ಭಾರತದಲ್ಲಿ ವಾಹನವನ್ನು ಓಡಿಸಲು ಪರವಾನಗಿ (Driving License) ಬೇಕು, ಆದರೆ, ಬೇರೆ ಯಾವುದೋ ದೇಶಕ್ಕೆ ಹೋದಾಗ ಅಲ್ಲೂ ಪರವಾನಗಿ ಬೇಕಾ? ಬೇರೆ ದೇಶಕ್ಕೆ ಹೋಗಿ ವಾಹನ ಚಾಲನೆ ಮಾಡಲು ಅಂತಾರಾಷ್ಟ್ರೀಯ ಲೈಸನ್ಸ್ (International License) ಮಾಡಿಸಬೇಕೆ ಎಂಬ ಹಲವಾರು ಪ್ರಶ್ನೆಗಳು ಅನೇಕರಿಗೆ ಇರೋದು ಕಾಮನ್. ಹೌದು, ಆಯಾ ದೇಶದ ಡ್ರೈವಿಂಗ್ ಲೈಸೆನ್ಸ್ ಬೇಕು. ಆದರೆ, ಕೆಲವು ದೇಶಗಳು ಭಾರತೀಯ ಚಾಲನಾ ಪರವಾನಗಿಯನ್ನು ಸ್ವೀಕರಿಸುತ್ತವೆ. ಕೆಲವು ದೇಶಗಳು ಸಣ್ಣ ನಿಬಂಧನೆಗಳನ್ನು ಹೊಂದಿದ್ದರೆ, ಇನ್ನು ಕೆಲವು ದೇಶಗಳಲ್ಲಿ ಯಾವುದೇ ನಿಬಂಧನೆಗಳನ್ನು ವಿಧಿಸುವುದಿಲ್ಲ. ಭಾರತೀಯ ಚಾಲನಾ ಪರವಾನಗಿಯನ್ನು ಸ್ವೀಕರಿಸುವ ದೇಶಗಳನ್ನು ನೋಡೋಣ.

1) ನ್ಯೂಜಿಲೆಂಡ್‌

ಭಾರತೀಯ ಚಾಲನಾ ಪರವಾನಗಿ ಬಳಸಿ ನ್ಯೂಜಿಲೆಂಡ್‌ನಲ್ಲಿ ವಾಹನ ಚಾಲನೆ ಮಾಡಬಹುದು. ಆದರೆ, ಇದಕ್ಕೆ ಕೆಲವು ನಿಬಂಧನೆಗಳಿವೆ; ಅದರಲ್ಲಿ ಭಾರತೀಯ ಪರವಾನಗಿ ಬಳಸಿ ಒಂದು ವರ್ಷದವರೆಗೆ ನ್ಯೂಜಿಲೆಂಡ್‌ನಲ್ಲಿ ವಾಹನ ಚಾಲನೆ ಮಾಡಬಹುದು. ಚಾಲಕರಿಗೆ 21 ವರ್ಷ ವಯಸ್ಸಾಗಿರಬೇಕು. ಇಂಗ್ಲಿಷ್‌ನಲ್ಲಿರುವ ಭಾರತೀಯ ಚಾಲನಾ ಪರವಾನಗಿಯೂ ಬೇಕು.

2) ಆಸ್ಟ್ರೇಲಿಯಾ

ಕೆಲವು ನಿಬಂಧನೆಗಳೊಂದಿಗೆ ಭಾರತೀಯ ಪರವಾನಗಿಯನ್ನು ಸ್ವೀಕರಿಸುವ ದೇಶಗಳಲ್ಲಿ ಆಸ್ಟ್ರೇಲಿಯಾ ಕೂಡ ಒಂದು. ಇಂಗ್ಲಿಷ್‌ನಲ್ಲಿರುವ ಭಾರತೀಯ ಪರವಾನಗಿ ಹೊಂದಿರುವವರು ನ್ಯೂ ಸೌತ್ ವೇಲ್ಸ್, ಕ್ವೀನ್ಸ್‌ಲ್ಯಾಂಡ್, ಸೌತ್ ಆಸ್ಟ್ರೇಲಿಯಾ, ಆಸ್ಟ್ರೇಲಿಯನ್ ರಾಜಧಾನಿ ಪ್ರದೇಶ ಮುಂತಾದ ಸ್ಥಳಗಳಲ್ಲಿ ವಾಹನ ಚಾಲನೆ ಮಾಡಬಹುದು.

3) ಸಿಂಗಾಪುರ

ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಚಾಲನಾ ಪರವಾನಗಿ ಸಿಂಗಾಪುರದಲ್ಲಿ ವಾಹನ ಚಾಲನೆಗೆ ಅಗತ್ಯವಾಗಿರುತ್ತದೆ. ಆದರೆ, ಭಾರತೀಯ ಪರವಾನಗಿಯ ಇಂಗ್ಲಿಷ್ ಆವೃತ್ತಿ ಇದ್ದರೆ, ಸಿಂಗಾಪುರದಲ್ಲಿ ಒಂದು ವರ್ಷದವರೆಗೆ ವಾಹನ ಚಾಲನೆ ಮಾಡಬಹುದು.

4) ದಕ್ಷಿಣ ಆಫ್ರಿಕಾ

ಭಾರತೀಯ ಪರವಾನಗಿಯನ್ನು ಸ್ವೀಕರಿಸುವ ಇನ್ನೊಂದು ದೇಶ ದಕ್ಷಿಣ ಆಫ್ರಿಕಾ. ಇಂಗ್ಲಿಷ್‌ನಲ್ಲಿ ಮುದ್ರಿತವಾಗಿರುವ ಭಾರತೀಯ ಪರವಾನಗಿ ಬಳಸಿ ದಕ್ಷಿಣ ಆಫ್ರಿಕಾದಲ್ಲಿ ವಾಹನ ಚಾಲನೆಯ ಆನಂದವನ್ನು ಅನುಭವಿಸಬಹುದು.

international driving

5) ಯುನೈಟೆಡ್ ಕಿಂಗ್‌ಡಮ್ (ಯುಕೆ)

ಭಾರತೀಯ ಚಾಲನಾ ಪರವಾನಗಿ ಬಳಸಿ ಯುಕೆಯಲ್ಲಿ ಒಂದು ವರ್ಷ ವಾಹನ ಚಾಲನೆ ಮಾಡಬಹುದು. ಆದರೆ, ನಿಮ್ಮ ಲೈಸೆನ್ಸ್ ನಲ್ಲಿ ನಿರ್ದಿಷ್ಟಪಡಿಸಿದ ವಾಹನದ ಸ್ತರಗಳನ್ನು ಮಾತ್ರ ನೀವು ಚಾಲನೆ ಮಾಡಲು ಅನುಮತಿ ಇರುತ್ತದೆ.

6) ಸ್ವಿಟ್ಜರ್ಲೆಂಡ್

ಪ್ರಪಂಚದಾದ್ಯಂತದ ಪ್ರವಾಸಿಗರಿಗೆ ಪ್ರಿಯವಾದ ಸ್ವಿಟ್ಜರ್ಲೆಂಡ್‌ನಲ್ಲಿ ಭಾರತೀಯ ಪರವಾನಗಿ ಬಳಸಿ ವಾಹನ ಚಾಲನೆ ಮಾಡಬಹುದು. ಒಂದು ವರ್ಷದ ಅವಧಿಗೆ ಅನುಮತಿ ಇದೆ. ಇಂಗ್ಲಿಷ್‌ನಲ್ಲಿರುವ ಭಾರತೀಯ ಚಾಲನಾ ಪರವಾನಗಿಯ ಪ್ರತಿ ಇದ್ದರೆ, ನೀವು ಕಾರನ್ನು ಬಾಡಿಗೆಗೆ ಪಡೆಯಬಹುದು.

international driving 3

7) ಸ್ವೀಡನ್

ಭಾರತದ ಪರವಾನಗಿಯನ್ನು ಸ್ವೀಕರಿಸುವ ಇನ್ನೊಂದು ದೇಶ ಸ್ವೀಡನ್. ನಿಮ್ಮ ಪರವಾನಗಿ ಸ್ವೀಡಿಷ್, ಇಂಗ್ಲಿಷ್, ಫ್ರೆಂಚ್, ಜರ್ಮನ್ ಅಥವಾ ನಾರ್ವೇಜಿಯನ್ ಭಾಷೆಯಲ್ಲಿ ಮುದ್ರಿತವಾಗಿರಬೇಕು.

8) ಸ್ಪೇನ್

ಅಗತ್ಯವಾದ ನಿವಾಸ ನೋಂದಣಿ ಪೂರ್ಣಗೊಳಿಸಿದ ನಂತರ ಭಾರತೀಯ ಚಾಲನಾ ಪರವಾನಗಿ ಬಳಸಿ ಸ್ಪೇನ್‌ನಲ್ಲಿ ಪ್ರಯಾಣಿಸಬಹುದು. ನಿಮ್ಮ ಗುರುತಿನ ದಾಖಲೆಗಳನ್ನು ನೀವು ಸಲ್ಲಿಸಬೇಕಾಗಬಹುದು.

ಇದನ್ನೆಲ್ಲಾ ನೋಡಿದರೆ ಭಾರತೀಯ ಚಾಲನಾ ಪರವಾನಗಿ ಇಂಗ್ಲೀಷ್ ನಲ್ಲಿದ್ದರೆ ನೀವು ಈ ಮೇಲಿರುವ ಎಲ್ಲ ದೇಶಗಳಲ್ಲೂ ಯಾವುದೇ ಚಿಂತೆಯಿಲ್ಲದೆ ವಾಹನ ಚಾಲನೆ ಮಾಡಬಹುದು.