Thursday, November 13, 2025
Thursday, November 13, 2025

ರವಾಂಡದ ಚಹರೆ ಬದಲಿಸಿ, ಅಭಿವೃದ್ಧಿಗೆ ಕಾರಣವಾದ ಗೊರಿಲ್ಲಾ ಪ್ರವಾಸೋದ್ಯಮ

ಪ್ರತಿ ವರ್ಷ ರವಾಂಡ ಸರಕಾರ ಗೊರಿಲ್ಲಾ ನಾಮಕರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಇದಕ್ಕೆ ‘ಕ್ವಿಟಾ ಇಜಿನಾ’ ಅಂತಾರೆ. ಹಾಲಿವುಡ್ ಸಿನಿಮಾ ನಟ-ನಟಿಯರನ್ನು ಆಮಂತ್ರಿಸಿ, ಆಯಾ ವರ್ಷ ಹುಟ್ಟಿದ ಗೊರಿಲ್ಲಾ ಮರಿಗಳಿಗೆ ನಾಮಕರಣ ಮಾಡುವ ಕಾರ್ಯಕ್ರಮವಿದು. ಅಮಿತಾಬ್ ಬಚ್ಚನ್ ಮತ್ತು ಐಶ್ವರ್ಯ ರೈ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದು ರವಾಂಡದ ಕಡೆಗೆ ಜಗತ್ತಿನ ಗಮನ ಸೆಳೆಯುವಲ್ಲಿ ಮಹತ್ವದ ಪಾತ್ರವನ್ನು ವಹಿಸುವಂತೆ ಮಾಡಿದೆ.

ಒಂದು ವೇಳೆ ಮೌಂಟನ್ ಗೊರಿಲ್ಲಾಗಳು ಇಲ್ಲದಿದ್ದರೆ ರವಾಂಡ ಎಂಬ ದೇಶ ಹೇಗಿರುತ್ತಿತ್ತು? ಸಂದೇಹವೇ ಬೇಡ, ಈಗಿರುವಂತೆ ಆ ದೇಶ ಅಭಿವೃದ್ಧಿ ಹೊಂದಿರುತ್ತಿರಲಿಲ್ಲ ಮತ್ತು ಆಫ್ರಿಕಾ ಖಂಡದಲ್ಲಿಯೇ ಇಷ್ಟು ಮುನ್ನೆಲೆಗೆ ಬರುತ್ತಿರಲಿಲ್ಲ. ಒಂದು ದೇಶ ಒಂದು ಪ್ರಾಣಿಯನ್ನು ಬಂಡವಾಳ ಮಾಡಿಕೊಂಡು, ಅದನ್ನೇ ಬ್ರ್ಯಾಂಡ್ ಅಂಬಾಸಿಡರ್ ಆಗಿ ಮಾಡಿಕೊಂಡು, ಬೆಳೆದ ಪರಿ, ಇಡೀ ವಿಶ್ವಕ್ಕೆ ಮಾದರಿ. ಹೌದು, ರವಾಂಡ ದೇಶದ ರಾಷ್ಟ್ರೀಯ ಆರ್ಥಿಕತೆಯನ್ನು ರೂಪಿಸುವಲ್ಲಿ ಮೌಂಟನ್ ಗೊರಿಲ್ಲಾಗಳು (Mountain Gorillas) ಪ್ರಮುಖ ಪಾತ್ರ ವಹಿಸಿವೆ. ಈ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ಸಂರಕ್ಷಿಸುವ ಯಶಸ್ವಿ ಪ್ರಯತ್ನಗಳು, ದೇಶಕ್ಕೆ ‘ಅಧಿಕ-ಮೌಲ್ಯ, ಅಧಿಕ-ಪ್ರಭಾವ’ (High-value, high-impact) ವನ್ನು ತಂದಿವೆ. ಗೊರಿಲ್ಲಾಗಳ ಸಂರಕ್ಷಣೆ ಮತ್ತು ಆರ್ಥಿಕ ಪ್ರಗತಿಯ ಈ ಮಾದರಿಯು ರವಾಂಡ ಬದಲಾವಣೆಗೆ ಮಹತ್ವದ ಕೊಡುಗೆ ನೀಡಿದೆ.

ರವಾಂಡ, ಉಗಾಂಡ ಮತ್ತು ಕಾಂಗೋ ದೇಶಗಳ ಗಡಿ ಕೂಡುವ ವಿರುಂಗಾ ಕಾಡಿನಲ್ಲಿ ಅಳಿವಿನ ಅಂಚಿನಲ್ಲಿರುವ ಸುಮಾರು ಐನೂರು ಮೌಂಟನ್ ಗೊರಿಲ್ಲಾಗಳಿವೆ. ಈ ಗೊರಿಲ್ಲಾಗಳು ಮಾತಾಡುವುದಿಲ್ಲ, ಓದುವುದಿಲ್ಲ ಮತ್ತು ಬರೆಯುವುದಿಲ್ಲ ಎಂಬುದನ್ನು ಬಿಟ್ಟರೆ, ಥೇಟು ಮನುಷ್ಯರ ಹಾಗೆ. ಮನುಷ್ಯರಿಗೂ, ಇದಕ್ಕೂ ಶೇ.ತೊಂಬತ್ತೈದು ಸಾಮ್ಯ. ಈ ಗೊರಿಲ್ಲಾಗಳು ಜಗತ್ತಿನಲ್ಲಿ ಆ ಅರಣ್ಯ ಪ್ರದೇಶವನ್ನು ಬಿಟ್ಟರೆ ಮತ್ತೆಲ್ಲೂ ಇಲ್ಲ. ರವಾಂಡ ಸರಕಾರ ಈ ಮೌಂಟನ್ ಗೊರಿಲ್ಲಾಗಳನ್ನೇ ತನ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಮಾಡಿಕೊಂಡು, ಗೊರಿಲ್ಲಾ ಚಾರಣವನ್ನೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಿತು. ‘ನಿಮ್ಮ ಈ ಜೀವಿತ ಅವಧಿಯಲ್ಲಿ ಮೌಂಟನ್ ಗೊರಿಲ್ಲಾಗಳನ್ನು ನೋಡದಿದ್ದರೆ, ಇನ್ನು ಮುಂದೆ ಅದನ್ನು ಎಂದೆಂದೂ ನೋಡಲಾರಿರಿ, ಇಂಥದ್ದೊಂದು ಪ್ರಾಣಿ ಇತ್ತು ಎಂಬುದನ್ನು ನೀವು ನಿಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ಹೇಳಲಾರಿರಿ’ ಎಂದು ಪ್ರಚಾರ ಮಾಡಿತು.

ಇದನ್ನು ಓದಿ: ಟೆಲ್ ಅವಿವ್‌ನ ಗ್ರಾಫಿಟಿ ಕಲೆ

ಪರಿಣಾಮ ಅದ್ಭುತವಾಗಿತ್ತು. ಆಫ್ರಿಕಾ ಖಂಡದಲ್ಲಿ ಹಿಂದುಳಿದ ದೇಶ ಎಂಬ ಮೂದಲಿಕೆಗೆ ಪಾತ್ರವಾಗಿದ್ದ ರವಾಂಡದ ಕಡೆಗೆ ಜನ ನಿಧಾನವಾಗಿ ಮುಖ ಮಾಡಲಾರಂಭಿಸಿದರು. ರವಾಂಡ ಸರಕಾರ ಗೊರಿಲ್ಲಾ ಚಾರಣವನ್ನೇ ತನ್ನ ಪ್ರವಾಸೋದ್ಯಮದ ಕೇಂದ್ರ ಬಿಂದುವಾಗಿ ಮಾಡಿಕೊಂಡಿತು. ಹಾಗೆ ನೋಡಿದರೆ, ಉಗಾಂಡ ಮತ್ತು ಕಾಂಗೋ ದೇಶಗಳು ಹಾಗೇ ಮಾಡಬಹುದಿತ್ತು. ಕಾರಣ ಈ ಮೂರು ದೇಶಗಳ ಗಡಿ ಸೇರುವ ಕಾಡಿನಲ್ಲಿ ಗೊರಿಲ್ಲಾಗಳು ಸಂಚರಿಸುತ್ತವೆ. ಆದರೆ ಉಗಾಂಡ ಮತ್ತು ಕಾಂಗೋ, ಮೌಂಟನ್ ಗೊರಿಲ್ಲಾಗಳನ್ನು ಉಪೇಕ್ಷೆ ಮಾಡಿದವು. ಆದರೆ ರವಾಂಡ, ಈ ಗೊರಿಲ್ಲಾಗಳನ್ನೇ ಬಂಡವಾಳ ಮಾಡಿಕೊಂಡಿತು. ಈ ಪ್ರಾಣಿಗಳಿಗೆ ತನ್ನ ದೇಶವೇ ತವರೂರು ಎಂಬಂತೆ ಪ್ರಚಾರ ಮಾಡಿತು. ಮೌಂಟನ್ ಗೊರಿಲ್ಲಾಗಳನ್ನೇ ತನ್ನ ಪ್ರವಾಸೋದ್ಯಮದ ಕೇಂದ್ರಬಿಂದುವಾಗಿ ಮಾಡಿಕೊಂಡಿತು.

ಈ ಕ್ಷೇತ್ರವು ದೇಶದ ಪ್ರಮುಖ ವಿದೇಶಿ ವಿನಿಮಯ ಗಳಿಕೆಯ ಮೂಲವಾಗಿದೆ. ಗೊರಿಲ್ಲಾ ಚಾರಣಕ್ಕೆಂದೇ ಜಗತ್ತಿನ ಎಲ್ಲ ಕಡೆಗಳಿಂದ ವರ್ಷಕ್ಕೆ ಲಕ್ಷಾಂತರ ಜನ ಆಗಮಿಸುತ್ತಾರೆ. ಹಾಗೆ ನೋಡಿದರೆ, ಆ ದೇಶದಲ್ಲಿ ನೋಡುವಂಥದ್ದೇನೂ ಇಲ್ಲ. ಹೇಳಿಕೊಳ್ಳುವಂಥ ಪ್ರೇಕ್ಷಣೀಯ ಸ್ಥಳಗಳಿಲ್ಲ. ಆದರೆ ಗೊರಿಲ್ಲಾ ಎಂಬ ‘ದೊಡ್ಡ ಮಂಗ್ಯಾ’ನನ್ನು ತೋರಿಸಿ, ಇಡೀ ದೇಶವನ್ನು ಜಗತ್ತಿನ ಮುಂದೆ ಷೋಕೇಸ್ ಮಾಡಲು ನಿರ್ಧರಿಸಿತು.

ಹಾಗೆ ನೋಡಿದರೆ, ರವಾಂಡ ದೇಶಕ್ಕೆ ಹೋಗಲು ಜನ ಭಯಪಡುತ್ತಿದ್ದರು. ಅದು ಆಫ್ರಿಕಾದ ‘ಕತ್ತಲ ದೇಶ’ ಎಂದು ಕುಖ್ಯಾತವಾಗಿತ್ತು. 1994ರಲ್ಲಿ ಸಂಭವಿಸಿದ ಜನಾಂಗೀಯ ಹತ್ಯಾಕಾಂಡ ಅಲ್ಲಿನ ಇತಿಹಾಸ ಕಂಡ ಅತಿ ಕ್ರೂರ ಸಂಗತಿ. ನೂರು ದಿನಗಳ ಅವಧಿಯಲ್ಲಿ ಹತ್ತು ಲಕ್ಷ ಜನರು ಹತರಾದ ಇದು ಮಾನವ ಚರಿತ್ರೆಯಲ್ಲೇ ಅತ್ಯಂತ ಕರಾಳ ಘಟನೆ. ಹುಟು ಮತ್ತು ಟುಟ್ಸಿ ಎಂಬ ಎರಡು ಸಮುದಾಯಗಳ ಜನ ಪರಸ್ಪರ ಹೊಡೆದಾಡಿಕೊಂಡು ಹತ್ತು ಲಕ್ಷ ಜನರ ಹತ್ಯೆಗೆ ಕಾರಣರಾಗಿದ್ದರು. ರವಾಂಡ ಜಗತ್ತಿಗೆ ಪರಿಚಯವಾಗಿದ್ದು ಹಾಗೆ. ರವಾಂಡ ಹೆಸರನ್ನು ಕೇಳಿದರೆ ಜನ ಬೆಚ್ಚಿಬೀಳುತ್ತಿದ್ದರು. ಇನ್ನು ಆ ದೇಶಕ್ಕೆ ಹೋಗುವ ಮಾತಂತೂ ದೂರವೇ ಉಳಿಯಿತು. ಇದರಿಂದ ದೇಶದ ಆರ್ಥಿಕತೆ ಸಂಪೂರ್ಣವಾಗಿ ಧ್ವಂಸಗೊಂಡಿತು. ಸರಕಾರಿ ಸಂಸ್ಥೆಗಳು ನಾಶಗೊಂಡವು. ಮೂಲಸೌಕರ್ಯಗಳು ಹಾಳಾದವು ಮತ್ತು ಜನರು ಬಡತನದಲ್ಲಿ ಮುಳುಗಿದರು. ಈ ಜಗತ್ತಿನ ಎಲ್ಲ ಕೆಟ್ಟ ಮತ್ತು ಕರಾಳ ಮುಖಗಳಿಗೆ ರವಾಂಡ ಜ್ವಲಂತ ನಿದರ್ಶನ ಎಂಬಂತೆ ನೋಡಲಾಗುತ್ತಿತ್ತು. ಆದರೆ ಪೌಲ್ ಕಗಾಮೆ ಅವರ ನಾಯಕತ್ವದಲ್ಲಿ, ರವಾಂಡ ಸರಕಾರ, ಇಪ್ಪತ್ತೈದು ವರ್ಷಗಳ ಹಿಂದೆ, ಪರಿಸರ ಸ್ನೇಹಿ ಪ್ರವಾಸೋದ್ಯಮವನ್ನು ತನ್ನ ಅಭಿವೃದ್ಧಿ ಯೋಜನೆಯ ಕೇಂದ್ರವನ್ನಾಗಿ ಮಾಡಲು ನಿರ್ಧರಿಸಿತು. ದೇಶಕ್ಕೆ ಅಂಟಿದ ಶಾಪದಿಂದ ಮುಕ್ತವಾಗಬೇಕೆಂದರೆ ಹೊಸ ಚಿಂತನೆ ಅಗತ್ಯವಾಗಿತ್ತು. ಆಗ ಹೊಳೆದಿದ್ದೇ ’ಗೊರಿಲ್ಲಾ ಕೇಂದ್ರಿತ ಪ್ರವಾಸೋದ್ಯಮ’.

Gorilla trekking in rwanda

ಮೌಂಟನ್ ಗೊರಿಲ್ಲಾ ಒಂದು ಅತ್ಯಂತ ಅಪಾಯಕಾರಿ ಪ್ರಾಣಿ ಎಂದೇ ಜನ ನಂಬಿದ್ದರು. ಯಾರೂ ಅದರ ಸುತ್ತ ಸುಳಿಯುತ್ತಿರಲಿಲ್ಲ. 1970ರ ದಶಕದಲ್ಲಿ ಅವುಗಳ ಸಂಖ್ಯೆ ಕೇವಲ 250ಕ್ಕೆ ಕುಸಿದಿತ್ತು. ಅದು ಅಕ್ಷರಶಃ ಅಳಿವಿನ ಅಂಚಿನಲ್ಲಿತ್ತು. ಅದೇ ಸಮಯದಲ್ಲಿ ಡಯಾನ್ ಫಾಸಿಯಂಥ ವಿಜ್ಞಾನಿಗಳು ಅವುಗಳನ್ನು ಅಧ್ಯಯನ ಮಾಡಿ, ಜಗತ್ತಿನ ಗಮನ ಸೆಳೆದರು. 1980ರಲ್ಲಿ ಅಮೆರಿಕದ ಬಿಲ್ ವೆಬರ್ ಮತ್ತು ಎಮಿ ವೆಡರ್ ದಂಪತಿಗಳು ವಿರುಂಗ ರಾಷ್ಟ್ರೀಯ ಉದ್ಯಾನದಲ್ಲಿ ಆಫ್ರಿಕನ್ ವೈಲ್ಡ್‌ಲೈಫ್ ಫೌಂಡೇಶನ್‌ನ ಸಹಾಯದೊಂದಿಗೆ ಮೊದಲ ಅಧಿಕೃತ ಗೊರಿಲ್ಲಾ ಟ್ರೆಕ್ಕಿಂಗ್ ಕಾರ್ಯಕ್ರಮವನ್ನು ಆರಂಭಿಸಿದರು. ಈ ಕಾರ್ಯಕ್ರಮವು ಪ್ರವಾಸಿಗರು ಗೊರಿಲ್ಲಾ ಕುಟುಂಬಗಳನ್ನು ನೋಡಲು ಅವಕಾಶ ಮಾಡಿಕೊಟ್ಟಿತು. ಇದಕ್ಕೆ ಕಟ್ಟುನಿಟ್ಟು ನಿಯಮಗಳನ್ನೂ ರೂಪಿಸಲಾಯಿತು. ಒಂದು ಗುಂಪಿನಲ್ಲಿ ಎಂಟು ಮಂದಿ ಒಂದು ಗಂಟೆಯ ಸಮಯದಲ್ಲಿ ಮತ್ತು ಕನಿಷ್ಠ ಏಳು ಮೀಟರ್ ಅಂತರದಲ್ಲಿ ಗೊರಿಲ್ಲಾಗಳನ್ನು ನೋಡಬಹುದು ಎಂದು ನಿಯಮ ರೂಪಿಸಿತು. ಇದು ಗೊರಿಲ್ಲಾ ಸಂರಕ್ಷಣೆಗೆ ಆರ್ಥಿಕ ಬೆಂಬಲ ನೀಡಿತು. ಇದರಿಂದ ಗೊರಿಲ್ಲಾಗಳನ್ನು ಸಾಯಿಸುವ, ಬೇಟೆಯಾಡುವ ಪ್ರವೃತ್ತಿ ಕಮ್ಮಿಯಾಯಿತು ಮತ್ತು ಅರಣ್ಯ ನಾಶವನ್ನು ಕಡಿಮೆ ಮಾಡಿತು.

2005ರಲ್ಲಿ, ರವಾಂಡ ಸರಕಾರವು ಗೊರಿಲ್ಲಾ ಟ್ರೆಕ್ಕಿಂಗ್ ಪರ್ಮಿಟ್ ಶುಲ್ಕವನ್ನು ಐನೂರು ಡಾಲರ್‌ಗೆ ನಿಗದಿ ಮಾಡಿತು. 2017ರಲ್ಲಿ ಅದನ್ನು 1500 ಡಾಲರ್‌ಗೆ ಹೆಚ್ಚಿಸಿತು. ಇದು ಉನ್ನತ ಮಟ್ಟದ ಪ್ರವಾಸಿಗರನ್ನು ಆಕರ್ಷಿಸಿತು ಮತ್ತು ಆದಾಯವನ್ನು ಹೆಚ್ಚಿಸಿತು. 2025ರಲ್ಲಿ, ಈ ಮಾದರಿಯು ರವಾಂಡವನ್ನು ಸುಸ್ಥಿರ ಪ್ರವಾಸೋದ್ಯಮದ ಆದರ್ಶವಾಗಿ ರೂಪಿಸಿತು. ವಿರುಂಗ ಅರಣ್ಯಗಳು ಯುನೆಸ್ಕೋ ವಿಶ್ವ ಪರಂಪರೆ ಸ್ಥಳವೆಂದು ಗುರುತಿಸಲಾಯಿತು. ಗೊರಿಲ್ಲಾ ಪರ್ಯಟನವು ರವಾಂಡದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿತು. 2017ರಲ್ಲಿ ಪ್ರವಾಸೋದ್ಯಮ ಆದಾಯ ನಲವತ್ತೆರಡು ದಶಲಕ್ಷ ಡಾಲರ್ ಇದ್ದರೆ, 2023ರಲ್ಲಿ ಅದು 500 ದಶಲಕ್ಷ ಡಾಲರ್ ಮೀರಿತು. 2025ರಲ್ಲಿ ಅದು ಹನ್ನೆರಡು ಪಟ್ಟು ಜಾಸ್ತಿಯಾಗಿದೆ. ಇದರಿಂದ ರವಾಂಡದ ಅಕ್ಕಪಕ್ಕದ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಬರುವವರ ಸಂಖ್ಯೆಯೂ ಜಾಸ್ತಿಯಾಗಿದೆ. ವೋಲ್ಕೇನೋಸ್ ನ್ಯಾಷನಲ್ ಪಾರ್ಕ್‌ಗೆ ಪ್ರವಾಸಿಗರ ಸಂಖ್ಯೆ ಕಳೆದ ಐದು ವರ್ಷಗಳಲ್ಲಿ ಶೇ.ಐವತ್ತರಷ್ಟು ಹೆಚ್ಚಾಗಿದ್ದು, ಆದಾಯವು ದ್ವಿಗುಣಗೊಂಡಿದೆ. ಇದು ದೇಶದ ಜಿಡಿಪಿ ಶೇ.ಹತ್ತರಷ್ಟು ಜಾಸ್ತಿಯಾಗಲು ಕಾರಣವಾಗಿದೆ. ಚಹಾ ಮತ್ತು ಕಾಫಿ ನಂತರ ಪ್ರವಾಸೋದ್ಯಮ ಇಲ್ಲಿನ ಮೂರನೇ ದೊಡ್ಡ ಆದಾಯ ಮೂಲವಾಗಿದೆ.

ಗೊರಿಲ್ಲಾ ಪ್ರವಾಸೋದ್ಯಮ ಸಂರಕ್ಷಣೆಯನ್ನು ಗಟ್ಟಿಗೊಳಿಸಿದೆ. 1980ರ ದಶಕದಲ್ಲಿ ಅಳಿವಿನ ಅಂಚಿನಲ್ಲಿದ್ದ ಗೊರಿಲ್ಲಾಗಳ ಸಂಖ್ಯೆ ಇಂದು ಒಂದು ಸಾವಿರವನ್ನು ಮೀರಿದೆ. ಗೊರಿಲ್ಲಾಗಳಿಂದಾಗಿ ರಾಷ್ಟ್ರೀಯ ಉದ್ಯಾನವನವು ಮತ್ತಷ್ಟು ವಿಸ್ತಾರಗೊಂಡಿದೆ. ಕಾಡಿನ ಸುತ್ತಮುತ್ತ ವಾಸಿಸುವ ಆದಿವಾಸಿಗಳು ಗೊರಿಲ್ಲಾ ಸಂರಕ್ಷಣೆ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಆದಾಯದಲ್ಲೂ ಗಣನೆಯ ಹೆಚ್ಚಳ ಕಂಡಿದೆ. ಒಂದು ಕಾಲಕ್ಕೆ ಗೊರಿಲ್ಲಾಗಳನ್ನು ಬೇಟೆಯಾಡಿ ಸಾಯಿಸುತ್ತಿದ್ದ ಆದಿವಾಸಿಗಳು ಇಂದು ಗೊರಿಲ್ಲಾಗಳ ಸಂರಕ್ಷಣೆಗೆ ಪಣ ತೊಟ್ಟಿದ್ದಾರೆ. ಗೊರಿಲ್ಲಾಗಳಿಂದ ರವಾಂಡ ಜಗತ್ತಿಗೆ ಪರಿಚಯವಾಗಿದೆ. ಇದರಿಂದ ರವಾಂಡದ ಮೂಲ ಸೌಕರ್ಯ ಅಭಿವೃದ್ಧಿಯಾಗಿದೆ.

Gorillas in Rwanda

ಆ ದೇಶದ ರಾಜಧಾನಿ ಕಿಗಾಲಿಯಲ್ಲಿ ಕಳೆದ ಇಪ್ಪತ್ತು ವರ್ಷಗಳಲ್ಲಿ ಹತ್ತಾರು ಪಂಚತಾರಾ ಹೊಟೇಲುಗಳು ತಲೆಯೆತ್ತಿವೆ. ದೇಶದ ಉದ್ದಗಲಕ್ಕೆ ರಸ್ತೆಗಳು ಸುಧಾರಿಸಿವೆ. ರವಾಂಡದಲ್ಲಿ ಬಂಡವಾಳ ತೊಡಗಿಸಲು ಜನ ಮುಂದೆ ಬರುತ್ತಿದ್ದಾರೆ. ರವಾಂಡದ ಮಾದರಿಯನ್ನು ವಿಶ್ವದಾದ್ಯಂತ ಪ್ರಶಂಸಿಸಲಾಗುತ್ತಿದೆ. ಗೊರಿಲ್ಲಾ ಪ್ರವಾಸೋದ್ಯಮ ದೇಶದಲ್ಲಿ ಉದ್ಯೋಗ ಸೃಷ್ಟಿಗೆ ಕಾರಣವಾಗಿದೆ. ಗೊರಿಲ್ಲಾ ಚಾರಣದಿಂದ ಸುಮಾರು ಇಪ್ಪತ್ತೈದು ಸಾವಿರ ಮಂದಿ ನೇರ ಉದ್ಯೋಗಗಳನ್ನು ಪಡೆದಿದ್ದಾರೆ. ಪಾರ್ಕ್ ರೇಂಜರ್‌ಗಳು, ಟ್ರ್ಯಾಕರ್‌ಗಳು, ಗೈಡ್‌ಗಳು, ಹೊಟೇಲ್ ಸಿಬ್ಬಂದಿ, ಗೈಡ್‌ಗಳು, ಪರೋಕ್ಷವಾಗಿ, ಸಾರಿಗೆ, ಕೈಗಾರಿಕೆ ಮತ್ತು ಆಹಾರ ಸರಬರಾಜುಗಳಲ್ಲಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಿವೆ. ಗೊರಿಲ್ಲಾ ಚಾರಣದಲ್ಲಿ ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಐಷಾರಾಮಿ ಲಾಡ್ಜ್‌ಗಳಾದ ಒನ್ ಅಂಡ್ ಒನ್ಲಿ ಗೊರಿಲ್ಲಾಸ್ ನೆಸ್ಟ್ ಮತ್ತು ಸಿಂಗಿಟಾ ಕ್ವಿಟೊಂಡಾ ಸ್ಥಳೀಯರಿಗೆ ಅವಕಾಶ ನೀಡುತ್ತಿವೆ.

ಪ್ರತಿ ವರ್ಷ ರವಾಂಡ ಸರಕಾರ ಗೊರಿಲ್ಲಾ ನಾಮಕರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಇದಕ್ಕೆ ‘ಕ್ವಿಟಾ ಇಜಿನಾ’ ಅಂತಾರೆ. ಹಾಲಿವುಡ್ ಸಿನಿಮಾ ನಟ-ನಟಿಯರನ್ನು ಆಮಂತ್ರಿಸಿ, ಆಯಾ ವರ್ಷ ಹುಟ್ಟಿದ ಗೊರಿಲ್ಲಾ ಮರಿಗಳಿಗೆ ನಾಮಕರಣ ಮಾಡುವ ಕಾರ್ಯಕ್ರಮವಿದು. ಅಮಿತಾಬ್ ಬಚ್ಚನ್ ಮತ್ತು ಐಶ್ವರ್ಯ ರೈ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದು ರವಾಂಡದ ಕಡೆಗೆ ಜಗತ್ತಿನ ಗಮನ ಸೆಳೆಯುವಲ್ಲಿ ಮಹತ್ವದ ಪಾತ್ರವನ್ನು ವಹಿಸುವಂತೆ ಮಾಡಿದೆ. ಇದು ಗೊರಿಲ್ಲಾ ಸಂರಕ್ಷಣೆಯನ್ನು ಸಾಂಸ್ಕೃತಿಕ ಘಟನೆಯಾಗಿ ಮಾಡುವಲ್ಲಿ ಯಶಸ್ವಿಯಾಗಿದೆ. ಗೊರಿಲ್ಲಾ ಪರ್ಯಟನವು ಸಮುದಾಯಗಳನ್ನು ಬದಲಾಯಿಸಿದೆ. ಗೊರಿಲ್ಲಾಗಳನ್ನು ಸಾಯಿಸುವವರು ಇಂದು ಅದರ ರಕ್ಷಕರಾಗಿದ್ದಾರೆ. ಹಿಂದಿನ ದಿನಗಳಲ್ಲಿ ಅರಣ್ಯ ನಾಶ ಮಾಡುತ್ತಿದ್ದ ಸ್ಥಳೀಯರು, ಇಂದು ಎಕೋ-ಲಾಡ್ಜ್‌ಗಳನ್ನು ನಿರ್ವಹಿಸಲು ಮುಂದಾಗಿದ್ದಾರೆ. ಸಬಿನ್ಯೋ ಕಮ್ಯುನಿಟಿ ಲೈವ್‌ಲಿಹುಡ್ಸ್ ಅಸೋಸಿಯೇಷನ್‌ನಂಥ ಸಂಸ್ಥೆಗಳು ಆದಾಯದ ಭಾಗವನ್ನು ಸಮುದಾಯಕ್ಕೆ ನೀಡುತ್ತಿವೆ. ಇದರಿಂದ ಬಡತನ ಗಣನೀಯವಾಗಿ ಕಮ್ಮಿಯಾಗಿದೆ. ಗೊರಿಲ್ಲಾ ಪ್ರವಾಸೋದ್ಯಮವು ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ಮಟ್ಟವನ್ನು ಹೆಚ್ಚಿಸಿದೆ. ಮಹಿಳೆಯರಿಗೆ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಿದೆ.

Kwita Iziana in Rwanda

ಈ ಗೊರಿಲ್ಲಾ ಎಂಬ ವಾನರನಿಂದ ರವಾಂಡದ ಕಿಗಾಲಿ ವಿಮಾನ ನಿಲ್ದಾಣ ವಿಸ್ತರಣೆಯಾಗಿದೆ. ಅದ್ಭುತವೆನಿಸುವ ರಸ್ತೆಗಳ ನಿರ್ಮಾಣವಾಗಿದೆ. ಆ ದೇಶದ ಅಧ್ಯಕ್ಷ ಕಗಾಮೆ ’ರವಾಂಡವನ್ನು ಸಿಂಗಾಪುರ ಮಾಡುತ್ತೇನೆ’ ಎಂದು ಘೋಷಿಸುವಂತಾಗಿದೆ. ಇವೆಲ್ಲವೂ ಗೊರಿಲ್ಲಾಗಳಿಂದ ಸಾಧ್ಯವಾಗಿದ್ದು ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಮೌಂಟನ್ ಗೊರಿಲ್ಲಾ ಪ್ರವಾಸೋದ್ಯಮವು ರವಾಂಡದ ಅಂತಾರಾಷ್ಟ್ರೀಯ ಚಿತ್ರಣವನ್ನು ಬದಲಾಯಿಸಲು ಸಹಾಯ ಮಾಡಿದೆ. ರವಾಂಡವು ಆಫ್ರಿಕಾದಲ್ಲಿ ಸುಸ್ಥಿರ ಪ್ರವಾಸೋದ್ಯಮದ ನಾಯಕವಾಗಿ ಹೊರಹೊಮ್ಮಿದೆ. ಗೊರಿಲ್ಲಾಗಳು ದೇಶದ ಪ್ರಗತಿಯ ಚಹರೆಯನ್ನೇ ಬದಲಿಸಿದೆ. ಅಳಿವಿನಂಚಿನಲ್ಲಿರುವ ಈ ಪ್ರಾಣಿಗಳನ್ನು ರಕ್ಷಿಸುವ ರವಾಂಡದ ಬದ್ಧತೆಯು ಕೇವಲ ಪರಿಸರ ಲಾಭವನ್ನು ತಂದಿಲ್ಲ, ಬದಲಾಗಿ ವಿದೇಶಿ ವಿನಿಮಯವನ್ನು ಗಳಿಸಲು, ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ಸ್ಥಳೀಯ ಸಮುದಾಯಗಳ ಜೀವನ ಮಟ್ಟವನ್ನು ಸುಧಾರಿಸಲು ಸಹಾಯ ಮಾಡಿದೆ. ಈ ‘ಗೊರಿಲ್ಲಾ ಅರ್ಥಶಾಸ್ತ್ರ’ ಮಾದರಿಯು ಜಗತ್ತಿನ ಇತರ ರಾಷ್ಟ್ರಗಳಿಗೆ ಒಂದು ಯಶಸ್ವಿ ಉದಾಹರಣೆಯಾಗಿದೆ. ಮೌಂಟನ್ ಗೊರಿಲ್ಲಾಗಳು ಕೇವಲ ವನ್ಯಜೀವಿಗಳಾಗಿ ಉಳಿದಿಲ್ಲ, ಅವು ರವಾಂಡ ದೇಶದ ರಾಷ್ಟ್ರೀಯ ಹೆಮ್ಮೆ, ಆರ್ಥಿಕ ನೀತಿ ಮತ್ತು ಜಾಗತಿಕ ಇಮೇಜ್‌ ಅನ್ನು ನಿರ್ಧರಿಸುವ ಪ್ರಮುಖ ಶಕ್ತಿಯಾಗಿ ಮಾರ್ಪಟ್ಟಿವೆ. ರವಾಂಡವು ಮೌಂಟನ್ ಗೊರಿಲ್ಲಾವನ್ನು ತನ್ನ ದೇಶದ ಆತ್ಮವನ್ನಾಗಿ ಮಾಡಿಕೊಂಡು, ವಿನಾಶದಿಂದ ಹೊಸ ಮನ್ವಂತರಕ್ಕೆ ಕಾರಣವಾಗಿದೆ. ಇದು ಪ್ರಕೃತಿ ಮತ್ತು ಮಾನವನ ಸಹಬಾಳ್ವೆಯ ಕಥೆ, ಇತರ ದೇಶಗಳಿಗೆ ಪಾಠ. ಒಂದು ಪ್ರಾಣಿಯ ಮೂಲಕ ದೇಶ ಕಟ್ಟುವುದು ಹೇಗೆ ಎಂಬುದನ್ನು ರವಾಂಡ ತೋರಿಸಿಕೊಟ್ಟಿದೆ.

Vishweshwar Bhat

Vishweshwar Bhat

Editor in Chief

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?