Monday, September 15, 2025
Monday, September 15, 2025

ಪೌರಾಣಿಕ ಗೆಳೆತನಕ್ಕೊಂದು ಉದ್ಯಾನ

ರಘುಕುಲ ತಿಲಕ ಶ್ರೀರಾಮಚಂದ್ರ ಹಾಗೂ ಮೀನುಗಾರರ ರಾಜನಾದ ನಿಶಾದ ರಾಜನ ಅಪ್ಪಟ ಸ್ನೇಹಕ್ಕೆ, ಮಿತೃತ್ವಕ್ಕೆ ಸಾಕ್ಷಿಯಾಗಿದೆ ಇತ್ತೀಚೆಗಷ್ಟೇ ಲೋಕಾರ್ಪಣೆಗೊಂಡ ʻನಿಶಾದ ರಾಜ ಪಾರ್ಕ್‌ʼ. ಶಿಲ್ಪಗಳು-ಕಲಾಕೃತಿಗಳ ಮೂಲಕ ಪ್ರವಾಸಿಗರಲ್ಲಿ ರಾಮಾಯಣವನ್ನು ಸರಳವಾಗಿ ತಿಳಿಹೇಳುವ ಈ ಪ್ರಯತ್ನಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಉದ್ಯಾನವನವೆಂದರೆ ಮನಸ್ಸಿಗೆ, ಶರೀರಕ್ಕೆ ಮುದ ನೀಡುವ ಪರಿಸರವಷ್ಟೇ ಎಂಬ ಕಾಲವೊಂದಿತ್ತು. ಆದರೆ ಇಂದಿನ ಉದ್ಯಾನವನಗಳೆಲ್ಲವೂ ಒಂದಕ್ಕಿಂತ ಒಂದು ವಿಭಿನ್ನ, ಹೈಟೆಕ್‌ ಕೂಡ.. ಕಲಾವಿದನ ಕುಂಚದಿಂದ ಅರಳುವ ವಿಶೇಷ ಶಿಲ್ಪಕಲೆಗಳು ಇಂದಿನ ಉದ್ಯಾನವನಗಳ ಅಂದವನ್ನು ಇಮ್ಮಡಿಗೊಳಿಸುತ್ತದೆ. ಅಲ್ಲದೆ ಬುದ್ಧಿಯನ್ನ ಚುರುಕಾಗಿಸಲು, ಹೆಚ್ಚಿನ ಜ್ಞಾನವನ್ನು ಪಡೆಯಲು ಹಾಗೂ ಮಕ್ಕಳಿಂದ ತೊಡಗಿ ವಯೋವೃದ್ಧರಿಗೂ ಮನರಂಜನೆಯ ತಾಣವಾಗಿಯೂ ಪರಿವರ್ತನೆಗೊಂಡಿವೆ.

ಅಂಥ ವಿಶೇಷ ಉದ್ಯಾನವನವೊಂದು ಇತ್ತೀಚೆಗಷ್ಟೇ ಭಾರತದ ಉತ್ತರ ಪ್ರದೇಶದಲ್ಲಿ ತಲೆ ಎತ್ತಿದೆ. ಉತ್ತರ ಪ್ರದೇಶದ ಸಾಂಸ್ಕ್ರತಿಕ ಪರ್ಯಟನೆಗೆ ಹೊರಟಿರುವವರು ನೀವಾದರೆ ಇಲ್ಲಿನ ಪ್ರಯಾಗ್ ರಾಜ್‌ ನಿಂದ ಸುಮಾರು 31 ಕಿಮೀ ದೂರದಲ್ಲಿರುವ ಐತಿಹಾಸಿಕ ಮತ್ತು ಪೌರಾಣಿಕ ಸ್ಥಳ ಶೃಂಗವೇರಪುರ ಧಾಮಕ್ಕೆ ತಪ್ಪದೇ ಭೇಟಿ ಕೊಡಿ. ಗಂಗಾ ನದಿಯ ತೀರದಲ್ಲಿರುವ ಶೃಂಗವೇರಪುರ ಧಾಮದ ನಿಶಾದ ರಾಜ ಉದ್ಯಾನವನವನ್ನು ಕೆಲವು ತಿಂಗಳ ಹಿಂದಷ್ಟೇ ಪ್ರದಾನಿ ಮೋದಿಯವರು ಉದ್ಘಾಟನೆಗೊಳಿಸಿದ್ದರು. ಈ ವಿಶೇಷ ಉದ್ಯಾನವನ ರಘುಕುಲ ತಿಲಕ ಶ್ರೀರಾಮಚಂದ್ರ ಹಾಗೂ ನಿಶಾದ ರಾಜನ ಅಪ್ಪಟ ಸ್ನೇಹಕ್ಕೆ, ಮಿತೃತ್ವಕ್ಕೆ ಸಾಕ್ಷಿಯಂತಿದೆ. ಅಲ್ಲದೆ ರಾಮಾಯಣದ ಚಿತ್ರಣವನ್ನೇ ನಿಮ್ಮ ಮುಂದೆ ತೆರೆದಿರಿಸುತ್ತದೆ.

nishadraj park (1)

ನಿಶಾದ ರಾಜ ಉದ್ಯಾನವನದಲ್ಲಿ ಏನೇನಿದೆ ?

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಕನಸಿನ ಕೂಸಾದ ನಿಶಾದ ರಾಜ ಉದ್ಯಾನವನವನ್ನು ಪ್ರಧಾನಿ ಮೋದಿಯವರು ಇತ್ತೀಚೆಗಷ್ಟೇ ಲೋಕಾರ್ಪಣೆಗೊಳಿಸಿದರು. ತ್ರೇತಾಯುಗದ ಚಿತ್ರಣವನ್ನು ಪ್ರವಾಸಿಗರಿಗೆ ನೀಡುವ ಈ ಉದ್ಯಾನವನದಲ್ಲಿ ಶ್ರೀರಾಮನು ನಿಶಾದ ರಾಜನನ್ನು ಅಪ್ಪಿಕೊಂಡಿರುವ 51 ಅಡಿ ಎತ್ತರದ ಕಂಚಿನ ಪ್ರತಿಮೆಯೇ ಪ್ರಮುಖ ಆಕರ್ಷಣೆ. ಇದು ಸಮಾಜದಲ್ಲಿ ಏಕತೆ, ಭಕ್ತಿ ಮತ್ತು ಸಾಮಾಜಿಕ ಸಾಮರಸ್ಯದ ಸಂಕೇತವಾಗಿಯೂ ರೂಪಪಡೆದುಕೊಂಡಿದೆ. ಈ ಪ್ರತಿಮೆಯು ಶ್ರೀರಾಮ ಮತ್ತು ದೋಣಿ ವಿಹಾರಿ ನಿಶಾದ್‌ ರಾಜ್ ನಡುವಿನ ಪೌರಾಣಿಕ ಬಾಂಧವ್ಯವನ್ನು ಪ್ರತಿನಿಧಿಸುತ್ತದೆ. ಅವರು ತಮ್ಮ ವನವಾಸದ ಸಮಯದಲ್ಲಿ ನಿಸ್ವಾರ್ಥವಾಗಿ ಮಾಡಿದ ಸಹಾಯದ ಗೌರವ ಸೂಚಕವಾಗಿಯೂ ಕಾಣಿಸಿಕೊಳ್ಳುತ್ತದೆ.

ಸುಮಾರು 10 ಎಕರೆ ವಿಸ್ತಾರವಾದ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾದ ಈ ಉದ್ಯಾನವನವು ಖುಷಿಮುನಿಗಳ ಪುಟ್ಟ ಪುಟ್ಟ ಕುಟೀರಗಳು, ಯಾಗ ಶಾಲೆಯ ಕಲಾಕೃತಿಗಳನ್ನು ತಯಾರಿಸಿ ಪ್ರದರ್ಶನಕ್ಕೆ ಇಡಲಾಗಿದೆ. ಇದಕ್ಕೆ ಹೊರತಾಗಿ ಧ್ಯಾನ ಕೇಂದ್ರ, ಸಾಂಸ್ಕೃತಿಕ ಗ್ಯಾಲರಿ, ಬೆಳಕು ಮತ್ತು ಧ್ವನಿ ಪ್ರದರ್ಶನ ಮತ್ತು ಪ್ರವಾಸಿಗರಿಗಾಗಿ ಇನ್ನೂ ಅನೇಕ ಸೌಲಭ್ಯಗಳು ಇಲ್ಲಿವೆ. ಮೊದಲೇ ಹಂತದ ಕಾಮಗಾರಿ ಪೂರ್ಣಗೊಂಡು ಪ್ರವಾಸಿಗರಿಗೆ ಮುಕ್ತವಾಗಿದ್ದು, ಎರಡನೇ ಹಂತದ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ.

nishadraj 4

ಶ್ರೀರಾಮನ ಜನನದೊಂದಿಗೆ ಬೆಸುಗೆ…

ಅಷ್ಟಕ್ಕೂ ಶೃಂಗವೇರಪುರ ಧಾಮದಲ್ಲಿಯೇ ನಿಶಾದ ರಾಜ ಉದ್ಯಾನವನ ನಿರ್ಮಿಸುವುದಕ್ಕೆ ಕಾರಣವೇನು ಗೊತ್ತಾ? ಶೃಂಗವೇರಪುರ ಧಾಮಕ್ಕೆ ಶ್ರೀರಾಮನ ಜನನದೊಂದಿಗೆ ಒಂದು ನಂಟಿದೆ. ಜಾನಪದ ಕಥೆಗಳ ಪ್ರಕಾರ, ಶೃಂಗವೇರಪುರವು ಶೃಂಗೀ ಋಷಿಯ ಆಶ್ರಮವಾಗಿತ್ತು. ಮಕ್ಕಳಿಲ್ಲವೆಂಬ ಕೊರಗಿನಲ್ಲಿದ್ದ ದಶರಥ ಮಹಾರಾಜ ಮಗುವನ್ನು ಪಡೆಯಲು ಶೃಂಗೀ ಋಷಿಯ ಸಲಹೆ ಪಡೆಯಲು ಬಂದಿದ್ದರು. ಪುತ್ರ ಕಾಮೇಷ್ಟಿ ಯಾಗದ ಮೂಲಕ ಮಕ್ಕಳನ್ನು ಪಡೆಯಬಹುದೆಂಬ ಭರವಸೆಯನ್ನು ಶೃಂಗೀ ಋಷಿಯ ನೀಡಿದ ಕಾರಣದಿಂದ ದಶರಥ ಮಹಾರಾಜ ಅದಕ್ಕೆ ಒಪ್ಪಿಗೆ ಸೂಚಿಸಿದ್ದ. ಆ ಯಾಗದ ಪ್ರಸಾದವೆಂಬಂತೆ ಪಾಯಸವನ್ನು ತಯಾರಿಸಲಾಗಿದ್ದು, ಅದನ್ನು ರಾಜ ದಶರಥನು ತನ್ನ ಮೂವರು ಪತ್ನಿಯರಾದ ಕೌಶಲ್ಯ, ಕೈಕೇಯಿ ಮತ್ತು ಸುಮಿತ್ರರಿಗೆ ಸಮನಾಗಿ ನೀಡಿದನು. ಇದರ ಪರಿಣಾಮವಾಗಿ ರಾಮ, ಲಕ್ಷ್ಮಣ, ಭರತ ಮತ್ತು ಶತ್ರುಘ್ನರ ರೂಪದಲ್ಲಿ ನಾಲ್ವರು ಪುತ್ರರು ಜನಿಸಿದರು ಎಂಬುದು ಪ್ರತೀತಿ.

ಮೀನುಗಾರರ ರಾಜನೊಂದಿಗೆ ಶ್ರೀರಾಮನ ಮಿತೃತ್ವ

ಇದಿಷ್ಟೇ ಅಲ್ಲದೆ ರಾಮನ ವನವಾಸಕ್ಕೂ ಶೃಂಗವೇರಪುರ ಧಾಮಕ್ಕೂ ಮತ್ತೊಂದು ಸಂಬಂಧವಿದೆ. ಪೌರಾಣಿಕ ಕಥೆಯ ಪ್ರಕಾರ, ತಾಯಿ ಕೈಕೇಯಿ ಮತ್ತು ತಂದೆ ದಶರಥನ ಆದೇಶದ ಮೇರೆಗೆ ಶ್ರೀರಾಮನು ತನ್ನ ಪತ್ನಿ ಸೀತೆ ಮತ್ತು ತಮ್ಮ ಲಕ್ಷ್ಮಣನೊಂದಿಗೆ ಕಾಡಿಗೆ ಹೋಗುತ್ತಿದ್ದಾಗ ಶೃಂಗವೇರಪುರಕ್ಕೂ ಭೇಟಿ ನೀಡಿದ್ದನು. ಶೃಂಗವೇರಪುರವು 'ಮೀನುಗಾರರ ರಾಜ' ನಿಶಾದ ರಾಜನ ರಾಜ್ಯದ ರಾಜಧಾನಿಯಾಗಿತ್ತು. ಇದು ಆ ಕಾಲದಲ್ಲಿ ಒಂದು ಪ್ರಮುಖ ಸಾಮ್ರಾಜ್ಯವೂ ಆಗಿತ್ತು. ನಿಶಾದ ರಾಜನ ನೆರವಿನೊಂದಿಗೆ ಶ್ರೀರಾಮ ಅಲ್ಲಿಂದ ದೋಣಿಯ ಮೂಲಕ ಗಂಗಾ ನದಿಯನ್ನು ದಾಟಿ ಮುಂದೆ ಸಾಗಬೇಕಾಯಿತು. ಈ ವೇಳೆ ನಿಶಾದ ರಾಜನಿಗೆ ಶ್ರೀರಾಮನ ಆಶೀರ್ವಾದದ ಜತೆಗೆ ಒಳ್ಳೆಯ ಗೆಳೆತನವೂ ದಕ್ಕಿತು ಎಂಬುದು ನಂಬಿಕೆ. ಅದರ ಸಂಕೇತವಾಗಿಯೇ ಈ ಉದ್ಯಾನವನದಲ್ಲಿ ಇವರಿಬ್ಬರ ಪ್ರೀತಿಯ ಅಪ್ಪುಗೆಯಿರುವ ಕಂಚಿನ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ. ಇದು ಸಮಾಜದಲ್ಲಿರುವ ಜಾತಿ, ಧರ್ಮ, ಮೇಲು ಕೀಳು ಭಾವನೆಯನ್ನು ತೊಡೆದು ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಒಟ್ಟಿನಲ್ಲಿ ಆಧುನಿಕ ಅಭಿವೃದ್ಧಿಗಳ ಮೂಲಕ ಈ ಧಾಮವನ್ನು ಗ್ರಾಮೀಣ ಮತ್ತು ಆಧ್ಯಾತ್ಮಿಕ ಪ್ರವಾಸೋದ್ಯಮದ ಕೇಂದ್ರವಾಗಿ ರೂಪಿಸಲಾಗುತ್ತಿದೆ. ಇದರಿಂದಾಗಿ ಹಿಂದೂ ಪುರಾಣಗಳು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಅನುಭವಿಸಲು ಪ್ರವಾಸಿಗರಿಗೆ ಉತ್ತಮ ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ.

nishad raj

ದಾರಿ ಹೇಗೆ ?

ರಸ್ತೆಯ ಮೂಲಕ:

ಉತ್ತರ ಪ್ರದೇಶದ ಪ್ರಯಾಗ್‌ ರಾಜ್ ಜಿಲ್ಲೆಯಿಂದ ಲಕ್ನೋಗೆ ತೆರಳುವ ರಸ್ತೆಯಲ್ಲಿ ಸುಮಾರು 31 ಕಿ.ಮೀ ದೂರದಲ್ಲಿ ಶೃಂಗವೇರಪುರದ ನಿಶಾದ ರಾಜ ಉದ್ಯಾನವನವಿದೆ. ಬಸ್‌, ಟ್ಯಾಕ್ಸಿ ಹೀಗೆ ಪ್ರಯಾಣಕ್ಕೆ ಹಲವು ಆಯ್ಕೆಗಳಿವೆ.

ರೈಲು ಮೂಲಕ:

ಶೃಂಗವೇರಪುರಕ್ಕೆ ಹತ್ತಿರದ ಪ್ರಮುಖ ರೈಲು ನಿಲ್ದಾಣ ಪ್ರಯಾಗ ರಾಜ ಜಂಕ್ಷನ್. ಇಲ್ಲಿಂದ ನೀವು ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದು ಅಥವಾ ಬಸ್ ಮೂಲಕ ಶೃಂಗವೇರಪುರ ತಲುಪಬಹುದು.

ವಿಮಾನದ ಮೂಲಕ:

ಬೆಂಗಳೂರಿನಿಂದ ಪ್ರಯಾಗ್‌ ರಾಜ್‌ ಗೆ ವಿಮಾನಯಾನವನ್ನು ಬುಕ್ಕಿಂಗ್‌ ಮಾಡಿಕೊಂಡರೆ, ಅಲ್ಲಿಂದ ಟ್ರಾಕ್ಸಿ, ಆಟೋ ರಿಕ್ಷಾಅಥವಾ ಸ್ಥಳೀಯ ಸಾರಿಗೆ ವ್ಯವಸ್ಥೆಯನ್ನು ಅವಲಂಭಿಸಬಹುದು.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.