- ಶೋಭಾ ಪುರೋಹಿತ್

ಇದು ನಡೆದಿದ್ದು ಸುಮಾರು 30 ವರ್ಷಗಳ ಹಿಂದೆ. ನಾನು, ನನ್ನ 5 ವರ್ಷದ ಮಗ, ನನ್ನ ಅಕ್ಕ- ಭಾವ, ತಂದೆ-ತಾಯಿ ಇಷ್ಟು ಜನ ಉಡುಪಿಗೆ ಹೋಗಿದ್ದೆವು. ಬೆಳಗಿನ ಪೂಜೆ, ಊಟ ಎಲ್ಲಾ ಆದ ನಂತರ, ಬಸ್ಸು ಹಿಡಿದು ಮಲ್ಪೆ ಬೀಚಿಗೆ ಹೋದೆವು. ನಮ್ಮ ಉಡುಪಿ ಯಾನದ ಗುರಿ ಕೃಷ್ಣ ದರ್ಶನ ಮಾತ್ರವಲ್ಲದೆ ಬೀಚ್ ನೋಡುವುದೂ ಆಗಿತ್ತು. ವಾತಾವರಣ ಆಹ್ಲಾದಕರವಾಗಿತ್ತು.

ನಾವೆಲ್ಲಾ ಉಟ್ಟ ಬಟ್ಟೆಯಲ್ಲಿ ಮಂಡಿ ಮಟ್ಟ ನೀರಲ್ಲಿ ಆಟ ಆಡಿದೆವು. ನಮ್ಮ ಭಾವನವರು, ಸಮುದ್ರ ಸ್ನಾನಕ್ಕೆ ಇಳಿದರು. ಸ್ವಲ್ಪ ಸಮಯದಲ್ಲಿ ಜೋರಾಗಿ ಗಾಳಿ ಬೀಸಲು ಶುರುವಾಯಿತು. ಹೋಗೋಣ ಅಂತ ಅವಸರಿಸಿದರೂ, ಅವರು, ಅಲೆಗಳ ಹೊಡೆತಕ್ಕೆ ಬೆನ್ನು ಕೊಟ್ಟು ಖುಷಿ ಪಡ್ತಾ ಇದ್ದರು. ಸಣ್ಣಗೆ ಮಳೆ ಹನಿ ಶುರುವಾಯಿತು.

ಬಟ್ಟೆ ಬದಲಿಸಿ, ನಾಲ್ಕು ಹೆಜ್ಜೆ ಹಾಕುವಷ್ಟರಲ್ಲಿ ಜೀಂಯ್ ಎಂದು ಬಿರುಗಾಳಿ. ಮರಗಳೆಲ್ಲಾ ಬಾಗಿ ನೆಲಕ್ಕೆ ತಾಕುವಷ್ಟು ರಭಸ. ಕಣ್ಣಲ್ಲಿ ಮರಳು. ಜೊತೆಗೆ ಧೋ ಅಂತ ಮಳೆ ಶುರುವಾಯಿತು. ಕ್ಷಣಾರ್ಧದಲ್ಲಿ ಜನ ಅವರವರ ವಾಹನಗಳಲ್ಲಿ ರೊಂಯ್ ಅಂತ ಹೊರಟರು. ಬಿಕೋ ಅನ್ನುವ ವಾತಾವರಣ! ಧೋ ಅಂತ ಸುರಿಯುವ ಮಳೆ!

ನಾವೆಲ್ಲಾ ಕಂಗಾಲಾಗಿ, ಏನು ಮಾಡಲೂ ತೋಚದೆ, ಹೋಗುವ ಗಾಡಿಗಳಿಗೆಲ್ಲಾ ಕೈ ತೋರಿಸಿ, ಕೊನೆಗೆ ಕೈ ಮುಗಿದರೂ, ಯಾರೊಬ್ಬರೂ ಗಾಡಿ ನಿಲ್ಲಿಸಲಿಲ್ಲ. ನನ್ನ ಚಿಕ್ಕ ಮಗ ಬೇರೆ ಗಾಬರಿಯಾಗಿ ನನ್ನ ತಬ್ಬಿ ಅಳಲು ಶುರು ಮಾಡಿದ. ಅಷ್ಟರಲ್ಲಿ ಯಾರೋ ಒಬ್ಬ ಪುಣ್ಯಾತ್ಮ ಗಾಡಿ ನಿಲ್ಲಿಸಿದರು. ಅದರಲ್ಲಿ ಆಗಲೇ ಜನ ಇದ್ದರು. ನಮ್ಮ ಅನುಮಾನ ಅರ್ಥ ಮಾಡಿಕೊಂಡವರಂತೆ, "ಬನ್ನಿ ಇಲ್ಲೇ ಬಸ್ ಸ್ಟಾಂಡ್ ಹತ್ತಿರದಲ್ಲೇ ಇದೆ ಬಿಡ್ತೀನಿ" ಅಂದು ಹತ್ತಿಸಿಕೊಂಡರು.

ಅಂಬಾಸಿಡರ್ ಕಾರು ಆಗಿದ್ದರಿಂದ ಹೇಗೋ ನಾವು ಆರು ಜನ ಒಳಗೆ ತೂರಿಕೊಂಡು, ಒತ್ತರಿಸಿಕೊಂಡು ಕುಳಿತೆವು. ಐದು ನಿಮಿಷದಲ್ಲಿ ಬಸ್ ಸ್ಟಾಂಡ್ ತಲುಪಿ, ಇಳಿದು ಧನ್ಯವಾದಗಳನ್ನು ಸಮರ್ಪಿಸಿದೆವು.

"ಸ್ವಂತ ವಾಹನ ಇಲ್ಲದೆ ಹೀಗೆಲ್ಲಾ ಬರಬಾರದಮ್ಮ. ಬೀಚಿನಲ್ಲಿ ಮಳೆ ಬಂದರೆ ಹೀಗೇ. ತುಂಬಾ ಅಪಾಯ." ಅಂತ ಬುದ್ಧಿ ಹೇಳಿ, ಬಸ್ ನಿಲ್ದಾಣದಲ್ಲಿ ನಮ್ಮನ್ನು ಇಳಿಸಿ ಹೋದರು. ಮಳೆ ಸ್ವಲ್ಪ ಕಡಿಮೆಯಾಗಿತ್ತು. ಬಸ್ ಹೊರಡಲು ಸಿದ್ಧವಾಗಿತ್ತು. ಬದುಕಿದೆಯಾ ಬಡಜೀವವೇ ಅಂತ ಬಸ್ ಹತ್ತಿ ನಿಟ್ಟುಸಿರು ಬಿಟ್ಟೆವು.ಈಗಲೂ ಇದನ್ನು ನೆನೆದರೆ ಮೈ ಜುಂ ಅನಿಸುತ್ತದೆ.