ ಸ್ಥಳವಲ್ಲ; ಮನಸಿಗೆ ನೆಮ್ಮದಿ, ಆತ್ಮಕ್ಕೆ ಶಾಂತಿ ನೀಡುವ ಸ್ಥಳ. ಕೊಡಗಿನ ಹೃದಯದಲ್ಲಿನ ಈ ಸುಂದರ ಶಿಖರ, ಪ್ರತಿಯೊಬ್ಬ ಪ್ರತೀ ಪ್ರಕೃತಿ ಪ್ರೇಮಿಗೂ ಪ್ರೇಮಾಂಕುರವಾಗಿಸುತ್ತದೆ.

ದಾರಿ ಹೇಗೆ?
ಮಡಿಕೇರಿಯಿಂದ ಸೋಮವಾರಪೇಟೆ ಮಾರ್ಗವಾಗಿ ಹೊರಟರೆ ಸುಮಾರು 35 ಕಿಮೀ ದೂರದಲ್ಲಿದ್ದು, ರಸ್ತೆ ಸಂಪರ್ಕ ಉತ್ತಮವಾಗಿದೆ.
-
ಸೋಮವಾರಪೇಟೆಯಿಂದ ಮಾದಾಪುರ ಮಾರ್ಗವಾಗಿ ಹೊರಟರೆ ಸುಮಾರು 15 ಕಿಮೀ ದೂರದಲ್ಲಿದ್ದು, ಸ್ವಂತ ವಾಹನ ಅಥವಾ ಟ್ಯಾಕ್ಸಿ ಬಳಸುವುದು ಅನುಕೂಲಕರ. ಸಾರ್ವಜನಿಕ ಸಾರಿಗೆ ಬಳಸುವವರು ಸೋಮವಾರಪೇಟೆಯವರೆಗೆ ಬಸ್ ಮೂಲಕ ಬಂದು, ಅಲ್ಲಿಂದ ಸ್ಥಳೀಯ ವಾಹನ ವ್ಯವಸ್ಥೆ ಮಾಡಿಕೊಂಡು ಹೋಗಬಹುದು.