ತರಗೆಲೆ ತೆಗೆಯಲು ತಂತ್ರಜ್ಞಾನ
ಕೆಲವು ಜನರು ಕಂಕುಳಲ್ಲಿ ಬ್ಲೋವರ್ ಹಿಡಿದುಕೊಂಡು ಎಲೆಗಳನ್ನು ಒಂದು ಕಡೆಗೆ ಗುಂಪು ಹಾಕುತ್ತಾರೆ. ಆ ಬ್ಲೋವರ್‌ನಿಂದ ಬರುವ ಗಾಳಿ ಎಲ್ಲ ಎಲೆಗಳನ್ನು ನೂಕುತ್ತ ಒಂದೇ ಕಡೆಗೆ ಶೇಖರಿಸಲು ಅನುವು ಮಾಡಿಕೊಡುತ್ತದೆ. ಈ ರೀತಿಯಾಗಿ ಅಲ್ಲಲ್ಲಿ ಒಣಗಿದ ಎಲೆಗಳ ಗುಂಪನ್ನು ಮಾಡುತ್ತ ಸಾಗುತ್ತಾರೆ. ಸುಮಾರು 20 ಎಕರೆಯಷ್ಟು ವಿಸ್ತೀರ್ಣದ ವಸತಿ ಸಮುಚ್ಛಯವನ್ನು ನಾಲ್ಕರಿಂದ ಐದು ಜನರ ತಂಡ ಕೆಲವೇ ಗಂಟೆಗಳಲ್ಲಿ ಎಲೆಗಳನ್ನು ಒಟ್ಟುಮಾಡುತ್ತದೆ.
- ವಿಲಾಸ ನಾ ಹುದ್ದಾರ
ಅಮೆರಿಕದ ಫಾಲ್ ಅಥವಾ ಆಟಮನ್ (ಶರತ್ಕಾಲ) ಪ್ರಾರಂಭವಾಗುವುದು ಸೆಪ್ಟೆಂಬರ್ ಆರಂಭದಿಂದ. ಈ ಕಾಲದಲ್ಲಿ ಮರದ ಎಲೆಗಳು ದಿನಗಳೆದಂತೆ ಹಳದಿ ಬಣ್ಣಕ್ಕೆ ತಿರುಗಿ, ಹಳದಿಯಿಂದ ನಸುಗೆಂಪು, ನಂತರ ಕಡುಗೆಂಪು ಬಣ್ಣಕ್ಕೆ ತಿರುಗಿ ತರಗೆಲೆಗಳಾಗಿ ಧರೆಗೆ ಉದುರುತ್ತವೆ. ಹಸಿರಿನಿಂದ ಕಂಗೊಳಿಸುತ್ತಿದ್ದ ಗಿಡ/ಮರಗಳು ಎಲ್ಲಾ ಎಲೆಗಳನ್ನು ಕಳೆದುಕೊಂಡು ಬೋಳು ಬೋಳಾಗಿ ಕಾಣುತ್ತವೆ. ಅಮೆರಕದ ವಿಸ್ತೀರ್ಣ ಭಾರತಕ್ಕಿಂತ ಐದು ಪಟ್ಟು ಹೆಚ್ಚಾಗಿದ್ದು, ಮರ/ಗಿಡಗಳಿಂದ ತುಂಬಿದೆ. ಈ ಋತುವಿನಲ್ಲಿ ಇಲ್ಲಿಯ ರಸ್ತೆಗಳು, ಕಾಲು ದಾರಿಗಳೆಲ್ಲವೂ ತರಗೆಲೆಗಳಿಂದ ತುಂಬಿರುತ್ತವೆ. ಪ್ರತಿನಿತ್ಯ ಇವುಗಳನ್ನು ನಿಭಾಯಿಸುವುದು ಕಷ್ಟದ ಕೆಲಸ ಎಂದು ನಾನು ಯೋಚಿಸಿದ್ದೆ. ಆದರೆ ಇಲ್ಲಿ ಅದು ತುಂಬಾ ಸರಳ.
ಕೆಲವು ಜನರು ಕಂಕುಳಲ್ಲಿ ಬ್ಲೋವರ್ ಹಿಡಿದುಕೊಂಡು ಎಲೆಗಳನ್ನು ಒಂದು ಕಡೆಗೆ ಗುಂಪು ಹಾಕುತ್ತಾರೆ. ಆ ಬ್ಲೋವರ್‌ನಿಂದ ಬರುವ ಗಾಳಿ ಎಲ್ಲ ಎಲೆಗಳನ್ನು ನೂಕುತ್ತ ಒಂದೇ ಕಡೆಗೆ ಶೇಖರಿಸಲು ಅನುವು ಮಾಡಿಕೊಡುತ್ತದೆ. ಈ ರೀತಿಯಾಗಿ ಅಲ್ಲಲ್ಲಿ ಒಣಗಿದ ಎಲೆಗಳ ಗುಂಪನ್ನು ಮಾಡುತ್ತ ಸಾಗುತ್ತಾರೆ. ಸುಮಾರು 20 ಎಕರೆಯಷ್ಟು ವಿಸ್ತೀರ್ಣದ ವಸತಿ ಸಮುಚ್ಛಯವನ್ನು ನಾಲ್ಕರಿಂದ ಐದು ಜನರ ತಂಡ ಕೆಲವೇ ಗಂಟೆಗಳಲ್ಲಿ ಎಲೆಗಳನ್ನು ಒಟ್ಟುಮಾಡುತ್ತದೆ.

ಇದನ್ನು ನಿಭಾಯಿಸಲು ಟ್ಯಾಂಕ್ ಸಹಿತ ಒಂದು ಟ್ರಕ್ ಇಲ್ಲಿ ಕಾರ್ಯ ನಿರ್ವಹಿಸುತ್ತದೆ. ಒಂದು ಕೊಳವೆಯನ್ನು ಅದಕ್ಕೆ ಜೋಡಿಸಲಾಗಿದ್ದು, ಕೊಳವೆ ಮತ್ತು ಟ್ಯಾಂಕ್‌ನ ಮಧ್ಯೆ ತರಗೆಲೆಗಳನ್ನು ಪುಡಿ ಮಾಡುವ ಪುಟ್ಟ ಯಂತ್ರ ಜೋಡಣೆಯಾಗಿರುತ್ತದೆ. ಕೊಳವೆಯ ಮೂಲಕ ಎಳೆದುಕೊಂಡ ತರಗೆಲೆಗಳನ್ನು ಒಳಗೆ ಅಳವಡಿಸಲಾದ ಯಂತ್ರ ಪುಡಿ ಮಾಡಿದರೆ, ಆ ಪುಡಿಯು ಟ್ಯಾಂಕರ್ ಒಳಗಡೆ ಶೇಖರಣೆಯಾಗುತ್ತದೆ. ದೊಡ್ಡ ದೊಡ್ಡ ಎಲೆಗಳ ಗುಂಪು ಕ್ಷಣಾರ್ಧದಲ್ಲಿ ಪುಡಿಯಾಗಿ ಶೇಖರಣೆಯಾಗುತ್ತದೆ. ಈ ಎಲ್ಲ ಕಾರ್ಯವನ್ನು ಆ ಟ್ರಕ್‌ನ ಚಾಲಕ ಒಬ್ಬನೇ ನಿರ್ವಹಿಸುತ್ತಾನೆ. ಎಲೆಗಳ ಪುಡಿಯನ್ನು ಗೊಬ್ಬರವಾಗಿ ಮತ್ತೆ ಉಪಯೋಗಿಸುತ್ತಾರೆ ಎಂದು ನನಗಲ್ಲಿ ತಿಳಿದು ಬಂದಿತು.
ಸುಮಾರು ಐವತ್ತರಿಂದ ಅರವತ್ತು ಜನರು ದಿನಗಟ್ಟಲೆ ಮಾಡುವ ಕೆಲಸವನ್ನು, ತಂತ್ರಜ್ಞಾನ ಬಳಸಿ ಐದಾರು ಜನರು ಕೆಲವೇ ಗಂಟೆಗಳಲ್ಲಿ ಮಾಡಿ ಮುಗಿಸುತ್ತಾರೆ. ಇದೇ ರೀತಿಯಲ್ಲಿ ಮರ/ಗಿಡಗಳು ಮಳೆಯಿಂದಲೋ, ಬಿರುಗಾಳಿಯಿಂದಲೋ ಉರುಳಿ ಬಿದ್ದರೆ, ಅವುಗಳನ್ನು ಯಂತ್ರಗಳ ಸಹಾಯದಿಂದ ಅದೇ ಸ್ಥಳದಲ್ಲಿ ಕತ್ತರಿಸಿ, ಪುಡಿಯಾಗಿಸಿ ಟ್ರಕ್‌ನಲ್ಲಿ ತುಂಬಿಕೊಂಡು ಹೋಗುವದನ್ನೂ ನಾನು ನೋಡಿದೆ. ಇದೆಲ್ಲವೂ ಆಗುವದು ಕೆಲವೇ ಗಂಟೆಗಳಲ್ಲಿ.