• ಶಂಕರ್ ಸಾರಡ್ಕ

ಟೂರ್ ವ್ಯವಸ್ಥೆ ಮಾಡುವ ಹಲವು ಏಜನ್ಸಿಗಳಿವೆ. ಅವರ ಮೂಲಕ ಹೋದರೆ ತುಸು ಹೆಚ್ಚು ಖರ್ಚಾದರೂ ನಿಶ್ಚಿಂತೆಯಿಂದ ಯಾವ ಒತ್ತಡವೂ ಇಲ್ಲದೆ ಪ್ರೇಕ್ಷಣೀಯ ಸ್ಥಳಗಳನ್ನು ಸಂದರ್ಶಿಸಿ ಬರಬಹುದು. ಉತ್ತಮ ವ್ಯವಸ್ಥೆ ಮಾಡುವ ಏಜೆನ್ಸಿಯಾದರೆ ಪ್ರವಾಸ ಸುಖಕರವಾಗುತ್ತದೆ. ಇಲ್ಲವಾದರೆ ಪ್ರಯಾಸವಾಗಿ ಬಿಡುತ್ತದೆ. ಇತ್ತೀಚೆಗೆ ಮಾಡಿದ ನನ್ನ ಕಾಶಿ ಯಾತ್ರೆಯ ಒಂದು ಸ್ವಾನುಭವದ ಕಥನವಿದೆ.

ಹಿಂದೆ ದೇಶ ವಿದೇಶದ ಕೆಲವು ಟೂರ್ ಗಳನ್ನು ಏಜೆನ್ಸಿ ಮೂಲಕ ಮಾಡಿದ್ದೆ. ಅನುಭವ ಸುಖಕರ. ಈ ಬಾರಿ ಹೆಚ್ಚು ಯೋಚಿಸಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಬಂದ ಬಣ್ಣದ ಬಣ್ಣದ ಮಾತುಗಳ ಜಾಹೀರಾತು ನೋಡಿ ತಕ್ಷಣ ಮರುಳಾದೆ. ಮಂಗಳೂರಲ್ಲಿ ಬ್ರಾಂಚ್ ಇರುವ ಏಜೆನ್ಸಿಯೊಂದನ್ನು ಕಾಶಿಯಾತ್ರೆಗೆ ಆಯ್ದುಕೊಂಡಿದ್ದೆವು. ಅವರ ಜಾಹೀರಾತಿನಂತೆ ಮುಖ್ಯ ಸ್ಥಳಗಳು ಅಯೋಧ್ಯೆ, ಕಾಶೀ ಮತ್ತು ಪ್ರಯಾಗ ಹೋಗುವುದಿತ್ತು. ಸೀಟೊಂದರ ದರ ರೂ 15900/-. ಇತರ ಏಜೆನ್ಸಿಗಳಿಗಿಂತ ಕಡಿಮೆ. ರೈಲು ಅಥವಾ ವಿಮಾನಯಾನದ ಖರ್ಚು ಪ್ರತ್ಯೇಕ. ಒಂದು ಬಸ್ ಫುಲ್ 40 ಜನರ ಟೀಮ್. ’ಊಟ ತಿಂಡಿ ಮಾಡಿಕೊಡಲು ನಮ್ಮೂರಿನಿಂದಲೇ ಜನವಿರುತ್ತಾರೆ. ಎಲ್ಲಾ ನಮ್ಮೂರ ಊಟ ತಿಂಡಿ. 7 ದಿನಗಳ ಯಾತ್ರೆ. ಅಲ್ಲಿನ ಯಾತ್ರೆಗೆ ಲಕ್ಷುರಿ ಎಸಿ ಬಸ್ ನಲ್ಲೇ. ಉತ್ತಮ ಸ್ಟಾರ್ ಹೊಟೇಲ್ ಗಳಲ್ಲಿ ವಾಸ್ತವ್ಯ’. ಇದು ಅವರ ವಾಗ್ದಾನ. ಸೋಷಿಯಲ್ ಮೀಡಿಯಾದಲ್ಲಿ ಉತ್ತಮ ಸ್ಟಾರ್ ರೇಟಿಂಗ್ ಕೂಡಾ ಇತ್ತು. ಹಿಂದೆ ಹೋದ ಇದೇ ರೀತಿಯ ಆಶ್ವಾಸನೆ ನೀಡಿದ ಬೇರೆ ಏಜೆನ್ಸಿಯವರು ಉತ್ತಮ ಸೇವೆ ನೀಡಿದ್ದರು. ಈ ಏಜೆನ್ಸಿ ಮೂಲಕ ಪ್ರಯಾಣಿಸಿದವರನ್ನು ವಿಚಾರಿಸದೆ ಎರಡು ಸೀಟ್ ಬುಕ್ ಮಾಡಿದೆವು. ಹೋಗಲು ವಿಮಾನ ಬೆಂಗಳೂರು ಟು ಅಯೋಧ್ಯೆ. ಹಿಂದಿರುಗಲು ಡೆಲ್ಲಿ ಟು ಬೆಂಗಳೂರು. ಪ್ರತ್ಯೇಕವಾಗಿ 32000 ರು ನೀಡಿ ಬುಕ್ ಮಾಡಿದೆವು. ನವೆಂಬರ್ 28 ರಿಂದ ಡಿಸೆಂಬರ್ 4 ತನಕ ಕ್ಷೇತ್ರದರ್ಶನ. ಟೂರಿನ ಎಲ್ಲಾ ದಿನಗಳ ಮಾಹಿತಿಗಳು ಟೂರಿನ ತಾರೀಕಿನ ಒಂದು ವಾರ ಮೊದಲು ವಾಟ್ಸಾಪ್ ಗ್ರೂಪಿನಲ್ಲಿ ಲಭ್ಯ ಎಂದು ವಾಗ್ದಾನವಿತ್ತಿದ್ದರು.

ನಮ್ಮ ವಿಮಾನ ಪ್ರಯಾಣ ನವೆಂಬರ್ 26ಕ್ಕೆ ಬುಕ್ ಆಗಿತ್ತು. ಏಜೆನ್ಸಿಯವರಿಂದ ಎಷ್ಟು ಸಲ ಕರೆ ಮಾಡಿದರೂ ನಾಳೆ ವಿವರ ನೀಡುತ್ತೇವೆ ಎಂಬ ಉತ್ತರ. ಕೊನೆಯ ಘಳಿಗೆಯಲ್ಲಿ ಹಲವು ಮಂದಿ ಅನಿವಾರ್ಯ ಕಾರಣಗಳಿಂದ ಕಾನ್ಸಲ್ ಮಾಡಿದ್ದಾರೆ. ಟೀಮ್ ನಲ್ಲಿ 15 ಮಂದಿ ಮಾತ್ರ ಇರುವುದು. ಟೂರ್ ಮ್ಯಾನೇಜರ್ ನೇರವಾಗಿ ಬಂದು ಅಲ್ಲಿ ಅಯೋಧ್ಯೆಯಲ್ಲಿ ಕರೆದುಕೊಂಡು ಹೋಗಿ ಮಾಹಿತಿ ನೀಡುತ್ತಾರೆ ಎಂದರು. ನಾವು ಪ್ರಯಾಣಿಸಬೇಕಿದ್ದ ಬೆಳಗಿನ 5.30 ರ ವಿಮಾನ ಕ್ಯಾನ್ಸಲ್ ಆಗಿದೆ. 8.30 ರ ವಿಮಾನಕ್ಕೆ ಶಿಫ್ಟ್ ಮಾಡಿದ್ದಾರೆ ಎಂಬ ಮಾಹಿತಿ ಕೊನೆಯ ಕ್ಷಣದಲ್ಲಿ ನಮಗೆ ಬಂದಿತು. ಅಂತೂ ವಿಮಾನ ನಿಲ್ದಾಣದಲ್ಲಿ ಕಾದು ಅಯೋಧ್ಯೆಯ ವಿಮಾನವೇರಿದೆವು. ಅಯೋಧ್ಯೆಯಲ್ಲಿ ಇಳಿದಾಗ ಟೂರ್ ಮ್ಯಾನೇಜರ್ ನನ್ನೇನೋ ಕಂಡೆವು. ಆದರೆ ಆತ ನಿರಂತರ ಮೊಬೈಲ್ ಕಾಲ್ ನಲ್ಲಿದ್ದರು. ಸುಮಾರು ಅರ್ಧ ಗಂಟೆಯ ನಂತರ ನಮ್ಮನ್ನು ಕರೆದುಕೊಂಡು ಹೋಗುವ ವಾಹನ ಬಂತು. ಅಯೋಧ್ಯೆ ಸಿಟಿಯಿಂದ ಹೊರಗೆ ಇರುವ ಹೊಟೇಲೊಂದನ್ನು ನಮ್ಮ ವಾಸಕ್ಕೆ ಬುಕ್ ಮಾಡಿದ್ದರು. ಫೈವ್ ಸ್ಟಾರ್ ನಿರೀಕ್ಷೆಯಲ್ಲಿದ್ದ ನಮಗೆ ಎಸಿ ಬಿಡಿ. ಬಿಸಿಲಿನ ಝಳದ ಬಿಸಿ ಹವೆಯ ಸಾಧಾರಣ ಕೋಣೆಗಳು ಸಿಕ್ಕವು. ಪಕ್ಕದ ಸಾಮಾನ್ಯ ಗಲೀಜು ಹೊಟೇಲೊಂದರಲ್ಲಿ ನಮಗೆ ಊಟ ತಿಂಡಿಯ ವ್ಯವಸ್ಥೆ. ಪ್ರತಿಭಟಿಸಿದಾಗ ನಿರೀಕ್ಷಿತ ಸಂಖ್ಯೆಯ ಜನ ಟೂರ್ಗೆ ಬಂದಿಲ್ಲ. ಕೇವಲ 14 ಮಂದಿ ಇದ್ದೀರಿ. ಅಡುಗೆಯವನನ್ನು ಕರೆಸುವುದು ಅಸಾಧ್ಯ, ಕಾಶಿಯಲ್ಲಿ ಉತ್ತಮ ಹೊಟೇಲ್ ಬುಕ್ ಆಗಿದೆ. ಅಯೋಧ್ಯೆಯಲ್ಲಿ ಅಡ್ಜಸ್ಟ್ ಮಾಡಿಕೊಳ್ಳಿ ಅಂದರು. ಕನ್ನಡ ಬಲ್ಲವರು ನಾನು ಮತ್ತು ನನ್ನ ಪತ್ನಿ ಮಾತ್ರ. ಉಳಿದ 12 ಮಂದಿ ಮಲಯಾಳಿಗಳು. ಮ್ಯಾನೇಜರ್ ಮಲಯಾಳಿ. ಕನ್ನಡ ಬಾರದವ. ನನಗೆ ಮಲಯಾಳಂ ತಿಳಿದಿರುವುದರಿಂದ ಸರಿ ಹೋಯಿತು. ಟೂರ್ ವಿವರಗಳ ಲಿಸ್ಟ್ ವಾಟ್ಸಾಪ್ ಗ್ರೂಪಿಗೆ ಹಾಕುವೆನೆಂದಿದ್ದರೂ ಆ ತನಕ ಬಂದಿರಲಿಲ್ಲ. ಅಂತೂ ಆ ದಿನ ರಾತ್ರಿ ಅಲ್ಲಿ ತಂಗಿ ಹೇಗೋ ನಿದ್ದೆ ಮಾಡಿದೆವು. ಮರುದಿನ ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನವಾಯಿತು. ಅಲ್ಲಿಂದ ಸಂಜೆ ಕಾಶಿಗೆ ಪಯಣ. ವಿಶಾಲವಾದ ಎಸಿ ಬಸ್ಸಿನ ನಿರೀಕ್ಷೆಯಲ್ಲಿದ್ದ ನಮಗೆ ಬಂದದ್ದು ಸಾಮಾನ್ಯ ಟೆಂಪೋ ಟ್ರಾವೆಲರ್ ಬಸ್. ಮ್ಯಾನೇಜರ್ ಜೊತೆ ಜಗಳವಾಡಿ ಅನಿವಾರ್ಯವೆಂಬಂತೆ ಬಸ್ ಏರಿದೆವು. ಮಧ್ಯ ರಾತ್ರಿ ಕಾಶಿ ತಲುಪಿ ಸಾಮಾನ್ಯ ಹೊಟೇಲೊಂದರಲ್ಲಿ ವಾಸ್ತವ್ಯವಾಯಿತು. ಬೆಳಗ್ಗೆ ತಿಂಡಿಗೆ ಬಂದಾಗ ಉಪ್ಪಿಟ್ಟು ಚಿತ್ರಾನ್ನ ನಮ್ಮನ್ನು ಕಾಯುತ್ತಿತ್ತು! ಚಹಾ ಕಾಫಿ ಇಲ್ಲ. ನಮ್ಮ ಪ್ರತಿಭಟನೆ ಮುಂದುವರಿಯಿತು. ಮುಂದೆರಡು ದಿನ ಊಟ ತಿಂಡಿಯೂ ಅಷ್ಟೇ. ಮನೆಯಲ್ಲಿ ಮಾಡಿದ್ದು ಎಂದು ಇಬ್ಬರು ಕೊಳಕಾದ ಬಟ್ಟೆ ಉಟ್ಟವರು ಆಹಾರ ತಂದು ಕೊಡುತ್ತಿದ್ದರು. ಒಲ್ಲದ ಮನಸ್ಸಿನಿಂದ ತಿನ್ನುತ್ತಿದ್ದೆವು. ಮಂಗಳೂರಿನಲ್ಲಿ ಬುಕ್ ಮಾಡಿದ ಏಜೆನ್ಸಿಯವರಿಗೆ ಫೋನಿಸಿದರೆ ಸ್ವಿಚ್ಡ್ ಆಫ್ ಬರುತ್ತಿತ್ತು. ಸ್ನಾನ ಮಾಡಿ ಪಿತೃಶ್ರಾದ್ಧ ಮಾಡಿ ಗಂಗೆಯಲ್ಲಿ ಮುಳುಗಿ ಕಾಶಿ ವಿಶ್ವನಾಥನ ದರುಶನ ಮಾಡಿದೆವು.

ಕೊನೆಯ ಕ್ಷೇತ್ರ ಪ್ರಯಾಗ ರಾಜ್. ಆದರೆ ಕುಂಭ ಮೇಳದ ಪ್ರಯುಕ್ತ ಪ್ರವಾಸಿಗರಿಗೆ ಅಲ್ಲಿ ಪ್ರವೇಶವಿಲ್ಲ. ಪ್ರಯಾಗದ ಬದಲು ಶ್ರೀಕೃಷ್ಣ ಜನ್ಮ ಭೂಮಿ ಮಥುರಾವನ್ನು ತೋರಿಸುತ್ತೇವೆ ಎಂದರು. ಅನಿವಾರ್ಯವಾಗಿ ಒಪ್ಪಲೇ ಬೇಕಾಯಿತು. ಕಾಶಿಯಿಂದ ಮಥುರಾ ಸುಮಾರು 800 ಕಿಮೀ. ರೈಲಿನ ಹಣ ನೀಡುವವರಿಗೆ ವಂದೇ ಭಾರತ್ ಎಕ್ಸ್ ಪ್ರೆಸ್ ನಲ್ಲಿ ಟಿಕೆಟ್ ಸಿಗಬಹುದು ಎಂದು ಹೆಚ್ಚುವರಿ ಹಣ ಬೇಡಿದರು. ಕೊನೆಯ ಕ್ಷಣ ಅದೂ ಇಲ್ಲವಾಯಿತು. ನಮ್ಮ 800 ಕಿ.ಮಿ ಪ್ರಯಾಣಕ್ಕೆ ಅದೇ ಸಾಮಾನ್ಯ ಟೆಂಪೋ ಟ್ರಾವೆಲರ್ ಬಸ್ ಹತ್ತಿಸಿದರು. ಅನಿವಾರ್ಯ. 5 ನೇ ದಿನ ರಾತ್ರಿಯ ಪ್ರಯಾಣ. ನಾನು ಕುಳಿತುಕೊಂಡೇ ತೂಕಡಿಸುತ್ತಿದ್ದೆನು. ಪಕ್ಕನೆ ಎಚ್ಚರಗೊಂಡಾಗ ರಾತ್ರಿ 2 ಗಂಟೆ. ಟೂರ್ ಮ್ಯಾನೇಜರ್ ಡ್ರೈವರ್ ಪಕ್ಕದ ಸೀಟಿನಲ್ಲಿ ಕುಳಿತು ಗೊರಕೆ ಹೊಡೆಯುತ್ತಿದ್ದ. ಉಳಿದವರೂ ಅರೆನಿದ್ರೆಯಲ್ಲಿದ್ದರು. ಡ್ರೈವರ್ ನಿದ್ರೆ ತೂಗುತ್ತಾ ಬಸ್ ಅಡ್ಡಾದಿಡ್ಡಿಯಾಗಿ ಓಡಿಸುತ್ತಿದ್ದ. ನಾನು ಹೋಗಿ ಹಿಂದಿಯಲ್ಲಿ ಡ್ರೈವರ್ ನನ್ನು ಬಯ್ಯತೊಡಗಿದೆ. ಆತ ನನ್ನನ್ನು ಗದರಿಸುತ್ತಾ ನಾನು ನಿದ್ದೆ ಮಾಡುತ್ತಿಲ್ಲ 20 ವರ್ಷಗಳಿಂದ ಬಸ್ ಓಡಿಸುತ್ತಿದ್ದೇನೆ. ನೀವ್ಯಾರು ಕೇಳಲು. ನೀವೇ ಬಸ್ ಓಡಿಸಿ ಎಂದು ಬಸ್ಸನ್ನು ಪಕ್ಕಕ್ಕೆ ನಿಲ್ಲಿಸಿ ಬಯ್ಯತೊಡಗಿದ. ಎಲ್ಲರಿಗೂ ಎಚ್ಚರವಾಯಿತು. ಎಲ್ಲರೂ ಸೇರಿ ದಬಾಯಿಸಿದರು. ನಾವೆಲ್ಲ ಇಳಿಯುತ್ತೇವೆ ಎಂದಾಗ ಮ್ಯಾನೇಜರ್ ಎಚ್ಚರಗೊಂಡ. ಬಸ್ ಓಡಿಸುವಂತೆ ಹೇಳಿದ. ಬಸ್ ಮತ್ತೆ ಓಡತೊಡಗಿತು. ಅಂತೂ ಯಾವುದೇ ಅಪಘಾತವಾಗದೆ ಬೆಳಗ್ಗೆ 6 ಗಂಟೆಗೆ ಮಥುರಾ ತಲುಪಿದೆವು. ಅಲ್ಲಿಯೂ ಸಾಮಾನ್ಯ ಹೊಟೇಲೇ ಗತಿಯಾಯಿತು. ಊಟ ತಿಂಡಿಯೂ ಹೊಟೇಲಿನಲ್ಲೇ. ಹಲವರಿಗೆ ಆರೋಗ್ಯ ಕೈಕೊಟ್ಟಿತ್ತು . ನಾವಾದರೋ ಅರೆಹೊಟ್ಟೆ ತಿಂದು ನಮ್ಮ ಆರೋಗ್ಯವನ್ನು ರಕ್ಷಿಸಿಕೊಂಡಿದ್ದೆವು. ರಸ್ತೆ ಬದಿಯ ತಿಂಡಿ ಪಾನೀಯ ಮುಟ್ಟಲಿಲ್ಲ. ಶ್ರೀಕೃಷ್ಣ ಜನ್ಮಭೂಮಿ, ಜತೆಗೆ ಕೆಲವು ಮುಖ್ಯ ಸ್ಥಳಗಳನ್ನು ನಿದ್ದೆಗಣ್ಣಿನಲ್ಲೇ ಸಂದರ್ಶಿಸಿದೆವು. ಮರುದಿನ ಮತ್ತೆ ಕೆಲವು ಕ್ಷೇತ್ರಗಳ ದರ್ಶನ. 3 ನೇ ತಾರೀಕು ಸಂಜೆ ಅದೇ ಟೆಂಫೋ ಟ್ರಾವೆಲರ್ ನಲ್ಲಿ ದಿಲ್ಲಿಗೆ ಪ್ರಯಾಣ. 3 ಗಂಟೆಗೆ ದಿಲ್ಲಿ ಏರ್ ಫೋರ್ಟ್. ನಮ್ಮ ಟಿಕೆಟ್ ಕನ್ ಫರ್ಮ್ ಆಗಿತ್ತು ಆದರೆ ಕೇರಳ ಮಿತ್ರನೋರ್ವ ಹಿಂದೆಯೇ ಹಣ ಪಾವತಿಸಿದ್ದರೂ ಟಿಕೆಟ್ ಬುಕ್ ಆಗಿರಲಿಲ್ಲ. ಬುಕ್ ಮಾಡಿದ ಈ ಟೂರ್ ಏಜೆನ್ಸಿ ಹಣ ಪಡೆದಿದ್ದರು. ಫೋನಿಸಿದರೆ ಏಜೆನ್ಸಿಯವರು ಫೋನ್ ಎತ್ತಲಿಲ್ಲ. ಮ್ಯಾನೇಜರ್ ಮಥುರಾದಲ್ಲಿಯೇ ಜಾರಿಕೊಂಡಿದ್ದನು. ಕೇರಳ ಮಿತ್ರರೆಲ್ಲ ಸೇರಿ ಎರಡು ಪಟ್ಟು ಹಣ ನೀಡಿ ಟಿಕೆಟ್ ಖರೀದಿಸಿ ನಿಗದಿತ ವಿಮಾನದಲ್ಲಿಯೇ ತೆರಳುವಂತೆ ಆಯಿತು.

ಬೆಂಗಳೂರು ವಿಮಾನ ನಿಲ್ದಾಣದಿಂದ ಮಗನು ಆತನ ಮನೆಗೆ ಟ್ಯಾಕ್ಸಿಯಲ್ಲಿ ಬರುವಂತೆ ತಿಳಿಸಿದ್ದ. ಆದರೆ ಹೊರಗಡೆ ಬಂದಾಗ ನನಗೆ ಬಸ್ ಕಂಡಿತು. ನಾವು ಹೋಗಬೇಕಾದ ಕೆ ಆರ್ ಪುರಕ್ಕೆ ಹೋಗುತ್ತದೆ ಎಂದರು . ಬಸ್ ನಮಗಾಗಿ ಇರುವುದು ನೀವು ಟ್ಯಾಕ್ಸಿ ಮಾಡಿ ಹೋದರೆ ಹೇಗೆ ಎಂದು ಡ್ರೈವರ್ ಕರೆದ. ಬಸ್ ಏರಿದೆವು. ಆದರೆ ಅದು ಹಲವೆಡೆ ಸುತ್ತಿ ಹೋಗುವ ಬಸ್ . ಅರ್ಧ ಗಂಟೆಯ ಪ್ರಯಾಣಕ್ಕೆ 3 ಗಂಟೆಯನ್ನು ಬಳಸಿತ್ತು.. ಪೂರ್ತಿ ಪ್ರವಾಸ ಕಹಿ ಅನುಭವವನ್ನೇ ನೀಡಿತ್ತು. ಮನೆಗೆ ಬಂದು ಏಜೆನ್ಸಿಗೆ ಫೋನಿಸಿದರೆ ಆ ನಂಬರ್ ಅಸ್ತಿತ್ವದಲ್ಲಿ ಇಲ್ಲ ಎಂದು ಮರುನುಡಿಯಿತು! ಇಂಥ ಅನುಭವ ಇನ್ಯಾರಿಗೂ ಆಗದಿರಲಿ ಎಂಬುದೇ ಈ ಲೇಖನ ಉದ್ದೇಶ. ನಕಲಿ ಮತ್ತು ಕೆಟ್ಟ ಸೇವೆಯ ಟ್ರಾವೆಲ್ ಏಜೆನ್ಸಿಗಳ ಮತ್ತು ಟೂರ್ ಆಪರೇಟರ್ ಗಳ ಬಗ್ಗೆ ಎಚ್ಚರವಿರಲಿ.