• ಬಾಲಚಂದ್ರ ಹೆಗಡೆ

ಉತ್ತರ ಕನ್ನಡದ ಶಿರಸಿಯಲ್ಲಿ ಹುಟ್ಟಿಬೆಳೆದರೂ ಅಲ್ಲಿಂದ ಕೇವಲ 40 ಕಿಮೀ ದೂರದಲ್ಲಿನ ಭೈರವೇಶ್ವರನ ಕ್ಷೇತ್ರ ʻಯಾಣʼ ನೋಡಿರಲೇ ಇಲ್ಲ. ಇತ್ತೀಚೆಗೆ ಶಿರಸಿಗೆ ಹೋಗಿದ್ದಾಗ ಏನೇ ಆದರೂ ಈ ಬಾರಿ ತಪ್ಪದೇ ಈ ಶೀಲಾ ಶಿಖರಗಳ ಅದ್ಭುತ ತಾಣ ನೋಡಲೇಬೇಕೆಂದು ಮನಸು ಮಾಡಿ ಹೋಗಿ ನೋಡಿ ಬಂದೆ. ಶಿರಸಿ- ಕುಮಟಾ ರಸ್ತೆಯಲ್ಲಿ ನಾಲ್ಕು ಕಿಮೀ ದೂರ ಕ್ರಮಿಸಿ ಬಲಕ್ಕೆ ತಿರುಗಿದರೆ ಹೆಗಕಟ್ಟೆ ರಸ್ತೆ ಸಿಗುತ್ತದೆ. ಅಲ್ಲಿಂದ 36 ಕಿಮೀ ದೂರದಲ್ಲಿ ಯಾಣ ಎನ್ನುವ ನಿಸರ್ಗ ನಿರ್ಮಿತ ರಮಣೀಯ ತಾಣವಿದೆ. ಅಲ್ಲಲ್ಲಿ ಇನ್ನೂ ರಸ್ತೆ ರಿಪೇರಿ ಕೆಲಸ ನಡೆಯುತ್ತಿದ್ದರೂ ರಸ್ತೆ ಉತ್ತಮವಾಗಿಯೇ ಇದೆ. ಕಾರಿನಲ್ಲಿ ಹೊರಟರೆ ಒಂದು ಘಂಟೆಯಲ್ಲಿ ಯಾಣದ ಪಾರ್ಕಿಂಗ್ ಜಾಗ ತಲುಪಬಹುದು. ಒಬ್ಬರಿಗೆ ಹತ್ತು ರುಪಾಯಿ ಹಾಗೂ ಕಾರ್ ಪಾರ್ಕಿಂಗ್‌ಗೆ 80 ರೂಪಾಯಿ ಸೇರಿ 120 ರುಪಾಯಿ ಪಾವತಿಸಿ ಮುಖ್ಯ ದ್ವಾರದಿಂದ ಕಾಲ್ನಡಿಗೆಯಲ್ಲಿ ಒಂದರ್ಧ ಕಿಮೀ ಇಳಿಜಾರಿನ ಮಣ್ಣಿನ ರಸ್ತೆಯಲ್ಲಿ ನಡೆದರೆ ಎದುರಿಗೆ ಶಿಲಾ ಶಿಖರಗಳ ಅದ್ಭುತ ಲೋಕ ಕಣ್ಣಿಗೆ ಬೀಳುತ್ತದೆ.

ಇದನ್ನೂ ಓದಿ: ಬಾಗಲಕೋಟೆಗೆ ಒಂದು ಟೂರು ಅವಕಾಶ ಹತ್ತಾರು

ರಸ್ತೆಯ ಇಕ್ಕೆಲಗಳಲ್ಲಿ ದಟ್ಟ ಕಾಡು. ಆ ದಟ್ಟ ಮರಗಳ ನಡುವೆ ಕ್ರಮೇಣ ಕಾಣಸಿಗುವ ಶಿಲಾ ಶಿಖರಗಳನ್ನು ನೋಡಿದಾಗ ಮನಸು ವಾಹ್ ಎನ್ನದೆ ಇರದು. ಒಂದು ಕಾಲಕ್ಕೆ ʻಕಾಸಿದ್ದರೆ ಗೋಕರ್ಣ ಕಸುವಿದ್ದರೆ ಯಾಣʼ ಎಂಬ ಗಾದೆ ಮನೆ ಮಾತಾಗಿತ್ತು. ಈಗ ಅಂಥ ಪರಿಸ್ತಿತಿ ಇಲ್ಲ.

ಕರಾವಳಿ ಹಾಗೂ ಘಟ್ಟದ ನಡುವಿನ ಕಣಿವೆ ನಾಡಿನ ಪುಣ್ಯ ಕ್ಷೇತ್ರ ಇದಾಗಿದ್ದು, ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆ ಹೊಂದಿದೆ. ಈಗ ಪ್ರಸಿದ್ಧ ಪ್ರವಾಸಿ ತಾಣವಾಗಿ ಹೊರಹೊಮ್ಮಿದೆ. ʻನಮ್ಮೂರ ಮಂದಾರ ಹೂವೆʼ ಕನ್ನಡ ಚಿತ್ರ ಇಲ್ಲಿ ಚಿತ್ರೀಕರಣವಾದ ಬಳಿಕ ಪ್ರವಾಸಿಗರ ಸಂಖ್ಯೆ ತುಂಬಾ ಹೆಚ್ಚಾಗಿದೆ ಎನ್ನುತ್ತಾರೆ. ಹರೀಟಾ ಸೀಮೆಗೆ ಸೇರಿದ ಯಾಣ ಮೊದಲಿಗೆ ಹರೀತಕೀಪುರ ಎಂದು ಹೆಸರಾಗಿತ್ತು. ಶಿಲಾ ಶಿಖರಗಳಿಂದ ಕೂಡಿದ ಉತ್ಥಾನದ ಸಂಕೇತ ಎಣ ಕ್ರಮೇಣ ಯಾಣ ಎಂದಾಗಿದೆ. ಇದು ಕುಮಟಾ ತಾಲೂಕಿಗೆ ಸೇರಿದೆ ಹಾಗೂ ಕುಮಟಾದಿಂದ ಸುಮಾರು 31 ಕಿಮೀ ದೂರದಲ್ಲಿದೆ.

yana 1

ಪಾರ್ಕಿಂಗ್ ಜಾಗದಿಂದ ಅರ್ಧ ಕಿಮೀ ಮಣ್ಣಿನ ರಸ್ತೆಯಲ್ಲಿ ನಡೆದರೆ ಮೊದಲಿಗೆ ಬಲಕ್ಕೆ ಮೋಹಿನಿ ಶಿಖರ ಹಾಗೂ ಎದುರಿಗೆ ಅದ್ಬುತವಾದ ಭೈರವೇಶ್ವರ ಶಿಖರ ಕಾಣುತ್ತದೆ.

ಭೈರವೇಶ್ವರ ಶಿಖರ

ಯಾಣದ ದಟ್ಟ ಅರಣ್ಯದ ನಡುವೆ ಕಪ್ಪು ಸುಣ್ಣದ ಕಲ್ಲಿನ ಈ ಶೀಲಾ ರಚನೆಯ ಎತ್ತರ ಸುಮಾರು 120 ಮೀಟರ್ (390 ಅಡಿ). ಈ ಶಿಖರದ ಕೆಳಗೆ ಶಿವನಿಗೆ ಅಂದರೆ ಭೈರವೇಶ್ವರನಿಗೆ ಅರ್ಪಿತವಾದ ಒಂದು ನೈಸರ್ಗಿಕ ಗುಹಾಂತರ ದೇವಾಲಯ ನಿರ್ಮಾಣವಾಗಿದೆ. ಇಲ್ಲಿ ಸ್ವಯಂಭು ಲಿಂಗವಿದೆ. ಆಶ್ಚರ್ಯವೆಂದರೆ ಇಲ್ಲಿ ಗುಹೆಯ ಸೂರಿನಿಂದ ನಿರಂತರವಾಗಿ ನೀರು ಲಿಂಗದ ಮೇಲೆ ತೊಟ್ಟಿಕ್ಕುತ್ತಿದೆ. ಇದನ್ನು ಜನ ಗಂಗೋಧ್ಭವ ಎಂದು ನಂಬುತ್ತಾರೆ. ಸದಾ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಇಲ್ಲಿಂದ ಪಕ್ಕದಲ್ಲಿ ಕೆಲವು ಮೆಟ್ಟಿಲುಗಳನ್ನು ಹತ್ತಿ ಮೇಲೆ ಹೋದರೆ ನೈಸರ್ಗಿಕವಾಗಿ ನಿರ್ಮಿತವಾದ ಗುಹೆ ಸಿಗುತ್ತದೆ. ವಿಸ್ಮಯ ಎಂದರೆ ಆ ಶೀಲಾ ಪದರಿನ ನಡುವಿನಿಂದ ಜುಳು ಜುಳು ನಾದದೊಡನೆ ನೀರು ಹರಿಯುತ್ತದೆ. ಇಲ್ಲಿ ಚಂಡಿಕಾ ದೇವಿಯ ಒಂದು ಕಂಚಿನ ಮೂರ್ತಿಯೂ ಇದೆ. ಇದು ತೀರ ಕತ್ತಲೆ ಗುಹೆಯೇನಲ್ಲ. ಗುಹೆ ದಾಟಿ ಹೊರಗೆ ಬಂದರೆ ಸುತ್ತಲೂ ಹಸಿರು ತುಂಬಿದ ದಟ್ಟ ಕಾಡು ನಡುವೆ ಸ್ವಲ್ಪ ದೂರದಲ್ಲಿ ಮೋಹಿನಿ ಶಿಖರ (ಚಂಡಿಕಾ ಶಿಖರ) ಕಾಣುತ್ತದೆ. ಅಲ್ಲಿಂದ ಮತ್ತೆ ಮೆಟ್ಟಿಲು ಇಳಿಯುತ್ತಾ ಹೋದರೆ ಕೆಳಗೆ ವೇಣುಗೋಪಾಲ ದೇವಸ್ಥಾನವಿದೆ. ವೇಣುಗೋಪಾಲನಿಗೆ ಕೈಮುಗಿದು ಅಲ್ಲಿಂದ ಮೆಟ್ಟಿಲುಗಳನ್ನು ಹತ್ತುತ್ತ ಹೋದರೆ ಮತ್ತೆ ಭೈರವೇಶ್ವರ ದೇವಸ್ಥಾನದ ಬಾಗಿಲಿಗೆ ಬರುತ್ತೇವೆ.

ಮೋಹಿನಿ ಶಿಖರ

ಇದನ್ನು ಚಂಡಿಕಾ ಶಿಖರ ಎಂದೂ ಕರೆಯುತ್ತಾರೆ. ಇಲ್ಲೊಂದು ಚಂಡಿಕಾ ದೇವಿಯ ದೇವಸ್ಥಾನವೂ ಇದೆ. ಇದೊಂದು ವಿಚಿತ್ರ ಆಕೃತಿಯ ಶಿಲಾ ಶಿಖರ. ಯಾಣ ಕ್ಷೇತ್ರದ ಬಗ್ಗೆ ಒಂದು ದಂತಕಥೆ ಪ್ರಚಿಲಿತವಿದೆ. ಅದರ ಪ್ರಕಾರ ಶಿವನಿಂದ ವರ ಪಡೆದ ಭಸ್ಮಾಸುರ ನಂತರ ಶಿವನ ತಲೆಯ ಮೇಲೆ ಕೈ ಇಡಲು ಬರುತ್ತಾನೆ. ಆಗ ವಿಷ್ಣು ಮೋಹಿನಿ ಅವತಾರ ತಾಳಿ ಭಸ್ಮಾಸುರ ತನ್ನ ಕೈ ತನ್ನ ತಲೆಯ ಮೇಲೆಯೇ ಇಡುವಂತೆ ಮಾಡಿ ಅವನೇ ಭಸ್ಮವಾಗುವಂತೆ ಮಾಡುತ್ತಾನೆ. ಆದ್ದರಿಂದ ಭಸ್ಮಾಸುರನೇ ಭಸ್ಮವಾದ ಸ್ಥಳವಿದು ಎಂದು ನಂಬಲಾಗಿದೆ.

yana 2

ಅಕ್ಟೋಬರ್ - ಫೆಬ್ರವರಿ ಯಾಣ ಕ್ಷೇತ್ರಕ್ಕೆ ಭೇಟಿ ನೀಡಲು ಸೂಕ್ತ ಸಮಯ. ಸುಣ್ಣದ ಕಲ್ಲಿನ ಎರಡು ಪ್ರಮುಖ ಶಿಖರಗಳಾದ ಭೈರವೇಶ್ವರ ಹಾಗೂ ಮೋಹಿನಿ ಶಿಖರಗಳು ಸೇರಿ ಒಟ್ಟು 61 ವಿವಿಧ ಆಕಾರದ ಶಿಲಾ ಶಿಖರಗಳು ಈ ಪ್ರದೇಶದಲ್ಲಿ ಹರಡಿಕೊಂಡಿವೆ. ಹೆಜ್ಜೇನಿನ ಗೂಡುಗಳು ಅಲ್ಲಲ್ಲಿ ಕಾಣಸಿಗುತ್ತವೆ. ಹೀಗಾಗಿ ಪ್ರವಾಸಿಗರು ಆ ಗೂಡುಗಳಿಗೆ ಕಲ್ಲು ಹೊಡೆಯದೇ ಎಚ್ಚರಿಕೆಯಿಂದ ಹೋಗಿ ಬರಬೇಕು. ಭೈರವೇಶ್ವರನ ಸನ್ನಿಧಿಯಿಂದ ವಾಪಸ್ ಬರುವಾಗಿನ ಅರ್ಧ ಕಿಮೀ ರಸ್ತೆ ಮೇಲಕ್ಕೆ ಹತ್ತಿ ಬರಬೇಕಾಗಿರುವುದರಿಂದ ಹಿರಿಯ ನಾಗರಿಕರಿಗೆ ಹಾಗೂ ಚಿಕ್ಕ ಮಕ್ಕಳ ತಾಯಂದರಿಗೆ ತುಂಬಾ ಕಷ್ಟವಾಗುತ್ತಿದೆ. ಸರಕಾರ ಅಥವಾ ಸಂಬಂಧ ಪಟ್ಟವರು ಸದ್ಯದ ಪಾರ್ಕಿಂಗ್ ಸ್ಥಳದಿಂದ ಭೈರವೇಶ್ವರ ಸನ್ನಿಧಿಯವರೆಗಿನ ಅರ್ಧ ಕಿಮೀ ರಸ್ತೆಯನ್ನು ಡಾಂಬರೀಕರಣ ಮಾಡಿ ಅಲ್ಲಿಯವರೆಗೆ ವಾಹನಗಳಲ್ಲಿ ಹೋಗುವ ವ್ಯವಸ್ಥೆ ಮಾಡಿದರೆ ಪ್ರವಾಸಿಗರಿಗೆ ತುಂಬಾ ಅನುಕೂಲವಾಗಬಹುದು.

ಪ್ರತಿ ವರ್ಷ ಶಿವರಾತ್ರಿಯ ಸಮಯದಲ್ಲಿ 10 ದಿನ ಯಾಣದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಹಾಗೂ ಜಾತ್ರೆ ನಡೆಯುತ್ತದೆ. ಚಂಡಿ ಹಾಗೂ ವಿಭೂತಿ ನದಿಗಳು ಇಲ್ಲಿಯ ಜೀವ ನದಿಗಳು. ಇಲ್ಲಿಂದ ಸುಮಾರು 8 ಕಿಮೀ ದೂರದಲ್ಲಿ ವಿಭೂತಿ ಫಾಲ್ಸ್ ಇದೆ. ಟ್ರೆಕ್ಕಿಂಗ್ ಮಾಡುವವರಿಗೆ ಯಾಣ ಹೇಳಿ ಮಾಡಿಸಿದ ಸ್ಥಳ.

ದಟ್ಟ ಕಾಡು, ಮನ ಮುದಗೊಳಿಸುವ ಪರಿಸರ, ಝರಿ ನೀರಿನ ಜುಳು ಜುಳು ತಿಲ್ಲಾನ, ಅದ್ಭುತ ಶೀಲಾ ಶಿಖರಗಳು, ಜೇನಿನ ಝೇಂಕಾರ ನಾದ, ಮೇಲಾಗಿ ಧಾರ್ಮಿಕ ಆಚರಣೆಯ ಪವಿತ್ರ ಕ್ಷೇತ್ರ ʻಯಾಣʼ ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಉತ್ತರ ಕನ್ನಡದ ಅದ್ಭುತ ಪ್ರವಾಸಿ ತಾಣ.