ವಿಮಾನದ ರೆಕ್ಕೆಗಳು ಬಾಗಿದರೆ...
ವಿಮಾನದ ರೆಕ್ಕೆಗಳು ಮುರಿಯುವುದು ಅಂದ್ರೆ, ಒಂದು ಗಟ್ಟಿ ಬಿದಿರನ್ನು ಬಗ್ಗಿಸಿ ಮುರಿಯಲು ಪ್ರಯತ್ನಿಸಿದಂತೆ. ಅದು ಬಾಗುತ್ತದೆ, ಆದರೆ ಮುರಿಯುವುದಿಲ್ಲ. ವಿಮಾನದ ರೆಕ್ಕೆಗಳೂ ಹಾಗೆ. ಇದರ ಹಿಂದಿನ ಎಂಜಿನಿಯರಿಂಗ್ ಕಾರಣಗಳನ್ನು ನೋಡೋಣ.
ವಿಮಾನವು 35000 ಅಥವಾ 38000 ಅಡಿಗಳಷ್ಟು ಎತ್ತರದಲ್ಲಿ ಹಾರುವಾಗ, ತೀವ್ರ ಗಾಳಿಯಿಂದ ಇಡೀ ವಿಮಾನ ಜೋರಾಗಿ ಅಲುಗಾಡಿದರೆ, ಅದರ ರೆಕ್ಕೆಗಳು ಮೇಲಕ್ಕೆ ಕೆಳಕ್ಕೆ ಜೋಲಿ ಹೊಡೆಯುತ್ತವೆ. ಆಗ ಕಿಟಕಿಯಾಚೆಯ ರೆಕ್ಕೆಗಳನ್ನು ನೋಡಿದರೆ ಭಯವಾಗುತ್ತದೆ. ಆ ರೆಕ್ಕೆಗಳು ಮುರಿದು ಹೋಗುತ್ತವಾ ಎಂದು ಗಾಬರಿಯಾಗಬಹುದು.
ವಿಮಾನ ಏಕಾಏಕಿ ಕುಸಿದರೆ ರೆಕ್ಕೆಗಳು ಜೋರಾಗಿ ಪಡಪಡಿಸುವುದುಂಟು. ಆಗಲೂ ರೆಕ್ಕೆ ಮುರಿದು ಹೋಗಬಹುದಾ ಎಂಬ ಆತಂಕವಾಗುವುದುಂಟು. ಈ ಪ್ರಶ್ನೆಗೆ ನೇರ ಮತ್ತು ಸರಳ ಉತ್ತರ- ಸಾಮಾನ್ಯ ಹಾರಾಟದ ಪರಿಸ್ಥಿತಿಗಳಲ್ಲಿ, ಇದು ಅಸಾಧ್ಯದ ಮಾತು. ವಿಮಾನದ ರೆಕ್ಕೆಗಳು ಮುರಿಯುವುದು ಅಂದ್ರೆ, ಒಂದು ಗಟ್ಟಿ ಬಿದಿರನ್ನು ಬಗ್ಗಿಸಿ ಮುರಿಯಲು ಪ್ರಯತ್ನಿಸಿದಂತೆ. ಅದು ಬಾಗುತ್ತದೆ, ಆದರೆ ಮುರಿಯುವುದಿಲ್ಲ. ವಿಮಾನದ ರೆಕ್ಕೆಗಳೂ ಹಾಗೆ. ಇದರ ಹಿಂದಿನ ಎಂಜಿನಿಯರಿಂಗ್ ಕಾರಣಗಳನ್ನು ನೋಡೋಣ. ವಿಮಾನದ ರೆಕ್ಕೆಗಳು ಕೇವಲ ಗಟ್ಟಿಯಷ್ಟೇ ಅಲ್ಲ, ಅವು ನಮ್ಯತೆಯನ್ನು (flexibility) ಹೊಂದಿವೆ. ಹಾರಾಟದ ವೇಳೆ ರೆಕ್ಕೆಗಳು ಬಾಗುವುದು ಅವುಗಳ ದೌರ್ಬಲ್ಯದ ಸಂಕೇತವಲ್ಲ, ಬದಲಾಗಿ ಅವುಗಳ ಶಕ್ತಿಯ ಸಂಕೇತ.
ಇದನ್ನೂ ಓದಿ: ವಿಮಾನದ ರೆಕ್ಕೆಗಳು
ರೆಕ್ಕೆಗಳನ್ನು ಅಲ್ಯೂಮಿನಿಯಂ ಮಿಶ್ರಲೋಹ (Aluminum Alloys) ಮತ್ತು ಕಾಂಪೋಸಿಟ್ ವಸ್ತುಗಳಿಂದ(Composite Materials), ವಿಶೇಷವಾಗಿ ಕಾರ್ಬನ್ ಫೈಬರ್ ರೀಇನೋರ್ಸ್‌ಡ್ ಪಾಲಿಮರ್(CFRP) ನಿಂದ ತಯಾರಿಸಲಾಗುತ್ತದೆ. ಈ ವಸ್ತುಗಳು ಉಕ್ಕಿಗಿಂತ ಹಗುರವಾಗಿದ್ದು, ಅದಕ್ಕಿಂತಲೂ ಹೆಚ್ಚು ಶಕ್ತಿಶಾಲಿಯಾಗಿರುತ್ತವೆ.
ರೆಕ್ಕೆಯ ಒಳಭಾಗವು ಟೊಳ್ಳಾಗಿದ್ದರೂ, ಅದರಲ್ಲಿ ಉದ್ದಕ್ಕೂ ಸಾಗುವ ಸ್ಪಾರ್‌ಗಳು (Spars) ಮತ್ತು ಅಡ್ಡಲಾಗಿ ಜೋಡಿಸಲಾದ ರಿಬ್‌ಗಳು(Ribs) ಇರುತ್ತವೆ. ಇವುಗಳೆಲ್ಲ ಸೇರಿ ಒಂದು ಬಲಿಷ್ಠವಾದ ಪಂಜರದಂಥ ರಚನೆಯನ್ನು ನಿರ್ಮಿಸುತ್ತವೆ. ಇದು ರೆಕ್ಕೆಗೆ ಅಗಾಧವಾದ ರಚನಾತ್ಮಕ ಶಕ್ತಿಯನ್ನು ನೀಡುತ್ತದೆ.
ಹಾರಾಟದ ವೇಳೆ, ವಿಶೇಷವಾಗಿ ವಾಯು ಪ್ರಕ್ಷುಬ್ಧತೆ (Turbulence) ಎದುರಾದಾಗ, ಗಾಳಿಯ ಒತ್ತಡವು ಹಠಾತ್ತಾಗಿ ಏರಿಳಿತಗೊಳ್ಳುತ್ತದೆ. ಈ ಸಮಯದಲ್ಲಿ ರೆಕ್ಕೆಗಳು ಗಡುಸಾಗಿದ್ದರೆ, ಒತ್ತಡದಿಂದಾಗಿ ಮುರಿದುಹೋಗುವ ಅಪಾಯವಿರುತ್ತದೆ. ಆದರೆ, ಅವುಗಳ ನಮ್ಯತೆಯ ಗುಣದಿಂದಾಗಿ, ರೆಕ್ಕೆಗಳು ಬಾಗುವ ಮೂಲಕ ಈ ಒತ್ತಡವನ್ನು ಹೀರಿಕೊಳ್ಳುತ್ತವೆ ಮತ್ತು ವಿಮಾನದ ರಚನೆಯ ಮೇಲಿನ ಭಾರವನ್ನು ಕಡಿಮೆ ಮಾಡುತ್ತವೆ.

ಪ್ರತಿಯೊಂದು ಹೊಸ ವಿಮಾನ ಮಾದರಿಯನ್ನು ಸೇವೆಗೆ ಬಳಸಿಕೊಳ್ಳುವ ಮೊದಲು, ಅದರ ರೆಕ್ಕೆಗಳನ್ನು ಅತ್ಯಂತ ಕಠಿಣ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ. ಉದಾಹರಣೆಗೆ, ಸ್ಟ್ಯಾಟಿಕ್ ಶಕ್ತಿ ಪರೀಕ್ಷೆ (Static Strength Test). ಈ ಪರೀಕ್ಷೆಯಲ್ಲಿ, ವಿಮಾನದ ರೆಕ್ಕೆಗಳನ್ನು ಒಂದು ಬೃಹತ್ ಯಂತ್ರದಲ್ಲಿರಿಸಿ, ಹೈಡ್ರಾಲಿಕ್ ಜ್ಯಾಕ್‌ಗಳ ಮೂಲಕ ಮೇಲ್ಮುಖವಾಗಿ ಬಗ್ಗಿಸಲಾಗುತ್ತದೆ.
ವಿಮಾನವು ತನ್ನ ಜೀವಮಾನದಲ್ಲಿ ಎದುರಿಸಬಹುದಾದ ಅತ್ಯಂತ ಕೆಟ್ಟ ವಾಯು ಪ್ರಕ್ಷುಬ್ಧತೆಯ 1.5 ಪಟ್ಟು (ಶೇ.150) ಹೆಚ್ಚು ಭಾರವನ್ನು ರೆಕ್ಕೆಗಳು ಯಾವುದೇ ಹಾನಿಯಿಲ್ಲದೇ ತಡೆದುಕೊಳ್ಳಬೇಕು ಎಂಬುದು ನಿಯಮ. ಹಲವು ಬಾರಿ, ಎಂಜಿನಿಯರ್‌ಗಳು ರೆಕ್ಕೆಯು ನಿಜವಾಗಿ ಎಲ್ಲಿ ಮುರಿಯುತ್ತದೆ ಎಂದು ತಿಳಿಯಲು ಶೇ.150ಕ್ಕಿಂತಲೂ ಹೆಚ್ಚು ಒತ್ತಡವನ್ನು ನೀಡಿ ಪರೀಕ್ಷಿಸುತ್ತಾರೆ. ಈ ಪರೀಕ್ಷೆಗಳಲ್ಲಿ, ರೆಕ್ಕೆಗಳು ಸುಮಾರು 90 ಡಿಗ್ರಿಗಳಷ್ಟು ಬಾಗಿದರೂ ಮುರಿಯುವುದಿಲ್ಲ!
ಇನ್ನೊಂದು ಫ್ಯಾಟಿಗ್ ಅಥವಾ ಆಯಾಸ ಪರೀಕ್ಷೆ (Fatigue Test). ಒಂದು ಪೇಪರ್ ಕ್ಲಿಪ್ ಅನ್ನು ಪದೇ ಪದೆ ಬಗ್ಗಿಸಿದರೆ ಅದು ಹೇಗೆ ಮುರಿಯುತ್ತದೆಯೋ, ಹಾಗೆಯೇ ಲೋಹಗಳು ಕೂಡ ನಿರಂತರ ಒತ್ತಡದಿಂದ ದುರ್ಬಲಗೊಳಬಹುದು. ಇದನ್ನು ‘ಮೆಟಲ್ ಫ್ಯಾಟಿಗ್’ ಎನ್ನುತ್ತಾರೆ. ಇದನ್ನು ಪರೀಕ್ಷಿಸಲು, ಒಂದು ಸಂಪೂರ್ಣ ವಿಮಾನವನ್ನು ಯಂತ್ರಕ್ಕೆ ಕಟ್ಟಿ, ಅದರ ಮೇಲೆ ಹಲವಾರು ವರ್ಷಗಳ ಕಾಲ, ಹತ್ತಾರು ಸಾವಿರ ಹಾರಾಟಗಳಿಗೆ (ಟೇಕಾಫ್, ಲ್ಯಾಂಡಿಂಗ್, ಪ್ರಕ್ಷುಬ್ಧತೆ) ಸಮನಾದ ಒತ್ತಡವನ್ನು ನಿರಂತರವಾಗಿ ನೀಡಲಾಗುತ್ತದೆ. ಇದರಿಂದ ವಿಮಾನವು ತನ್ನ 20-30 ವರ್ಷಗಳ ಸೇವಾ ಅವಽಯಲ್ಲಿ ಸುರಕ್ಷಿತವಾಗಿರುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.