ಟ್ರೈಬಲ್ ಟೂರಿಸಂ ಕೇವಲ ಪ್ರವಾಸೋದ್ಯಮವಲ್ಲ
2025–26ರ ಪ್ರವಾಸೋದ್ಯಮ ಆಯವ್ಯಯದಲ್ಲಿ ಕೇಂದ್ರ ಸರ್ಕಾರ ಹಳ್ಳಿಯ ಯುವಕರನ್ನು ಆತಿಥ್ಯ ಕ್ಷೇತ್ರಕ್ಕೆ ಸೆಳೆಯುವ ಯೋಜನೆಗಳಿಗೆ ಒತ್ತು ನೀಡಿದೆ. ಆದರೆ, ದೆಹಲಿಯಿಂದ ಬರುವ ಕನಸು ಗ್ರಾಮೀಣ ಹಾದಿಗಳಲ್ಲಿ ಬೇರೂರಬೇಕಾದರೆ, ರಾಜ್ಯಾಡಳಿತದಲ್ಲಿ ಸಮರ್ಪಿತ ‘ಆದಿವಾಸಿ ಪ್ರವಾಸೋದ್ಯಮ ಪ್ರಾಧಿಕಾರ’ ಅಗತ್ಯ. ಕಾಗದದ ಗಡಿಯಲ್ಲಿ ಸೀಮಿತವಾದ ಯೋಜನೆಗಳು ಕಾಡಂಚಿನ ಜನರ ಮನೆಗೆ ತಲುಪದಿದ್ದರೆ, ಅದು ಮತ್ತೊಂದು ಅಸಮತೆಯನ್ನು ಮಾತ್ರ ಬಿಟ್ಟುಹೋಗುತ್ತದೆ.
ಪ್ರವಾಸೋದ್ಯಮ ಕ್ಷೇತ್ರವು ರಾಜ್ಯದ ಆರ್ಥಿಕತೆಗೆ ದಿಕ್ಕು ನೀಡುವ ಶಕ್ತಿಯಾಗಿದೆ. ಆದರೆ ಇದುವರೆಗೂ ನಗರಗಳ ಗದ್ದಲ, ಇತಿಹಾಸ ಪ್ರಸಿದ್ಧ ಕಟ್ಟಡಗಳು ಮತ್ತು ಐಶ್ವರ್ಯದ ತಾಣಗಳಿಗೆ ಮಾತ್ರ ಹೆಚ್ಚಿನ ಒತ್ತು ನೀಡಲಾಗಿದೆ. ಇದರಿಂದ ಆದಿವಾಸಿ ಜನಾಂಗಗಳ ಜೀವನ ಶೈಲಿ, ಕಲೆ, ಸಂಸ್ಕೃತಿ ಹಾಗೂ ಪರಿಸರ ಸ್ನೇಹಿ ಬದುಕು ಪ್ರವಾಸೋದ್ಯಮದಲ್ಲಿ ಕಡೆಗಣನೆಗೊಂಡಿರುವುದು ಕಹಿ ಸತ್ಯ.
ಉತ್ತರ ಕನ್ನಡದ ಸಿದ್ದಿ ಜನಾಂಗ, ಚಾಮರಾಜನಗರದ ಸೋಲಿಗರು, ಜೇನುಕುರುಬರು, ಮಡಿಕೇರಿಯ ತಪ್ಪಲಿನ ಅರಣ್ಯ ಸಮುದಾಯಗಳು ಮತ್ತು ಬೆಂಗಳೂರು ಹೊರವಲಯದ ರಾಮನಗರದ ಇರುಲಿಗರ ಜೀವನ ಶೈಲಿ, ನಿಸರ್ಗದೊಂದಿಗೆ ಸಮ್ಮಿಲಿತ ಜೀವನ, ಪ್ರವಾಸಿಗರಿಗೆ ಕೇವಲ ಕುತೂಹಲವಲ್ಲ; ಮಾನವತೆಗೆ ಪಾಠವಾಗುವಂಥದ್ದು.
ಇವರ ಹಣ್ಣು-ಹಂಪಲು, ಜೇನು-ಮೇಣ, ಬಿದಿರಿನ ಕಲೆಗಳು, ಬೆತ್ತದ ಕೈಗಾರಿಕೆ, ಮಣ್ಣಿನ ಆಟಿಕೆಗಳು, ಸಂಸ್ಕೃತಿಕ ನೃತ್ಯ-ಪದ್ಧತಿಗಳು ಪ್ರವಾಸೋದ್ಯಮದ ಮೂಲಕ ವಿಶ್ವಮಟ್ಟದಲ್ಲಿ ಪರಿಚಿತರಾದರೆ, ಆರ್ಥಿಕ ಸುಧಾರಣೆ ಮತ್ತು ಗೌರವಯುತ ಜೀವನ ದೊರೆಯುತ್ತದೆ.
2025–26ರ ಪ್ರವಾಸೋದ್ಯಮ ಆಯವ್ಯಯದಲ್ಲಿ ಕೇಂದ್ರ ಸರ್ಕಾರ ಹಳ್ಳಿಯ ಯುವಕರನ್ನು ಆತಿಥ್ಯ ಕ್ಷೇತ್ರಕ್ಕೆ ಸೆಳೆಯುವ ಯೋಜನೆಗಳಿಗೆ ಒತ್ತು ನೀಡಿದೆ. ಆದರೆ, ದೆಹಲಿಯಿಂದ ಬರುವ ಕನಸು ಗ್ರಾಮೀಣ ಹಾದಿಗಳಲ್ಲಿ ಬೇರೂರಬೇಕಾದರೆ, ರಾಜ್ಯಾಡಳಿತದಲ್ಲಿ ಸಮರ್ಪಿತ ‘ಆದಿವಾಸಿ ಪ್ರವಾಸೋದ್ಯಮ ಪ್ರಾಧಿಕಾರ’ ಅಗತ್ಯ. ಕಾಗದದ ಗಡಿಯಲ್ಲಿ ಸೀಮಿತವಾದ ಯೋಜನೆಗಳು ಕಾಡಂಚಿನ ಜನರ ಮನೆಗೆ ತಲುಪದಿದ್ದರೆ, ಅದು ಮತ್ತೊಂದು ಅಸಮತೆಯನ್ನು ಮಾತ್ರ ಬಿಟ್ಟುಹೋಗುತ್ತದೆ.

ಜಗತ್ತಿನಾದ್ಯಂತ ಪ್ರವಾಸಿಗರು ಕೋಟಿ ಕೋಟಿ ರುಪಾಯಿ ಖರ್ಚು ಮಾಡಿ ಅಮೆಜಾನ್ ಕಾಡುಗಳಲ್ಲಿ ಅನುಭವ ಪಡೆಯುತ್ತಾರೆ. ಅದೇ ಅನುಭವವನ್ನು ನಮ್ಮ ಮಲೆನಾಡು, ಮಡಿಕೇರಿ, ಚಾಮರಾಜನಗರ, ಉತ್ತರ ಕನ್ನಡ ಕಾಡುಗಳಲ್ಲಿ ನೀಡಬಹುದಾಗಿದೆ. ಇಲ್ಲಿನ ಶುದ್ಧ ವಾತಾವರಣ, ನಿಷ್ಕಲ್ಮಶ ಬದುಕು, ನಿಸರ್ಗದೊಡನೆ ಆತ್ಮೀಯತೆ ಪ್ರವಾಸಿಗರಿಗೆ ಆಕರ್ಷಕ ತಾಣವಾಗಬಹುದು.
ಇಂದು ದೇಶದ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆದಿವಾಸಿ ಕುಟುಂಬದಿಂದ ರಾಷ್ಟ್ರದ ಶಿಖರಕ್ಕೆ ಏರಿರುವುದು ನಮಗೆ ಹೆಮ್ಮೆ. ಇದು ಆದಿವಾಸಿ ಸಮುದಾಯಗಳ ಶಕ್ತಿಯ ಸಾಕ್ಷಿ. ನನ್ನ ಕನಸು, ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬೆತ್ತದ ಗೋಪುರಗಳ ಸೈಲಿಗಳು, ಅಮೆಜಾನ್, ಫ್ಲಿಪ್ ಕಾರ್ಟ್ ಗಳಂಥ ಇ-ಕಾಮರ್ಸ್ ಸಂಸ್ಥೆಗಳ ವ್ಯಾಪಾರಗಳಿಂದ ಪ್ರಾದೇಶಿಕ ಜನರಿಗೆ ಆರ್ಥಿಕ ಬದಲಾವಣೆ ಸಿಗಬಹುದು.
ಅದಕ್ಕಾಗಿಯೇ, ಟ್ರೈಬಲ್ ಟೂರಿಸಂ ಕೇವಲ ಪ್ರವಾಸೋದ್ಯಮವಲ್ಲ; ಅದು ಮಾನವನಾಗಿ ಬದುಕಲು ಕಲಿಸುವ ಪಾಠ, ಪರಿಸರದೊಡನೆ ಕೈಹಿಡಿಯುವ ದಾರಿ. ಸರ್ಕಾರವು ಇದನ್ನು ಅರಿತು ಕಾರ್ಯತಂತ್ರ ರೂಪಿಸಿದಾಗ ಮಾತ್ರ, ರಾಜ್ಯದ ಪ್ರವಾಸೋದ್ಯಮಕ್ಕೂ, ಆದಿವಾಸಿಗಳ ಬದುಕಿಗೂ ಹೊಸ ಬೆಳಕು ಹರಿದು ಬರುತ್ತದೆ.
ಪೂರ್ಣ ಮಟ್ಟದಲ್ಲಿ ಇದನ್ನು ಜಾರಿಗೊಳಿಸಲು ಉತ್ಸಾಹಿ ಉದ್ಯಮಿಗಳು, ಸರಕಾರೇತರ ಸಂಸ್ಥೆಗಳು (NGOಗಳು), ಸ್ಥಳೀಯ ಸಮುದಾಯದ ಸದಸ್ಯರು ಸೇವೆಯಲ್ಲಿ ಭಾಗಿಯಾಗಬೇಕು. ಆಗ ಕಾಡಿನ ಬಿದಿರು, ಜೇನು ಮಾರುವವನು, ಬೆತ್ತದ ಕೈ ಚೀಲ ತಯಾರಿಸುವವನು, ಜನಪದ ಹಾಡು ಹಾಡುವವರು — ಎಲ್ಲರೂ ಗೌರವದೊಂದಿಗೆ ಬದುಕಲಿದ್ದಾರೆ. ಅಲ್ಲದೇ ನಿಜವಾದ ಅರ್ಥದಲ್ಲಿ “ದೇವರ ಮಕ್ಕಳಿಗೆ ಗೌರವ” ನೀಡಿದಂತಾಗುತ್ತದೆ.
ಕೆ. ರಾಧಾಕೃಷ್ಣ ಹೊಳ್ಳ
ಅಧ್ಯಕ್ಷರು, ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲಿಕರ ಸಂಘ (ರಿ)