ಕಾವೇರಿ ಮಡಿಲಲ್ಲಿ ನಿಸರ್ಗ ಧಾಮ
ಮಳೆಗಾಲ ಕಳೆಯುತ್ತಿದೆ. ಪ್ರವಾಸ ಮಾಡಲು ಈಗ ಸೂಕ್ತ ಸಮಯ. ಬಿಸಿಲಿನ ಬೇಗೆ ಇಲ್ಲದೇ, ಧಾರಾಕಾರ ಮಳೆಯೂ ಇಲ್ಲದೇ, ತಿಳಿಯಾದ, ತಂಪಾದ ಈ ವಾತಾವರಣದಲ್ಲಿ ಹಚ್ಚ ಹಸುರಿನ ಸುಂದರ ಪ್ರಕೃತಿ ಎಲ್ಲರನ್ನೂ ಕೈಬೀಸಿ ಕರೆಯುತ್ತಿದೆ. ಇಂಥ ವಾತಾವರಣದಲ್ಲಿ ಪ್ರಕೃತಿ ರಮಣೀಯ ತಾಣಗಳಿಗೆ ಭೇಟಿ ನೀಡುವುದರಿಂದ ಜೀವನದಲ್ಲಿ ಹೊಸ ಹುರುಪು ಸಿಕ್ಕಂತಾಗುತ್ತದೆ.
-ಡಾ.ಬಿ.ಆರ್.ಸುಹಾಸ್
ನಡೆದು ನೋಡು ಕೊಡಗಿನ ಸೊಬಗು ಎನ್ನುತ್ತಾರೆ. ಏಕೆಂದರೆ ಕೊಡಗಿನಲ್ಲಿ ಎಲ್ಲೆಲ್ಲೂ ಪ್ರಕೃತಿ ಸೌಂದರ್ಯವೇ ತುಂಬಿರುತ್ತದೆ! ಹಾಗಾಗಿ ಇಲ್ಲಿ ಎಲ್ಲಿಗೆ ಹೋದರೂ ಕಣ್ಮನಗಳಿಗೆ ಹಸಿರು ವನರಾಶಿ, ಬೆಳಗಿನ ಚುಮು ಚುಮು ಮಂಜಿನ ತಂಪು, ಸಂಜೆಯ ಚಳಿ, ನಮಗೆ ಮುದವುಂಟುಮಾಡುತ್ತದೆ! ಕೊಡಗಿನ ಹಲವಾರು ಪ್ರೇಕ್ಷಣೀಯ ತಾಣಗಳಲ್ಲಿ ಕಾವೇರಿ ನಿಸರ್ಗಧಾಮವೂ ಒಂದು.
ಕಾವೇರಿ ನದಿಯಲ್ಲಿನ ಒಂದು ಪುಟ್ಟ ದ್ವೀಪವಾದ ಕಾವೇರಿ ನಿಸರ್ಗಧಾಮವನ್ನು ತಲುಪಲು ಪ್ರವೇಶ ಶುಲ್ಕವನ್ನು ನೀಡಿ, ಒಂದು ತೂಗು ಸೇತುವೆಯನ್ನು ದಾಟಲೇ ಬೇಕು. ಕಾವೇರಿ ನದಿಯ ಮೇಲಿನ ಈ ತೂಗು ಸೇತುವೆಯನ್ನು ದಾಟುವುದೇ ಒಂದು ರೋಮಾಂಚನ!. ಕಾವೇರಿ ನಿಸರ್ಗಧಾಮಕ್ಕೆ ಬಂದ ಕೂಡಲೇ ಕಾವೇರಿ ಮಾತೆಯ ಸುಂದರವಾದ ವಿಗ್ರಹವನ್ನು ಕಾಣಲುಸಿಗುತ್ತದೆ. ಎದುರಿಗೆ ಕಲಾಧಾಮ ಎಂಬ ಕೊಡಗಿನ ಕರಕುಶಲ ವಸ್ತುಗಳ ಮಾರಾಟ ಮಳಿಗೆಯಿದೆ. ಇಲ್ಲಿ ನಮಗೆ ಇಷ್ಟವಾದ ಕರಕುಶಲ ವಸ್ತುಗಳನ್ನು ಕೊಳ್ಳಬಹುದು. ಕಾವೇರಿ ಮಾತೆಗೆ ನಮಿಸಿ ನಾವು ಮುಂದೆ ನಡೆದರೆ, ಒಣ ಹಣ್ಣುಗಳು, ಗೃಹನಿರ್ಮಿತ ಚಾಕೋಲೆಟ್‌ಗಳು, ಕೊಡಗಿನ ಕಾಫಿ ಪುಡಿ, ಜೇನುತುಪ್ಪ, ಮಸಾಲೆ ಪದಾರ್ಥಗಳು ದೊರೆಯುವ ದೊಡ್ಡ ಬೆಟ್ಟಗೇರಿ ಗ್ರಾಮ ಅರಣ್ಯ ಸಮಿತಿಯ ಸೊಗಸಾದ ಅಂಗಡಿಯಿದೆ. ಇಲ್ಲಿಯೂ ಸಾಕಷ್ಟು ಖರೀದಿ ಮಾಡಬಹುದು. ಅಂತೆಯೇ ಇಲ್ಲೊಂದು ಉಪಾಹಾರ ಮಂದಿರವೂ ಇದೆ.

ಮುಂದೆ ಹೋದಂತೆ ನಮಗೆ ಎಲ್ಲೆಲ್ಲೂ ಹಸಿರು ಹುಲ್ಲು, ಬಿದಿರು ಮೆಳೆಗಳು, ತೇಗ ಮತ್ತು ಶ್ರೀಗಂಧದ ವೃಕ್ಷಗಳಿಂದ ಕೂಡಿರುವ ಸುಂದರ ಉಪವನ ಸ್ವಾಗತಿಸುತ್ತವೆ. ನಡೆಯಲು ಸೊಗಸಾದ ಕಲ್ಲುದಾರಿಯೂ ಇಲ್ಲಿದೆ. ಅಲ್ಲಲ್ಲಿ ಮರಗಳ ಕಾಂಡಗಳ ಮೇಲೆ ಮಾಡಿರುವ ಹುಲಿ, ಮೊಸಳೆ, ಹಾವು, ಮೊದಲಾದ ಬಣ್ಣದ ಚಿತ್ರಕಲಾಕೃತಿಗಳು ಮನಸೆಳೆಯುತ್ತವೆ.
ಶಿಲ್ಪ ಕೃತಿಗಳ ತಾಣ ಈ ನಿಸರ್ಗಧಾಮ
ಈ ನಿಸರ್ಗ ಧಾಮದಲ್ಲಿ ನೋಡಬೇಕಿರುವ ಪ್ರಮುಖ ಜಾಗಗಳೆಂದರೆ ಪಕ್ಷಿಧಾಮ, ಜಿಂಕೆವನ. ಕಾಲ್ನಡಿಗೆಯಲ್ಲಿ ಒಂದಷ್ಟು ದೂರ ಹೋದರೆ, ಜಿಂಕೆಯ ಮುಖಗಳಿಂದ ಸುಂದರವಾಗಿ ಅಲಂಕೃತವಾದ ದ್ವಾರವೊಂದು ನಮ್ಮನ್ನು ಮುಂದಕ್ಕೆ ಸ್ವಾಗತಿಸುತ್ತವೆ. ಅಲ್ಲದೆ ಕೊಡಗಿನ ಬುಡಕಟ್ಟು ಜನರ ಜೀವನಶೈಲಿಯನ್ನು ತೋರಿಸುವ ಅನೇಕ ಶಿಲ್ಪ ಕೃತಿಗಳ ಒಂದು ಸುಂದರ ಚಿತ್ರಣ ಇದೆ. ಅಲ್ಲದೆ, ಉಮ್ಮತ್ – ಆಟ್ ಎಂಬ ಕೊಡಗಿನ ಮಹಿಳೆಯರ ಸಾಂಪ್ರದಾಯಿಕ ನೃತ್ಯದ ಸುಂದರ ಚಿತ್ರಣವಿದೆ. ನಸುಗೆಂಪು ಬಣ್ಣದ ಸೀರೆಗಳನ್ನು ಕೊಡಗಿನ ಶೈಲಿಯಲ್ಲಿ ಉಟ್ಟು ನರ್ತಿಸುತ್ತಿರುವ ವಿಶೇಷವಾದ ಸ್ತ್ರೀ ಪ್ರತಿಮೆಗಳ ಒಕ್ಕೂಟ ಮನಸೆಳೆಯುತ್ತದೆ. ಇನ್ನೊಂದು ಸ್ವಾರಸ್ಯಕರ ಶಿಲ್ಪ ಚಿತ್ರಣವೆಂದರೆ, ಕೊಡಗಿನ ಗೌಡ ಜನಾಂಗದವರ ಸಾಂಪ್ರದಾಯಿಕ ನೃತ್ಯವಾದ ಕೋಲಾಟ. ಕೊಡಗಿನ ಶೈಲಿಯ ವಸ್ತ್ರಗಳನ್ನು ಧರಿಸಿ ಕೋಲಾಟವಾಡುತ್ತಿರುವ ಪುರುಷರ ಬೊಂಬೆಗಳ ಒಕ್ಕೂಟ ಮನಸೆಳೆಯುತ್ತದೆ!
ಎಲ್ಲೆಲ್ಲೂ ಸಿಕಾಡ ಕೀಟಗಳ ಜುಂಯ್ ಜುಂಯ್ ಶಬ್ದ, ಪಕ್ಷಿಗಳ ಇಂಪಾದ ಕಲರವ ಕಿವಿತುಂಬುತ್ತವೆ. ಇದು ನಮ್ಮನ್ನು ಅರಣ್ಯ ಪರಿಸರ ಹಾಗೂ ಪ್ರಕೃತಿಯೊಂದಿಗೆ ಬೆರೆಯುವಂತೆ ಮಾಡುತ್ತದೆ. ನೆಮ್ಮದಿಯಿಂದ ಕುಳಿತುಕೊಂಡು ಪ್ರಕೃತಿಯನ್ನು ಆಸ್ವಾದಿಸಲು ಇಲ್ಲಿ ಚಿತ್ತಾರವಾದ ಅನೇಕ ಸುಂದರ ಮಂಟಪಗಳಿವೆ. ಮರದ ಮೇಲಿರುವ ಟ್ರೀ ಹೌಸ್‌ಗಳಂತೂ ಸುತ್ತಲಿನ ಪರಿಸರದ ಅದ್ಭುತ ನೋಟವನ್ನೇ ನೀಡುತ್ತದೆ.

ಪಕ್ಷಿಧಾಮವನ್ನು ಮಿಸ್ ಮಾಡದಿರಿ
ಮುಂದೆ ಹೋದಂತೆ ಕಾವೇರಿ ನಿಸರ್ಗಧಾಮದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಪಕ್ಷಿಧಾಮ ಅಥವಾ ಬರ್ಡ್ ಪಾರ್ಕ್ ಸಿಗುತ್ತದೆ. ಪ್ರತ್ಯೇಕ ಎಂಟ್ರೀ ಫೀಸ್ ಕೊಟ್ಟು ಈ ಪಕ್ಷಿಧಾಮದ ಒಳಗೆ ನಡೆದರೆ, ಗುಹಾದ್ವಾರದೊಳಗೆ ನಡೆದಂತೆ ಭಾಸವಾಗುತ್ತದೆ. ಇಲ್ಲಿರುವ ಬಹು ಬಗೆಯ ಬಣ್ಣ ಬಣ್ಣದ ವಿದೇಶಿ ಪಕ್ಷಿಗಳ ಕಲರವಗಳು ನಮ್ಮನ್ನು ಸ್ವಾಗತಿಸುತ್ತವೆ. ಉದ್ದ ಬಾಲದ ಅಮೇರಿಕಾದ ನೀಲಿ, ಹಳದಿ, ಕೆಂಪು ಬಣ್ಣಗಳ ಸುಂದರ ಮಕಾವ್ ಗಿಣಿಗಳು, ಹಸಿರು ಅಮೆಜಾನ್ ಗಿಣಿ, ಹಳದಿ ಕೆಂಪು ಬಣ್ಣಗಳ ಸನ್ ಕಾನ್ಯೂರ್‌ಗಳೆಂಬ ಗಿಣಿ ಜಾತಿಯ ಸುಂದರ ಪಕ್ಷಿಗಳು, ಲಾರಿಕೀಟ್‌ಗಳೆಂಬ ಬಣ್ಣದ ಗಿಣಿ ಜಾತಿಯ ಪಕ್ಷಿಗಳು, ಉಷ್ಟ್ರಪಕ್ಷಿಗಳು, ಟರ್ಕಿ ಪಕ್ಷಿಗಳು, ಗೋಲ್ಡನ್ ಫೆಸೆಂಟ್, ಸಿಲ್ವರ್ ಫೆಸೆಂಟ್, ಮೊದಲಾದ ಕೋಳಿ ಜಾತಿಯ ಸುಂದರ ಪಕ್ಷಿಗಳು ಇಲ್ಲಿವೆ. ಅಲ್ಲದೆ ಇಗ್ವಾನ ಎಂಬ ದೈತ್ಯ ಹಲ್ಲಿಯನ್ನು ನೋಡುವುದನ್ನು ಮರೆಯಲಿಲ್ಲ. ವಿಭಿನ್ನ ಹಕ್ಕಿಗಳಿಗೆ ಫೀಡ್‌ಮಾಡುವುದಕ್ಕೆ ಹಾಗೂ ಅವುಗಳನ್ನು ಕೈಮೇಲೆ ಇಟ್ಟುಕೊಳ್ಳುವುದಕ್ಕೂ ವಿಶೇಷ ಶುಲ್ಕವನ್ನು ಇಲ್ಲಿ ಭರಿಸಲೇಬೇಕು.
ಪಕ್ಷಿಧಾಮವನ್ನು ಹಾದು ಮುಂದಕ್ಕೆ ನಡೆದರೆ, ಸಿಗುವುದೇ ಜಿಂಕೆವನ. ಇಲ್ಲಿ ಅನೇಕ ಚುಕ್ಕಿ ಜಿಂಕೆಗಳು ಅಥವಾ ಸ್ಪಾಟೆಡ್ ಡೀರ್‌ಗಳಿವೆ. ಇವನ್ನು ಚೀತಲ್ ಗಳೆಂದು ಕರೆಯುತ್ತಾರೆ. ಕಂದು ಬಣ್ಣದಿಂದ ಕೂಡಿರುವ ಈ ಜಿಂಕೆಗಳ ಮೈಮೇಲೆ ಚುಕ್ಕೆಗಳಿದ್ದು ಇವು ನೋಡಲು ಬಹಳ ಸುಂದರವಾಗಿರುತ್ತವೆ. ಸಂತಾನೋತ್ಪತ್ತಿಯ ಕಾಲದಲ್ಲಿ ಗಂಡು ಜಿಂಕೆಗಳಿಗೆ ಕೊಂಬುಗಳು ಮೂಡಿ ಅವು ಇನ್ನೂ ಸುಂದರವಾಗಿ ಕಾಣುತ್ತವೆ.

ಸದ್ಯ ದೋಣಿ ವಿಹಾರಕ್ಕಿಲ್ಲ ಅವಕಾಶ !
ನಿಸರ್ಗಧಾಮಕ್ಕೆ ಬಂದವರು ಇಲ್ಲಿನ ದೋಣಿ ವಿಹಾರದ ಅನುಭವವನ್ನು ಪಡೆಯಲೇಬೇಕು. ಆದರೆ ಸದ್ಯ ದೋಣಿ ವಿಹಾರಕ್ಕೆ ಇಲ್ಲಿ ತಾತ್ಕಾಲಿಕವಾಗಿ ಬ್ರೇಕ್‌ಹಾಕಿದ್ದು, ಜಿಪ್ ಲೈನ್, ರೋಪ್ ವೇ, ಮೊದಲಾದ ಸಾಹಸ ಕ್ರೀಡೆಗಳನ್ನೂ ಕಾರಣಾಂತರಗಳಿಂದ ನಿಲ್ಲಿಸಲಾಗಿದೆ.
ಕಾವೇರಿ ನಿಸರ್ಗಧಾಮ ಬೆಳಿಗ್ಗೆ 9 ರಿಂದ ಸಂಜೆ 5.30 ರವರೆಗೆ ಎಲ್ಲಾ ದಿನಗಳಲ್ಲೂ ತೆರೆದಿರುತ್ತದೆ. ಇಲ್ಲಿ ಉಳಿದುಕೊಳ್ಳಲು ಸುಂದರವಾದ ಕೊಠಡಿಗಳೂ ಇದ್ದು, ಅರಣ್ಯ ಇಲಾಖೆಯ ಮೂಲಕ ಮೊದಲೇ ನಿಗದಿಪಡಿಸಿಕೊಳ್ಳಬೇಕಾಗುತ್ತದೆ. ನಿಸರ್ಗಧಾಮದ ಹೊರಗೆ ಗಾಡಿ ನಿಲುಗಡೆಯ ವ್ಯವಸ್ಥೆ ಇದ್ದು, ತಂಪಾದ ಸಂಜೆಯನ್ನು ಕಳೆಯಲು ಇದೊಂದು ಸೊಗಸಾದ ತಾಣ. ಇಲ್ಲಿಗೆ ಹೋದಾಗ ಹತ್ತಿರದಲ್ಲೇ ಇರುವ ದುಬಾರೆ ಆನೆ ಶಿಬಿರ ಹಾಗೂ ಸುಂದರವಾದ ಟಿಬೆಟ್ ಬೌದ್ಧ ಸ್ವರ್ಣ ದೇವಾಲಯವನ್ನು ವೀಕ್ಷಿಸಬಹುದು.
ಎಷ್ಟು ದೂರ ?
ಕೊಡಗಿನ ಮುಖ್ಯ ನಗರವಾದ ಮಡಿಕೇರಿಯಿಂದ 28 ಕಿಮೀ. ದೂರವಿರುವ ಈ ತಾಣ, ಮೈಸೂರಿನಿಂದ 95 ಕಿಮೀ. ದೂರವಿದೆ. ಕುಶಾಲನಗರದ ಸಮೀಪವಿರುವ ಇದು, ಅಲ್ಲಿಂದ ಕೇವಲ 2 ಕಿಮೀ. ದೂರದಲ್ಲಿದೆ.