ಉತ್ತರ ಭಾರತದ ಹಿಮಾಲಯದ ತಪ್ಪಲಿನಲ್ಲಿರುವ ಸಣ್ಣ ನಗರ ಋಷಿಕೇಶವು, ತನ್ನೊಳಗೆ ಹರಿಯವು ಗಂಗೆಯ ಮೂಲಕವಷ್ಟೇ ಹೆಸರು ಮಾಡಿಲ್ಲ. ಬದಲಾಗಿ ಸಾಹಸ ಪ್ರಿಯರಿಗೆ ರಿವರ್‌ ರಾಫ್ಟಿಂಗ್ ನಂತಹ ಅವಕಾಶವನ್ನು ಕಲ್ಪಿಸುವ ಮೂಲಕವೂ ಗುರುತಿಸಿಕೊಂಡಿದೆ. ಆದರೆ ಗಮನಿಸಬೇಕಿರುವ ಅಂಶವೆಂದರೆ ಈ ಜಲ ಕ್ರೀಡೆಯ ರೋಮಾಂಚನವನ್ನು ಅನುಭವಿಸಲು ನೀವು ಬಯಸಿದರೆ ಚಳಿಗಾಲ ಕಡಿಮೆಯಾಗುತ್ತಾ ಬೇಸಿಗೆಯ ಆರಂಭದವರೆಗೆ, ಅಂದರೆ ಮಾರ್ಚ್ ನಿಂದ ಮೇ ತಿಂಗಳುಗಳ ಕಾಲದಲ್ಲಷ್ಟೇ ಋಷಿಕೇಶಕ್ಕೆ ಭೇಟಿ ನೀಡಬೇಕು. ಮಳೆಗಾಲದ ನಂತರ ಸೆಪ್ಟೆಂಬರ್ ನಿಂದ ನವೆಂಬರ್ ತಿಂಗಳ ನಡುವೆ ಮತ್ತೊಮ್ಮೆ ಸಾಹಸಿಗರು ಋಷಿಕೇಶದ ಜಲಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬಹುದು.

ರಿವರ್‌ ರಾಫ್ಟಿಂಗ್‌ನ ಪ್ರಮುಖ ಹಂತಗಳು

ಋಷಿಕೇಶದಲ್ಲಿ ರಿವರ್ ರಾಫ್ಟಿಂಗ್ ಮಾಡಬೇಕೆಂಬ ನಿರ್ಧಾರವನ್ನು ಕೈಗೊಳ್ಳುವ ಮುನ್ನ ನಿಮ್ಮ ಸಾಮರ್ಥ್ಯಗಳಿಗೆ ಸೂಕ್ತವಾದ ಮಾರ್ಗ ಮತ್ತು ರಾಫ್ಟಿಂಗ್‌ನ ದರ್ಜೆಗಳನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

rafting-slide1

ರಿವರ್‌ ರಾಫ್ಟಿಂಗ್‌ಗಾಗಿ ನಾಲ್ಕು ಮಾರ್ಗಗಳು ಇಲ್ಲಿವೆ.

ಮಾರ್ಗ 1: ಬ್ರಹ್ಮಪುರಿ-ಋಷಿಕೇಶ ಮಾರ್ಗವು ಸುಮಾರು 9 ಕಿ.ಮೀ ಉದ್ದನೆಯ ಅತ್ಯಂತ ಸುಲಭವಾದ ರಾಫ್ಟಿಂಗ್ ಮಾರ್ಗವಾಗಿದೆ. ಇಲ್ಲಿ ಹರಿಯುವ ನೀರು ಶಾಂತ ರೂಪದಲ್ಲಿರುವುದರಿಂದ ಇದು ಆರಂಭಿಕ ರಾಫ್ಟಿಂಗ್‌ ಮಾಡುವವರಿಗೆ ಸೂಕ್ತ ಆಯ್ಕೆಯಾಗಿದೆ. ಏನಿಲ್ಲವೆಂದರೂ ಇಲ್ಲಿ ರಾಫ್ಟಿಂಗ್‌ ಕೈಗೊಳ್ಳಲು ಸುಮಾರು 2 ಗಂಟೆಗಳ ಕಾಲಾವಕಾಶ ಬೇಕು.

ಮಾರ್ಗ 2: ಶಿವಪುರಿಯಿಂದ ಋಷಿಕೇಶದ 16 ಕಿ.ಮೀ ಉದ್ದನೆಯ ಮಾರ್ಗವು ಪ್ರವಾಸಿಗರಲ್ಲಿ ಅತ್ಯಂತ ರೋಮಾಂಚನವನ್ನು ಉಂಟುಮಾಡುತ್ತದೆ. 2 ರಿಂದ 3 ಗಂಟೆಗಳ ರಿವರ್‌ ರಾಫ್ಟಿಂಗ್‌, ಸಾಹಸಿಗರಿಗೆ ವಿಶೇಷ ಅನುಭವವನ್ನು ನೀಡುತ್ತದೆ.

ಮಾರ್ಗ 3: ಮೆರೈನ್ ಡ್ರೈವ್ ಟ್ರೆಕ್ 24 ಕಿ.ಮೀ ಉದ್ದವಿದ್ದು, ರಾಫ್ಟಿಂಗ್‌ ಪೂರ್ಣಗೊಳಿಸಲು ಸುಮಾರು 3.5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಈ ಮಾರ್ಗವು ಅನುಭವಿ ರಾಫ್ಟರ್‌ಗಳಿಗೆ ಮಾತ್ರ ಉತ್ತಮ ಆಯ್ಕೆ.

ಮಾರ್ಗ 4: ಕೌಡಿಲ್ಯ ವಿಸ್ತಾರವು ವೃತ್ತಿಪರ ಮತ್ತು ಹೆಚ್ಚು ಅನುಭವಿ ರಾಫ್ಟರ್‌ಗಳಿಗೆ ಮಾತ್ರ. ಇದು 36 ಕಿ.ಮೀ ಉದ್ದವಿದ್ದು ರಾಫ್ಟಿಂಗ್‌ ಪೂರ್ಣಗೊಳಿಸಲು ನಾಲ್ಕರಿಂದ ಐದು ಗಂಟೆಗಳು ಬೇಕಾಗುತ್ತದೆ. ಸಾಮಾನ್ಯವಾಗಿ ಅಪಾಯಕಾರಿ ದಾರಿ ಇದಾಗಿದ್ದು, ಪ್ರವಾಸಿಗರಿಗೆ ಇಲ್ಲಿಗೆ ಹೆಚ್ಚಾಗಿ ಪ್ರವೇಶಿಸಲಾಗುವುದಿಲ್ಲ.

River-Rafting-in-Rishikesh

ಋಷಿಕೇಶದಲ್ಲಿ ರಾಫ್ಟಿಂಗ್ ವೆಚ್ಚವು ನೀವು ಆಯ್ಕೆ ಮಾಡುವ ದರ್ಜೆಯನ್ನು ಅವಲಂಬಿಸಿದೆ. ಪ್ರತಿಯೊಬ್ಬರಿಗೆ ಏನಿಲ್ಲವೆಂದರೂ 500-1.500 ರೂಪಾಯಿವರೆಗೆ ವೆಚ್ಚವಾಗುತ್ತದೆ. ಪ್ರತಿ ರಾಫ್ಟಿಂಗ್ ಕೈಗೊಳ್ಳಲು ಕನಿಷ್ಠ ಎಂಟು ಮಂದಿ ಬೇಕು.

ರಾಫ್ಟಿಂಗ್ ವೇಳೆ ಸುರಕ್ಷತಾ ಕ್ರಮಗಳು

ಪರವಾನಗಿ ಪಡೆದ ರಾಫ್ಟರ್‌ ಜೊತೆಗೆ ನಿಮ್ಮನ್ನು ರಿವರ್‌ ರಾಫ್ಟಿಂಗ್‌ ಗೆ ಕಳುಹಿಸಲಗಾಗುತ್ತದೆ. ಆದ್ದರಿಂದ ಯಾವುದೇ ರೀತಿಯಲ್ಲಿ ಭಯಪಡಬೇಕಾದ ಅಗತ್ಯವಿಲ್ಲ.

ಸುರಕ್ಷತಾ ಸೂಚನೆಗಳನ್ನು ಎಚ್ಚರಿಕೆಯಿಂದ ಕೇಳಿಸಿಕೊಂಡು, ಅದಕ್ಕನುಗುಣವಾಗಿ ನಡೆದುಕೊಳ್ಳಬೇಕು. ರಾಫ್ಟಿಂಗ್‌ ಗೂ ಮುನ್ನ ನೀಡಲಾಗುವ ತರಬೇತಿಯ ಬಗ್ಗೆ ಹೆಚ್ಚಿನ ಗಮನ ಕೊಡಿ. ಸಿಂಕ್ರೊನೈಸ್ ಆಗಿ ಪೆಡಲ್ ಮಾಡುವುದನ್ನು ಕಲಿತುಕೊಳ್ಳಬೇಕು.

ಹವಾಮಾನವನ್ನು ಪರಿಶೀಲಿಸಿಕೊಂಡು ಮುನ್ನಡೆಯುವುದು ಅತೀ ಅಗತ್ಯ. ಋಷಿಕೇಶದಲ್ಲಿ ಹವಾಮಾನವು ಹೆಚ್ಚಾಗಿ ರಾಫ್ಟಿಂಗ್‌ಗೆ ಸೂಕ್ತವಾಗಿದ್ದರೂ, ನೀವು ಬುಕಿಂಗ್ ಮಾಡುವ ಮೊದಲು ಹವಾಮಾನ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ.

Rafting-Main-1

ನೀವು ಉತ್ತಮ ಈಜುಗಾರರಾಗಿದ್ದರೆ, ಸುಲಭವಾಗಿ ರಾಫ್ಟಿಂಗ್ ಮಾಡಬಹುದು. ನೀರಿನ ರಭಸ, ನೀರಿನ ಮಟ್ಟದ ಬಗೆಗೆ ಸ್ವಲ್ಪ ತಿಳುವಳಿಕೆಯಿದ್ದರೆ ಒಳ್ಳೆಯದು. ನಿಮ್ಮ ಲೈಫ್ ಜಾಕೆಟ್ ಅನ್ನು ಸರಿಯಾಗಿ ಹಾಕಿಕೊಂಡಿರುವಿರೇ ಎಂಬುದನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.

ಅಗತ್ಯ ವಸ್ತುಗಳು ಜೊತೆಗಿರಲಿ

ರಿವರ್‌ ರಾಫ್ಟಿಂಗ್‌ ಮಾಡುವ ವೇಳೆ ನೀವು ಒದ್ದೆಯಾಗುವುದು ಖಚಿತ. ಒಣ ಬಟ್ಟೆಗಳನ್ನು ಪ್ಯಾಕ್ ಮಾಡಿ. ಫೋನ್ ಮತ್ತು ವ್ಯಾಲೆಟ್‌ನಂತಹ ಅಗತ್ಯ ವಸ್ತುಗಳು ಒದ್ದೆಯಾಗದಿರುವ ಬಗ್ಗೆ ಕಾಳಜಿ ವಹಿಸಿ. ಹೈಡ್ರೇಟೆಡ್ ಆಗಿರಲು ನೀರಿನ ಬಾಟಲಿಯನ್ನು ಜೊತೆಗಿಟ್ಟುಕೊಳ್ಳಿ. ಅಲ್ಲದೆ ಸನ್ಸ್‌ ಕ್ರೀಮ್‌ ಹಾಕಿಕೊಳ್ಳಲು ಮರೆಯಬೇಡಿ. ನೀವು ತೊಟ್ಟುಕೊಳ್ಳುವ ಚಪ್ಪಲಿ ರಾಫ್ಟಿಂಗ್‌ ಗೆ ಸೂಕ್ತವಾಗಿರುವಂತೆ ಗಮನವಹಿಸಿ. ಒಟ್ಟಿನಲ್ಲಿ ಋಷಿಕೇಶದಲ್ಲಿ ರಿಫರ್‌ ರಾಫ್ಟಿಂಗ್‌ ನ ಹೊಸ ಅನುಭವವನ್ನು ಪಡೆದುಕೊಳ್ಳಲು ಇನ್ನು ತಡಮಾಡಬೇಡಿ.