Wednesday, November 26, 2025
Wednesday, November 26, 2025

ಈ ಜಗವಿದೆ ನವರಸಗಳ ಉಣಬಡಿಸಲು...!

Life is too short for bad food ಎನ್ನುವುದು ತಿಳಿದಿದ್ದರೂ ನಮ್ಮ ದೇಶದಲ್ಲಿ ಆಹಾರ ಸ್ಥಳೀಯತೆಯನ್ನು ಕಳೆದುಕೊಳ್ಳುತ್ತಿರುವುದು ಖೇದಕರ. ಬೆಂಗಳೂರು ಮೈಸೂರುಗಳ ಹೊಟೇಲುಗಳಲ್ಲಿ ಈಗ ಅಥೆಂಟಿಕ್ಕೂ ಅಲ್ಲದ ಉತ್ತರಭಾರತೀಯ ಊಟದ್ದೇ ಮೇಲುಗೈ. ಅಪರೂಪಕ್ಕೊಮ್ಮೆ ಸಿಗುವ ದಕ್ಷಿಣ ಭಾರತೀಯ ತಿನಿಸುಗಳು ಇನ್ನು ಕೆಲವೇ ವರ್ಷಗಳಲ್ಲಿ ಮರೆಯಾದರೂ ಆಶ್ಚರ್ಯವಿಲ್ಲ. ಈ ಆತಂಕವನ್ನು ಇಲ್ಲಿ ಮಾತ್ರವಲ್ಲ ಪೋಲೆಂಡ್ ದೇಶದ ಮೂಲನಿವಾಸಿಗಳೂ ಎದುರಿಸುತ್ತಿದ್ದಾರೆ. ರಾಜಧಾನಿ ವಾರ್ಸ ನಗರವನ್ನು ತೋರಿಸಿದ ಮಾರ್ಗದರ್ಶಿ ಜಾನ್ ಇದೇ ಅಳಲಿನೊಂದಿಗೆ ಕರೆದುಕೊಂಡು ಹೋಗಿದ್ದು Kosher Canteen. ಪೋಲೆಂಡ್ ದೇಶದ ಮೂಲನಿವಾಸಿಗಳಾದ ಯಹೂದಿಯರ ಆಹಾರ ತಯಾರು ಮಾಡುವ ಸ್ಥ

ವಿಚಾರದ ಉದ್ದೇಶದಲ್ಲಿ ಸಾಮ್ಯ ಇದ್ದರೂ ಜಗತ್ತಿನಾದ್ಯಂತ ಆಚಾರದಲ್ಲಿ ಬಗೆಬಗೆ. ಬಟ್ಟೆ, ವಾಸ್ತು, ಕುಶಲಕಲೆ ಹೀಗೆ ಎಲ್ಲದರಲ್ಲೂ ವಿವಿಧತೆ. ಆದರೂ ಆಹಾರದಲ್ಲಿ ಇರುವಷ್ಟು ವಿಭಿನ್ನತೆ, ಅದಕ್ಕಿರುವಷ್ಟು ಇತಿಹಾಸ ಮತ್ತು ಅದರಿಂದಾಗಿ ಹುಟ್ಟಿಕೊಂಡಿರುವ ನಂಬಿಕೆಗಳು ಆದಿ ಅಂತ್ಯಗಳಿಲ್ಲದ್ದು. ಎಲ್ಲಾ ದೇವಸ್ಥಾನಗಳಲ್ಲೂ, ಮನೆಯಲ್ಲಿನ ಪೂಜಾ ಕೋಣೆಯಲ್ಲಿಯೂ ದೇವರಿಗೆ ಅರ್ಪಿಸುವುದು ನೈವೇದ್ಯ. ಹಿಂದಿರುಗಿ ಪಡೆಯುವುದು ಪ್ರಸಾದ. ಆದರೆ ಒಡಿಶಾ ರಾಜ್ಯದ ಪುರಿಯಲ್ಲಿ ನೆಲೆಗೊಂಡಿರುವ ಜಗನ್ನಾಥನಿಗೆ ಮಾಡಿದ ನೈವೇದ್ಯವನ್ನು ಸ್ವೀಕರಿಸುವುದು ಮಾತ್ರ ‘ಮಹಾಪ್ರಸಾದ’ ಎನ್ನುವ ಹೆಸರಿನಲ್ಲಿ.

ಎಲ್ಲೆಡೆಯಲ್ಲಿನ ಪ್ರಸಾದ ಇಲ್ಲಿ ಮಾತ್ರ ಮಹಾಪ್ರಸಾದ ಯಾಕಾಯಿತು ಎನ್ನುವ ಪ್ರಶ್ನೆಗೆ ಹಡು ಕುತಿಯಾ ಎನ್ನುವ ಹೆಸರಿನ ಹಿರಿಯ ಪಾಂಡ (ಅಲ್ಲಿ ದರ್ಶನಕ್ಕೆ ಸಹಾಯ ಮಾಡುವವರನ್ನು ಪಾಂಡ ಎನ್ನಲಾಗುತ್ತದೆ ) ಹೇಳುತ್ತಾರೆ ‘ಜಗನ್ನಾಥನ ದೇವಸ್ಥಾನದಿಂದ 10 ಗಾವುದ (100 ಕಿಲೋಮೀಟರ್) ತ್ರಿಜ್ಯದ ಅಳತೆಯಲ್ಲಿ ವೃತ್ತವನ್ನೆಳೆದಾಗ ಸಿಗುವ ಭೂಮಿಯಲ್ಲಿ ಮೂಲದಿಂದ ಏನನ್ನು ಬೆಳೆಯಲಾಗುತ್ತಿತ್ತೋ ಆ ತರಕಾರಿ, ದವಸ ಧಾನ್ಯಗಳನ್ನು ಮಾತ್ರ ಬಳಸಿ ಮಾಡಿದ ಅಡುಗೆಯನ್ನು ಅಲ್ಲಿ ನೈವೇದ್ಯಕ್ಕೆ ಬಳಸಲಾಗುತ್ತದೆ. ಇದು ಸಹಸ್ರಮಾನದಿಂದಲೂ ಬದಲಾಗಿಲ್ಲ. ಆಧುನಿಕ ಯುಗದಲ್ಲಿ ಅಲ್ಲಿ ಬೆಳೆಯುತ್ತಿರುವ ಯಾವುದೇ ತರಕಾರಿ ಮತ್ತಿತರ ಸಾಮಗ್ರಿಗಳು ಜಗನ್ನಾಥನಿಗೆ ವರ್ಜ್ಯ. ಅದಕ್ಕೇ ಅದು ಮಹಾಪ್ರಸಾದ”. ನಿತ್ಯವೂ 56 ಬಗೆಯ ನೈವೇದ್ಯವನ್ನು ಸ್ವಲ್ಪವೂ ವ್ಯತ್ಯಾಸವಿಲ್ಲದ ರುಚಿಯಲ್ಲಿ ಸವಿಯುವ ಅಲ್ಲಿನ ದೇವರ ರಸಗ್ರoಥಿಗಳದ್ದೂ ರೋಚಕ ಇತಿಹಾಸ.

ಇದನ್ನೂ ಓದಿ: ಭಾಷೆ ತರುವ ಮೌನ ಮಧುರಾತಿ ಮಧುರ

ಹಸಿವಿಗಿಂತ ರುಚಿ ಇಲ್ಲ ಎನ್ನುತ್ತಲೇ ಯಾವ ಆಹಾರವನ್ನೂ ಮೂಲರುಚಿಯಲ್ಲಿ ಉಳಿಸಿಕೊಳ್ಳದೆ ಬಹುಪಾಲು ಎಲ್ಲವನ್ನೂ ಅಪದ್ಧಕ್ಕೆ ತಿರುಗಿಸಿಕೊಂಡಿರುವುದು ಕುಕ್ಸಾಧನೆ ಎನ್ನುವ ಅರಿವು ಮೂಡಿಸುತ್ತದೆ ಸುತ್ತಾಟ. ಬಳಸದೆ ಕಳೆದುಕೊಂಡ ಅವಶೇಷ ಅಂಗಗಳಂತೆ (Vestigial Organs) ಎಷ್ಟೋ ಬಗೆಯ ಅಡುಗೆಗಳು ನಶಿಸಿಹೋಗಿವೆ ಎನ್ನುವುದು ಸತ್ಯ. ನಿರಂತರ ವಲಸೆ, ಯುದ್ಧಗಳು, ಜಾಗತೀಕರಣ ಮತ್ತು ವಸಾಹತುಶಾಹಿ ಮನಸ್ಥಿತಿಯು ಆಹಾರ ಮತ್ತು ರುಚಿಯ ಉಗಮವನ್ನೇ ಬದಲಾವಣೆಗೆ ಹಚ್ಚಿವೆ. ಹಾಗೆ ಎರಡನೆಯ ಮಹಾಯುದ್ಧದ ಪರಿಣಾಮವಾಗಿ ಹುಟ್ಟಿಕೊಂಡ ಪದಾರ್ಥದ ಕಥೆಯೊಂದು ಇಲ್ಲಿದೆ.

ವಿಶ್ವಯುದ್ಧವು ಜಪಾನಿನಲ್ಲಿ ಅಕ್ಕಿಯ ಅಭಾವವನ್ನು ಸೃಷ್ಟಿಸಿತ್ತು. ಆಗ ಮಕ್ಕಳಿಗೆ ಪೌಷ್ಟಿಕಾಂಶದ ಕೊರತೆಯಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರು. ಇದಕ್ಕೆ ಹಿರೋಶಿಮಾ ಜನರು ಕಂಡುಕೊಂಡ ತಿಂಡಿಯ ಹೆಸರು ಒಕೊನೋಮಿಯಾಕಿ (Okonomiyaki). ಎಲೆಕೋಸಿನ ತುರಿಯನ್ನು ಸಣ್ಣಸಣ್ಣ ದೋಸೆಯಾಕಾರದಲ್ಲಿ ಕಾವಲಿಯಲ್ಲಿ ಇಟ್ಟು ಅದರ ಮೇಲೆ ಈರುಳ್ಳಿಯನ್ನು ಹಾಕಿ ಬೇಯಿಸಿ ಕೊಡುತ್ತಿದ್ದರು ಆಗ. ಕಾಲಕ್ರಮೇಣ ಒಕೊನೋಮಿಯಾಕಿ ಅತ್ಯಂತ ಸಿರಿವಂತ ತಿನಿಸಾಗಿ ಬಿಟ್ಟಿದೆ. ಈಗ ಒಸಾಕಾ ಮತ್ತು ಟೋಕಿಯೋ ನಗರಗಳಲ್ಲಿ ತಮ್ಮದೇ ಶೈಲಿಯ ಒಕೊನೋಮಿಯಾಕಿ ತಯಾರು ಮಾಡುತ್ತಾರೆ. ಹಿರೋಶಿಮಾದ ಶಾಂತಿವನವನ್ನು ನೋಡಿ ಬರುವಾಗ ಹೊಂಡೋರಿ ಎನ್ನುವ ರಸ್ತೆಯಲ್ಲಿ ನಗರ್ ತಾಯ್ ಎನ್ನುವ ರೆಸ್ಟೋರೆಂಟ್ ನಲ್ಲಿ ಒಕೊನಮಿಯಾಕಿ ಪದಾರ್ಥ ಭಾರೀ ಡಿಮ್ಯಾಂಡ್ ನಲ್ಲಿದೆ.

‘La Grande Maison Tokyo’ ಎನ್ನುವ ಜಪಾನೀ ಧಾರಾವಾಹಿಯ ನಾಯಕ Takuya Kimura ಹೇಳುತ್ತಾನೆ ‘ಊಟ ಮಾಡುವವನು ಮೇಲುಪ್ಪು ಕೇಳಿದರೆ ಅದು ಅಡುಗೆ ಮಾಡುವವನಿಗೆ ಅಪಮಾನ ಅರ್ಥಾತ್ ಅವನಿಗೆ ಅಡುಗೆ ಮಾಡಲು ಬರುವುದಿಲ್ಲ ಎಂದು. ಇದನ್ನು ಜಪಾನೀಯರು ಬಹಳ ಶಿಸ್ತಿನಿಂದ ಪಾಲಿಸುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆಯು ಯಾವುದೇ ಆಹಾರ ಪದಾರ್ಥದಲ್ಲಿ ಇರಬೇಕಾದ ಗರಿಷ್ಠ ಮಟ್ಟದ ಉಪ್ಪು ಮತ್ತು ಸಕ್ಕರೆಯ ಪ್ರಮಾಣವನ್ನು ನಿಗದಿಪಡಿಸಿದೆ. ಇದಕ್ಕೆ LOQ (Limit of Quantification) of Sugar or salt ಎನ್ನುತ್ತಾರೆ. ಜಪಾನಿನ ಅಂಗಡಿಗಳಲ್ಲಿ ಸಿಗುವ ಯಾವುದೇ ತಿನಿಸಿನ ಡಬ್ಬದ ಕವರಿನ ಹಿಂಭಾಗದಲ್ಲಿ ಈ LOQ ಅಂಶವನ್ನು ಹಾಕಿರುತ್ತಾರೆ. ಬಹುಪಾಲು ಅದು ಎಲ್ಲದರಲ್ಲೂ BLQ(Below Limit of Quantification) ಎಂದೇ ನಮೂದಾಗಿರುತ್ತದೆ. ಅವರ ದೀರ್ಘಾಯುಷ್ಯಕ್ಕೆ ಇದು ಒಂದು ಕಾರಣ ಇರಬೇಕು. ನಾವು ಒಮ್ಮೆಗೆ ತಟ್ಟೆಯಲ್ಲಿ ತಿನ್ನುವ ಆಹಾರದ ಪ್ರಮಾಣ ನೋಡಿದರೆ ಚಿಕ್ಕ ಚಿಕ್ಕ ಬೋಗುಣಿಗಳಲ್ಲಿ ನಿತ್ಯದ ಊಟ ಮಾಡುವ ಮೂಲ ಜಪಾನೀಯರಿಗೆ ಬವಳಿಯೇ ಬರುವುದೇನೋ.

Life is too short for bad food ಎನ್ನುವುದು ತಿಳಿದಿದ್ದರೂ ನಮ್ಮ ದೇಶದಲ್ಲಿ ಆಹಾರ ಸ್ಥಳೀಯತೆಯನ್ನು ಕಳೆದುಕೊಳ್ಳುತ್ತಿರುವುದು ಖೇದಕರ. ಬೆಂಗಳೂರು ಮೈಸೂರುಗಳ ಹೊಟೇಲುಗಳಲ್ಲಿ ಈಗ ಅಥೆಂಟಿಕ್ಕೂ ಅಲ್ಲದ ಉತ್ತರಭಾರತೀಯ ಊಟದ್ದೇ ಮೇಲುಗೈ. ಅಪರೂಪಕ್ಕೊಮ್ಮೆ ಸಿಗುವ ದಕ್ಷಿಣ ಭಾರತೀಯ ತಿನಿಸುಗಳು ಇನ್ನು ಕೆಲವೇ ವರ್ಷಗಳಲ್ಲಿ ಮರೆಯಾದರೂ ಆಶ್ಚರ್ಯವಿಲ್ಲ. ಈ ಆತಂಕವನ್ನು ಇಲ್ಲಿ ಮಾತ್ರವಲ್ಲ ಪೋಲೆಂಡ್ ದೇಶದ ಮೂಲನಿವಾಸಿಗಳೂ ಎದುರಿಸುತ್ತಿದ್ದಾರೆ. ರಾಜಧಾನಿ ವಾರ್ಸ ನಗರವನ್ನು ತೋರಿಸಿದ ಮಾರ್ಗದರ್ಶಿ ಜಾನ್ ಇದೇ ಅಳಲಿನೊಂದಿಗೆ ಕರೆದುಕೊಂಡು ಹೋಗಿದ್ದು Kosher Canteen. ಪೋಲೆಂಡ್ ದೇಶದ ಮೂಲನಿವಾಸಿಗಳಾದ ಯಹೂದಿಯರ ಆಹಾರ ತಯಾರು ಮಾಡುವ ಸ್ಥಳಕ್ಕೆ ಕೊಷೇರ್ ಎನ್ನುತ್ತಾರೆ. ಯಹೂದಿಗಳ ನರಮೇಧದ ನಂತರ ಅವರ ಅಡುಗೆ ಕೋಣೆಗಳನ್ನು ನಾಶ ಮಾಡಲಾಗಿತ್ತು. 6ನೆಯ ಶತಮಾನದಿಂದಲೂ ಅಸ್ತಿತ್ವದಲ್ಲಿರುವ ಈ ಕ್ಯಾಂಟೀನ್ ಉಳಿದಿದ್ದೇ ಒಂದು ಪವಾಡ. ಆಗಿನಿಂದಲೂ ಇಲ್ಲಿನ ಜೀವಾಧಾರಿತ ಆಹಾರ Buckwheat (ಹುರಳಿಕಾಳಿನಂಥ ಧಾನ್ಯ) ಗಂಜಿ. ಆದರೆ ಈಗಿನ ತಲೆಮಾರಿನ ನಾಲಿಗೆಯನ್ನು ತಣಿಸಲು ಸೋಲುತ್ತಿರುವ ಖಾದ್ಯ.

ವಿಶ್ವವಿಖ್ಯಾತ ಬಾಣಸಿಗ ರಣವೀರ್ ಬ್ರಾರ್ ‘ ಕಾಶ್ಮೀರಿ ಮೆಣಸಿನಕಾಯಿ ಎನ್ನುವುದಾಗಿ ಇಂದು ಮಾರುಕಟ್ಟೆಯಲ್ಲಿ ಇರುವುದು ಅಸಲಿಗೆ ಬ್ಯಾಡಗಿ ಮೆಣಸಿನಕಾಯಿ ಯಾಕೆಂದರೆ ಕಡಿಮೆ ತೀಕ್ಷಣತೆಯ ಗಾಢ ಬಣ್ಣದ ಮೆಣಸಿನಕಾಯಿಯನ್ನು ಬೆಳೆಯಲು ಬೇಕಾದ ಹವಾಮಾನ ಕಾಶ್ಮೀರದಲ್ಲಿ ಇಲ್ಲವೇ ಇಲ್ಲ’ ಎಂದು ಹೇಳಿದ್ದನ್ನು ಕೇಳಿಸಿಕೊಂಡು ಹೆಮ್ಮೆಯಿಂದ ಬ್ಯಾಡಗಿಗೆ ‘ಮೆಣಸಿನ ಟೂರ್’ಮಾಡಲು ಹೋಗಿದ್ದೆ. ಅಲ್ಲಿಯವರೆಗೂ ಬ್ಯಾಡಗಿಯಲ್ಲಿ ಬೆಳೆಯುವ ಮೆಣಸಿನಕಾಯಿಗೆ ಬ್ಯಾಡಗಿ ಮೆಣಸಿನಕಾಯಿ ಎನ್ನುತ್ತಾರೆ ಎಂದುಕೊಂಡಿದ್ದ ಮಾಹಿತಿ ತಲೆ ಕೆಳಗಾಯಿತು. ಬ್ಯಾಡಗಿ ಎನ್ನುವ ಊರಿನ ಸುತ್ತಮುತ್ತಲೂ ಇರುವ ಜಾಗದಲ್ಲಿ ಮತ್ತು ಅದೇ ಹವೆ ಇರುವ ಪ್ರದೇಶಗಳಲ್ಲಿ ಬೆಳೆಯುವ ಮೆಣಸಿನಕಾಯಿಯ ತಳಿಗೆ ಬ್ಯಾಡಗಿ ಮೆಣಸು ಎನ್ನಲಾಗುತ್ತದೆ. ಅದಕ್ಕೂ ಮಿಗಿಲಾದ ವಿಷಯ ಎಂದರೆ ಮೆಣಸಿನಕಾಯಿ ನಮ್ಮನಿಮ್ಮ ಮನೆಯ ಅಡುಗೆಕೋಣೆ ತಲುಪುವ ಮುನ್ನ -6 ಡಿಗ್ರಿ ಸೆಲ್ಷಿಯಸ್ ತಂಪಿನಲ್ಲಿ ಕುಳಿತಿರುತ್ತದೆ ಎಂದು. ಆ ಫ್ರೀಜರ್ ಒಳಗಿನ ಓಡಾಟದ ಅನುಭವ ಮಾತಿಗೆ ದಕ್ಕದ್ದು.

food industry 1

ಜಾತಿ, ಉಪಜಾತಿ, ಪಂಗಡ, ಮನೆಗೊಂದು ವಿಧಾನ, ಕೈಗೊಂದು ರುಚಿ ಇರುವುದೇ ಆಹಾರದ ಹಿರಿಮೆ. ಬೇರೆಲ್ಲದರಲ್ಲೂ ಕನಿಷ್ಠ ಸಾಮ್ಯ ಕಂಡುಬoದರೂ ಫುಡ್ ಮಾತ್ರ ತೀರಾ ವಿಭಿನ್ನವಾದ ಸಂಸ್ಕೃತಿ. ಇಂಡೋನೇಷ್ಯಾದ ಪುನುಗು ಬೆಕ್ಕಿನ ವಿಸರ್ಜನತ್ಯಾಜ್ಯದಿಂದ ಹೊರಬರುವ ಕಾಫಿ ಬೀಜದಿಂದ ತಯಾರಾದ ಕಾಫಿಗೆ ರುಚಿ ಎಷ್ಟು ಹೆಚ್ಚೋ ಅಷ್ಟೇ ದರವು ಕೂಡ. ಆದರೂ ಬಾಲಿಯಲ್ಲಿನ ಸಾಂಪ್ರದಾಯಿಕ ಬ್ರೇಕ್ ಫಾಸ್ಟ್ ತಿನ್ನದಿದ್ದರೆ, ತಾಳೆ ಗರಿಯ ದೊನ್ನೆಯಲ್ಲಿ ಕಟ್ಟಿಕೊಡುವ ಐದು ಬಣ್ಣದ ಅನ್ನದ ರುಚಿ ನೋಡದಿದ್ದರೆ ಫುಡ್ ಟೂರಿಸಂ ಎನ್ನುವುದಕ್ಕೆ ವ್ಯಾಖ್ಯಾನ ಸಿಗದು.

ಇಸ್ರೇಲಿನ ಜಾಫಾ ಬಂದರು ಪಟ್ಟಣದಲ್ಲಿ ಕಳೆದ 40 ವರ್ಷಗಳಿಂದ ಬೇಕರಿ ನಡೆಸುತ್ತಿದ್ದಾರೆ ಕೇರಳದ ರಿಜು. ಈಗ್ಗೆ 12 ವರ್ಷಗಳ ಹಿಂದೆ ತಂಗಿ ರೋಜಾ ಅವರನ್ನೂ ಅಲ್ಲಿಗೇ ಕರೆಸಿಕೊಂಡಿದ್ದಾರೆ. ರಿಜು ಒಬ್ಬ Food Historian. ಹಾಗೆಂದು ಅವರು ಯಾವುದೇ ವಿಶ್ವವಿದ್ಯಾಲಯದಲ್ಲಿ ಓದಿದವರಲ್ಲ. ಅದಕ್ಕೆ ಕಾರಣವೂ ಇದೇ. ಜಗತ್ತಿನ ಎಲ್ಲಾ ಆಹಾರ ಪದ್ಧತಿಗಳ ಉಗಮ, ಅವಸಾನ, ಬೆಳವಣಿಗೆ ಬದಲಾವಣೆಗಳನ್ನು ಬಹುಪಾಲು ದಾಖಲಿಸಲಾಗಿದೆ. ಆದರೆ ಜಾಫಾದ ಆಹಾರ ತಯಾರಿಕೆಯನ್ನು ಈವರೆಗೂ ಅಕ್ಷರಗಳಲ್ಲಿ ಹಿಡಿದಿಟ್ಟಿಲ್ಲ. ಅದಕ್ಕೇ ಅಲ್ಲಿನ ಆಹಾರ ಪದ್ಧತಿಯನ್ನು Food in Oral Mystery ಎನ್ನಲಾಗಿದೆ. ಕೊರೋನಾ ಕಾರಣವಾಗಿ ತತ್ತರಿಸಿಹೋದ ಉದ್ಯಮಗಳಲ್ಲಿ ಮೊದಲ ಸ್ಥಾನ ಆಹಾರೋದ್ಯಮಕ್ಕೆ. ಇದರಿಂದ ಪುಸ್ತಕಗಳಲ್ಲಿ ಇಲ್ಲದ ಜಾಫಾ ರೆಸಿಪಿಗಳು ಕಳೆದು ಹೋಗಬಾರದು ಎಂದು ರಿಜು ಅವರು ಹೆಚ್ಚುಹೆಚ್ಚು ಜನಕ್ಕೆ ಜಾಫಾದ ಅಡುಗೆ ಕಲಿಸುತ್ತಿದ್ದಾರೆ. ಸಾಮಾನ್ಯವಾಗಿ ಕೇಕ್ ಎಂದರೆ ಮೃದು ಮಧುರವಾಗಿಯೇ ಬಾಯ್ಗಿರಿಸಿಕೊಂಡ ಅನುಭವ ಇರುವ ನಮಗೆ ಅಲ್ಲಿನ Rose cake ತಿಂದರೆ ನಮ್ಮ ಪುಳ್ಳಂಗಾಯಿ ಉಂಡೆಯ ಹದ ನೆನಪಿಗೆ ಬರುತ್ತದೆ.

ಮಧ್ಯಪ್ರದೇಶದ ಇಂದೋರಿನಲ್ಲಿ ಇರುವ ಛಪ್ಪನ್ ದುಕಾನ್ ತಿಂಡಿ ಗಲ್ಲಿಯಂತೆ ಈಗ ನಮ್ಮ ದೇಶದ ಬಹುಪಾಲು ಪಟ್ಟಣ ಪ್ರದೇಶಗಳಲ್ಲಿ ಸರಕಾರವೇ ಹೂಡಿಕೆ ಮಾಡಿ ತಿಂಡಿ ಗಲ್ಲಿಗಳನ್ನು ತೆರೆಯುತ್ತಿದೆ. ಆದರೂ ಮಲೇಷಿಯಾದ ಪೆನಗಾಂಗ್ ದ್ವೀಪದ ಜಾರ್ಜ್ ಟೌನ್ ನ Chulia Food Streetನಲ್ಲಿ ಇರುವ 17 ದೇಶಗಳ ಆಹಾರ ಮಳಿಗೆಗಳನ್ನು ಸುತ್ತಿ ಬರುವುದು ಪಂಚೇದ್ರೀಯಗಳಿಗೆ ಸುಖದ ಪ್ರವಾಸ. ಅಲ್ಲಿ ಪ್ರತೀ ತುತ್ತೂ ಒಂದು ಕೊಂಡಾಟವೇ ಸರಿ. ಜಾಗತೀಕರಣದಿಂದಾಗಿ ದೇಶೀಯ ಆಹಾರದ ಸ್ವರೂಪ ಬದಲಾಗಿದೆ. ಹಲವು ರುಚಿಗಳು ಒಂದರ ಮೇಲೊಂದು ಅತಿಕ್ರಮಿಸಿಕೊಂಡು ಒಂದೇ ಆಗಿವೆ ಎನ್ನುವ ಭಾವ ಬರುತ್ತದೆ ಮಧ್ಯಪ್ರಾಚ್ಯ ದೇಶಗಳ ಊಟ ಮಾಡಿದಾಗ. ಭಾರತೀಯ ಮತ್ತು ಅರೇಬಿಕ್ flavourಗಳು ರಸಗ್ರಾಹಿಗಳ ಮೇಲೆ ಕೈಕೈ ಹಿಡಿದು ನಡೆಯುವ ಸ್ವಾದವು ಯಾವುದೋ ಉತ್ಸವದ ಆಚರಣೆಯoತೆ ಎನಿಸುತ್ತದೆ.

ಆಕರ್ಷಣೆಯನ್ನು ಅವಿಭಾಜ್ಯ ಅಂಗವಾಗಿರಿಸಿಕೊಂಡಿರುವ ಆಹಾರೋದ್ಯಮವನ್ನು ಪ್ರವಾಸಿಗರಿಗೆ ತೆರೆದಿಡಲು ಹುಟ್ಟಿಕೊಂಡಿದೆ World Food Travel Association. 2023ರ ಅಂಕಿಅಂಶದಂತೆ ವಿಶ್ವ ಆಹಾರ ಪ್ರವಾಸದ ಗಳಿಕೆ 1456 ಕೋಟಿ ರೂಪಾಯಿಗಳು. ಇನ್ನೈದು ವರ್ಷಗಳಲ್ಲಿ 4053 ಕೋಟಿ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಅದಕ್ಕೇ ಇರಬೇಕು ಕವಿ ಹೇಳಿದ್ದು “ಹಂಚಿ ಉಂಡರೆ ಅಧಿಕವಾಗುವ ಸರಳ ಸ್ನೇಹದ ವಿರಳ ರುಚಿ ಇದು ; ಈ ಜನುಮವೇ ಆಹಾ ದೊರಕಿದೆ ರುಚಿ ಸವಿಯಲು; ಈ ಜಗವಿದೆ ನವರಸಗಳ ಉಣಬಡಿಸಲು” ಎಂದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?