Monday, December 8, 2025
Monday, December 8, 2025

ಭಾಷೆಯೆಂಬುದು ಗಮ್ಯವಲ್ಲ.. ಅದೊಂದು ಸುಮಧುರ ಪ್ರಯಾಣ!

ಬೆಂಗಳೂರಿನ ಬಗ್ಗೆ ಕೇವಲ ಕೇಳಿದ್ದ ಆಕೆಗೆ ತಿಳಿದಿರದ ಕನ್ನಡ ಭಾಷೆಯ ಬಗ್ಗೆ ವಿವರಿಸುತ್ತಾ, ‘ಇಲ್ಲಿ ಯಾವುದೇ ರೀತಿಯ ಸೆಕ್ಯುರಿಟಿ ಚೆಕ್ ಇಲ್ಲವಲ್ಲ, ಯಾರೂ ಪುಸ್ತಕಗಳನ್ನು ಕದಿಯುವುದಿಲ್ಲವೇ’ ಎಂದು ಭಾರತೀಯಸಹಜ ಕುತೂಹಲದಿಂದ ಕೇಳಿದೆ. ಅದಕ್ಕವಳು ತೆಳುವಾಗಿ ನಗುತ್ತಾ ಅಷ್ಟೇ ಮೃದು ದನಿಯಲ್ಲಿ ‘ಪುಸ್ತಕ ಓದುವವನ ಮನಸ್ಸು ಎಂದೂ ಕೆಡುಕಿನ ಬಗ್ಗೆ ಯೋಚಿಸದು’ ಎಂದಳು.

-ಅಂಜಲಿ ರಾಮಣ್ಣ

ಪುಸ್ತಕಗಳು ನಾಗರೀಕತೆಯ ಮಿತಿ ತೋರಿಸಿದರೆ ಪುಸ್ತಕ ಮಳಿಗೆಗಳು ಅದೇ ನಾಗರೀಕತೆಯ ಸಭ್ಯತೆಯ ಎಲ್ಲೆಯನ್ನು ತೆರೆದಿಡುತ್ತವೆ. ಮನುಷ್ಯ ಪ್ರಭೇದದ ಆಳ ಅಗಲದ ಹರವು ತಿಳಿಯಲು ಪ್ರವಾಸದಲ್ಲಿ ಭೇಟಿ ನೀಡಲೇಬೇಕಾದ ಸ್ಥಳ ಎಂದರೆ ಪುಸ್ತಕದ ಅಂಗಡಿಗಳು.

ಹಾಗೆ ಹೋಗಿದ್ದು ಲಂಡನ್ನಿನ ಹೃದಯ ಭಾಗದಲ್ಲಿರುವ ಪಿಕಡೆಲಿ ರಸ್ತೆಯಲ್ಲಿ ‘waterstone’ ಎನ್ನುವ ಹೆಸರು ಹೊತ್ತು, ಪ್ರತಿವರ್ಷ ಸರಾಸರಿ ಎಪ್ಪತ್ತೆರಡು ಸಾವಿರ ಪುಸ್ತಕಗಳನ್ನು ಮಾರಾಟ ಮಾಡುತ್ತಾ ಸರಸ್ವತಿ ಪ್ರತಿಮೆಯಂತೆ ಕಂಗೊಳಿಸುತ್ತಿರುವ ಪುಸ್ತಕ ಸ್ವರ್ಗಕ್ಕೆ. ವಿಶೇಷ ಎಂದರೆ ಪ್ರತಿ ಪುಸ್ತಕ ಮಳಿಗೆಯ ಹಿಂದೆ ಇರುವ ರೋಚಕ ಕಥೆ.

ಸ್ಕಾಟ್ಲೆಂಡಿನಲ್ಲಿ ಹುಟ್ಟಿದ ಟಿಮ್ ವಾಟರ್ ಸ್ಟೋನ್ ಒಂದೊಮ್ಮೆ ಜಗತ್ತೇ ತಿರುಗಿ ನೋಡುವಂಥ ವ್ಯಾಪಾರಸ್ಥ. ಸಾಧಾರಣ ಮಟ್ಟದ ವಿದ್ಯಾಭ್ಯಾಸ ಪಡೆದು, ಅಮೆರಿಕದಲ್ಲಿ W H Smith ಎನ್ನುವ ಮುಂಚೂಣಿಯಲ್ಲಿರುವ ಪುಸ್ತಕ ಮಳಿಗೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದವ. ಇವನ ನಿರ್ವಹಣೆಯ ಬಗ್ಗೆ ಅಸಮಾಧಾನ ಹೊಂದಿದ ಮಾಲೀಕರು ಈತನನ್ನು ಕೆಲಸದಿಂದ ವಜಾ ಮಾಡಿದಾಗ, ತಾನೇ ಒಂದು ಶ್ರೇಷ್ಠ ಪುಸ್ತಕ ಮಾರಾಟ ಮಳಿಗೆಯನ್ನು ತೆರೆಯುವ ಶಪಥದೊಂದಿಗೆ ಹೊರಬಂದ ವಾಟರ್ ಸ್ಟೋನ್ ತನ್ನದೇ ಹೆಸರಿನಲ್ಲಿ ಲಂಡನ್‍ನ ಹಳೇ ಗಲ್ಲಿಯೊಂದರಲ್ಲಿ ಸಣ್ಣದೊಂದು ಅಂಗಡಿ ಶುರು ಮಾಡಿ, ಇಂದು ಈ ಘಳಿಗೆಯಲ್ಲಿ ಯುರೋಪಿನ ನಂಬರ್ ಒನ್ ಪುಸ್ತಕ ಮಾರಾಟ ಮಳಿಗೆ ಎನ್ನುವ ಸಾಧನೆಗೈದಿದ್ದಾನೆ.

ಯುರೋಪಿನ ತುಂಬ ಇನ್ನೂರೆಪ್ಪತ್ತೈದು ಮಳಿಗೆಗಳನ್ನು ಹೊಂದಿ ನಾಲ್ಕು ಸಾವಿರ ಕೆಲಸಗಾರರಿಗೆ ಬದುಕು ಕೊಟ್ಟು, ಬರಿಯ ಇಂಗ್ಲೆಂಡಿನಲ್ಲಿ ವರ್ಷಕ್ಕೆ ಇಪ್ಪತ್ತು ಲಕ್ಷ ಆಂಗ್ಲ ಭಾಷೆಯ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾನೆ. ಆ ಎಲ್ಲ ಪುಸ್ತಕಗಳೂ ಇಲ್ಲಿ ಲಭ್ಯವಿವೆ. ಹೀಗಿರುವ ಈ ಪುಸ್ತಕದಂಗಡಿಯಲ್ಲಿ ನನ್ನ ಗಮನ ಸೆಳೆದದ್ದು ಮೂವತ್ತು ದಿನದಲ್ಲಿ ಹಿಂದಿ, ಪಂಜಾಬಿ, ತಮಿಳು ಕಲಿಯುವುದು ಹೇಗೆ ಎನ್ನುವ ಪುಸ್ತಕಗಳು. ಅವುಗಳನ್ನು ಹಿಡಿದು ಅವತ್ತಿನ ಸ್ಟೋರ್ ಮ್ಯಾನೇಜರ್ ಆ್ಯನಾಳ ಬಳಿ ಓಡಿದೆ. ಭಾರತೀಯ ಇತರೆ ಭಾಷೆಗಳ ಬಗ್ಗೆ ಮಾತನಾಡುತ್ತಾ ಅವಳಿಂದ ತಿಳಿದು ಬಂದದ್ದು ಈ ಮಾರಾಟ ಸರಪಣಿಯ ಸ್ಥಾಪಕ ಟಿಮ್ ತನ್ನ ಯೌವ್ವನದ ದಿನಗಳಲ್ಲಿ ಕೋಲ್ಕತ್ತಾ ನಗರದ ಶೇರ್ ವ್ಯಾಪಾರ ಮಾಡುವ ಕಂಪನಿಯೊಂದರಲ್ಲಿ ನಾಲ್ಕೈದು ವರ್ಷಗಳ ಕಾಲ ಕೆಲಸ ಮಾಡಿದ್ದ ಎಂದು. ಬೆಂಗಳೂರಿನ ಬಗ್ಗೆ ಕೇವಲ ಕೇಳಿದ್ದ ಆಕೆಗೆ ತಿಳಿದಿರದ ಕನ್ನಡ ಭಾಷೆಯ ಬಗ್ಗೆ ವಿವರಿಸುತ್ತಾ, ‘ಇಲ್ಲಿ ಯಾವುದೇ ರೀತಿಯ ಸೆಕ್ಯುರಿಟಿ ಚೆಕ್ ಇಲ್ಲವಲ್ಲ, ಯಾರೂ ಪುಸ್ತಕಗಳನ್ನು ಕದಿಯುವುದಿಲ್ಲವೇ’ ಎಂದು ಭಾರತೀಯಸಹಜ ಕುತೂಹಲದಿಂದ ಕೇಳಿದೆ. ಅದಕ್ಕವಳು ತೆಳುವಾಗಿ ನಗುತ್ತಾ ಅಷ್ಟೇ ಮೃದು ದನಿಯಲ್ಲಿ ‘ಪುಸ್ತಕ ಓದುವವನ ಮನಸ್ಸು ಎಂದೂ ಕೆಡುಕಿನ ಬಗ್ಗೆ ಯೋಚಿಸದು’ ಎಂದಳು.

Waterstone library

ವಿದೇಶಯಾತ್ರೆಯಲ್ಲಿ ತಪ್ಪದೆ ಹತ್ತಾರು ಪುಸ್ತಕಮಳಿಗೆಗೆ ಭೇಟಿ ಕೊಟ್ಟಿದ್ದರೂ ನನ್ನ ನೆನಪಿನಲ್ಲಿ ಕೆಲವು ಪುಸ್ತಕದ ಮಳಿಗೆಗಳು ಸದಾ ಹಸನ್ಮುಖವನ್ನು ಉಂಟು ಮಾಡುತ್ತವೆ. ಗ್ರೀಕ್ ದೇಶದ ಸ್ಯಾಂಟೋರಿನಿ ಎನ್ನುವ ದ್ವೀಪದಲ್ಲಿ ನೋಡಿದ “ಅಟ್ಲಾಂಟಿಸ್ ಬುಕ್ಸ್” ಎನ್ನುವ ಮಳಿಗೆ 1870ರಿಂದ ಒಂದಷ್ಟು ಜ್ವಾಲಾಮುಖಿ ಇನ್ನೊಂದಿಷ್ಜ್ಟು ಭೂಕಂಪಗಳನ್ನು ಅನುಭವಿಸಿಯೂ ತನ್ನ ಆಕಾರ ಕಳೆದುಕೊಳ್ಳದೆ ಮೊದಲಿನ ಸೌಂದರ್ಯವನ್ನು ಹಾಗೇ ಉಳಿಸಿಕೊಂಡು ಅದೇ ಕಟ್ಟಡದಲ್ಲಿ ಈಗಲೂ ಇದೆ. ಇತಿಹಾಸ, ಅಧ್ಯಾತ್ಮ, ವಿಜ್ಞಾನ, ಸಾಹಿತ್ಯ ಎಲ್ಲಾ ವಿಭಾಗಗಳ ಪುಸ್ತಕಗಳೂ ಇಲ್ಲಿವೆ. ಆದರೆ ಇಂಗ್ಲಿಷ್ ಭಾಷೆಯ ಪುಸ್ತಕ ಒಂದೂ ಇರಲಿಲ್ಲ. 1876ರಿಂದ ಆಂಗ್ಲ ನಾಡಿನ ಪುರಾತನ ಪುಸ್ತಕ ಅಂಗಡಿಗಳಲ್ಲೊಂದು ಒಂದು ಎನ್ನುವ ಖ್ಯಾತಿಗೆ ಒಳಗಾದ ’ಹ್ಯಾಫೆರ್ಸ್ ಬುಕ್ ಶಾಪ್’ ಇರುವುದು ಕೇಂಬ್ರಿಜ್ ನಲ್ಲಿ. ಯುನೈಟೆಡ್ ಕಿಂಗ್‍ಡಮ್‌ನ ಆಕ್ಸ್ಫರ್ಡ್‌ನಲ್ಲಿ ಅತಿ ದೊಡ್ಡ ಪುಸ್ತಕದ ಅಂಗಡಿ “ಬ್ಲಾಕ್ ವೆಲ್ ಪುಸ್ತಕಮಳಿಗೆ”. ಪುರಾತನ ಕಾಲದಿಂದ ಆಧುನಿಕ ಜಗತ್ತಿನವರೆಗೂ ಯಾವುದೇ ವಿಷಯದ ಸಂಶೋಧನೆ ಮಾಡಬೇಕು ಎಂದುಕೊಳ್ಳುವ ಆಸಕ್ತಾರ್ಥಿಯು ಆಕರ ಗ್ರಂಥಕ್ಕೆ ತಪ್ಪದೆ ಭೇಟಿ ನೀಡಬೇಕಾದ ಬೃಹತ್ ಪುಸ್ತಕದಂಗಡಿ ಇದು.

ಇದನ್ನು ಓದಿ: ಈ ಜಗವಿದೆ ನವರಸಗಳ ಉಣಬಡಿಸಲು...!

ಇಸ್ರೇಲಿನ ಟೆಲ್ ಅವೀವ್‍ನಲ್ಲಿ ಹಸಿರು ಗಿಡ ಬಳ್ಳಿಗಳ ಗುಹೆಯ ನಡುವೆ ತೆರೆದುಕೊಳ್ಳುವ “ರಾಬಿನ್‍ಸನ್ ಪುಸ್ತಕ ಮಳಿಗೆ” 1889‍ರಿಂದ ಪುಸ್ತಕ ಮಾರಾಟ ಮಾಡುತ್ತಿದೆ. ಆಂಗ್ಲ ಮತ್ತು ಭಾರತೀಯ ಭಾಷೆಗಳನ್ನು ಹೊರತುಪಡಿಸಿ ಜಗತ್ತಿನ ಎಲ್ಲ ಭಾಷೆಗಳ ಪುಸ್ತಕಗಳೂ ಇಲ್ಲಿವೆ. ಇಲ್ಲಿನ ವಿಶೇಷ ಎಂದರೆ ಅಂಗಡಿಯ ಹೊರಭಾಗದಲ್ಲಿ ಒಂದೆರಡು ಶೆಲ್ಫುಗಳಲ್ಲಿ ಪುಸ್ತಕಗಳನ್ನು ಜೋಡಿಸಿ ಇಟ್ಟಿದ್ದಾರೆ. ಆದರೆ ಒಳಗಡೆ ಅದೆಷ್ಟು ಸಾವಿರಸಾವಿರ ಪುಸ್ತಕಗಳು ತುಂಬಿವೆ ಎಂದರೆ ಯಾವ ವಿಷಯಕ್ಕೂ ವಿಭಾಗ ಮಾಡಿ ಒಪ್ಪವಾಗಿ ಓರಣವಾಗಿಸಿಲ್ಲ. ಒಂದರಪಕ್ಕ ಒಂದು ಎಂದು ಒಂದಷ್ಟು ಪುಸ್ತಕಗಳನ್ನು ಇರಿಸಲಾಗಿದೆ. ಇನ್ನೊಂದಷ್ಟನ್ನು ರಾಶಿ ಹಾಕಲಾಗಿದೆ. ಇಲ್ಲಿ ಸೆಕೆಂಡ್ ಹ್ಯಾಂಡ್ ಪುಸ್ತಕಗಳೂ ಇವೆ. ಅಚ್ಚರಿ ಎಂದರೆ ಬಂದವರು ಕೇಳುತ್ತಿದ್ದ ಪುಸ್ತಕವನ್ನು ಮಾಲೀಕ ಸುಲಭವಾಗಿ ಐದುಹತ್ತು ನಿಮಿಷಗಳಲ್ಲಿ ತೆಗೆದುಕೊಡುತ್ತಿದ್ದ.

ಟೋಕಿಯೋ ನಗರದಲ್ಲಿ ಒಂದು ಏರಿಯಾವನ್ನೇ ಪುಸ್ತಕ ಮಾರಾಟಕ್ಕೆ ಮೀಸಲಿಡಲಾಗಿದೆ. ಆಪಾ ಹೊಟೇಲಿನ ಸ್ವಾಗತಕಾರಿಣಿಯನ್ನು ’ಹತ್ತಿರದಲ್ಲಿ ಎಲ್ಲಾದರೂ ಪುಸ್ತಕ ಮಳಿಗೆ ಇದೆಯೇ’ ಎಂದು ಕೇಳಿದೆ. ‘Jimbocho Book Town ಗೆ ಹೋಗಿ ನಿಮಗೆ ಇಷ್ಟವಾಗಬಹುದು’ ಎಂದಳು. Jimbocho ಪುಸ್ತಕದ ಟೌನ್ 7 ಕಿಮೀ ದೂರದಲ್ಲಿತ್ತು. ಅಲ್ಲಿಂದ ಎರಡು ಮೆಟ್ರೋ ರೈಲುಗಳನ್ನು ಬದಲಾಯಿಸಿ Jimbocho ರೈಲು ನಿಲ್ದಾಣ ತಲುಪಲು ಹಿಡಿದ ಸಮಯ 29 ನಿಮಿಷಗಳು. ರೈಲು ನಿಲ್ದಾಣದಿಂದ ಮೆಟ್ಟಿಲೇರಿ ಹೊರಬರುತ್ತಲೇ Jimbocho book Town ಎನ್ನುವ ಫಲಕ ಕಣ್ಣಿಗೆ ಬಿತ್ತು. ಆ ರಸ್ತೆಯಲ್ಲಿ ಪ್ರಕಾಶಕರ ಪುಸ್ತಕ ಮಳಿಗೆಗಳು ಮತ್ತು ಇತರೆ ಪುಸ್ತಕ ಮಳಿಗೆಗಳು ನಡುನಡುವೆ ಸಣ್ಣಸಣ್ಣ ಹೊಟೇಲುಗಳ ಸರಪಳಿಯನ್ನು ಕಾಣುವಾಗ ಒಂದು ಕ್ಷಣ ಇಟಲಿಯ ಹಳ್ಳಿಗಳು ನೆನಪಾಗುತ್ತದೆ.

Waterstones library london

ಸಾಲುಸಾಲು ಪುಸ್ತಕದ ಅಂಗಡಿಗಳು! ಬರೋಬ್ಬರಿ 170 ಮಳಿಗೆಗಳು ಒಟ್ಟಿಗೆ ಇರುವ ಪುಸ್ತಕಗಳ ನಗರ. ಅಂಗಡಿಯ ಒಳಗೂ, ಹೊರಗಿನ ಮೆಟ್ಟಿಲುಗಳ ಓದುಗರಿಗಿಂತ ಪುಸ್ತಕಗಳೇ ಹೆಚ್ಚಿದ್ದ, ಗದ್ದಲವಿಲ್ಲದ ಅಕ್ಷರ ನಾಡು Jimbocho book Town. ಎಲ್ಲಾ ಬೋರ್ಡುಗಳು, ಬ್ಯಾನರ್‌ಗಳೂ ಜಪಾನೀ ಭಾಷೆಯಲ್ಲಿಯೇ ಇದ್ದವು. ಒಂದು ಬ್ಯಾನರ್‌ನಲ್ಲಿ ಕೆಲವರ ಫೊಟೋ ಹಾಕಿ ಅದರ ಕೆಳಗೆ ಇಂಗ್ಲಿಷಿನಲ್ಲಿ ಲೇಖಕರು ಎಂದು ಬರೆದಿತ್ತು. ಹಾಗಾಗಿ ಇಲ್ಲಿ ಅವರುಗಳೂ ಬರುತ್ತಾರೇನೋ ಎನ್ನುವ ಅಂದಾಜು ಹಾಕಿಕೊಂಡೆ. ಕೆಲವು ಮಳಿಗೆಗಳ ಒಳಗೆ ಜನರು ಅಲ್ಲಿಯೇ ನಿಂತು, ಕುಳಿತು ಪುಸ್ತಕಗಳನ್ನು ಓದುತ್ತಿದ್ದರು.

ಟೋಕಿಯೋದ ಚಿಯೋಡಾ ವಾರ್ಡ್‌ನಲ್ಲಿರುವ Jimbocho ಪ್ರದೇಶವು ಪುಸ್ತಕಗಳ ಟೌನ್ ಎಂದೇ ಹೆಸರಾಗಿದೆ. 17ನೆಯ ಶತಮಾನದಲ್ಲಿ ಆರಂಭವಾದ Jimbocho ಬುಕ್ ಟೌನ್ Yasukuni-dori Street and Hakusan-dori ರಸ್ತೆಗಳ ನಡುವಿನ ’V’ ಆಕಾರದ ರಸ್ತೆಯಲ್ಲಿ ಹರಡಿಕೊಂಡಿದೆ. Nagaharu Jimbo ಎನ್ನುವ ಹೆಸರಿನ ಸಮುರಾಯ್ (ಯೋಧ) ಈ ಜಾಗದ ಮಾಲೀಕನಾಗಿದ್ದನಂತೆ. ಹಾಗಾಗಿ ಆತನ ಗೌರವಾರ್ಥ ಈ ಸ್ಥಳಕ್ಕೆ Jimbocho ಎನ್ನುವ ಹೆಸರನ್ನೇ ಇಟ್ಟಿದ್ದಾರೆ. ಈ ಪ್ರದೇಶದ ಸುತ್ತ ಮುತ್ತಲೂ ವಿಶ್ವವಿದ್ಯಾಲಯಗಳು ಇವೆ. ಟೋಕಿಯೋ ಬುಕ್‌ಬೈಂಡಿಂಗ್ ಕ್ಲಬ್ ಮತ್ತು ಲಿಟರೇಚರ್ ಪ್ರಿಸರ್ವೇಶನ್ ಸೊಸೈಟಿಗಳೂ ಇಲ್ಲಿವೆ. ಈ ಜಾಗಕ್ಕೆ ಜಪಾನೀಯರು ಕೊಟ್ಟಿರುವ ಟ್ಯಾಗ್ ಲೈನ್ ’Language is a journey not a destination’.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?