ವಿದೇಶಿ ಪ್ರವಾಸಿಗರನ್ನು ಸೆಳೆಯುವ ಮೂಲಕ ಪ್ರವಾಸೋದ್ಯಮವನ್ನು ಅಭಿವೃಧ್ಧಿಗೊಳಿಸಲು ಥೈಲ್ಯಾಂಡ್‌ ಹೊಸ ಯೋಜನೆಯನ್ನು ಹಮ್ಮಿಕೊಂಡಿದೆ. ಉಚಿತವಾಗಿ ದೇಶೀಯ ವಿಮಾನಗಳಲ್ಲಿ ಓಡಾಡುವ ಹೊಸ ಯೋಜನೆಗೆ ಚಾಲನೆ ನೀಡಿರುವ ಥೈಲ್ಯಾಂಡ್‌, ಸೆಪ್ಟೆಂಬರ್ ತಿಂಗಳಿನಿಂದ ಇದನ್ನು ಕಾರ್ಯರೂಪಕ್ಕೆ ತರಲಿದೆ. ಥೈಲ್ಯಾಂಡ್‌ಗೆ ಅಂತಾರಾಷ್ಟ್ರೀಯ ಟಿಕೆಟ್ ಖರೀದಿಸಿದರೆ, ಥೈಲ್ಯಾಂಡ್‌ನೊಳಗೆ ದೇಶೀಯ ವಿಮಾನಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶ ಪ್ರವಾಸಿಗರಿಗೆ ಲಭ್ಯವಾಗಿದೆ. ಈ ಮೂಲಕ ಪ್ರವಾಸಿಗರು ಬ್ಯಾಂಕಾಕ್ ಅಥವಾ ಫುಕೆಟ್‌ನಂಥ ಸ್ಥಳಗಳಿಗೆ ಮಾತ್ರವಲ್ಲದೆ, ದೇಶದ ಉಳಿದ ಸುಂದರ ನಗರಗಳನ್ನು ಸುತ್ತಾಡಿಬರಬಹುದು.

thailand (1)

ಪ್ರತಿಯೊಬ್ಬ ಪ್ರಯಾಣಿಕರಿಗೆ 2 ಉಚಿತ ದೇಶೀಯ ವಿಮಾನಗಳು ಮತ್ತು 20 ಕೆಜಿ ವರೆಗೆ ಲಗೇಜ್ ಭತ್ಯೆ ಸಿಗುತ್ತದೆ. ಈ ಯೋಜನೆಗೆ ಈಗಾಗಲೇ 6 ವಿಮಾನಯಾನ ಸಂಸ್ಥೆಗಳಾದ ಥಾಯ್ ಏರ್‌ಏಷ್ಯಾ, ಬ್ಯಾಂಕಾಕ್ ಏರ್‌ವೇಸ್, ನೋಕ್ ಏರ್, ಥಾಯ್ ಏರ್‌ವೇಸ್, ಥಾಯ್ ಲಯನ್ ಏರ್ ಮತ್ತು ಥಾಯ್ ವಿಯೆಟ್‌ಜೆಟ್ ಸಹಯೋಗ ನೀಡಿದೆ. ಇದರಿಂದ ಕನಿಷ್ಠ 2 ಲಕ್ಷ ವಿದೇಶಿ ಪ್ರವಾಸಿಗರು ಥೈಲ್ಯಾಂಡ್‌ಗೆ ಬರುವ ನಿರೀಕ್ಷೆ ಪ್ರವಾಸೋದ್ಯಮ ಇಲಾಖೆಗಿದ್ದು, ಟಿಕೆಟ್‌ ದರವನ್ನು ಸಿಂಗಲ್‌ ರೂಟ್‌ ಗೆ 4,000 ರು. ಹಾಗೂ ರೌಂಡ್ ಟ್ರಿಪ್ ಬೆಲೆ 8,000 ರು. ಎಂದು ನಿಗದಿಪಡಿಸಿದೆ.