• ಕು. ವೀಣಾ ಗಣಪತಿ ಹೆಗಡೆ

ಅಂದು ನಸು ಮುಂಜಾನೆಯೇ ನನ್ನ ತಂದೆಯವರೊಂದಿಗೆ ಕುಮಟಾ ಹುಬ್ಬಳ್ಳಿ ಕೆಎಸ್ಆರ್ಟಿಸಿ ಬಸ್ ಹತ್ತಿ ಹುಬ್ಬಳ್ಳಿ ಕಡೆ ಹೊರಟೆ. ಯಾಕೆಂದರೆ ಧಾರವಾಡದಲ್ಲಿ ಪಿಜಿಸಿಇಟಿ ಪರೀಕ್ಷೆ ಇತ್ತಲ್ಲ. ಮೊದಲೇ ಹೇಗೆ ತಲುಪಬೇಕೆಂಬ ಮುಂದಾಲೋಚನೆ ಮಾಡಿರದ ನಾನು ಬಸ್ಸಿನಲ್ಲಿ ಕುಳಿತಿದ್ದಾಗ ನಮ್ಮ ಸಂಬಂಧಿಕರು ಹೇಳಿದ್ದ " ಹುಬ್ಳಿಲ್ಲಿ ಮೂರು ಬಸ್ ಸ್ಟ್ಯಾಂಡ್ ಉಂಟು.....ಒಂದ್ ಕಡೆ ಹೋಗೋ ಬಸ್ ಇನ್ನೊಂದ್ ಕಡೆ ಬರಲ್ಲ " ಎಂಬ ಮಾತು ನೆನಪಾಗಿತ್ತು.

ಎಲ್ಲೋ ಇಳಿದು ಇನ್ನೆಲ್ಲೋ ತಲುಪಿ ಪರೀಕ್ಷಾ ಕೇಂದ್ರ ಹುಡುಕಿ ನಾ ತಲುಪೋದು ತಡವಾದ್ರೆ ನನ್ನ ಎಂಬಿಎ ಕನಸಿಗೆ ಕೊಳ್ಳಿ ಇಟ್ಟಂತೆ. ಹೀಗೆ ಬರಿ ನಕಾರಾತ್ಮಕವಾಗಿ ಯೋಚಿಸುತ್ತಿದ್ದ ನನ್ನ ತಲೆಗೆ ಪಟ್ಟನೆ ನೆನಪಾಗಿದ್ದು ಧಾರವಾಡದ ಕಾಲೇಜಿನಲ್ಲಿ ಅಭ್ಯಸಿಸುತ್ತಿದ್ದ ಕವಿಮಿತ್ರ.

ತಕ್ಷಣ ಅವರಿಗೆ ಸಂದೇಶ ರವಾನಿಸಿಬಿಟ್ಟೆ ಈ ಕಾಲೇಜ್ ಹೇಗೆ ತಲುಪಬೇಕೆಂದು.

"ಚಿಗರಿ, ಬೇಂದ್ರೆ, ನಾರ್ಮಲ್ ಬಸ್ ಐತ್ರಿ, ಚಿಗರಿ ಹತ್ರಲ ಯಾಕಂದ್ರ ಉಳ್ದವು ಸಾವ್ಕಾಶ್ ಬರ್ತಾವ್. ಜುಬ್ಲಿದಾಗ್ ಇಳದ್ ಆಟೋ ಮಾಡ್ಸ್ಕೋ ಹೋಗ್ರಲ"

ಉಫ್! ಇಷ್ಟುದ್ದ ಸವಿವರಣೆ.

ಚಿಗರಿ ಬಸ್ ಅಷ್ಟೇ ನನ್ ತಲೇಲಿ ಉಳಿದಿದ್ದು.

"ಚಿಗರಿ ಬಸ್ ಗೆ ಹೋಗೋರು ಇಲ್ಲೇ ಇಳೀರಿ" ಡ್ರೈವರ್ ಕೂಗಿದಾಗ ತಡಬಡಾಯಿಸಿ ಎದ್ದ ನಮಗೆ ಅವರೇ ಹಿಂಗೆ ಐದು ನಿಮಿಷ ನಡ್ಕೊಂಡು ಹೋಗಿ ಅಂತ ದಾರಿ ತೋರಿದ್ದು.

ಆದ್ರೆ ನಾವು ತಲುಪಿದ್ದು ಮಾತ್ರ ಹೊಸೂರು ಕ್ರಾಸ್ ಬದಲಾಗಿ ಹೊಸೂರು ಬಸ್ ಸ್ಟ್ಯಾಂಡ್.

ಎಲ್ಲ ಬಸ್ ಬೋರ್ಡ್ ನೋಡುತ್ತಿದ್ದ ನಮಗೆ ಚಿಗರಿ ಅಥವಾ ಬೇಂದ್ರೆ ಯಾವುದೂ ಕಾಣುತ್ತಿಲ್ಲ.

ವಿಚಾರಣೆ ವಿಭಾಗದವರು ಮೆಟ್ಟಿಲು ಹತ್ತಿ ಹೀಗೆ ಹೋಗಿ ಎಂದು ತೋರಿದ ಕಡೆ ನಡೆದು ಪೊಲೀಸ್ ಒಬ್ಬರ ಹತ್ರ ಕೇಳಿದೆವು.

ksrtc

ಒಳಗೆ ಹೇಗೆ ಹೋಗಬೇಕೆಂದು ತೋಚದ ನಮಗೆ ಅವರೇ ಕಟ್ಟೆ ಮೇಲೆ ಹತ್ತಿ ಕಂಬಿಗಳ ಒಳಗೆ ನುಸುಳಿ ಹೋಗುವಂತೆ ತಿಳಿಸಿ ಸಹಾಯ ಮಾಡಿದರು. ಯಾಕೆಂದರೆ ಪ್ರವೇಶ ಮೂಲಕ ಹೋಗಬೇಕೆಂದರೆ ಲಿಫ್ಟ್ ಸಹಾಯದಿಂದ ಹೋಗಬೇಕಿತ್ತು. ಅವರಿಗೂ ಅನಿಸಿತೇನೋ ಮತ್ತೆ ನಾವೆಲ್ಲಾದರೂ ಕಳೆದು ಹೋಗಬಹುದೆಂದು!

ಟಿಕೆಟ್ ತೆಗೆದುಕೊಂಡ ನಮಗೆ ಸಿಟಿ ಬಸ್ ಹಾಗೆ ಹತ್ತಬೇಕೆಂದು ಭಾವಿಸಿ ಹೊರಗಡೆ ಬಂದಾಗ ಅರಿವಾದದ್ದು ಬಸ್ ಬೋರ್ಡ್ ಚಿಗರಿ ಅಲ್ಲ, ಬಸ್ಸೇ ಚಿಗರಿ ಎಂದು!

ಬಂದ ಬಸ್ ಗೆ ಕೈ ಅಡ್ಡ ಮಾಡುತ್ತಿದ್ದ ನಮಗೆ, ಡ್ರೈವರ್ ಸನ್ನೆ ಮೂಲಕ ಒಳಗಡೆ ಹೋಗಲು ಸೂಚಿಸಿದ್ದರಿಂದ ಮತ್ತೆ ಪ್ಲಾಟ್ ಫಾರ್ಮ್ ಒಳಗೆ ಬಂದು ಒಂದೈದು ನಿಮಿಷ ಸುತ್ತಲೂ ಗಮನಿಸಿ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡ ಮೇಲೆ ಚಿಗರಿ ಹತ್ತಿ, ಜುಬ್ಲಿ ಅಲ್ಲಿ ಇಳಿದಾಗಲೇ ಎಸಿ ಅಲ್ಲೂ ತಣ್ಣಗೆ ಬೆವರಿದ್ದು ಅರಿವಾಗಿದ್ದು. ಪರೀಕ್ಷಾ ಕೇಂದ್ರಕ್ಕೆ ಎರಡು ತಾಸು ಮೊದಲೇ ತಲುಪಿದ್ದೆವು. ಅದು ಬೇರೆ ವಿಷಯ.

ಮುಂದೆ ಎರಡು ವರ್ಷ ಧಾರವಾಡದಲ್ಲಿಯೇ ಮುಂದಿನ ಶಿಕ್ಷಣಕ್ಕಾಗಿ ಉಳಿಯುವ ಸಂದರ್ಭ ಬಂದರೂ ಚಿಗರಿ ಬಸ್ ಕಂಡಾಗಲೆಲ್ಲ ಅಂದು ನಮಗೆ ಸಹಾಯ ಮಾಡಿದ ಪ್ರತಿಯೊಬ್ಬ ವ್ಯಕ್ತಿಯ ಅಸ್ಪಷ್ಟ ಚಿತ್ರಣ ಮೂಡಿ ಹೋಗುತ್ತದೆ.