Wednesday, January 7, 2026
Wednesday, January 7, 2026

ಕೆನಡಾದ ಹೃದಯವಿದು ಬಡಿತ ನಿಲ್ಲಿಸದು

ಇಲ್ಲಿನ ಗುಹೆಗಳಲ್ಲಿ ಹೊಳೆಯುವ ನೀರು, ಅದರ ತಾಪಮಾನ ಮತ್ತು ಅದರಿಂದ ಹರಡುವ ವಿಶಿಷ್ಟವಾದ ಗಂಧಕದ ವಾಸನೆ ಎಲ್ಲವೂ ಒಂದು ರೀತಿಯ ಆಕರ್ಷಣೆ. ಕತ್ತು ಬಗ್ಗಿಸಿ ಕತ್ತಲಿನ ಕಿರಿದಾದ ಹಾದಿಯಲ್ಲಿ ನೂರು ಅಡಿ ಒಳಗೆ ಸಾಗಿದಾಗ ಅಲ್ಲಿನ ದೊಡ್ಡ ಗುಹೆಯಲ್ಲಿ ಬಿಸಿ ನೀರಿನ ಬುಗ್ಗೆಗಳು ನಿಮಿಷಕ್ಕೆ ಆರು ನೂರ ಐವತ್ತು ಲೀಟರ್‌ನಷ್ಟು ಗುಳ್ಳೆಗಳಂತೆ ಮೇಲೇಳುತ್ತವೆ. ನನ್ನಂಥ ಸಂದರ್ಶಕರಿಗೆ ಇದೊಂದು ವಿಭಿನ್ನ ಅನುಭವ.

  • ಡಾ. ಕೆ.ಬಿ. ಸೂರ್ಯ ಕುಮಾರ್, ಮಡಿಕೇರಿ

ಕೆನಡಾದ ಅಲ್ಬರ್ಟಾ ಪ್ರಾಂತ್ಯದ ಶಿಲಾ ಪರ್ವತಗಳ ಮಧ್ಯದಲ್ಲಿರುವ ನ್ಯಾಷನಲ್ ಪಾರ್ಕ್‌ನ ಹೃದಯಭಾಗದ ಪಟ್ಟಣ ಬ್ಯಾನ್ಫ್. ಪ್ರಕೃತಿಯ ಅದ್ಭುತಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ಸುಮಾರು 6000 ಚಕಿಮೀ ವಿಸ್ತೀರ್ಣದ ಈ ಉದ್ಯಾನ ಯುನೆಸ್ಕೋ ವಿಶ್ವ ಪಾರಂಪರಿಕ ತಾಣ. ಸಮುದ್ರ ಮಟ್ಟದಿಂದ ಸುಮಾರು 1,400 ಮೀ ಎತ್ತರದಲ್ಲಿದೆ. ಇಲ್ಲಿನ ತಂಪಾದ ಹವಾಮಾನ, ಸುತ್ತಲಿನ ಪರ್ವತಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಇಲ್ಲಿನ ತಾಪಮಾನ ಬೇಸಗೆಯಲ್ಲಿ 20ರಿಂದ 25 ಡಿಗ್ರಿ ಸೆಲ್ಸಿಯಸ್ ಮತ್ತು ಚಳಿಗಾಲದಲ್ಲಿ -15 ಡಿಗ್ರಿಗಿಂತಲೂ ಕಡಿಮೆಯಾಗಬಹುದು. ಆದರೆ, ಪ್ರತಿ ಋತುವಿನಲ್ಲೂ ಈ ತಾಣ ಮೋಡಿ ಮಾಡುತ್ತದೆ.

ಬ್ಯಾನ್ಫ್‌ನ ಮುಖ್ಯ ಆಕರ್ಷಣೆ ಇಲ್ಲಿನ ಸರೋವರಗಳ ಸೌಂದರ್ಯ. ಲೂಯಿಸ್ ಮತ್ತು ಮೊರೆನ್ ಲೇಕ್‌ಗಳು. ಪ್ರಪಂಚದ ಅತ್ಯಂತ ಚಿತ್ರಮಯ ಸ್ಥಳಗಳಲ್ಲಿ ಸೇರಿವೆ. ಹಿಮನದಿಗಳು ಕರಗಿದಾಗ ಉಂಟಾಗುವ ಇವು ಹಸಿರು ನೀಲಿ ಬಣ್ಣದ ಆಕರ್ಷಕ ದೃಶ್ಯ ನೀಡುತ್ತವೆ. ಸೂರ್ಯೋದಯವಾದಾಗ ಸರೋವರದ ನೀರಿನಲ್ಲಿ ಪರ್ವತ ಶೃಂಗಗಳ ದೃಶ್ಯವು ಪ್ರತಿಫಲಿಸುತ್ತದೆ. ಇದು ನನಗೆ ಎಂದೂ ಮರೆಯದ ಅನುಭವ ನೀಡಿತ್ತು. ಬೇಸಗೆಯಲ್ಲಿ ಪುಟ್ಟ ನಾವೆಯ ಯಾನ (ಕ್ಯಾನೂಯಿಂಗ್), ಸುತ್ತಲಿನ ಪರ್ವತಗಳ ಚಾರಣ (ಹೈಕಿಂಗ್‌) ಎರಡೂ ಮುದನೀಡುತ್ತವೆ.

Untitled design (26)

ಲೂಯಿಸ್‌ ಹಳ್ಳಿಯಿಂದ ಕೊಂಚ ದೂರದಲ್ಲಿನ ಮೊರೈನ್ ಸರೋವರ, ಪರ್ವತ ಶ್ರೇಣಿ ಮತ್ತು ಅಲ್ಲಿನ ಅದ್ಭುತ ನೋಟದಿಂದಾಗಿ ಫೊಟೋಗ್ರಾಫರ್‌ಗಳ ಸ್ವರ್ಗವಾಗಿದೆ. ಇಲ್ಲಿನ ಪೇಯ್ಟೋ ಸರೋವರ ಮತ್ತು ಕೊಲಂಬಿಯಾ ಮಂಜಿನ ಮೈದಾನಗಳೂ ಪ್ರವಾಸಿಗರಿಗೆ ಮೋಡಿಮಾಡುತ್ತವೆ.

ಬ್ಯಾನ್ಫ್‌ಗೆ ಹೋಗಲು ನಿಶ್ಚಯಿಸಿದಾಗ ಅಲ್ಲಿ ಹಿಮಪರ್ವತಗಳ ಸೌಂದರ್ಯ ಮಾತ್ರ ಇದೆಯೆಂದು ಗ್ರಹಿಸಿದ್ದೆ. ಆದರೆ, ಹೋಗಿ ನೋಡಿದ ನಂತರವೇ ಅದು ಸರೋವರ, ಇತಿಹಾಸ, ಪ್ರಕೃತಿ ಮತ್ತು ಸಂಸ್ಕೃತಿಯ ಖಣಜವೆಂದು ತಿಳಿದದ್ದು. ಬ್ಯಾನ್ಫ್‌ ನ್ಯಾಷನಲ್ ಪಾರ್ಕ್ ಪ್ರಕೃತಿಯ ಅಲೌಕಿಕ ಸೌಂದರ್ಯದ ಆಲಯ. ಹಿಮಪರ್ವತಗಳು, ಹಸಿರು ಕಣಿವೆಗಳು, ನೀಲಿ ನದಿಗಳಿಂದ ಆವೃತವಾಗಿದೆ. ಇದರ ನಡುವೆ ಉಕ್ಕುವ ಬಿಸಿ ನೀರಿನ ಬುಗ್ಗೆಯ ಅದ್ಭುತ ಪಾರಂಪರಿಕ ಸ್ಥಳವೇ ʻಗುಹೆ ಮತ್ತು ನೀರು ತೊಟ್ಟಿʼ

ಗುಹೆಯ ಹುಟ್ಟೇ ಒಂದು ರೋಚಕ ಕಥೆ

1883ರಲ್ಲಿ ಮೂವರು ರೈಲು ಕಾರ್ಮಿಕರು ಈ ಗುಹೆಯನ್ನು ಕಂಡು ಹಿಡಿದರು ಎನ್ನಲಾಗಿದೆ. ಆದರೆ, ಸ್ಥಳೀಯ 'ಫಸ್ಟ್ ನೇಷನ್' ಜನಾಂಗಗಳು ಈ ಬಿಸಿ ನೀರಿನ ಹಳ್ಳಗಳನ್ನು ಶತಮಾನಗಳಿಂದ ಆರಾಧಿಸುತ್ತಿದ್ದರು. ಅಲ್ಲಿನ ಗ್ಯಾಲರಿಯಲ್ಲಿ, ಮೂವರು ಕಾರ್ಮಿಕರು ಗುಹೆಯ ಮೇಲ್ಭಾಗದ ಗಾಳಿ ಹೊರಬರುವ ದ್ವಾರದಿಂದ ಒಳಬರುತ್ತಿರುವ ದೃಶ್ಯವನ್ನು ಒಂದು ಚಿತ್ರದಲ್ಲಿ ಕಾಣಬಹುದು. ಅದು ಅಂದಿಗೆ ಏಕಮಾತ್ರ ಪ್ರವೇಶ ಮಾರ್ಗವಾಗಿತ್ತು. ಈ ವಿಷಯ ಇತರರಿಗೆ ಗೊತ್ತಾಗುತ್ತಿದ್ದಂತೆ ಬ್ಯಾನ್ಫ್‌ ವಿಶ್ವ ಪ್ರಸಿದ್ಧಿಯತ್ತ ಕಾಲಿಟ್ಟಿತು. ಇದೇ ಆವಿಷ್ಕಾರದಿಂದ 1885ರಲ್ಲಿ ಕೆನಡಾದ ಮೊದಲ ರಾಷ್ಟ್ರೀಯ ಉದ್ಯಾನವನ ಹುಟ್ಟಿಕೊಂಡಿತು.

ಗಂಧಕದ ಗಂಧ, ನೀಲಿ ನೀರಿನ ಚೆಂದ ಇಲ್ಲಿದೆ

ಇಲ್ಲಿನ ಗುಹೆಗಳಲ್ಲಿ ಹೊಳೆಯುವ ನೀರು, ಅದರ ತಾಪಮಾನ ಮತ್ತು ಅದರಿಂದ ಹರಡುವ ವಿಶಿಷ್ಟವಾದ ಗಂಧಕದ ವಾಸನೆ ಎಲ್ಲವೂ ಒಂದು ರೀತಿಯ ಆಕರ್ಷಣೆ. ಕತ್ತು ಬಗ್ಗಿಸಿ ಕತ್ತಲಿನ ಕಿರಿದಾದ ಹಾದಿಯಲ್ಲಿ ನೂರು ಅಡಿ ಒಳಗೆ ಸಾಗಿದಾಗ ಅಲ್ಲಿನ ದೊಡ್ಡ ಗುಹೆಯಲ್ಲಿ ಬಿಸಿ ನೀರಿನ ಬುಗ್ಗೆಗಳು ನಿಮಿಷಕ್ಕೆ ಆರು ನೂರ ಐವತ್ತು ಲೀಟರ್‌ನಷ್ಟು ಗುಳ್ಳೆಗಳಂತೆ ಮೇಲೇಳುತ್ತವೆ. ನನ್ನಂಥ ಸಂದರ್ಶಕರಿಗೆ ಇದೊಂದು ವಿಭಿನ್ನ ಅನುಭವ. ಆದರೆ, ಅದರ ಗಂಧಕದ ಕೊಳೆತ ಮೊಟ್ಟೆಯಂಥ ವಾಸನೆ ಕೆಲವರಿಗೆ ಸಹಿಸಲಸಾಧ್ಯ. ಇಲ್ಲಿರುವ ಸಲ್ಫೇಟ್, ಪೈರೇಟ್, ಜಿಪ್ಸಮ್‌ಗಳ ರಾಸಾಯನಿಕ ಕ್ರಿಯೆಯಿಂದ ಈ ವಾಸನೆ ಬರುತ್ತದೆ. ತೊಟ್ಟಿಯ ನೀರಿನ ಉಷ್ಣತೆ 31 ರಿಂದ 35 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ. ಈ ಹಿಂದೆ ಇಲ್ಲಿ ಸ್ನಾನ ಮಾಡಲು ಜನ ಬರುತ್ತಿದ್ದರಾದರೂ ಈಗ ಅದಕ್ಕೆ ಅನುಮತಿ ಇಲ್ಲ.

ಇಲ್ಲೊಂದಿಷ್ಟು ಇತಿಹಾಸವವಿದೆ

ಈ ಸ್ಥಳ ಕೇವಲ ಪ್ರಕೃತಿಯ ಅಚ್ಚರಿಯಷ್ಟೇ ಅಲ್ಲ; ಇದು ಕೆನಡಾದ ಪರಿಸರ ಸಂರಕ್ಷಣೆ ಮತ್ತು ರಾಷ್ಟ್ರೀಯ ಉದ್ಯಾನವನ ಚಳುವಳಿಯ ಗುರುತಾಗಿದೆ. ಇಲ್ಲಿನ ಪ್ರದರ್ಶನ ಮಳಿಗೆಯಲ್ಲಿ ಪ್ರಾಕೃತಿಕ ಇತಿಹಾಸ, ಉದ್ಯಾನದ ಅಭಿವೃದ್ಧಿ, ಸಾವಿರ ವರ್ಷಗಳಿಂದ ಇಲ್ಲಿರುವ ಮೂಲ ನಿವಾಸಿ (ಇಂಡಿಜಿನಸ್) ʻಫರ್ಸ್ಟ್ ನೇಷನ್ʼ ಜನಾಂಗಗಳ ಕಥೆಗಳನ್ನು ಸುಂದರವಾಗಿ ವಿವರಿಸಲ್ಪಟ್ಟಿವೆ. ಇಲ್ಲಿನ ಇತಿಹಾಸದ ಮತ್ತೊಂದು ಭಾವನಾತ್ಮಕ ಅಧ್ಯಾಯವೆಂದರೆ — ಪ್ರಥಮ ವಿಶ್ವಯುದ್ಧ ಸಮಯದಲ್ಲಿ ಇಲ್ಲಿದ್ದ ಯುದ್ಧ ಕೈದಿಗಳ ʻಇಂಟರ್ನ್‌ಮೆಂಟ್ʼ ಶಿಬಿರ. ಅನೇಕ ವಲಸಿಗರನ್ನು ಬಂಧಿಸಿ ಇಲ್ಲಿ ಶ್ರಮಕ್ಕೆ ಒಳಪಡಿಸಲಾಗಿತ್ತು. ಅದನ್ನು ನೆನೆಸಲು ಇಲ್ಲಿ ಕೆಲವು ಚಿತ್ರಪಟಗಳಿವೆ.

ಇಲ್ಲಿದೆ ಅಳಿವಿನಂಚಿನ ಬಸವನ ಹುಳು

ಬಿಸಿನೀರಿನಲ್ಲಿ ಕಂಡುಬರುವ ಅಳಿವಿನಂಚಿನ ಜಲಚರ ಪ್ರಭೇದದ ಚಿಕ್ಕ ಬಸವನ ಹುಳ (Banff Springs Snail) ಇಲ್ಲಿ ಮಾತ್ರ ಕಾಣಸಿಗುತ್ತದೆ. ಆದ್ದರಿಂದಲೇ ಈ ಪ್ರದೇಶವನ್ನು ಕಾಪಾಡಲಾಗುತ್ತಿದೆ. ಹೀಗಾಗಿ, ಬ್ಯಾನ್ಫ್‌ಗೆ ಬರುವ ಯಾರೇ ಇರಲಿ, ಕೇವ್ಸ್ ಅಂಡ್ ಬೇಸಿನ್ (Caves and Basin) ನೋಡದೆ ಹೋದರೆ ಅದು ಸಂಪೂರ್ಣ ಪ್ರವಾಸವಾಗದು.

Untitled design (25)

ಸಾಹಸಿ ಪ್ರವಾಸಿಗರಿಗೆ ಸಾಕಷ್ಟು ಅವಕಾಶ

ಇಲ್ಲಿ ಪ್ರವಾಸಿ ಚಟುವಟಿಕೆಗಳು ಅಪಾರ. ಬೇಸಗೆಯಲ್ಲಿ ಚಾರಣದ ರಸ್ತೆಗಳು ಅಸಂಖ್ಯವಾಗಿವೆ. ʻಸಲ್ಫರ್ ಮೌಂಟೇನ್ ಗೋಂಡೋಲಾʼ ಎಂಬ ಪಂಜರಗಳ ಮೂಲಕ ಪರ್ವತ ಶಿಖರವನ್ನು ತಲುಪಿ, ಸುತ್ತಲಿನ ವಿಹಂಗಮ ನೋಟವನ್ನು ಆಸ್ವಾದಿಸಬಹುದು. ಜಾನ್‌ಸ್ಟನ್ ಕ್ಯಾನ್ಯನ್ ವಾಕ್, ಜಲಪಾತಗಳ ಮಧ್ಯದಲ್ಲಿ ಸುಂದರ ಪಾದಯಾತ್ರೆ, ಚಳಿಗಾಲದಲ್ಲಿ ಸ್ಕೀಯಿಂಗ್ ಮತ್ತು ಸ್ನೋಬೋರ್ಡಿಂಗ್‌ ಅವಕಾಶಗಳಿರುತ್ತವೆ. ಬ್ಯಾನ್ಫ್‌ ಪಟ್ಟಣದಲ್ಲಿ ಆರ್ಟ್ ಗ್ಯಾಲರಿಗಳು, ಮ್ಯೂಸಿಯಂಗಳು ಮತ್ತು ಸ್ಥಳೀಯ ಕರಕುಶಲ ವಸ್ತುಗಳ ಅಂಗಡಿಗಳಿವೆ. ಮಾರುಕಟ್ಟೆಗಳು ಇವೆ.

ವೈವಿಧ್ಯಮಯ ಈ ವನನಿಲಯ

ಈ ಪಾರ್ಕ್‌ನಲ್ಲಿ ಗ್ರಿಜ್ಲಿ ಮತ್ತು ಕಪ್ಪು ಕರಡಿಗಳು, ಎಲ್ಕ್, ಮೂಸ್, ಜಿಂಕೆ ತೋಳಗಳು ಸಾಮಾನ್ಯ. ಪಾರ್ಕ್‌ನಲ್ಲಿ ವನ್ಯಜೀವಿ ಸಂರಕ್ಷಣೆಗಾಗಿ ವೈಲ್ಡ್‌ಲೈಫ್ ಕಾರಿಡಾರ್‌ ಮತ್ತು ಮೇಲ್ ಸೇತುವೆಗಳನ್ನು ನಿರ್ಮಿಸಲಾಗಿದೆ. ಪರಿಸರ ಸಂರಕ್ಷಣೆಗೆ ಬ್ಯಾನ್ಫ್‌ನಲ್ಲಿ ಮುಖ್ಯ ಆದ್ಯತೆ ಇದೆ. ಪ್ರಕೃತಿಯನ್ನು ಕಾಪಾಡಲು ಕಟ್ಟುನಿಟ್ಟು ನಿಯಮಗಳನ್ನು ಜಾರಿಗೊಳಿಸಲಾಗಿದೆ. ವಾಹನ ದಟ್ಟಣೆ ಮತ್ತು ಮಾಲಿನ್ಯವನ್ನು ನಿಯಂತ್ರಿಸಲು ಸಾರ್ವಜನಿಕ ಸಾರಿಗೆ ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲಾಗುತ್ತಿದೆ.

ಬ್ಯಾನ್ಫ್‌ ಕೇವಲ ಪ್ರವಾಸಿ ತಾಣವಲ್ಲ, ಮಾನಸಿಕ ಶಾಂತಿ ಮತ್ತು ಸಾಹಸದ ಸಂಗಮ. ಇಲ್ಲಿನ ಸೂರ್ಯಾಸ್ತ ಮತ್ತು ತಾರೆಯುಕ್ತ ಆಕಾಶದ ನೋಟಗಳು ಮುದನೀಡುತ್ತವೆ. ಇಲ್ಲಿ ಪ್ರಕೃತಿಯೆ ದೇವತೆ, ಮನುಷ್ಯನು ಅವಳ ಅತಿಥಿ. ಇಂದಿನ ಜಾಗತೀಕರಣದ ಕಾಲದಲ್ಲಿ ಪರಿಸರದ ಸಂರಕ್ಷಣೆ, ನೈಸರ್ಗಿಕ ಸಂಪತ್ತುಗಳ ಗೌರವ ಮತ್ತು ಮಾನವ-ಪ್ರಕೃತಿಯ ಸಹಜ ಸಂಬಂಧವನ್ನು ಬ್ಯಾನ್ಫ್‌ ನಮಗೆ ನೆನಪಿಸುತ್ತದೆ. ಕೆನಡಾದ ಈ ಶಿಲಾಪರ್ವತಗಳ ಮಡಿಲಿನಲ್ಲಿ ಮೌನವಾಗಿ ನಿಂತಿರುವ ಬ್ಯಾನ್ಫ್‌ ನಾಡನ್ನು ನಿಜಕ್ಕೂ ʻಪ್ರಕೃತಿಯ ಹೃದಯಬಡಿತʼ ಎನ್ನಬಹುದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...