ಶಿವಮೊಗ್ಗ ವಿಮಾನ ನಿಲ್ದಾಣವು 1 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರ ನಿರ್ವಹಣೆಯಲ್ಲಿ ಯಶಸ್ವಿಯಾಗಿದ್ದು, ಸದ್ಯದಲ್ಲಿಯೇ ಇಲ್ಲಿ ಎಫ್‌ಟಿಒ ಮತ್ತು ಎಂಆರ್‌ಒ ವ್ಯವಸ್ಥೆಗಳನ್ನು ಕೂಡ ಆರಂಭಿಸಲಾಗುವುದು ಎಂದು ಬೃಹತ್‌ ಕೈಗಾರಿಕೆ ಮತ್ತು ಮೂಲಸೌಕರ್ಯ ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಮಾನ­ದಂಡಗಳಿಗೆ ಅನು­ಗುಣವಾಗಿ ನಿರ್ಮಾಣಗೊಂಡು, ನಾಗರಿಕ ವೈಮಾನಿಕ ಸೇವೆಗಳ ಕಾರ್ಯಾ­ಚರಣೆ ನಡೆಸುತ್ತಿರುವ ಶಿವಮೊಗ್ಗ ವಿಮಾನ ನಿಲ್ದಾಣ 2 ವರ್ಷ ಪೂರೈಸುವ ಮೂಲಕ ದ್ವಿತೀಯ ವಾರ್ಷಿಕೋತ್ಸವ ಆಚರಿಸಿ­ಕೊಂಡಿದೆ. ಶಿವಮೊಗ್ಗ ವಿಮಾನ ನಿಲ್ದಾಣವು ಕೆಎಸ್‌ಐಐಡಿಸಿ ಮೂಲಕ ರಾಜ್ಯ ಸರಕಾರವೇ ನಿರ್ವಹಿಸಲು ಆರಂಭಿಸಿದ ಪ್ರಥಮ ವಿಮಾನ ನಿಲ್ದಾಣವಾಗಿದೆ.

2 ವರ್ಷದಲ್ಲಿ ನಿಲ್ದಾಣದಿಂದ 2,400 ವಿಮಾನಯಾನ ನಡೆಸಿವೆ. ಈ ನಿಲ್ದಾಣದ ಮೂಲಕ ಬೆಂಗಳೂರು, ಗೋವಾ, ಹೈದ­ರಾ­ಬಾದ್‌, ತಿರುಪತಿ, ಚೆನ್ನೈಗೆ ಈಗ ವಿಮಾನ ಸೇವೆ ಲಭ್ಯವಿದೆ. ಇದರಿಂದ ಮಲೆನಾಡು ಪ್ರದೇ­ಶ­ದಲ್ಲಿ ಪ್ರವಾಸೋದ್ಯಮ ಮತ್ತು ಆರ್ಥಿಕ ಬೆಳವಣಿಗೆಗೂ ಉತ್ತೇಜನ ಸಿಕ್ಕಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಬೈಂದೂರಿನಲ್ಲಿ ಇನ್ನೊಂದು ವಿಮಾನ ನಿಲ್ದಾಣವನ್ನು ಸ್ಥಾಪಿಸಲು ಚಿಂತನೆ ನಡೆಸಲಾಗಿದೆ. ಆ ವಿಮಾನ ನಿಲ್ದಾಣಕ್ಕೆ ಮೂಕಾಂಬಿಕಾ ವಿಮಾನ ನಿಲ್ದಾಣ ಎಂದು ಹೆಸರಿಡಬೇಕು ಎಂದು ಶಿವಮೊಗ್ಗದ ಸಂಸದ ಬಿ.ವೈ. ರಾಘವೇಂದ್ರ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದ್ದಾರೆ.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಒತ್ತಿನೆಣೆಯಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಬೇಕು. ಅದರಿಂದ ಸಾವಿರಾರು ಭಕ್ತರಿಗೆ ಅನುಕೂಲವಾಗುತ್ತದೆ ಎಂದು ಮನವಿಯಲ್ಲಿ ರಾಘವೇಂದ್ರ ಅವರು ಕೋರಿದ್ದಾರೆ.