ಪ್ರವಾಸಿಗಳಾಗಿ ಹೊರಜಾಗಕ್ಕೆ ಹೋಗುವಾಗ ಬಹಳಷ್ಟು ಬಾರಿ ಎಲ್ಲರಿಂದ ಒಂದು ಕಾಮನ್ ಕಿವಿಮಾತು ಕೇಳಿಬರುತ್ತದೆ.’ಅಲ್ಲಿ ಶಾಪಿಂಗ್ ಹೋದ್ರೆ ಹುಷಾರು, ಯಾಮಾರಿಸಿಬಿಡ್ತಾರೆ. ಒಂದಕ್ಕೆ ನಾಲ್ಕು ಪಟ್ಟು ಹೇಳ್ತಾರೆ.. ಚೌಕಾಸಿ ಮಾಡದೇ ಹೋದ್ರೆ ಬೋಳಿಸಿಬಿಡ್ತಾರೆ..’. ಇನ್ನು ಪ್ರವಾಸ ಹೋದವರು ಯಾವುದಾದರೂ ವಸ್ತು ತಗೊಂಡು ಬಂದಾಗ್ಲೂ ಇಂಥವರ ಮಾತುಗಳು ಇದ್ದೇ ಇರುತ್ತದೆ. ’ಎಷ್ಟು ಕೊಟ್ಟೆ’ ಅಂತ ಕೇಳ್ತಾರೆ. ನಾವು ಏನೇ ಬೆಲೆ ಹೇಳಿದರೂ, ’ಅಯ್ಯೋ ಸರಿಯಾಗಿ ಪಿಗ್ಗಿ ಬಿದ್ದಿದೀಯ ಬಿಡು. ಇಲ್ಲಿ ಇದೇ ವಸ್ತು ಅರ್ಧಕ್ಕಿಂತ ಕಮ್ಮಿ ಬೆಲೆಗೆ ಸಿಕ್ತಿತ್ತು. ನಾನೇ ತಂದುಕೊಡ್ತೀನಿ ಎಷ್ಟು ಬೇಕು ಹೇಳು..”. ಇದು ಎಂದಿಗೂ ಬದಲಾಗದ ಚಾಳಿ. ನಮ್ಮ ಆಲೋಚನೆಗಳ ಮೇಲೆಯೇ ಸವಾರಿ ಮಾಡುವ ಇಂಥವರು ಮಹಾನ್ ಡೇಂಜರಸ್. ಖುದ್ದು ಎಂದಿಗೂ ಪ್ರವಾಸ ಮಾಡಿರುವುದಿಲ್ಲ. ಹುಟ್ಟೂರಿನ ಗಡಿಯನ್ನೂ ದಾಟಿರುವುದಿಲ್ಲ. ಆದರೆ ಜಗತ್ತಿನ ಎಲ್ಲ ವಿಚಾರಗಳ ಬಗ್ಗೆ ಇವರದ್ದೊಂದು ನೆಗೆಟಿವ್ ಅಡ್ವೈಸ್ ಮತ್ತು ಕಮೆಂಟ್ ಇದ್ದೇ ಇರುತ್ತದೆ.

Bangalore

ಅದೊಮ್ಮೆ ಒಬ್ಬ ಅಮಾಯಕ ಅದೇ ಮೊದಲ ಬಾರಿಗೆ ಬೆಂಗಳೂರು ನೋಡಲೆಂದು ಹಳ್ಳಿಯಿಂದ ಹೊರಟಿದ್ದ. ಒಂದು ತಿಂಗಳ ಹಿಂದಿನಿಂದಲೇ ಉಪದೇಶಿಗಳು ತಮ್ಮ ಉಪಟಳ ಶುರುಮಾಡಿಯಾಗಿತ್ತು. ’ಅಲ್ಲಿ ಎಲ್ಲದಕ್ಕೂ ನಾಲ್ಕುಪಟ್ಟು ರೇಟ್ ಜಾಸ್ತಿ ನೀನು ಅವ್ರು ಹೇಳಿದ ರೇಟಿನ ನಾಲ್ಕನೇ ಒಂದು ಭಾಗಕ್ಕೆ ಕೇಳಬೇಕು, ನೆನಪಿರಲಿ’. ಬೇರೆ ಎಲ್ಲದಕ್ಕಿಂತ ಈ ಮಾತು ಅವನ ತಲೆಯಲ್ಲಿ ಗಟ್ಟಿಯಾಗಿ ಕೂತುಬಿಟ್ಟಿತ್ತು. ರಾತ್ರಿ ಬಸ್ ಹತ್ತಿ ಬೆಳಗ್ಗೆ ಬೆಂಗಳೂರಲ್ಲಿ ಇಳಿದ. ಆಟೋದವರೆಲ್ಲ ಬಂದು ಮುತ್ತಿಕೊಂಡರು. ಲಗೇಜ್ ಗೆ ಕೈ ಹಾಕಿ ಎಲ್ಲಿಗೆ ಹೋಗಬೇಕು ಸಾರ್ ಎಂದು ಕೇಳಿದರು.ಆಗಿನ್ನೂ ಓಲಾ ಊಬರ್ ಥರದ ಸೌಲಭ್ಯ ಇಲ್ಲದ ದಿನ. ಹಳ್ಳಿ ಅಪ್ಪಿಯ ಮೆದುಳಲ್ಲಿ ಠಣ್ ಎಂಬ ಶಬ್ದ. ’ಒಂದಕ್ಕೆ ನಾಲ್ಕು ಪಟ್ಟು ಹೇಳ್ತಾರೆ. ಕಾಲುಭಾಗಕ್ಕೆ ಇಳಿಸಿ ಚೌಕಾಸಿ ಮಾಡ್ಬೇಕು’ ಎಂಬ ಅಶರೀರವಾಣಿ. ಅಪ್ಪಿ ಇದಕ್ಕೆ ಇನ್ನೊಂಚೂರು ಸ್ವಂತ ಬುದ್ಧಿ ಸೇರಿಸಿದ. ನಾನು ಕಾಲುಭಾಗ ಬೆಲೆಗೆ ಕೇಳಿದರೆ ವರ್ಕ್ ಆಗಲ್ಲ. ನಾನು ಹತ್ತನೇ ಒಂದು ಭಾಗಕ್ಕೆ ಕೇಳಿದರೆ ಕಾಲುಭಾಗಕ್ಕೆ ಬಂದು ನಿಲ್ತಾರೆ ಎಂದು ಲೆಕ್ಕ ಹಾಕಿದ. ಇಲ್ಲಿಂದ ರಾಜಾಜಿನಗರಕ್ಕೆ ಎಷ್ಟು ಎಂದು ಕೇಳಿದ. ಮೀಟ್ರು ಎಷ್ಟು ತೋರಿಸುತ್ತೋ ಅಷ್ಟು ಕೊಡಿ ಅಂದ ಡ್ರೈವರ್. ಅವೆಲ್ಲ ಇಲ್ಲ ಒಂದ್ ರೇಟ್ ಹೇಳು ಅಂತ ಕೇಳಿದ ಅಪ್ಪಿ. ನೂರು ರುಪಾಯಿ ಆಗತ್ತೆ ಅಣ್ಣಾ ಅಂದ. ಮನಸಲ್ಲೇ ಲೆಕ್ಕ ಹಾಕೋಕೆ ಶುರುಮಾಡಿದ ಅಪ್ಪಿ, ನಾನು ಹತ್ತು ರುಪಾಯಿ ಕೊಡ್ತೀನಿ ಬರ್ತೀಯಾ. ಅಂತ ಕೇಳೇಬಿಟ್ಟ. ಮುಖದಲ್ಲಿ ಮಹಾನ್ ಬುದ್ಧಿವಂತನ ಸ್ಮೈಲ್ ಇತ್ತು. ಆಟೋ ಡ್ರೈವರ್ ಗೆ ಕೋಪ ನೆತ್ತಿಗೇರಿತು. ಸರ್ ಐದು ರುಪಾಯಿ ಕೊಡಿ ಸಾಕು, ಪುಗ್ಸಟ್ಟೆನೇ ಕರ್ಕೊಂಡ್ ಹೋಗ್ತೀನಿ ಬಾ.. ಮೇಲೆ ನಾನೇ ಇಪ್ಪತ್ತ್ ರುಪಾಯಿ ಕೊಡ್ತೀನಿ ಬರ್ತೀಯಾ.. ಅಂತ ಅವ್ನು ಮಾತ್ರವಲ್ಲ ಇಡೀ ಆಟೋ ಸಮೂಹವೇ ಸುತ್ತುಗಟ್ಟಿ ರೇಗಿಸಲಾರಂಭಿಸಿದರು, ಹತ್ತೇ ನಿಮಿಷದಲ್ಲಿ ಅಪ್ಪಿಗೆ ಜಗತ್ತು ನೋಡಿದ ಅನುಭವ. ತಪ್ಪಿಸಿಕೊಂಡು ಲಗೇಜ್ ಹೊತ್ತುಕೊಂಡು ಓಡಿದ್ದಾನೆ. ಈ ಜನ್ಮದಲ್ಲಿ ಇನ್ನು ಚೌಕಾಸಿ ಮಾಡಲ್ಲ ಅಂತ ಮನಸಲ್ಲೇ ಶಪಥ ಮಾಡಿಕೊಂಡ. ಇದು ನೈಜಘಟನೆ. ಪ್ರವಾಸಿಗರಾಗಿ ಹೊರಡುವಾಗ ಬಿಟ್ಟಿ ಸಲಹೆಗಳನ್ನು ಕಿವಿಯ ಹೊರಪದರದಲ್ಲಿ ಇಟ್ಟುಕೊಂಡಿರಬೇಕು. ಕಾಮನ್ ಸೆನ್ಸ್ ಬಳಸಬೇಕು. ಪ್ರವಾಸಿ ತಾಣದ ಸಾಮಾನ್ಯ ಮಾಹಿತಿಗಳನ್ನು ತಜ್ಞರಿಂದ ಮಾತ್ರವೇ ಪಡೆಯಬೇಕು. ಇಲ್ಲವಾದಲ್ಲಿ ಇಂಥ ಅಪದ್ದಗಳು ಸಂಭವಿಸುತ್ತವೆ.