ಸುರಕ್ಷತೆಗೆ ಮೊದಲ ಆದ್ಯತೆ
ವಿಮಾನ ಮತ್ತು ವಿಮಾನಯಾನದಲ್ಲಿ ಯಾವತ್ತೂ ಸುಧಾರಣೆಗೆ ಒಳಗಾಗುವುದು ಭದ್ರತೆ ಮತ್ತು ಸುರಕ್ಷತೆ ಯೊಂದೇ. ಈ ಎರಡು ವಿಷಯಗಳಲ್ಲಿ ಯಾವ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ. ಒಂದು ಸಣ್ಣ ಸುಧಾರಣೆಗೆ ಅವಕಾಶವಿದ್ದರೂ, ಅದನ್ನು ನಿರ್ಲಕ್ಷಿಸುವುದಿಲ್ಲ. ಅಮೆರಿಕದ ವಿಮಾನ ಯಾನ ಕಂಪನಿ ಗಳು ತಮ್ಮ ಹೊಸ ವಿಮಾನಗಳಲ್ಲಿ ಈಗ ಎರಡನೇ ಗೇಟ್ (ಸೆಕೆಂಡರಿ ಕಾಕ್‌ಪಿಟ್ ಬ್ಯಾರಿಯರ್) ಅಳವಡಿಸುವುದನ್ನು ಕಡ್ಡಾಯ ಮಾಡಲಾಗಿದೆ.
ವಿಮಾನ ಮತ್ತು ವಿಮಾನಯಾನದಲ್ಲಿ ಯಾವತ್ತೂ ಸುಧಾರಣೆಗೆ ಒಳಗಾಗುವುದು ಭದ್ರತೆ ಮತ್ತು ಸುರಕ್ಷತೆಯೊಂದೇ. ಈ ಎರಡು ವಿಷಯಗಳಲ್ಲಿ ಯಾವ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ. ಒಂದು ಸಣ್ಣ ಸುಧಾರಣೆಗೆ ಅವಕಾಶವಿದ್ದರೂ, ಅದನ್ನು ನಿರ್ಲಕ್ಷಿಸುವುದಿಲ್ಲ. ಅಮೆರಿಕದ ವಿಮಾನಯಾನ ಕಂಪನಿಗಳು ತಮ್ಮ ಹೊಸ ವಿಮಾನಗಳಲ್ಲಿ ಈಗ ಎರಡನೇ ಗೇಟ್ (ಸೆಕೆಂಡರಿ ಕಾಕ್‌ಪಿಟ್ ಬ್ಯಾರಿಯರ್) ಅಳವಡಿಸುವುದನ್ನು ಕಡ್ಡಾಯ ಮಾಡಲಾಗಿದೆ.
ಈ ವೈಶಿಷ್ಟ್ಯದ ಮುಖ್ಯ ಉದ್ದೇಶ ವಿಮಾನದ ಕಾಕ್‌ಪಿಟ್‌ಗೆ ಹೆಚ್ಚಿನ ಭದ್ರತೆ ನೀಡುವುದು. ಸೌತ್‌ವೆಸ್ಟ್ ಏರ್‌ಲೈನ್ಸ್‌ಗೆ ಸೇರಿದ ಹೊಸ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನವು ಈ ಹೆಚ್ಚುವರಿ ಭದ್ರತಾ ವೈಶಿಷ್ಟ್ಯದೊಂದಿಗೆ ಇತ್ತೀಚೆಗೆ ಹಾರಾಟ ಆರಂಭಿಸಿದೆ. ಅಮೆರಿಕ ಸರಕಾರವು ಈ ನಿಯಮವನ್ನು ಜಾರಿಗೆ ತರಲು 2026ರ ಗಡುವು ನೀಡಿದ್ದರೂ, ಸೌತ್ ವೆಸ್ಟ್ ಏರ್‌ಲೈನ್ಸ್ ಮುಂಚಿತವಾಗಿಯೇ ಅದನ್ನು ಅಳವಡಿಸಿ, ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ.
ಹಾಗಾದರೆ ಈ ಹೊಸ ಭದ್ರತಾ ವೈಶಿಷ್ಟ್ಯ ಏನು? ಸದ್ಯಕ್ಕೆ ವಿಮಾನಗಳಲ್ಲಿ ಕಾಕ್‌ಪಿಟ್‌ಗೆ ಪ್ರವೇಶಿಸಲು ಒಂದು ಬಾಗಿಲು ಇರುತ್ತದೆ, ಇದನ್ನು ವಿಮಾನದ ಸಿಬ್ಬಂದಿ ಮಾತ್ರ ಪ್ರವೇಶಿಸಬಹುದು. ಈ ಹೊಸ ನಿಯಮದ ಪ್ರಕಾರ, ಈ ಬಾಗಿಲಿನ ಹಿಂಭಾಗದಲ್ಲಿ ಇನ್ನೊಂದು ‘ಸೆಕೆಂಡರಿ ಕಾಕ್‌ಪಿಟ್ ಬ್ಯಾರಿಯರ್’ ಅಂದರೆ ಎರಡನೇ ಗೇಟ್ ಅಥವಾ ಎರಡನೇ ತಡೆದ್ವಾರವನ್ನು ಅಳವಡಿಸಬೇಕು.
ಇದನ್ನೂ ಓದಿ: ವಿಮಾನದಲ್ಲಿ ಕಿಟಕಿಗಳ ಮಹತ್ಚ
ಪೈಲಟ್‌ಗಳು ತಮ್ಮ ಪ್ರಮುಖ ಬಾಗಿಲನ್ನು ತೆರೆದು ಶೌಚಾಲಯಕ್ಕೆ ಅಥವಾ ಇನ್ನಿತರ ಕಾರ್ಯಗಳಿಗೆ ಹೊರಬಂದಾಗ, ಪ್ರಯಾಣಿಕರು ಅಥವಾ ಬೇರೆ ಯಾರಾದರೂ ಕಾಕ್‌ಪಿಟ್ ಪ್ರವೇಶಿಸುವುದನ್ನು ತಡೆಯುವುದು ಇದರ ಮುಖ್ಯ ಉದ್ದೇಶ. ಈ ಎರಡನೇ ಗೇಟ್ ಮುಚ್ಚಿರುವುದರಿಂದ ಪೈಲಟ್‌ಗಳು ಹೊರಗೆ ಬಂದಾಗಲೂ ಕಾಕ್‌ಪಿಟ್ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ.
ಈ ಸುರಕ್ಷತಾ ಕ್ರಮವನ್ನು 2001ರ ಸೆಪ್ಟೆಂಬರ್ 11ರ ದಾಳಿಯ ನಂತರ ವಿಮಾನಯಾನ ಭದ್ರತೆಯನ್ನು ಹೆಚ್ಚಿಸಲು ಪ್ರಸ್ತಾಪಿಸಲಾಗಿತ್ತು. ಆದರೆ, ಈ ಹೊಸ ನಿಯಮವನ್ನು ಜಾರಿಗೆ ತರಲು ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಹಲವು ವರ್ಷಗಳ ನಂತರ ನಿರ್ಧರಿಸಿತು.
ಹಾಗಾದರೆ ಇದು ಕೇವಲ ಸುರಕ್ಷತೆಗಾಗಿ ಮಾತ್ರವೇ? ಇದು ಕೇವಲ ಸುರಕ್ಷತೆಯ ವಿಷಯವಾಗಿರದೇ ಹಲವಾರು ಅಭಿಪ್ರಾಯಗಳಿಗೆ ಕಾರಣವಾಗಿದೆ. ವಿಮಾನಯಾನದಲ್ಲಿ ಸುರಕ್ಷತೆಗೆ ಮೊದಲ ಆದ್ಯತೆ. ಈ ಎರಡನೇ ತಡೆದ್ವಾರ ಹೈಜಾಕ್ ಅಥವಾ ಇತರ ದುಷ್ಕೃತ್ಯಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಒಂದು ವೇಳೆ ಯಾರಾದರೂ ಬಲವಂತವಾಗಿ ಕಾಕ್‌ಪಿಟ್ ಪ್ರವೇಶಿಸಲು ಪ್ರಯತ್ನಿಸಿದರೆ, ಈ ಹೆಚ್ಚು ವರಿ ಭದ್ರತಾ ತಡೆದ್ವಾರ ಭದ್ರತಾ ಸಿಬ್ಬಂದಿಗೆ ಕೂಡಲೇ ಕ್ರಮ ತೆಗೆದುಕೊಳ್ಳಲು ಅವಕಾಶ ನೀಡುತ್ತದೆ. ವಿಮಾನಯಾನ ಕಂಪನಿಗಳು ಈ ಹೊಸ ವೈಶಿಷ್ಟ್ಯವನ್ನು ಅಳವಡಿಸಲು ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗುತ್ತದೆ.

ಇದು ವಿಮಾನದ ಒಳಾಂಗಣ ವಿನ್ಯಾಸ ಮತ್ತು ನಿರ್ವಹಣಾ ವೆಚ್ಚವನ್ನು ಹೆಚ್ಚಿಸಬಹುದು. ಅಲ್ಲದೇ, ಇದರಿಂದ ಸಿಬ್ಬಂದಿಗೆ ಕೆಲವೊಮ್ಮೆ ಅನಾನುಕೂಲ ಉಂಟಾಗಬಹುದು. ವಿಮಾನಗಳಲ್ಲಿ ಈಗಾಗಲೇ ಇರುವ ನಿಯಮಗಳು ಮತ್ತು ಭದ್ರತಾ ವ್ಯವಸ್ಥೆಗಳು ಸಾಕಷ್ಟು ಸುರಕ್ಷಿತವಾಗಿವೆ.
ಹೀಗಿರುವಾಗ ಈ ಹೆಚ್ಚುವರಿ ವೈಶಿಷ್ಟ್ಯದ ಅವಶ್ಯಕತೆ ಇದೆಯೇ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಈ ರೀತಿಯ ಕಟ್ಟುನಿಟ್ಟಿನ ಕ್ರಮಗಳು ವಿಮಾನ ಪ್ರಯಾಣವನ್ನು ಅತಿಯಾಗಿ ನಿಯಂತ್ರಣಕ್ಕೆ ಒಳಪಡಿಸುತ್ತವೆ ಎಂದು ವಾದಿಸುವವರೂ ಇದ್ದಾರೆ. ಒಟ್ಟಾರೆಯಾಗಿ, ಸೌತ್‌ವೆಸ್ಟ್ ಏರ್‌ಲೈನ್ಸ್ ಈ ಹೊಸ ವೈಶಿಷ್ಟ್ಯವನ್ನು ಅಳವಡಿಸಿಕೊಳ್ಳುವ ಮೂಲಕ ವಿಮಾನ ಪ್ರಯಾಣದಲ್ಲಿ ಸುರಕ್ಷತೆಗೆ ಮತ್ತಷ್ಟು ಆದ್ಯತೆ ನೀಡಿದೆ.
ಇದು ಇತರ ಕಂಪನಿಗಳಿಗೂ ಮಾದರಿಯಾಗಿದ್ದು, ಭವಿಷ್ಯದಲ್ಲಿ ಎಲ್ಲ ಹೊಸ ವಿಮಾನಗಳಲ್ಲಿ ಈ ವ್ಯವಸ್ಥೆ ಇರಲಿದೆ. ಸುರಕ್ಷತೆ ದೃಷ್ಟಿಯಿಂದ ಒಂದು ವಿಮಾನಯಾನ ಸಂಸ್ಥೆ ಕ್ರಮ ಕೈಗೊಂಡರೆ ಉಳಿದವು ಹಿಂದೇಟು ಹಾಕುವುದಿಲ್ಲ. ಹೀಗಾಗಿ ಈ ತಡೆದ್ವಾರ ಮುಂಬರುವ ವಿಮಾನಗಳಲ್ಲಿ ಅಳವಡಿಕೆಯಾಗುವುದರಲ್ಲಿ ಯಾವ ಸಂದೇಹವೂ ಇಲ್ಲ.