ದಕ್ಷಿಣ ಅಮೆರಿಕದ ಕರಾವಳಿಯುದ್ದಕ್ಕೂ ಪಟ್ಟಿಯಂತೆ ಆಂಡಿಸ್ ಪರ್ವತ ಮತ್ತು ಪೆಸಿಫಿಕ್ ಮಹಾಸಾಗರಗಳ ನಡುವೆ ಚಾಚಿರುವ ದೇಶವೇ ಚಿಲಿ. ಇಲ್ಲಿನ ಆಕರ್ಷಣೀಯ ಕೇಂದ್ರಗಳ ಪೈಕಿ ಪ್ರಮುಖವಾದುದು ಅಟಕಾಮಾ ಮರುಭೂಮಿ. ಉತ್ತರ ಚಿಲಿಯಲ್ಲಿರುವ ಅಟಕಾಮಾ ಮರುಭೂಮಿಯು ಪ್ರಪಂಚದ ಅತ್ಯಂತ ಶುಷ್ಕ ಧ್ರುವೀಯ ಮರುಭೂಮಿಯೆನ್ನಿಸಿಕೊಂಡರೂ ತನ್ನ ಸೌಂದರ್ಯದ ಮೂಲಕವೇ ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತದೆ.

ವಾರ್ಷಿಕವಾಗಿ ಒಂದು ಮಿಲಿ ಮೀಟರ್‌ಗಿಂತ ಕಡಿಮೆ ಮಳೆ:

ಪೆಸಿಫಿಕ್‌ ಕರಾವಳಿಯಲ್ಲಿ 1000 ಕಿಲೋಮೀಟರ್‌ ವಿಸ್ತರಿಸಿಕೊಂಡಿರುವ ಈ ಮರುಭೂಮಿಯು ವಾರ್ಷಿಕವಾಗಿ ಒಂದು ಮಿಲಿ ಮೀಟರ್‌ಗಿಂತ ಕಡಿಮೆ ಮಳೆ ಸುರಿಯುವ ಪ್ರದೇಶವಾಗಿದೆ. ಇಲ್ಲಿನ ಇನ್ನೂ ಕೆಲವು ಪ್ರದೇಶಗಳು ಶತಮಾನಗಳಿಂದಲೂ ಒಂದು ಹನಿ ಮಳೆಯನ್ನೂ ಕಂಡಿಲ್ಲ ಎಂದರೆ ನಂಬಲೇ ಬೇಕು !. ಹೀಗಾಗಿ ಇಲ್ಲಿಯ ಹವೆ ಶುಷ್ಕ. ಆಂಡೆಸ್‌ ಹಾಗೂ ಚಿಲಿಯ ಕರಾವಳಿ ಶ್ರೇಣಿ ಹೀಗೆ ಎರಡು ಪರ್ವತ ಸರಪಳಿಗಳ ಮಧ್ಯೆ ಸಿಕ್ಕು, ತೇವಾಂಶಕ್ಕೆ ಅಡಚಣೆಯಾಗಿದೆ. ನೀರು ಹಾಗೂ ಪೋಷಕಾಂಶಗಳಿಲ್ಲದ ಭೂಮಿಯಿಂದಾಗಿ ಇಲ್ಲಿ ಸಸ್ಯಗಳಿಗೆ ಸಮೃದ್ಧ ವಾತಾವರಣವಿಲ್ಲ. ಆದರೆ ಇಲ್ಲಿರುವ ಅಲ್ಪ ತೇವಾಂಶವು ಕೆಲತಳಿಯ ಕಳ್ಳಿ ಮತ್ತು ಆಲ್ಗೆಗಳಂತಹ ಸಸ್ಯಗಳಿಗೆ ಜೀವನಾಧಾರವಾಗಿದೆ.

Cactus-in-the-Atacama-Desert-in-Chile

ಈ ಪ್ರದೇಶದ ಮಣ್ಣಿನ ಮಾದರಿಗಳು, ಮಂಗಳ ಗ್ರಹದ ಮಣ್ಣಿನ ಮಾದರಿಗಳಂತೆಯೇ ಇವೆ. ಹೀಗಾಗಿ ಮಂಗಳ ಗ್ರಹ ಯಾನಕ್ಕಾಗಿ, ಇಲ್ಲಿಯೇ ನಾಸಾ, ಉಪಕರಣಗಳ ಪರೀಕ್ಷೆ ನಡೆಸುತ್ತದೆ. ಮಂಗಳ ಗ್ರಹದ ದೃಶ್ಯಗಳ ಚಿತ್ರೀಕರಣಕ್ಕೆ ಇದೇ ಮರುಭೂಮಿ ಬಳಸಲಾಗುತ್ತದೆ.

ಪ್ರಪಂಚದ ಅತಿದೊಡ್ಡ ಮಂಜು ಮರುಭೂಮಿ :

ಇಲ್ಲಿಯ ಪರ್ವತ ಶಿಖರಗಳಲ್ಲಿ ಮಂಜಿದೆ. ಭೂಗೋಳದಲ್ಲಿ ಅಟಕಾಮಾ ಮರುಭೂಮಿಯಂತಹ ಕೆಲವೇ ಪ್ರದೇಶಗಳಲ್ಲಿ ಇಡೀ ವರ್ಷ 300ಕ್ಕಿಂತ ಹೆಚ್ಚು ದಿನ ಆಕಾಶ ಸ್ಪಷ್ಟವಾಗಿದ್ದು, ಬೆಳಕಿನ ಮಾಲಿನ್ಯವಾಗದೇ, ಈ ಎತ್ತರದ ಪ್ರದೇಶ, ಖಗೋಳ ಶಾಸ್ತ್ರದ ಅಭ್ಯಾಸಿಗಳಿಗೆ, ವಿಜ್ಞಾನಿಗಳಿಗೆ, ನಿರೀಕ್ಷಾಲಯ ಸ್ಥಾಪಿಸಲು ಅತ್ಯುತ್ತಮ ಪ್ರದೇಶವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈ ಮರುಭೂಮಿ ನೆಲದ ಮೇಲಿನ ಪ್ರಪಂಚದ ಅತಿ ದೊಡ್ಡ ಆಲ್ಮಾ ಟೆಲಿಸ್ಕೋಪ್‌ ಹೊಂದಿದೆ, 66 ರೇಡಿಯೋ ಟೆಲಿಸ್ಕೋಪ್‌ಗಳ ನೆರವಿನಿಂದ, ಇಲ್ಲಿ ನಕ್ಷತ್ರಗಳ ರಚನೆಗಳ ಬಗ್ಗೆ ಅಭ್ಯಾಸ ಕೈಗೊಳ್ಳಲಾಗುತ್ತಿದೆ.

person-walking-atacama-desert

ಈಜಿಪ್ಟ್‌ನಲ್ಲಿರುವ ಮಮ್ಮಿಗಳಿಗಿಂತ ಹಳೆಯ ಮಮ್ಮಿಗಳು:

ದಿನದಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ಗೆ ಏರಿದರೆ ರಾತ್ರಿ 5 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ವಿಶಿಷ್ಟ ಹವಾಮಾನ ಇಲ್ಲಿದೆ. ಅಷ್ಟಾಗಿ ವಿಶಿಷ್ಟವಾದ ಸಸ್ಯವರ್ಗಗಳು ಇಲ್ಲಿ ಕಾಣಸಿಗುವುದಿಲ್ಲವಾದರೂ ಮರುಭೂಮಿಯ ಕೆಲವು ಸಸ್ಯವರ್ಗಗಳು ಅದರಲ್ಲರಳಿ ನಿಂತು ಕಣ್ಮನಸೆಳೆಯುವ ಹೂವುಗಳೂ ಇಲ್ಲಿವೆ. ಈಜಿಪ್ಟ್‌ ನಲ್ಲಿರುವ ಮಮ್ಮಿಗಳಿಗಿಂತ, ಸಾವಿರಾರು ವರ್ಷ ಹಳೆಯ ಮಮ್ಮಿಗಳು ಇಲ್ಲಿವೆ. ಅಂದರೆ ಈಜಿಪ್ಟಿನ ಅತಿ ಹಳೆಯ ಮಮ್ಮಿ ಕ್ರಿ.ಶ 3000ದ ಕಾಲದ್ದಾದರೆ, ಅಟಕಾಮಾ ಮರುಭೂಮಿಯ ಮಮ್ಮಿ ಕ್ರಿ.ಶ 7020ರದು.

private-travel-atacama-desert-chile-talabre-petroglyphs-675e370a3fd05

ಒಟ್ಟಿನಲ್ಲಿ ತಾಮ್ರ, ಬೆಳ್ಳಿ ಮತ್ತು ನೈಟ್ರೇಟ್‌ ನಿಕ್ಷೇಪಗಳು ಅಟಕಾಮಾದ ಕೆಲವು ಭಾಗಗಳಲ್ಲಿ ಪತ್ತೆಯಾಗಿದ್ದು ಇವುಗಳ ಗಣಿಗಾರಿಕೆಯಲ್ಲಿ ತೊಡಗಿರುವ ಕೆಲವು ಜನರು ಮಾತ್ರ ಅಟಕಾಮಾ ಮರುಭೂಮಿಯಲ್ಲಿ ವಾಸಿಸುತ್ತಾರೆ. ವಿಶೇಷವೆನ್ನಿಸಿಕೊಂಡರೂ ವಿಭಿನ್ನವಾಗಿರುವ ಈ ಮರುಭೂಮಿಗೆ ಜೀವಮಾನದಲ್ಲೊಮ್ಮೆಯಾದರೂ ಭೇಟಿ ಕೊಡಲೇ ಬೇಕು..ಏನಂತೀರಾ?!