-ಅಂಜಲಿ ರಾಮಣ್ಣ

ಮಾರುಕಟ್ಟೆ ಎಂದಾಕ್ಷಣ ಮನಸಿನ ತುಂಬೆಲ್ಲಾ ಶಾಪಿಂಗ್ ಶಾಪಿಂಗ್ ಎನ್ನುವ ರಿಂಗಣ. ನವರಸಗಳಿಗೆ ಪೈಪೋಟಿ ನೀಡುವ ಶಾಪಿಂಗ್ ಎನ್ನುವ ದಶರಸವು ವಯಸ್ಸು, ವರ್ಗಭೇದವಿಲ್ಲದೆ ಎಲ್ಲರನ್ನೂ ಆಕರ್ಷಿಸುತ್ತದೆ. ಆದರೆ ಪ್ರವಾಸದಲ್ಲಿ ಖರೀದಾರಿಗೆ ಮೊದಲುಗೊಂಡರೆ ಅದು ಪ್ರವಾಸವಾಗುವುದಿಲ್ಲ ಬರೀ ಪ್ರಯಾಸವಾಗುತ್ತದೆ. ಹಾಗಂತ ಶಾಪಿಂಗ್ ಮಾಡದಿದ್ದರೆ ಶಾಪವಿಮೋಚನೆಯಾಗುವುದಿಲ್ಲ. ಶಾಪಿಂಗ್ ಮಾಡದೇ ಖಾಲಿ ಕೈಲಿ ವಾಪಸ್ ಬಂದ ಪ್ರವಾಸಿಯನ್ನು ಹತ್ತಿರದವರು ಶಪಿಸಿಕೊಳ್ಳದೇ ಇರುವುದಿಲ್ಲ. ಪ್ರವಾಸದಲ್ಲಿ ಶಾಪಿಂಗ್ ಮಾಡುವುದೂ ಒಂದು ಕಲೆ. ದೇಶದೊಳಗಿನ ಸುತ್ತಾಟಕ್ಕೆ ಒಂದಾದರೆ ವಿದೇಶಗಳಲ್ಲಿನ ಓಡಾಟದಲ್ಲಿ ಮತ್ತೊಂದು ಬಗೆ. ಅದರ ಬಗ್ಗೆ ಒಮ್ಮೆ ಮಾತನಾಡಲೇ ಬೇಕಿದೆ.

ಆದರೆ ಮಾರುಕಟ್ಟೆ ಎಂದರೆ ಬರಿಯ ಕೊಡುಕೊಳ್ಳುವಿಕೆಯಲ್ಲ. ಅದೊಂದು ಪರಂಪರೆ. ಕುತೂಹಲಭರಿತ ಇತಿಹಾಸದ ಕುರುಹು. ಪಥಿಕನೊಬ್ಬನ ಸಂಚಾರ ಅಲ್ಲಲ್ಲಿನ ಮಾರುಕಟ್ಟೆಯ ಭೇಟಿಯೊಂದಿಗೇ ಪೂರ್ಣ. ದುಬೈ ಮತ್ತು ಸಿಂಗಾಪುರ್ ದೇಶಗಳ ಝಗಮಗ ಬೆಳಕಿನ ದೊಡ್ಡದೊಡ್ಡ ಮಾಲ್‌ಗಳ ಒಳಗಿನ ಸಿಂಗಾರದ ಸಿರಿಗೆ ಸೋತು ಅದನ್ನೇ ಮಾರುಕಟ್ಟೆ ಎಂದುಕೊಳ್ಳುವುದು ಮಾರುಕಟ್ಟೆ ಎನ್ನುವ ಒಂದು ಸುಂದರ ಜೀವನಾನುಭವವನ್ನು ಸೀಮಿತಗೊಳಿಸಿಬಿಡುತ್ತದೆ. ಹಾಗಾಗಬಾರದು ಎನ್ನುವ ಹೆಬ್ಬಯಕೆಯಿಂದ ಎಲ್ಲಿಯೇ ಪ್ರವಾಸಕ್ಕೆ ಹೋದರೂ ಹುಡುಕಿಕೊಂಡು ಅಲ್ಲಿನ ಸ್ಥಳೀಯ ಮಾರುಕಟ್ಟೆಗೆ ಹೋಗಿ ಬರುತ್ತೇನೆ.

ಇಲ್ಲಿದೆ ಲಿಂಕ್:‌ ವಿದೇಶಿ ಕಾಲೇಜಿಗೆ ಅಪ್ಪ ಅಮ್ಮನ ಅಡ್ಮಿಷನ್ ಮಾಡಿಸೋ ಪ್ರವಾಸ!

ಅಂಡಮಾನಿನ ರಾಧಾ ಬೀಚ್ ಬಳಿಯ ಓಣಿಯೊಂದರ ಚೌಕಾಕಾರದ ಸ್ಥಳದಲ್ಲಿ ಬೆಂಗಾಲಿ ಜನರು ನಡೆಸುವ ಹಣ್ಣು, ತರಕಾರಿ, ಮೀನು ಮಾಂಸದ ಮಾರುಕಟ್ಟೆಯೊಂದಿದೆ. ಅಗಲ ಕೆಂಪಿನ ಕುಂಕುಮ, ಬಿಗಿದ ತುರುಬು, ಗುಂಡು ಕಣ್ಣಿನ ಗೀತಾ ಸಿಕ್ಕಿದ್ದು ಅಲ್ಲಿ. ಅವಳದ್ದು ಅಲ್ಲಿ ಐದನೆಯ ತಲೆಮಾರು. ಅವಳ ಮುತ್ತಜ್ಜನ ತಾತ ಹೊಟ್ಟೆಪಾಡಿಗಾಗಿ ಸೆಣಬಿನ ಹಗ್ಗವನ್ನು ಇಲ್ಲಿನ ಮೀನುಗಾರರಿಗೆ ಮಾರಾಟ ಮಾಡಲು ಬಂದವ. ಆನಂತರ ಇಲ್ಲಿಯೇ ನೆಲೆನಿಂತು ತನ್ನ ಸಮುದಾಯದ ಜನರನ್ನು ಒಬ್ಬೊಬ್ಬರನ್ನಾಗಿ ಕರೆಸಿಕೊಂಡು ಈ ಮಾರುಕಟ್ಟೆಯನ್ನು ಇಂದು ಬೆಂಗಾಲಿ ಜನರು ಮಾತ್ರ ನಡೆಸುವಂತೆ ಮಾಡಿ ಅಂಡಮಾನಿನ ಆರ್ಥಿಕತೆಗೆ ಅನಿವಾರ್ಯ ಎನ್ನುವಷ್ಟರ ಮಟ್ಟಿಗೆ ತಂದು ನಿಲ್ಲಿಸಿದ್ದಾನೆ. ಈ ಯಶೋಗಾಥೆ ವಾಹ್ ರೆ ವಾಹ್ ಅನಿಸದೆ ಇರದು.

Shop Local, Travel Deeper

ಕತಾರ್ ದೇಶದ ರಾಜಧಾನಿ ದೋಹಾದಲ್ಲಿ ಇರುವ ಸೋಕ್ ವಾಕಿಫ್ ಮಾರುಕಟ್ಟೆಗೆ ಈಗ 200ಕ್ಕೂ ಹೆಚ್ಚಿನ ವಯಸ್ಸು. ವಾದಿ ಮುಷರಿಬ್ ನದಿಯ ದಂಡೆಯ ಮೇಲೆ ಸ್ಥಾಪಿತಗೊಂಡಿರುವ ಈ ಮಾರುಕಟ್ಟೆ ಮುತ್ತುಗಳ, ಒಂಟೆ, ಕುರಿಗಳ ವ್ಯಾಪಾರಕ್ಕೆ ನೆಚ್ಚಿನ ತಾಣವಾಗಿತ್ತು. ನಂತರದ ದಿನಗಳಲ್ಲಿ ಒಂದೊಂದೇ ಹೆಜ್ಜೆ ಊರುತ್ತಾ ಬ್ರಹ್ಮಾಂಡದಲ್ಲಿ ಇರುವ ಎಲ್ಲಾ ಸಾಮಾನುಗಳು ಇಲ್ಲಿ ಮನೆ ಮಾಡಿಕೊಂಡಿವೆ. ಪ್ರಪಂಚದ ಅತ್ಯಂತ ದುಬಾರಿ ಹೊಟೇಲ್‌ಗಳಲ್ಲಿ ಒಂದು ಎನಿಸಿಕೊಂಡಿರುವ ಫರೀಜಾ ಕೂಡ ಇಲ್ಲಿಯೇ ಇರುವುದು.

ಮಾರುಕಟ್ಟೆಯ ಪ್ರವೇಶ ಪ್ರಾಂಗಣದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ವರ್ಷಕ್ಕೊಮ್ಮೆ ಮೇಳ ನಡೆಯುತ್ತದೆ. ಉದ್ಯೋಗ ಬಯಸುವ ಯುವಕರಿಂದ ಆರಂಭವಾಗಿ ನಾಲಗೆಯ ರುಚಿಮೊಗ್ಗುಗಳ ತಣಿಯುವಿಕೆಯವರೆಗೂ ಎಲ್ಲವೂ ಇಲ್ಲಿದೆ. ಎಲ್ಲಾ ಕ್ಷೇತ್ರದ ಕಲಾವಿದರ ಹಪಾಹಪಿಯ ಪ್ರದರ್ಶನದಿಂದ ಶುರುವಿಟ್ಟು, ಕೊಳ್ಳಾಟಾಸಕ್ತರ ಮನತಣಿಯುವಷ್ಟು ಎಲ್ಲವೂ ಲಭ್ಯವಿರುತ್ತದೆ ಈ ಮೇಳದಲ್ಲಿ. ಅರಬ್ ಕವಿತೆಗಳ ವಾಚನ, ಜೀವನ ಕೌಶಲ್ಯ ತರಬೇತಿ, ಅರಬ್ ಭಾಷಾ ಕಲಿಕೆ, ವಿವಿಧ ವಿಷಯಗಳ ಪುಸ್ತಕ ಮಾರಾಟ ಎಲ್ಲವೂ ನಡೆಯುತ್ತದೆ. 1000 ಜನ ವೀಕ್ಷಕರಿಗೆ ಒಟ್ಟಿಗೆ ನಾಟಕ ಮತ್ತು ಸಿನಿಮಾ ತೋರುವ ರಾಯನ್ ಸಭಾಂಗಣ ಮತ್ತು ರಾತ್ರಿಯ ಹೊತ್ತು ಪೂರ್ತಿ ಮಾರುಕಟ್ಟೆಗಾಗುವ ದೀಪಾಲಂಕಾರವನ್ನು ಪ್ರವಾಸಿಗರು ತಪ್ಪದೆ ನೋಡಲೇಬೇಕು.

From Streets to Stalls_ How Local Markets Teach You More Than Guidebooks

ಯುರೋಪ್ ಮತ್ತು ಅಮೆರಿಕಗಳಲ್ಲಿ Flee Market ಎನ್ನುವ ಪರಿಕಲ್ಪನೆ ಬಹಳ ಚೆಂದ. ಯಾರು ಬೇಕಾದರೂ ಆ ದಿನ ತಮಗೆ ಬೇಕಾದ ಯಾವುದೇ ವಸ್ತುವನ್ನು ಅವರದ್ದೇ ದರಕ್ಕೆ ಅಲ್ಲಿ ಮಾರಾಟ ಮಾಡಬಹುದು. ರೈತರ ಮಾರುಕಟ್ಟೆ ಎನ್ನುವ ನಮ್ಮಲ್ಲಿನ ಸಂತೆಗೆ ಹೋಲಿಕೆಯಿರುವಂಥ ಮಾರುಕಟ್ಟೆ ನಡೆಯುತ್ತದೆ. ಅಲ್ಲಿನ ಸ್ವಚ್ಛತೆ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಅಂಥ ಒಂದು ಚೆಂದದ ಮಾರುಕಟ್ಟೆ ಕೇಂಬ್ರಿಜ್‌ನಲ್ಲಿದೆ. ಈ ಜನರಲ್ ಮಾರುಕಟ್ಟೆಯ ವಿಶೇಷ ಎಂದರೆ ಪ್ರಪಂಚದಲ್ಲಿ ಎಲ್ಲಿಯೇ ಓದುತ್ತಿರುವ ವಿದ್ಯಾರ್ಥಿಗೂ ಕಡಿಮೆ ದರದಲ್ಲಿ ಸಾಮಾನುಗಳನ್ನು ಮಾರಾಟ ಮಾಡಲಾಗುತ್ತದೆ. ಅಲ್ಲಿ ಮಾರಾಟಗಾರರು ಖರೀದಿದಾರರೊಂದಿಗೆ ಸಾಕಷ್ಟು ಸಮಯ ವ್ಯಯಿಸಿ ಫೊಟೋ ತೆಗೆಸಿಕೊಳ್ಳುತ್ತಾರೆ. ‘ಅಯ್ಯೋ ಎಷ್ಟೊಂದು ಟೈಮ್ ವೇಸ್ಟ್ ಆಗುತ್ತಲ್ಲ’ ಎಂದು ಕೇಳಿದಾಗ, 45 ವರ್ಷಗಳಿಂದ ಅಲ್ಲಿ ಉಣ್ಣೆಬಟ್ಟೆಗಳ ವ್ಯಾಪಾರ ಮಾಡುತ್ತಿರುವ 65 ವರ್ಷ ವಯಸ್ಸಿನ ಡೇವಿಡ್ ಹೇಳಿದ್ದು ‘ಹೊಸ ಹುಟ್ಟಿನೆಡೆಗೆ ಭರವಸೆಯಿಂದ ಎದುರು ನೋಡುವುದು, ಸಂತೋಷ ಹಂಚಿಕೊಳ್ಳುವುದು ಇವಿಷ್ಟೇ ಮನುಷ್ಯನ ನಿಜವಾದ ಗುಣ’! ಹೀಗೆ ಮಾರುಕಟ್ಟೆ ಸುತ್ತಾಟದಲ್ಲಿ ಪ್ರವರ್ತಕರೂ ಸಿಗುತ್ತಾರೆ.

ನಮ್ಮ ದೇಶದ ಈಶಾನ್ಯ ರಾಜ್ಯಗಳಲ್ಲಿನ ಮಹಿಳಾ ಮಾರುಕಟ್ಟೆ ಜಗತ್ಪ್ರಸಿದ್ಧ. ಮಾತೃಪ್ರಧಾನ ವ್ಯವಸ್ಥೆಯುಳ್ಳ ಅಲ್ಲಿನ ಸಮುದಾಯದಲ್ಲಿ ಮಹಿಳೆಯರೇ ದುಡಿಯುವವರು, ಸಂಸಾರ ತೂಗಿಸುವವರು. ಮೇಘಾಲಯದ ಚಿರಾಪುಂಜಿಯಲ್ಲಿರುವ ಐವ್ ಸೋಹ್ರಾ ಮಾರುಕಟ್ಟೆ ಒಂದು ಮಾಂತ್ರಿಕವಾದ ಜಾಗ. ಇಲ್ಲಿ ನಡೆಯುವ ವಿನಿಮಯವೆಲ್ಲಾ ಒಂದು ಸಾಮುದಾಯಿಕ ಸಂಭ್ರಮ.

ಇಲ್ಲಿ ಎರಡು ರೀತಿಯ ಮಾರುಕಟ್ಟೆಗಳಿವೆ. ‘Iewbah’ ದೊಡ್ಡ ಮಾರುಕಟ್ಟೆ. ‘Iewrit’ ಸಣ್ಣ ಮಾರುಕಟ್ಟೆ. ದೊಡ್ಡ ಮಾರುಕಟ್ಟೆಯನ್ನು ಪ್ರತೀ ಎಂಟು ದಿನಗಳಿಗೊಮ್ಮೆ ನಡೆಸಲಾಗುತ್ತದೆ. ಇಂದಿನ ಮಾರುಕಟ್ಟೆಯ ದಿನ ಸೋಮವಾರವಿದ್ದರೆ ಮುಂದಿನದ್ದು ಮಂಗಳವಾರ ಇರುತ್ತದೆ. ಕ್ರಿಶ್ಚಿಯನ್ ಧರ್ಮದ ಅನುಯಾಯಿಗಳು ಹೆಚ್ಚಿದಂತೆ ಮಾರುಕಟ್ಟೆಯು ಭಾನುವಾರದಂದು ಬಂದರೆ ಅದರ ಹಿಂದಿನ ದಿನ ಶನಿವಾರವೇ ಅದನ್ನು ನಡೆಸಲಾಗುತ್ತದೆ. ಸಣ್ಣ ಮಾರುಕಟ್ಟೆ ‘Iewrit’ ಅನ್ನು ದೊಡ್ಡ Iewbah ನಡೆದ ನಾಲ್ಕನೆಯ ದಿನ ತೆರೆಯಲಾಗುತ್ತದೆ. ಮಾರುಕಟ್ಟೆಯ ದಿನಗಳು ಮೊದಲೇ ನಿಗದಿಯಾಗಿ ಕ್ಯಾಲೆಂಡರ್‌ನಲ್ಲಿ ಅಚ್ಚಾಗಿರುತ್ತದೆ. ಸೋಹ್ರಾ (ಚಿರಾಪುಂಜಿ) ಜಿಲ್ಲೆಯ ಮುಖ್ಯಸ್ಥ ’ಸೈಯಮ್’ ಮಾರುಕಟ್ಟೆ ಸ್ಥಳದ ನಿರ್ವಹಣೆಗಾಗಿ ಪ್ರತಿ ಮಾರಾಟಗಾರರಿಂದ ತೆರಿಗೆ ಪಡೆಯುತ್ತಾನೆ. ಇಲ್ಲಿ ಬರೀ ವಸ್ತುಗಳ ವ್ಯಾಪಾರವಲ್ಲ, ಮದುವೆ ಮಾತುಕತೆಯೂ ನಡೆಯುತ್ತದೆ. ಮಾರುಕಟ್ಟೆಯ ಮಾಂಸದ ವಿಭಾಗವನ್ನು ಗಂಡಸರು ನೋಡಿಕೊಂಡರೆ ಉಳಿದ ವ್ಯಾಪಾರಗಳನ್ನು ಪೂರ್ತಿ ಹೆಂಗಸರು ಮಾಡುತ್ತಾರೆ.

Every Market Has a Story_ Why Shopping Is an Essential Part of Travel

ಜಪಾನ್ ದೇಶದಲ್ಲಿ ಪ್ರತಿ ಮಾರುಕಟ್ಟೆಯೂ ವಿಶೇಷವೇ ಏಕೆಂದರೆ ಪ್ರವಾಸಿಗರು ಹೋಗುವ ಒಂದು ಜಾಗದಲ್ಲಿ ಸಿಗುವ ಸಾಮಾನುಗಳು ಮತ್ತೊಂದು ಜಾಗದಲ್ಲಿ ಸಿಗುವುದಿಲ್ಲ ಅಷ್ಟರಮಟ್ಟಿಗಿನ ಗಳಿಕಾ ಸಮಾನತೆ ವ್ಯಾಪಾರಿಗಳಿಗೆ ಸಿಗುವಂತೆ ಮಾಡಿದ್ದಾರೆ. ಹಾಗಾಗಿ ಎಲ್ಲಿಯಾದರೂ ಏನನ್ನಾದರೂ ತೆಗೆದುಕೊಳ್ಳಬೇಕು ಅನಿಸಿದರೆ ಕೊಂಡುಕೊಂಡು ಬಿಡಬೇಕು ಯಾಕೆಂದರೆ ಮುಂದೆ ಅಂಥದ್ದು ಸಿಗುವುದಿಲ್ಲ. ತಿನಿಸು, ಸಾಮಾನುಗಳು ಎಲ್ಲಕ್ಕೂ ಸ್ಥಳೀಯತೆಯ ಕವಚ ಹಾಕಲಾಗಿದೆ.

ಜಪಾನಿನ ಮೌಂಟ್ ಫುಜಿಗೆ ಹೋಗುವ ತಪ್ಪಲು ನಿಲ್ದಾಣದಲ್ಲಿ Owakudani Kurotamagokan ಎನ್ನುವ ಎರಡಂತಸ್ತಿನ ದೊಡ್ಡ ಮಳಿಗೆ ಇದೆ. ಇಲ್ಲಿ ಗಂಧಕಾಮ್ಲದಲ್ಲಿ ಬೇಯಿಸಿದ ಮೊಟ್ಟೆಯು ಕಡುಗಪ್ಪು ಬಣ್ಣದಲ್ಲಿ ಮಾರಾಟಕ್ಕಿದೆ. ಜಗತ್ತಿನಲ್ಲಿ ಮತ್ತೆಲ್ಲಿಯೂ ಸಿಗದ ಕಪ್ಪುಮೊಟ್ಟೆ ಇಲ್ಲಿನ ವಿಶೇಷ.

ಡೆಹರಾಡೂನಿನಲ್ಲಿ ಪಾದಚಾರಿಗಳ ನಡುವಿನಲ್ಲೇ ಹಾದುಹೋಗುವ ಹಳಿಗಳ ಮೇಲೆ ಮಂದಗತಿಯಲ್ಲಿ ಹೋಗುವ ರೈಲಿನಲ್ಲಿ ಒಳಗೇ ಕುಳಿತು ಎರಡೂ ಬದಿಯಲ್ಲಿ ಹಣ್ಣು ತರಕಾರಿ ಮಾರುತ್ತಾ ಕುಳಿತಿರುವವರ ಬಳಿ ಜುಗ್ಗಾಟ ಜಗ್ಗಾಟ ಮಾಡುತ್ತಲೇ ವ್ಯಾಪಾರ ಮಾಡುವ ಅನುಭವ ಪದಗಳಾಚೆಯದ್ದು. ನಮ್ಮಲ್ಲಿ ಇರುವ ಗ್ರಂಧಿಗೆ ಅಂಗಡಿಯ ಮಾದರಿಯಲ್ಲಿ ಇಂಡೋನೇಷಿಯಾದ ಬಾಲಿಯಲ್ಲಿ ಹಿಂದೂಗಳ ಪೂಜೆಗೆ ಬೇಕಾಗುವ ಸಾಮಗ್ರಿಗಳನ್ನಷ್ಟೇ ಮಾರುವ ಮಳಿಗೆಗಳ ಸಾಲು, ಕೌಲಾಲಂಪುರ್ Petaling streetನಲ್ಲಿರುವ ಸೆಂಟ್ರಲ್ ಮಾರ್ಕೆಟ್, ಪೆನಾಂಗ್ ದ್ವೀಪದ ಚೌರಾಸ್ತಾ ಮಾರುಕಟ್ಟೆ, ಜೆರುಸಲೆಂನಲ್ಲಿರುವ ಯಹೂದಿಗಳ ಖಾಸಗಿ ಮಾರುಕಟ್ಟೆ Mahane Yahuda ಅದರ ಪಕ್ಕದಲ್ಲಿಯೇ ಇರುವ ಇಸ್ಲಾಮಿಯರ Al-Bazar ಇವುಗಳನ್ನು ಸಂಬಂಧಪಟ್ಟ ಸರ್ಕಾರಗಳು ಪ್ರವಾಸಿಗರ ಕಡ್ಡಾಯ ಆಕರ್ಷಣೆಯನ್ನಾಗಿ ಯಾಕಾಗಿ ರೂಪಿಸಿಲ್ಲ ಎನ್ನುವುದೇ ಅಚ್ಚರಿ!

ದಲೈಲಾಮ ಅವರಿರುವ ಮೆಕ್ಲಿಯಾಡ್ಗಂಜ್ ಎನ್ನುವ ಪ್ರಶಾಂತವಾದ ಊರಿನಲ್ಲೊಂದು ವಿಚಿತ್ರವಾದ ಮಾರುಕಟ್ಟೆ ಇದೆ. ಯಾರೂ ಕೊಂಡುಕೊಳ್ಳಲು ಸಾಧ್ಯವಿಲ್ಲದಷ್ಟು ತುಟ್ಟಿ ದರದಲ್ಲಿ ಹಳೆಯ ವಿಗ್ರಹಗಳನ್ನು, ಜಪಮಣಿಗಳನ್ನು, ಫೆಂಗ್ ಶೂಗೆ ಸಂಬಂಧಪಟ್ಟ ವಸ್ತುಗಳನ್ನು ಮಾರಾಟ ಮಾಡುವ ಯುವಕ ಯುವತಿಯರ ದೊಡ್ಡ ದಂಡು ಇದೆ. ಇವರುಗಳ ಜೀವನ ನಿರ್ವಹಣೆಗೆ ಚೀನಿಯರೇ ಬೆಂಬಲ ನೀಡುತ್ತಿದ್ದಾರೆ. ಇದು ಭಾರತ ಸರ್ಕಾರಕ್ಕೂ ತಿಳಿದಿರುವ ವಿಷಯ ಎನ್ನುವುದನ್ನು ಅಲ್ಲಿನ ಜನರೇ ಹೇಳುತ್ತಾರೆ. ಹೀಗೆ ಮಾರುಕಟ್ಟೆಗಳು ತೆರೆದ ರಹಸ್ಯಗಳ ದರ್ಶನವನ್ನೂ ಮಾಡಿಸುತ್ತವೆ.