ಕಣ್ಣು ಹಾಯಿಸಿದಷ್ಟೂ ದೂರು ಕಾಣಿಸುವ ಹಸಿರು, ಎಲೆಗಳ ಮಧ್ಯದಿಂದ ತೂರಿ ಬರುವ ಶುದ್ಧ ಗಾಳಿ, ಅಲ್ಲೆ ಹರಿಯುವ ನದಿ, ದೂರದಲ್ಲೆಲ್ಲೊ ಭೋರ್ಗರೆಯುವ ಜನಪಾತ, ಹಕ್ಕಿ, ಕೀಟಗಳ ಕಲರವ, ಕಾಡು ಹೂಗಳ ಸುಗಂಧ, ಮೈ ಸೋಕಿಕೊಂಡು ಹಾರುವ ಚಿಟ್ಟೆ, ಜೀವ ವೈವಿಧ್ಯಗಳ ನೆಲೆ, ನಡು ಮಧ್ಯಾಹ್ನವಾದರೂ ಸೂರ್ಯ ರಶ್ಮಿ ನೆಲಕ್ಕೆ ಸೋಕಲು ಬಿಡದ ಒತ್ತೊತ್ತಾಗಿ ಬೆಳೆದ ಮರಗಳು...ಇದನ್ನು ಓದುತ್ತಿದ್ದರೆ ನಿಮ್ಮ ಕಣ್ಣಮುಂದೆ ಸ್ವರ್ಗ ಸದೃಶ ತಾಣವೊಂದು ಸುಳಿಯಬಹುದು. ಇದು ಕಲ್ಪನೆಯಲ್ಲಿ, ಯಾವುದೋ ಸಿನಿಮಾದಲ್ಲಷ್ಟೇ ಸಾಧ್ಯ ಎಂದು ನೀವಂದುಕೊಂಡಿದ್ದರೆ ಈ ಸುದ್ದಿಯನ್ನೊಮ್ಮೆ ಓದಿ. ರಿಯಲ್‌ ಆಗಿಯೇ ಇಂತಹದ್ದೊಂದು ಸ್ಥಳವಿದೆ. ಅದೂ ನಮ್ಮ ರಾಜ್ಯದ ಸಮೀಪದ ಕೇರಳದಲ್ಲಿ ಎನ್ನುವುದು ವಿಶೇಷ. ಇದುವೇ ಸೈಲಂಟ್‌ ವ್ಯಾಲಿ.

14

ಸೈಲಂಟ್‌ ವ್ಯಾಲಿ ಸಂರಕ್ಷಿತ ರಾಷ್ಟ್ರೀಯ ಉದ್ಯಾನವನವಾಗಿದ್ದು, ಇದು ಇರುವುದು ಕೇರಳದ ಪಾಲಕ್ಕಾಡ್‌ ಜಿಲ್ಲೆಯಲ್ಲಿ. ಇದು ನೀಲಗಿರಿ ಕಣಿವೆಯ ಒಂದು ಭಾಗ. ಹಲವು ಜೀವ ವೈವಿಧ್ಯಗಳ ತೊಟ್ಟಿಲು ಎಂದೇ ಗುರುತಿಸಿಕೊಂಡಿರುವ ಸೈಲಂಟ್‌ ವ್ಯಾಲಿ ಕೇರಳದ ಅತೀ ದೊಡ್ಡ ಸಂರಕ್ಷಿತ ಅರಣ್ಯ ಪ್ರದೇಶವೂ ಹೌದು. ಇಲ್ಲಿನ ವಿಶೇಷತೆ, ಈ ಹೆಸರು ಹೇಗೆ ಬಂತು ಮುಂತಾದ ವಿವರ ಇಲ್ಲಿದೆ.

ಎಲ್ಲಿದೆ?

ಸೈಲಂಟ್‌ ವ್ಯಾಲಿ ಇರುವುದು ಪಾಲಕ್ಕಾಡ್‌ ಜಿಲ್ಲೆಯ ಮನ್ನಾರ್‌ಕಾಡ್‌ ಎಂಬಲ್ಲಿ. ಕೇರಳ-ತಮಿಳುನಾಡು ಗಡಿಗೆ ಹೊಂದಿಕೊಂಡಂತಿರುವ ಇದು ಕೊಯಂಬತ್ತೂರಿನಿಂದ ಕೇವಲ 60 ಕಿ.ಮೀ. ದೂರಲ್ಲಿದೆ. ಈ ಮೌನ ಕಣಿವೆ ಸುಮಾರು 236 ಕಿ.ಮೀ.ಗಿಂತ ಹೆಚ್ಚಿನ ವಿಸ್ತೀರ್ಣದಲ್ಲಿ ಮೈಚಾಚಿಕೊಂಡಿದೆ. ಮೊದಲೇ ಹೇಳಿದಂತೆ ಅಪರೂಪದ ಜೀವ ವೈವಿಧ್ಯ ಇಲ್ಲಿನ ವಿಶೇಷತೆ.

the-silent-valley-national-park-tourism

ಮೊದಲು ಗುರುತಿಸಿದ್ದು ಯಾರು?

1847ರಲ್ಲಿ ಬ್ರಿಟಿಷ್‌ ಸಸ್ಯ ವಿಜ್ಞಾನಿ ರಾಬರ್ಟ್‌ ವೈಟ್‌ ಮೊದಲ ಬಾರಿಗೆ ಇದನ್ನು ಗುರುತಿಸಿ ಇಲ್ಲಿ ಅಮೂಲ್ಯ ಔಷಧ ಸಸ್ಯಗಳು, ಜೀವ ಸಂಕುಲ ಇರುವುದನ್ನುಪತ್ತೆ ಹಚ್ಚಿದರು. ಇದನ್ನು 1984ರಲ್ಲಿ ದೇಶೀಯ ಉದ್ಯಾನವನ್ನಾಗಿ ಘೋಷಿಸಲಾಯಿತು. ವಿವಿಧ ರೀತಿ ಜೀವ ವೈವಿಧ್ಯವನ್ನು ತನ್ನೊಡಲೊಳಗೆ ಪೋಷಿಸುವ ಸೈಲಂಟ್‌ ವ್ಯಾಲಿಯನ್ನು 2007ರಲ್ಲಿ ಯುನೆಸ್ಕೊ ಪಶ್ಚಿಮ ಘಟ್ಟ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಿತು.

ಜೀವ ವೈವಿಧ್ಯ

ಹೂ ಬಿಡುವ ಸಾವಿರಕ್ಕೂ ಹೆಚ್ಚು ಗಿಡಗಳು, 108 ಬಗೆಯ ಆರ್ಕಿಡ್‌ಗಳು ಇಲ್ಲಿವೆ. ಇಲ್ಲಿನ ವಿಶೇಷತೆ ಇಷ್ಟಕ್ಕೇ ಮುಗಿದಿಲ್ಲ. ಸುಮಾರು 170 ಪಕ್ಷಿ ಸಂಕುಲಗಳಿದ್ದು, 100 ಬಗೆಯ ಚಿಟ್ಟೆಗಳು, 400 ಬಗೆಯ ಕೀಟಗಳು ಇಲ್ಲಿನ ಪರಿಸರವನ್ನು ವಿಶಿಷ್ಟವಾಗಿಸಿವೆ. ಇಲ್ಲಿ ಅಪರೂಪದ ಸಿಂಹಬಾಲದ ಮಂಗ, ಕರಿಮಂಗ, ಚುಕ್ಕಿ ಹುಲಿ, ಕಾಡು ನಾಯಿ, ಕರಡಿ, ಆನೆ, ಜಿಂಕೆ, ಕಾಡು ಪಾಪ, ಹಾರಾಡುವ ಅಳಿಲು ಸೇರಿ ಸುಮಾರು 34 ಬಗೆಯ ಪ್ರಾಣಿಗಳಿವೆ. ಅಲ್ಲದೆ ನೀಲಗಿರಿ ಮರ ಪಾರಿವಾಳ, ನೀಲಿ ಗಿಳಿಗಳೂ ಕಂಡು ಬರುತ್ತವೆ. ಜತೆಗೆ ಕುಂತಿ ಹೆಸರಿನ ನದಿಯೂ ಹರಿಯುತ್ತದೆ. ಸುಮಾರು 70 ಲಕ್ಷ ವರ್ಷಗಳ ಇತಿಹಾಸವೇ ಇಲ್ಲಿನ ಜೀವ ವೈವಿಧ್ಯಕ್ಕೆ ಕಾರಣ ಎನ್ನುತ್ತಾರೆ ವಿಜ್ಞಾನಿಗಳು.

Lion-tailed-macaque-in-Silent-Valley-National-Park

ಯಾಕಾಗಿ ಈ ಹೆಸರು?

ವಿಶೇಷ ಎಂದರೆ ಈ ಕಣಿವೆಗೆ ಸೈಲಂಟ್‌ ವ್ಯಾಲಿ ಎನ್ನುವ ಹೆಸರು ಬರಲೂ ಕಾರಣವಿದೆ. ಮಲಯಾಳಂನಲ್ಲಿ ಸೈಲಂಟ್‌ ವ್ಯಾಲಿಯನ್ನು ಸೈರಂಧ್ರಿ ವನ ಎಂದು ಕರೆಯುತ್ತಾರೆ. ಸೈರಂಧ್ರಿ ಎಂದರೆ ದ್ರೌಪದಿಯ ಇನ್ನೊಂದು ಹೆಸರು. ಹೀಗಾಗಿ ಇದರ ಹಿನ್ನೆಲೆ ಮಹಾಭಾರತದೊಂದಿಗೆ ಥಳುಕು ಹಾಕಕೊಂಡಿದೆ. ಪಾಂಡವರು ಅಜ್ಞಾತವಾಸದಲ್ಲಿದ್ದಾಗ ದ್ರೌಪದಿ ಸೈರಂಧ್ರಿ ಎನ್ನುವ ಹೆಸರಿನಲ್ಲಿ ಮಹಾರಾಣಿ ಸುದೇಷ್ಣಾಗೆ ಸಹಾಯಕಿಯಾಗಿರುತ್ತಾಳೆ. ಈ ವೇಳೆ ಪಾಂಡವರು ಒಂದುಕಡೆಯಿಂದ ಇನನೊಂದು ಕಡೆಗೆ ಸಂಚರಿಸುವಾಗ ಈ ಪ್ರದೇಶಕ್ಕೆ ಆಗಮಿಸುತ್ತಾರೆ. ಈ ದಟ್ಟ ಅರಣ್ಯದ ಸೌಂದರ್ಯಕ್ಕೆ ಮನಸೋತು ಅವರು ಸ್ವಲ್ಪ ಸಮಯ ಅಲ್ಲೇ ನೆಲೆಸುತ್ತಾರೆ. ಹೀಗಾಗಿ ಇದಕ್ಕೆ ಸೈರಂಧ್ರಿ ವನ ಎನ್ನುವ ಹೆಸರು ಬಂತು ಎನ್ನುತ್ತಾರೆ ಸ್ಥಳೀಯರು. ಇದು ಕ್ರಮೇಣ ಸೈಲಂಟ್‌ ವ್ಯಾಲಿ ಆಯ್ತು ಎನ್ನುವವರೂ ಇದ್ದಾರೆ.

Silent-Valley-National-Park-2

ಇನ್ನೊಂದು ಕಾರಣ

ಇದರ ಜತೆಗೆ ಈ ಹೆಸರು ಬರಲು ಇನ್ನೊಂದಷ್ಟು ಕಾರಣಗಳೂ ಇವೆ. ಜನ ಸಂಚಾರ ಕಡಿಮೆ ಇರುವುದರಿಂದ ಇದು ಯಾವತ್ತೂ ನಿಶ್ಯಬ್ದದಿಂದ ಕೂಡಿರುತ್ತದೆ. ಅಲ್ಲದೆ ಸಾಮಾನ್ಯವಾಗಿ ಎಲ್ಲ ಕಾಡುಗಳಲ್ಲಿ ಕೇಳಿ ಬರುವ ಮರ ಕೊರೆಯುವ ಕೀಟದ ಶಬ್ದ ಇಲ್ಲಿ ಕೇಳಿಸುವುದಿಲ್ಲ. ಇನ್ನೂ ಕೆಲವರ ವಾದವೆಂದರೆ ಇಲ್ಲಿ ಕಂಡುಬರುವ ಅಪರೂಪದ ಸಿಂಹಬಾಲದ ಮಂಗನ ಶಾಸ್ತ್ರೀಯ ಹೆಸರು ಮೆಕಾಕಾ ಸೈಲೆನಸ್‌. ಈ ಕಾರಣಕ್ಕೂ ಇದನ್ನೂ ಸೈಲಂಟ್‌ ವ್ಯಾಲಿ ಎನ್ನುತ್ತಾರಂತೆ. ಬ್ರಿಟಿಷ್‌ ಸರ್ಕಾರ 1909ರಲ್ಲಿ ಹೊರತಂದ ಮ್ಯಾಪ್‌ನಲ್ಲಿ ಈ ಹೆಸರಿದೆ.

Silent-Valley-National-Park-1

ಹೀಗೆ ಹೋಗಿ

ಬೆಂಗಳೂರಿನಿಂದ ಬಸ್‌, ರೈಲು ಮತ್ತು ವಿಮಾನದ ಮೂಲಕ ಇಲ್ಲಿಗೆ ತೆರಳಬಹುದು. ಪಾಲಕ್ಕಾಡ್‌ ರೈಲು ನಿಲ್ದಾಣದಿಂದ ಇಲ್ಲಿಗೆ 69 ಕಿ.ಮೀ. ದೂರವಿದೆ. ಪಾಲಕ್ಕಾಡ್‌ನಿಂದ ಮುಕ್ಕಾಲ್‌ ಎಂಬಲ್ಲಿಗೆ ಬಸ್‌ ಇದೆ. ಅಲ್ಲಿಂದ ಸೈಲಂಟ್‌ ವ್ಯಾಲಿಗೆ ಜೀಪ್‌ ಸರ್ವಿಸ್‌ ಇದೆ.