ವಿದೇಶಿ ಕಾಲೇಜಿಗೆ ಅಪ್ಪ ಅಮ್ಮನ ಅಡ್ಮಿಷನ್ ಮಾಡಿಸೋ ಪ್ರವಾಸ!
ಇಷ್ಟೇ ಅಲ್ಲ, ಶಾಲಾ ಕಾಲೇಜುಗಳಲ್ಲಿ ಇರುವಂತೆ ಶೈಕ್ಷಣಿಕ ಪ್ರವಾಸವೂ ಇಲ್ಲಿದೆ. ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಎನ್ನುವ ಶೀರ್ಷಿಕೆಯಲ್ಲಿ ಬೇರೆ ಬೇರೆ ದೇಶಗಳಿಗೆ ಹೋಗಿ ಸಮಾನ ಮನಸ್ಕರೊಂದಿಗೆ ಸಮಯ ಕಳೆಯುವ ಅವಕಾಶವೂ ಇದೆ. ಹೆಚ್ಚಿರುವ ಆರೋಗ್ಯ ಮಟ್ಟವು ಜೀವಿತಾವಧಿಯನ್ನೂ ಅದೇ ಅನುಪಾತದಲ್ಲಿ ವೃದ್ಧಿಸಿಕೊಟ್ಟಿದೆ. ಅದಕ್ಕೇ ಈಗ ವೃದ್ಧರು ಎಂದರೆ ಮುದುಕರಲ್ಲ ಯುವ ಹಿರಿಯರು ಎನ್ನುತ್ತಿದೆ ಜಮಾನ.
- ಅಂಜಲಿ ರಾಮಣ್ಣ
ಒಂದಷ್ಟೇ ವರ್ಷಗಳ ಹಿಂದೆ ಐವತ್ತು ವಯಸ್ಸು ದಾಟಿದ ಹೆಂಗಸು ಗಂಡಸು ವಿದೇಶಕ್ಕೆ ಹೋಗುವುದು ಎಂದರೆ ಅಲ್ಲಿರುವ ಮಗನ ಅಥವಾ ಮಗಳ ನವಜಾತ ಶಿಶುವಿಗೆ ಡೈಪರ್ ಬದಲಿಸುವ ಅಜ್ಜಿಯಾಗಿ ಅಥವಾ ಸಂಜೆಯ ಹೊತ್ತು ಅವರುಗಳ ಅಪಾರ್ಟ್‌ಮೆಂಟಿನ ಪಾರ್ಕಿನಲ್ಲಿ ಹೊತ್ತು ಕಳೆಯಲು ಕುಳಿತುಕೊಳ್ಳುವ ತಾತನಾಗಿ ಎಂದಿತ್ತು. ಆದರೆ ಈಗ ಕಾಲನು ಎಷ್ಟು ಪರಿಭ್ರಮಿಸಿದ್ದಾನೆ ಎಂದರೆ ಯಾವಾಗ ಎಷ್ಟು ಜವಾಬ್ದಾರಿ ತೆಗೆದುಕೊಳ್ಳಬೇಕು ಮತ್ತು ಅದನ್ನು ಯಾವಾಗ ಮುಗಿಸಿ ಮುಕ್ತಮುಕ್ತ ಅಂದುಬಿಡಬೇಕು ಎನ್ನುವುದನ್ನು ಹಿರಿಯರು ಕಂಡುಕೊಂಡಿದ್ದಾರೆ. ಅದಕ್ಕೇ ಈಗ ಬಾಣಂತನ ಮಾತ್ರವಲ್ಲ ಲೈಬ್ರರಿಗಳಲ್ಲಿ ಇಣುಕಲು, ಕಾಲೇಜುಗಳಲ್ಲಿ ಹೊಸಭಾಷೆ ವಿಷಯ ಕಲಿಯಲು ವಿದೇಶದಲ್ಲಿನ ಮಕ್ಕಳ ಮನೆಗೆ ಹೋಗುತ್ತಿದ್ದಾರೆ ಅಪ್ಪ ಅಮ್ಮಂದಿರು.
ಐವತ್ತರ ನಂತರದ ಹರೆಯವನ್ನು Third Age ಎಂದು ನನಗೆ ಪರಿಚಯಿಸಿಕೊಟ್ಟಿದ್ದು ಎಲಿಝಬೆತ್ ಡ್ಯೂರೋ. ಉತ್ತರ ಲಂಡನ್ನಿನ Hampsteadನಲ್ಲಿ ಇಂಥ Third Ageಗಾಗಿ ಒಂದು ವಿಶ್ವವಿದ್ಯಾಲಯವನ್ನೇ ಸಂಚಾಲಕಿಯಾಗಿ ನಿರ್ವಹಿಸುತ್ತಿದ್ದಾಳೆ ಆಕೆ. ಇದು ಬಹುಶಃ ವಯಸ್ಕರ ಶಿಕ್ಷಣ ಸಂಸ್ಥೆ ಇರಬಹುದು ಎನ್ನುವ ಗುಮಾನಿಯೊಂದಿಗೆ ಪ್ರವೇಶಿಸಿದ ನನ್ನ ಮುಂದೆ Senior Citizen Education Tourism ಎನ್ನುವ ಅಚ್ಚರಿಯ ಜಗತ್ತೊಂದು ಅಮೀಬಾದಂತೆ ಹರಡಿಕೊಂಡು ಕುಳಿತಿತ್ತು.
ಇದನ್ನು ಓದಿ: ಭಾಷೆಯೆಂಬುದು ಗಮ್ಯವಲ್ಲ.. ಅದೊಂದು ಸುಮಧುರ ಪ್ರಯಾಣ!
“ಮೊದಲು ಬಾಲ್ಯದ ವಯಸ್ಸು ಆಮೇಲೆ ಕೆಲಸ ವಯಸ್ಸು, ನಂತರದ್ದು ಮೂರನೆಯ ವಯಸ್ಸು. ಇದು ಮಾತ್ರ ಸಂಪೂರ್ಣ ನಮ್ಮದೇ ನೋಡು” ಎಂದು ಮೈಭರ್ತಿ ನಗುತ್ತಾ ಎಲಿಝಬೆತ್ ಅಲ್ಲಿನ ಎಲ್ಲಾ ಚಟುವಟಿಕೆಗಳನ್ನು ಪರಿಚಯಿಸಿದ್ದಳು. ಕೇಂಬ್ರಿಜ್ ವಿಶ್ವವಿದ್ಯಾಲಯದ ಸಹಕಾರದಲ್ಲಿ ಎಲ್ಲರ Third Ageಅನ್ನು ಕನಸಿನ ಲೋಕವನ್ನಾಗಿ ಕಟ್ಟಿಕೊಡಬೇಕು ಎನ್ನುವ ಆಸೆಯಿಂದ ಅವರುಗಳಿಗಾಗಿಯೇ ಕಲಿಕಾ ಕೇಂದ್ರವನ್ನು ನಾಲ್ಕು ದಶಕಗಳ ಹಿಂದೆ ಆರಂಭಿಸಿದ್ದು ಬ್ರಿಯಾನ್ ಗ್ರೂಮ್ ಬ್ರಿಡ್ಜ್ ಎನ್ನುವ ಪದವೀಧರ. ಹೊಣೆಹೊರುವ ವಯಸ್ಸಿನಲ್ಲಿ ತಮ್ಮ ಆಕಾಂಕ್ಷೆಗಳನ್ನು ಬದಿಗೊತ್ತಿ ನಿಂತ ಜೀವಗಳು ಭೂಮಿಯಿಂದ ದೂರಾಗುವ ಮೊದಲೇ ತಮ್ಮ ಇಚ್ಛೆ ಪೂರೈಸಿಕೊಳ್ಳಲು ಇಲ್ಲಿದೆ ಸಕಲ ಅವಕಾಶ. ಕೇವಲ ಒಂದು ವಾರದಷ್ಟೇ ಅವಧಿಯಲ್ಲಿ ಯಾವ ವಿಷಯಕ್ಕೂ ತಮ್ಮನ್ನು ತಾವು ತೆರೆದುಕೊಳ್ಳಬಹುದು ಅಥವಾ ತಿಂಗಳುಗಟ್ಟಲೆ ಓದಿ ಪರೀಕ್ಷೆ ಪಡೆದು ಸರ್ಟಿಫಿಕೇಟ್ ಗಳಿಸಿಕೊಳ್ಳಬೇಕು ಎನ್ನುವ ಆಸೆ ಇದ್ದರೆ ಅದಕ್ಕೂ ಸೈ ಎನ್ನುತ್ತದೆ ಇಲ್ಲಿನ ಪ್ರೋಗ್ರಾಮ್ ಗಳು.
ಇಂಗ್ಲೆಂಡ್ ದೇಶದಲ್ಲಿ ಸದ್ಯಕ್ಕೆ 1200ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಇರುವ ಈ ಸಂಘಟನೆಯಲ್ಲಿ ಪ್ರತಿದಿನವೂ ಸಾವಿರಾರು ನೋಂದಾಯಿಸಿಕೊಂಡ ಹಿರಿಯರು ಸೇರಿ ನೂರೆಪ್ಪತ್ತಕ್ಕೂ ಹೆಚ್ಚಿನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಗೃಹ ವಿನ್ಯಾಸ, ಯೋಗಾಭ್ಯಾಸ, ಇತಿಹಾಸ, ವಿಜ್ಞಾನ, ಭಾಷಾ ಕಲಿಕೆ, ಕಂಪ್ಯೂಟರ್, ನೃತ್ಯ, ಸಿನಿಮಾ ಮಾಡುವುದು- ನೋಡುವುದು, ಸುಮ್ಮನೆ ನಡಿಗೆಯಲ್ಲಿ ತೊಡಗುವುದು, ಕೃಷಿ, ಪರ್ವತಾರೋಹಣ, ರಾಜಕೀಯ ವಿಷಯಗಳ ಚರ್ಚೆ, ಸರ್ಕಾರಕ್ಕೆ ಸಲಹೆಗಳನ್ನು ಕೊಡುವುದು, ಸಂಶೋಧನಾ ಪ್ರಬಂಧಗಳನ್ನು ಮಂಡಿಸುವುದು, ಅಧ್ಯಾತ್ಮ, ಎಕನಾಮಿಕ್ಸ್, ಪ್ರಾಣಿ ಪಾಲನೆಯ ವಿಧಾನಗಳಲ್ಲಿ ಹೆಚ್ಚಿನ ವಿಷಯ ಸಂಪಾದನೆ, ಅಡುಗೆ ರುಚಿ ಶುಚಿ, ಹೀಗೆ ಪದಗಳಿಗೆ ನಿಲುಕದಷ್ಟು ವಿಷಯಗಳಲ್ಲಿ ಹಿರಿಯರು ತೊಡಗಿ ಕೊಳ್ಳುತ್ತಿದ್ದಾರೆ. ಇದಕ್ಕಾಗಿ ಹೆಚ್ಚಿನ ದುಡ್ಡಿನ ಅವಶ್ಯಕತೆಯೂ ಇಲ್ಲ. ಉಳ್ಳವರು ಕೊಡುತ್ತಾರೆ. ಜತೆಯಲ್ಲಿ ಇಲ್ಲದವರು ಕಲಿಯುತ್ತಿದ್ದಾರೆ. ವಯಸ್ಸಾಯಿತು ತಾವು ಯಾವುದಕ್ಕೂ ಪ್ರಯೋಜನಕ್ಕೆ ಬಾರದವರು ಎನ್ನುವ ಸ್ವಯಂ ಹೇವರಿಕೆಯಿಂದ ಹೊರಬಂದು ಬದುಕುವುದನ್ನು ತೋರಿಸಿಕೊಡುತ್ತಿದ್ದಾರೆ.

ಇಷ್ಟೇ ಅಲ್ಲ, ಶಾಲಾ ಕಾಲೇಜುಗಳಲ್ಲಿ ಇರುವಂತೆ ಶೈಕ್ಷಣಿಕ ಪ್ರವಾಸವೂ ಇಲ್ಲಿದೆ. ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಎನ್ನುವ ಶೀರ್ಷಿಕೆಯಲ್ಲಿ ಬೇರೆ ಬೇರೆ ದೇಶಗಳಿಗೆ ಹೋಗಿ ಸಮಾನ ಮನಸ್ಕರೊಂದಿಗೆ ಸಮಯ ಕಳೆಯುವ ಅವಕಾಶವೂ ಇದೆ. ಹೆಚ್ಚಿರುವ ಆರೋಗ್ಯ ಮಟ್ಟವು ಜೀವಿತಾವಧಿಯನ್ನೂ ಅದೇ ಅನುಪಾತದಲ್ಲಿ ವೃದ್ಧಿಸಿಕೊಟ್ಟಿದೆ. ಅದಕ್ಕೇ ಈಗ ವೃದ್ಧರು ಎಂದರೆ ಮುದುಕರಲ್ಲ ಯುವ ಹಿರಿಯರು ಎನ್ನುತ್ತಿದೆ ಜಮಾನ. 80ರ ಹರೆಯದ ಅಜ್ಜಿ SSLC ಪರೀಕ್ಷೆ ಬರೆದಿದ್ದಾಳೆ ಎನ್ನುವುದನ್ನು ಹೆಡ್ ಲೈನ್ ಸುದ್ದಿ ಮಾಡುವ ನಮ್ಮ ದೇಶದಲ್ಲೂ, ನಮ್ಮ ಬೆಂಗಳೂರಿನಲ್ಲೇ ಹಿರಿಯ ನಾಗರಿಕರಿಗಾಗಿ ಇಂಥ ಕಲಿಕಾ ಕೇಂದ್ರವೊಂದು ಕೆಲಸ ಮಾಡುತ್ತಿದೆ. ಜೈನ್ ವಿಶ್ವವಿದ್ಯಾಲಯದಲ್ಲಿ ಅದರ ಬಗ್ಗೆ ಮಾಹಿತಿ ಸಿಗಲಿದೆ. ಆದರೆ ಹೊರದೇಶಗಳಲ್ಲಿ ಇರುವಷ್ಟು ವೈವಿಧ್ಯಮಯವಾದ ಆಯ್ಕೆಗಳು ಇನ್ನೂ ಲಭ್ಯವಿಲ್ಲ.
ಐರ್ಲೆಂಡ್, ಜರ್ಮನಿ, ಯುನೈಟೆಡ್ ಕಿಂಗ್‌ಡಮ್ ಈ ಮೂರುದೇಶಗಳಲ್ಲಿ ನಡೆಯುವ ಹಿರಿಯ ನಾಗರಿಕರ ಕಲಿಕಾ ಕಾರ್ಯಕ್ರಮ ಪ್ರವಾಸೋದ್ಯಮವಾಗಿ ಬೆಳೆದಿದೆ. ವರ್ಷವೊಂದಕ್ಕೆ 1553 ಬಿಲಿಯನ್ ಡಾಲರ್‌ಗಳಷ್ಟು ವಹಿವಾಟು ನಡೆಯುತ್ತಿದ್ದು 2032ರ ವೇಳೆಗೆ ಪ್ರತಿ ವರ್ಷಕ್ಕೆ ಶೇಕಡಾ 13.5 ರಷ್ಟು ಹೆಚ್ಚುವ ಅಂದಾಜು ಮಾಡಲಾಗಿದೆ. ಐವತ್ತು ವಯಸ್ಸು ಮೇಲ್ಪಟ್ಟ ಜಗತ್ತಿನ ಜನಸಂಖ್ಯೆಯಲ್ಲಿ ಶೇಕಡಾ 26ರಷ್ಟು ಹಿರಿಯರು ಕಲಿಕಾ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದಾರೆ ಎನ್ನುತ್ತಿದೆ ಅಂಕಿಅಂಶ. ಸ್ಪೇನ್ ದೇಶದ ಹಿರಿಯರು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರಂತೆ. The World Tourism Organisation (WTO) ಸಂಸ್ಥೆಯು ಹಿರಿಯರ ಕಲಿಕಾ ಕಾರ್ಯಕ್ರಮವನ್ನು ಘೋಷಿತ ಪ್ರವಾಸೋದ್ಯಮವಾಗಿ ಗುರುತಿಸಲು ಮುಂದಾಗಿದೆ.
ಫ್ರಾನ್ಸ್, ಇಟಲಿ, ಚೀನಾ, ಜಪಾನ್ ದೇಶಗಳು ತಮ್ಮಲ್ಲಿಗೆ ಕಲಿಕೆಗಾಗಿ ಬರುವ ಹಿರಿಯರಿಗೆ ಉದ್ದೇಶಿತ ವೀಸಾಗಳನ್ನು ಹೆಚ್ಚಿನ ಪೇಪರ್ ವರ್ಕ್ ಇಲ್ಲದೆ ನೀಡಲು ಮುಂದಾಗಿವೆ. ‘ಇನ್ನೇನು ವಯಸ್ಸಾಯ್ತು ನಮಗ್ಯಾಕೆ ಪಾಸ್ ಪೋರ್ಟ್’ ಎಂದುಕೊಳ್ಳುವ ಕಾಲ ಮುಗಿದುಹೋಗಿದೆ. ಅಂಬಿ ನಿನಗೆ ವಯಸ್ಸಾಯ್ತೋ ಎನ್ನುವುದು ಸಿನೆಮಾ ಹೆಸರಾಗಿ ಮಾತ್ರ ಸೂಕ್ತವೆನಿಸುತ್ತಿದೆ. ವಯಸ್ಸನ್ನು ಮುಂದೂಡಲು ಇರುವ ಏಕೈಕ ಸಾಧನ ಪ್ರವಾಸ ಮತ್ತು ಕಲಿಕೆ ಎನ್ನುವುದೇ ಸತ್ಯ.