Monday, March 9, 2026
Monday, March 9, 2026

ವನ್ಯಜೀವಿ ಪ್ರವಾಸ ಎನ್ನುವುದು ಅನುಭವ ಆಧಾರಿತ ಶಿಕ್ಷಣ, ಅದು ಮೋಜು ಮಸ್ತಿ ಅಲ್ಲವೇ ಅಲ್ಲ

ವನ್ಯಜೀವಿ ಪ್ರವಾಸೋದ್ಯಮದ ಪರಿಕಲ್ಪನೆ ಖಂಡಿತ ಮೋಜು ಮಸ್ತಿ ಅಲ್ಲವೇ ಅಲ್ಲ. ನಮ್ಮ ದೇಶದಲ್ಲಿ ವನ್ಯಜೀವಿಗಳು, ಕಾಡು, ಪರಿಸರ ಸಮತೋಲನ ಹೀಗೆ ಅತಿ ವಿರಳ ಕ್ಷೇತ್ರಗಳ ಜ್ಞಾನವನ್ನು ಜನರಿಗೆ ಹಂಚಲು ಇರುವ ಏಕೈಕ ಮಾರ್ಗ ವನ್ಯಜೀವಿ ಪ್ರವಾಸ. ಅಂದರೆ, ಟಿವಿ, ಪುಸ್ತಕಗಳಲ್ಲಿ ನೋಡಿ, ಓದಿ ತಿಳಿದುಕೊಳ್ಳುವುದಕ್ಕಿಂತ, ಪ್ರತ್ಯಕ್ಷ ನೋಡಿ, ಕಾಡಿಗೆ ಭೇಟಿ ಕೊಟ್ಟು, ಅದೇ ಪರಿಸರದಲ್ಲಿ ಸಮಯ ಕಳೆದು ಅದರ ಅರಿವನ್ನು ಪಡೆಯುವ ಮಹದುದ್ದೇಶದಿಂದ ವನ್ಯಜೀವಿ ಪ್ರವಾಸವನ್ನು ಹುಟ್ಟು ಹಾಕಲಾಗಿದೆ.

  • ವಿನೋದಕುಮಾರ್ ಬಿ ನಾಯ್ಕ್

ವನ್ಯಜೀವಿ ಪ್ರವಾಸೋದ್ಯಮ ಎನ್ನುವುದು ಇತ್ತೀಚಿನ ದಿನಗಳಲ್ಲಿ ಅತ್ಯಂತ ವ್ಯಾಪಕ ಚರ್ಚೆ ಹುಟ್ಟುಹಾಕುತ್ತಿದೆ. ಕರ್ನಾಟಕದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಮಾನವ ವನ್ಯಜೀವಿ ಸಂಘರ್ಷವು ವನ್ಯಜೀವಿ ಪ್ರವಾಸೋದ್ಯಮದ ಮೇಲೆ ನೇರವಾಗಿ ಕೆಟ್ಟ ಪರಿಣಾಮವನ್ನೇ ಬೀರಿತು. ಕೆಲ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಬೇಸತ್ತು ಅವರಿಗೆ ಬುಧ್ಧಿ ಕಳಿಸಲು ಅರಣ್ಯ ಸಚಿವರು ಬಂಡೀಪುರ ಮತ್ತು ನಾಗಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಹಠಾತ್ ಆಗಿ ಸಫಾರಿ ಬಂದ್ ಮಾಡಿ ಆದೇಶ ಹೊರಡಿಸಿಬಿಟ್ಟರು.

ಇದನ್ನೂ ಓದಿ: ಇನ್ನಾದರೂ ಸರಕಾರಗಳಿಗೆ ಪ್ರವಾಸೋದ್ಯಮ ಆದ್ಯತಾ ಕ್ಷೇತ್ರವಾಗಲಿ!

ಬಂಡೀಪುರದ ಹೆಡಿಯಾಲ ವಲಯದ ನುಗು ಸುತ್ತಮುತ್ತ ಹುಲಿ ದಾಳಿಗೆ ಕಾಡಂಚಿನ ಗ್ರಾಮಗಳ ಅಮಾಯಕ ಜನರು ಬಲಿಯಾದರು. ಯಾರೋ ಮಾಡಿದ ತಪ್ಪಿಗೆ ಮರಿಗಳು ಸೇರಿದಂತೆ 23 ಹುಲಿಗಳನ್ನು ಏಕಾಏಕಿ ಹಿಡಿದು ಪುನರ್ವಸತಿ ಕೇಂದ್ರದಲ್ಲಿ ಬಂಧಿಸಿಡಲಾಯಿತು. ರೈತ ಸಂಘಗಳ ಮುಖಂಡರುಗಳು ಸಹ ವನ್ಯಜೀವಿ ಪ್ರವಾಸೋದ್ಯಮದಿಂದಲೇ ಹುಲಿಗಳಿಗೆ ತೊಂದರೆ ಆಗುತ್ತಿದೆ ಅಂತ ದೂರಿದರು. ರಾಜ್ಯದಲ್ಲಿ ಇನ್ನೂ ಸರಿಯಾಗಿ ಬೇರೂರದ, ಸಾವಿರಾರು ಜನರಿಗೆ ಉದ್ಯೋಗ ನೀಡುವ, ಕೋಟ್ಯಂತರ ಆದಾಯ ತರುವ ಒಂದು ಕ್ಷೇತ್ರವನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಸೇರಿ ನಾಶ ಮಾಡಲು ಹೊರಟಿದ್ದರು.

Untitled design - 2026-03-09T190118.008

ಸದ್ಯದ ಪರಿಸ್ಥಿತಿಯಲ್ಲಿ ನಾವು ಮಾಡುತ್ತಿರುವ ವನ್ಯಜೀವಿ ಪ್ರವಾಸೋದ್ಯಮ ಸರಿಯಾದ ದಿಕ್ಕಿನಲ್ಲಿ ಇಲ್ಲದಿರಬಹುದು, ಆದರೆ ಕೆಲವರು ಆರೋಪ ಮಾಡುತ್ತಿರುವ ಹಾಗೆ ಹಾನಿಕಾರಕವಂತೂ ಆಗಿಲ್ಲ.

ವನ್ಯಜೀವಿ ಪ್ರವಾಸೋದ್ಯಮದ ಪರಿಕಲ್ಪನೆ ಖಂಡಿತ ಮೋಜು ಮಸ್ತಿ ಅಲ್ಲವೇ ಅಲ್ಲ. ನಮ್ಮ ದೇಶದಲ್ಲಿ ವನ್ಯಜೀವಿಗಳು, ಕಾಡು, ಪರಿಸರ ಸಮತೋಲನ ಹೀಗೆ ಅತಿ ವಿರಳ ಕ್ಷೇತ್ರಗಳ ಜ್ಞಾನವನ್ನು ಜನರಿಗೆ ಹಂಚಲು ಇರುವ ಏಕೈಕ ಮಾರ್ಗ ವನ್ಯಜೀವಿ ಪ್ರವಾಸ. ಅಂದರೆ, ಟಿವಿ, ಪುಸ್ತಕಗಳಲ್ಲಿ ನೋಡಿ, ಓದಿ ತಿಳಿದುಕೊಳ್ಳುವುದಕ್ಕಿಂತ, ಪ್ರತ್ಯಕ್ಷ ನೋಡಿ, ಕಾಡಿಗೆ ಭೇಟಿ ಕೊಟ್ಟು, ಅದೇ ಪರಿಸರದಲ್ಲಿ ಸಮಯ ಕಳೆದು ಅದರ ಅರಿವನ್ನು ಪಡೆಯುವ ಮಹದುದ್ದೇಶದಿಂದ ವನ್ಯಜೀವಿ ಪ್ರವಾಸವನ್ನು ಹುಟ್ಟು ಹಾಕಲಾಗಿದೆ. ಕಾಡಿನಲ್ಲಿ ಪ್ರಾಣಿಗಳು ನೆಮ್ಮದಿಯಾಗಿರಬೇಕು. ಅವುಗಳನ್ನು ನೋಡಲು ಜನರಿಗೆ ಏಕೆ ಅವಕಾಶ ಮಾಡಿಕೊಡಬೇಕು ಅಂತ ಅನೇಕ ಜನ ಕೇಳಿದ್ದಾರೆ. ಮೃಗಾಲಯಗಳು ಸಹ ಇಂಥದ್ದೇ ಪ್ರಶ್ನೆಗಳನ್ನು ಎದುರಿಸಿವೆ. ನಾವು ಇವುಗಳು ಜ್ಞಾನ ಹಂಚುವ ಕೇಂದ್ರಗಳು, ಇವು ಅನುಭವ ಆಧಾರಿತ ಶಿಕ್ಷಣ ನೀಡುವ ಸಂಸ್ಥೆಗಳು ಎಂದು ಭಾವಿಸುವುದೇ ಇಲ್ಲ. ನಮ್ಮ ಅಧಿಕಾರಿಗಳು ಮತ್ತು ಸರಕಾರಗಳು ಸಹ ಅದನ್ನು ಬಿಂಬಿಸುವಲ್ಲಿ ವಿಫಲವಾಗಿವೆ. ಕಲಿಕೆಗೆಂದು ಶಾಲೆಗೆ ಮಗು ಹೋದಾಗ ಶಾಲೆಯಲ್ಲಿ ಏನಾದರೂ ಅನಾಹುತ ಆದರೆ, ಶಾಲೆಯನ್ನೇ ಮುಚ್ಚುತ್ತಾರೆಯೇ..??

ಸಫಾರಿ ಮಾಡಿಬಂದ ಜನರಿಗೆ ಒಮ್ಮೆ ಕೇಳಿನೋಡಿ, ಕಾಡಿನ ಬಗ್ಗೆ, ವನ್ಯಜೀವಿಗಳ ಬಗ್ಗೆ ಅವರಿಗೆ ಇದ್ದ ಕಲ್ಪನೆ ಹೇಗೆ ಬದಲಾಗಿದೆ ಅನ್ನೋದು ಗೊತ್ತಾಗುತ್ತದೆ. ಕಾಡಿನ ಮಹತ್ವ ಸಾರುವ "ಗಂಧದಗುಡಿ" ಸಿನಿಮಾ ನೋಡಿ, ರಾಜಕುಮಾರ್ ಅವರಂತೆ ನಾವೂ ಅರಣ್ಯಾಧಿಕಾರಿ ಆಗಬೇಕೆಂದು ಹಠ ತೊಟ್ಟು, ನೂರಾರು ಯುವಕರು ಅರಣ್ಯ ಇಲಾಖೆಗೆ ಸೇರಿದ್ದ ಉದಾಹರಣೆಗಳು ನಮ್ಮ ಮುಂದಿವೆ.

ವನ್ಯಜೀವಿ ಪ್ರವಾಸೋದ್ಯಮದಲ್ಲಿ ಬದಲಾವಣೆ ಆಗಬೇಕಿರುವುದು ನಿಜ. ಸದ್ಯದಲ್ಲಿ ನಮ್ಮಲ್ಲಿ ನಡೆಯುತ್ತಿರುವ ಸಫಾರಿಗಳು ಸ್ಥಳೀಯ ಜನರಿಗೆ ಯಾವ ಲಾಭವನ್ನೂ ತಂದು ಕೊಡುತ್ತಿಲ್ಲ. ಬಂಡೀಪುರಕ್ಕೆ ಅಂಟಿಕೊಂಡಿರುವ ಮಂಗಲ ಗ್ರಾಮ, ಕಬಿನಿ ಪಕ್ಕದಲ್ಲೇ ಇರುವ ಗೆಂಡೆತ್ತೂರು ಗ್ರಾಮಗಳ ಜನ ವನ್ಯಜೀವಿಗಳ ಕಾಟ ಸಾಗಿಸಿಕೊಂಡು ಕಾಡನ್ನು ಉಳಿಸಿಕೊಂಡು ಬಂದಿದ್ದಾರೆ, ಅವರಿಗೆ ಪ್ರವಾಸೋದ್ಯಮದಿಂದ ಲಾಭ ಆಗಿಲ್ಲ. ಬದಲಿಗೆ ಅದೇ ಊರಿನ ಜಮೀನು ಖರೀದಿಸಿ ರೆಸಾರ್ಟ್ ಕಟ್ಟಿದ ಬಂಡವಾಳಶಾಹಿ ದಿನಕ್ಕೆ ಒಂದು ರೂಮಿಗೆ 20 ಸಾವಿರ ಲಾಭಗಳಿಸುತ್ತಿದ್ದಾನೆ.

ಸ್ಥಳೀಯ ಆರ್ಥಿಕತೆಯಲ್ಲಿ ಸ್ಥಳೀಯ ಜನರನ್ನು ಸೇರಿಸಿಕೊಂಡು ಅಭಿವೃದ್ಧಿ ಮಾಡುವ ಮಾದರಿ ಜಾರಿಗೆ ಬರಬೇಕು. ಸದ್ಯಕ್ಕೆ ಸ್ಥಳೀಯರಿಗೆ ಈ ರೆಸಾರ್ಟ್, ಹೋಮ್ ಸ್ಟೇ ಗಳಲ್ಲಿ ಉದ್ಯೋಗ ಸಿಕ್ಕಿದೆ. ಆದರೆ, ಆರ್ಥಿಕ ಲಾಭವನ್ನೂ ಜನರಿಗೆ ತಲುಪಿಸುವ ಹೊಸ ಯೋಜನೆ ಜಾರಿಗೊಳ್ಳಬೇಕು. ಸಮುದಾಯ ಆಧಾರಿತ ಪ್ರವಾಸೋದ್ಯಮ ಶುರುವಾಗಬೇಕು. ಜನರಿಗೆ ತಮ್ಮ ಪಕ್ಕದ ಕಾಡಿನಲ್ಲಿ ಹುಲಿ, ಆನೆ ಇರುವುದರಿಂದ ತೊಂದರೆ ಹೆಚ್ಚು ಎನ್ನುವ ಮನೋಭಾವನೆಯೇ ಇದೆ. ಅದನ್ನು ಸಮುದಾಯ ಆಧಾರಿತ ಪ್ರವಾಸೋದ್ಯಮ ಹೋಗಲಾಡಿಸುತ್ತದೆ. ಆಗ ಇದೇ ಕಾಡಿನ ಹುಲಿ, ಆನೆಗಳ ಬಗ್ಗೆ ಸ್ಥಳೀಯರಿಗೆ ಪ್ರೀತಿ ಹುಟ್ಟುತ್ತದೆ.

Untitled design - 2026-03-09T190032.458

ನಮ್ಮ ಸಮಾಜದಲ್ಲಿ ಎಲ್ಲವೂ ಅಷ್ಟೇ, ಜನರಿಗೆ ಅದು ಉಪಯೋಗ, ಲಾಭ ತಂದುಕೊಡದಿದ್ದರೆ ಜನ ಅದರ ಬಗ್ಗೆ ತಿರಸ್ಕಾರ ಭಾವನೆ ಖಂಡಿತ ಬೆಳೆಸಿಕೊಳ್ಳುತ್ತಾರೆ. ಈಗ ವನ್ಯಜೀವಿ ಪ್ರವಾಸೋದ್ಯಮದ ಬಗ್ಗೆ ಆಗಿರುವುದು ಸಹ ಇಂಥದ್ದೇ ತಿರಸ್ಕಾರ ಮನೋಭಾವ. ಜಗತ್ತಿನ ಅನೇಕ ದೇಶಗಳಲ್ಲಿ ಈ ಪ್ರವಾಸೋದ್ಯಮ ಭರ್ಜರಿಯಾಗಿ ನಡೆಯುತ್ತಿದೆ. ಅರಣ್ಯ ಇಲಾಖೆ ಸ್ಥಾಪಿಸಿರುವ EDC ಎಕೊ ಡೆವಲಪ್ಮೆಂಟ್ ಕಮಿಟಿಗಳ ಮೂಲಕ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ಕೊಡಬಹುದು. ಈ ಹಿಂದೆ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಪಣಸೋಲಿ ಗ್ರಾಮದಲ್ಲಿ ಸಫಾರಿ ನಡೆಸುವ ಜವಾಬ್ದಾರಿಯನ್ನು ಸ್ಥಳೀಯ ಪಂಚಾಯಿತಿಗೆ ನೀಡಲಾಗಿತ್ತು. ಇದರಿಂದಾಗಿ ಪಂಚಾಯತಿ ಸಹ ಕೋಟಿಗಟ್ಟಲೆ ಲಾಭ ಗಳಿಸಿ, ಗ್ರಾಮದ ಅಭಿವೃದ್ಧಿಗೆ ಹಣ ಬಳಸಿಕೊಂಡಿತ್ತು. ಇಂಥ ಯೋಜನೆಗಳನ್ನು ಮರು ಆರಂಭಿಸಬಹುದು. ಮಹಿಳಾ ಸ್ವ ಸಹಾಯ ಸಂಘಗಳಿಗೆ ಕೇಟರಿಂಗ್ ಗುತ್ತಿಗೆ ನೀಡಬಹುದು. ಸ್ಥಳೀಯ ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ಒದಗಿಸಬಹುದು. ಆಫ್ರಿಕಾದ ಕೆಲ ದೇಶಗಳಂತೂ ವನ್ಯಜೀವಿ ಪ್ರವಾಸೋದ್ಯಮದಿಂದಲೇ ಇಡೀ ದೇಶವನ್ನೇ ನಡೆಸುತ್ತಿವೆ. ನಮ್ಮ ದೇಶದಲ್ಲೂ ಅನೇಕ ರಾಜ್ಯಗಳು ಕೆಲ ಅತ್ಯುತ್ತಮ ಮಾದರಿಗಳನ್ನು ಸಿದ್ಧಪಡಿಸಿ ಯಶಸ್ವಿಯಾಗಿವೆ, ನಾವೂ ಆ ನಿಟ್ಟಿನಲ್ಲಿ ಹೆಜ್ಜೆ ಇಡೋಣ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಉತ್ತರ ಕರ್ನಾಟಕದ ರಂಗನತಿಟ್ಟು...

Read Previous

ಉತ್ತರ ಕರ್ನಾಟಕದ ರಂಗನತಿಟ್ಟು...

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Next

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..