• ಕೆ ರಾಧಾಕೃಷ್ಣ ಹೊಳ್ಳ

ಅಧ್ಯಕ್ಷರು, ಕರ್ನಾಟಕ ರಾಜ್ಯ ಟ್ರಾವೆಲ್ಸ ಮಾಲಿಕರ ಸಂಘ.

ತುಮಕೂರು ಜಿಲ್ಲೆಯ ವಾಣಿವಿಲಾಸಪುರದ ವಿವಿ ಸಾಗರ (ಮಾರಿಕಣಿವೆ ಅಣೆಕಟ್ಟು) ಹಾಗೂ ಸಮೀಪದ ಮಾರ್ಕೋನಹಳ್ಳಿ ಅಣೆಕಟ್ಟು – ಇವು ಕೇವಲ ಜಲಾಶಯಗಳಲ್ಲ, ಕರ್ನಾಟಕದ ಇತಿಹಾಸ, ಇಂಜಿನಿಯರಿಂಗ್ ಪ್ರತಿಭೆ ಹಾಗೂ ನೈಸರ್ಗಿಕ ಸೌಂದರ್ಯದ ಸಜೀವ ಸಾಕ್ಷಿಗಳಾಗಿವೆ. ಆದರೆ ಇಂದಿನ ಸ್ಥಿತಿಯಲ್ಲಿ, ಪ್ರವಾಸಿಗರ ದಟ್ಟಣೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವಾಗ, ಅಗತ್ಯವಾಗಿ ಬೇಕಾದ ಮೂಲಸೌಕರ್ಯಗಳ ಕೊರತೆಯನ್ನು ಅನುಭವಿಸುತ್ತಿವೆ,

ಹಳೆಯ ಸೇತುವೆ ಕುಸಿದ ಬಳಿಕ ನಿರ್ಮಿಸಲಾದ ಹೊಸ ಸೇತುವೆ ತುಂಬಾ ಕಿರಿದಾಗಿದೆ. ಪ್ರವಾಸಿಗರ ಪ್ರವಾಹವನ್ನು ತಡೆಯಲು ಇದು ಸಾಕಾಗುವುದಿಲ್ಲ. ಕೋಡಿಯ ಬಳಿ ಶಾಶ್ವತ ಸೇತುವೆ ಇಲ್ಲದ ಕಾರಣ ವಾಹನ ನಿಲುಗಡೆ ವ್ಯವಸ್ಥೆಯೇ ಇಲ್ಲದಂತಾಗಿದೆ. 2022ರಲ್ಲಿ ಕೇವಲ ಒಂಬತ್ತು ದಿನಗಳಲ್ಲಿ 90,000ಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ ದಾಖಲೆ ಈ ಅಣೆಕಟ್ಟುಗಳಿಗಿದ್ದು, ಸದ್ಯ ಈ ಸಂಖ್ಯೆಯು ಇನ್ನಷ್ಟು ಹೆಚ್ಚಳವಾಗುವುದು ಖಚಿತ.

markondanahalli dam  3

ಊಟ–ವಸತಿಗಿಲ್ಲ ಸೂಕ್ತ ಸೌಕರ್ಯ

ವಿಶ್ವೇಶ್ವರಯ್ಯ ನೀರಾವರಿ ನಿಗಮಕ್ಕೆ ಸೇರಿದ ಪ್ರವಾಸಿ ಮಂದಿರಗಳಲ್ಲಿ ಕೇವಲ ಆರು–ಏಳು ಕೊಠಡಿಗಳಷ್ಟೇ ಲಭ್ಯವಿದೆ. ಪ್ರವಾಸೋದ್ಯಮ ಇಲಾಖೆಯ ವಸತಿ ಗೃಹಗಳು ಇನ್ನೂ ಸಾರ್ವಜನಿಕರಿಗೆ ಮುಕ್ತವಾಗಿಲ್ಲ. ಪ್ರದೇಶಗಳಲ್ಲಿ ಖಾಸಗಿ ಗೃಹವಸತಿ ಸೌಲಭ್ಯಗಳು ಬೆರಳೆಣಿಕೆಯಷ್ಟೇ ಇರುವುದರಿಂದ ಪ್ರವಾಸಿಗರಿಗೆ ಆಯ್ಕೆಯೇ ಇಲ್ಲವಾಗಿದೆ. ಊಟಕ್ಕೆ ವಿವಿಪುರ ವೃತ್ತದ ಸಣ್ಣ ಹೊಟೇಲ್‌ಗಳೇ ಆಧಾರವಾಗಿದ್ದು, ರಜಾದಿನಗಳಲ್ಲಿ ಅಥವಾ ವಾರಾಂತ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ವೇಳೆ ಆಹಾರವೇ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತದೆ.

ಇತಿಹಾಸ–ಸೌಂದರ್ಯದ ಕೇಂದ್ರ

ವಿವಿ ಸಾಗರ ಅಣೆಕಟ್ಟು – ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಾಯಿ ಕೆಂಪನಂಜಮ್ಮಣ್ಣಿಯವರ ಹೆಸರಿನಲ್ಲಿ ನಿರ್ಮಿಸಲ್ಪಟ್ಟ ಅಣೆಕಟ್ಟು. ಕೇವಲ ಹತ್ತು ವರ್ಷಗಳಲ್ಲಿ ಪೂರ್ಣಗೊಂಡ ಈ ಯೋಜನೆ, 1907ರಿಂದಲೇ ಕರ್ನಾಟಕದ ಹೆಮ್ಮೆ.

ಮತ್ತೊಂದೆಡೆ, 1930ರ ದಶಕದಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರ ಮಾರ್ಗದರ್ಶನದಲ್ಲಿ ನಿರ್ಮಿಸಲಾದ ಮಾರ್ಕೋನಹಳ್ಳಿ ಅಣೆಕಟ್ಟು, ತನ್ನ ಸ್ವಯಂಚಾಲಿತ ಸೈಫನ್ ವ್ಯವಸ್ಥೆಗಾಗಿ ವಿಶ್ವಪ್ರಸಿದ್ಧ. ಇವೆರಡೂ ಪ್ರವಾಸಿಗರನ್ನು ಆಕರ್ಷಿಸುವ ತಾಣಗಳಾದರೂ, ಅವುಗಳ ಪ್ರಚಾರ–ಪ್ರಸಾರ ಮತ್ತು ನಿರ್ವಹಣೆ ತೀರಾ ಅಲ್ಪ ಮಟ್ಟಿನಲ್ಲಿದೆ.

markondanahalli dam  1

ಪ್ರವಾಸಿಗರ ಅಬ್ಬರವನ್ನು ಅವಕಾಶವನ್ನಾಗಿ ಮಾಡಿಕೊಂಡು ರಾಜ್ಯ ಸರಕಾರ ಹಾಗೂ ಪ್ರವಾಸೋದ್ಯಮ ಇಲಾಖೆ ತಕ್ಷಣ ಕ್ರಮ ಕೈಗೊಳ್ಳುವುದು ಅಗತ್ಯ.

ಉದ್ಯಾನವನ, ಮಕ್ಕಳ ಆಟದ ಮೈದಾನ, ಶೌಚಾಲಯಗಳ ನಿರ್ಮಾಣ, ವಾಹನ ನಿಲುಗಡೆ, ಫೊಟೋಶೂಟ್ ಮಾಡಲು ತಾಣಗಳು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಫಲಕಗಳು ಉತ್ತಮ ಪ್ರವಾಸೋದ್ಯಮ ತಾಣವನ್ನಾಗಿಸುವ ದೃಷ್ಟಿಯಿಂದ ತಕ್ಷಣಕ್ಕೆ ಆಗಬೇಕಿರುವ ಸವಲತ್ತುಗಳು.

ಬೆಂಗಳೂರಿನಿಂದ ಕೇವಲ ಎರಡು ಗಂಟೆಯ ಪ್ರಯಾಣದಲ್ಲಿ ತಲುಪಬಹುದಾದ ಈ ಜಲಾಶಯಗಳು, ಸೂಕ್ತ ಸೌಲಭ್ಯ ಒದಗಿಸಿದರೆ ಕರ್ನಾಟಕದ ಪ್ರವಾಸೋದ್ಯಮ ನಕ್ಷೆಯಲ್ಲಿ ಅಗ್ರ ಸ್ಥಾನ ಪಡೆಯುವ ಸಾಮರ್ಥ್ಯವಿದೆ. ಇಲ್ಲವಾದರೆ, ಪ್ರವಾಸಿಗರ ದಟ್ಟಣೆಯೇ ಅವ್ಯವಸ್ಥೆಯಾಗಿ ತಿರುಗಿ, ಈ ಅಮೂಲ್ಯ ತಾಣಗಳ ಆಕರ್ಷಣೆ ಕುಸಿಯುವ ಅತಂಕವಿದೆ. ಅಗಸ್ಟ್ ನಿಂದ ಜನವರಿ ತಿಂಗಳವರೆಗಿನ ಸಮಯ ಈ ಅಣೆಕಟ್ಟುಗಳ ವೀಕ್ಷಣೆಗೆ ಸೂಕ್ತ ಸಮಯ.