Thursday, September 4, 2025
Thursday, September 4, 2025

ವಿಮಾನದಲ್ಲಿ ಕಿಟಕಿಗಳ ಮಹತ್ಚ

ವಿಮಾನದ ಕಿಟಕಿಗಳು ಒಂದು ಪ್ರಮುಖ ಸುರಕ್ಷತಾ ಕಾರ್ಯವನ್ನು ನಿರ್ವಹಿಸುತ್ತವೆ. ಅನಿರೀಕ್ಷಿತ ಸಂದರ್ಭಗಳಲ್ಲಿ, ವಿಮಾನದಲ್ಲಿ ಏನಾದರೂ ತೊಂದರೆ ಉಂಟಾದಾಗ, ಸಿಬ್ಬಂದಿ ಮತ್ತು ಪ್ರಯಾಣಿಕರು ವಿಮಾನದ ಹೊರಗಿನ ಪರಿಸ್ಥಿತಿಗಳನ್ನು ನೋಡಲು, ಅರಿಯಲು ಇವು ಸಹಾಯ ಮಾಡುತ್ತವೆ. ಇದರಿಂದ, ಹೊರಗಡೆ ಬೆಂಕಿ ಅಥವಾ ಇನ್ನಾವುದೇ ಅಪಾಯಗಳಿವೆಯೇ ಎಂದು ಪರಿಶೀಲಿಸಿ, ಸ್ಥಳಾಂತರ ಗೊಳ್ಳುವುದು ಸುರಕ್ಷಿತ ವೇ ಎಂದು ನಿರ್ಧರಿಸಲು ಸಹಾಯವಾಗುತ್ತದೆ.

ವಿಮಾನದ ಕಿಟಕಿಗಳ ಉದ್ದೇಶವೇನು, ವಿಮಾನದ ಕಿಟಕಿಗಳೇಕೆ ಅಷ್ಟು ಸಣ್ಣದಾಗಿರುತ್ತವೆ, ವಿಮಾನ ಗಳಿಗೆ ಕಿಟಕಿಗಳ ಅಗತ್ಯವಿದೆಯಾ ಎಂಬ ಪ್ರಶ್ನೆಗಳು ಪ್ರಯಾಣಿಕರ ಮನಸ್ಸಿನಲ್ಲಿ ಸುಳಿಯಬಹುದು.

ವಿಮಾನದ ವಿನ್ಯಾಸದಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಕಿಟಕಿಗಳು ಕೂಡ ಇದಕ್ಕೆ ಹೊರತಾಗಿಲ್ಲ ಎಂಬುದು. ಅನೇಕ ಪ್ರಯಾಣಿಕರು ಹೊರಗಿನ ನೋಟವನ್ನು ಆನಂದಿಸಲು ಕಿಟಕಿ ಸೀಟನ್ನು ಆರಿಸಿಕೊಳ್ಳುತ್ತಾರೆ. ಇನ್ನು ಕೆಲವರು, ಅದರಲ್ಲೂ ಆಗಾಗ ಪ್ರಯಾಣಿಸುವವರು, ಉದ್ದೇಶ ಪೂರ್ವಕವಾಗಿ ಕಿಟಕಿ ಸೀಟನ್ನು ಆರಿಸಿಕೊಳ್ಳುವುದಿಲ್ಲ. ಆದರೆ ಕೆಲವೇ ಜನರು ಈ ಕಿಟಕಿಗಳು ಕೇವಲ ಸೌಂದರ್ಯಕ್ಕೆ ಮಾತ್ರವಲ್ಲದೇ, ಇತರೆ ಪ್ರಾಯೋಗಿಕ ಕಾರ್ಯಗಳನ್ನು ನಿರ್ವಹಿಸುತ್ತವೆ ಎಂಬುದನ್ನು ತಿಳಿದಿರುತ್ತಾರೆ.

plane window 1

ವಿಮಾನದ ಕಿಟಕಿಗಳು ಒಂದು ಪ್ರಮುಖ ಸುರಕ್ಷತಾ ಕಾರ್ಯವನ್ನು ನಿರ್ವಹಿಸುತ್ತವೆ. ಅನಿರೀಕ್ಷಿತ ಸಂದರ್ಭಗಳಲ್ಲಿ, ವಿಮಾನದಲ್ಲಿ ಏನಾದರೂ ತೊಂದರೆ ಉಂಟಾದಾಗ, ಸಿಬ್ಬಂದಿ ಮತ್ತು ಪ್ರಯಾಣಿಕರು ವಿಮಾನದ ಹೊರಗಿನ ಪರಿಸ್ಥಿತಿಗಳನ್ನು ನೋಡಲು, ಅರಿಯಲು ಇವು ಸಹಾಯ ಮಾಡುತ್ತವೆ. ಇದರಿಂದ, ಹೊರಗಡೆ ಬೆಂಕಿ ಅಥವಾ ಇನ್ನಾವುದೇ ಅಪಾಯಗಳಿವೆಯೇ ಎಂದು ಪರಿಶೀಲಿಸಿ, ಸ್ಥಳಾಂತರಗೊಳ್ಳುವುದು ಸುರಕ್ಷಿತವೇ ಎಂದು ನಿರ್ಧರಿಸಲು ಸಹಾಯವಾಗುತ್ತದೆ. ಈ ಸುರಕ್ಷತೆಯ ಉದ್ದೇಶಕ್ಕಾಗಿಯೇ, ಟೇಕಾಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ಪ್ರಯಾಣಿಕರು ತಮ್ಮ ಕಿಟಕಿ‌ ಪರದೆಗಳನ್ನು ತೆರೆದಿಡಲು ಗಗನಸಖಿಯರು ಸೂಚಿಸುವುದು.

ಇದನ್ನೂ ಓದಿ: ನಾಯಿಗಳಿಗೂ ವಿಮಾನಯೋಗ

ವಿಮಾನ ಪ್ರಯಾಣದ ಈ ಹಂತಗಳಲ್ಲಿ ಅಪಾಯದ ಸಾಧ್ಯತೆ ಹೆಚ್ಚಿರುತ್ತದೆ. ಪರದೆಗಳನ್ನು ತೆರೆದಿಡುವುದರಿಂದ, ಕ್ಯಾಬಿನ್ ಸಿಬ್ಬಂದಿ ಹೊರಗಿನ ಪರಿಸ್ಥಿತಿಗಳನ್ನು ತಕ್ಷಣವೇ ಪರಿಶೀಲಿಸಬಹುದು ಮತ್ತು ಅಗತ್ಯವಿದ್ದರೆ, ಕೂಡಲೇ ಕ್ರಮ ಕೈಗೊಳ್ಳಬಹುದು.

ವಿಮಾನದ ಕಿಟಕಿಗಳು ಕೇವಲ ಪ್ರಯಾಣಿಕರ ಆರಾಮ ಅಥವಾ ನೋಟಕ್ಕಾಗಿ ಮಾತ್ರವಲ್ಲ, ಅವು ಪ್ರತಿಯೊಂದು ವಾಣಿಜ್ಯ ವಿಮಾನದ ವಿನ್ಯಾಸದಲ್ಲಿ ಅಳವಡಿಸಲಾಗಿರುವ ಒಂದು ಪ್ರಮುಖ ಸುರಕ್ಷತಾ ವೈಶಿಷ್ಟ್ಯವಾಗಿದೆ. ಪ್ರಯಾಣಿಕರ ಸುರಕ್ಷತೆಗಾಗಿ ವಿಮಾನದ ಕಿಟಕಿಗಳನ್ನು ಇನ್ನೂ ಕೆಲವು ವಿಶೇಷ ವೈಶಿಷ್ಟ್ಯಗಳೊಂದಿಗೆ ವಿನ್ಯಾಸಗೊಳಿಸಲಾಗಿರುತ್ತದೆ.

ವಿಮಾನದ ಕಿಟಕಿಗಳು ಸಾಮಾನ್ಯವಾಗಿ ಮೂರು ಪದರಗಳನ್ನು ಹೊಂದಿರುತ್ತವೆ. ಒಳಗಿನ ಮತ್ತು ಮಧ್ಯದ ಪದರಗಳು ರಕ್ಷಣಾತ್ಮಕವಾಗಿದ್ದು, ಹೊರಗಿನ ಪದರವು ವಿಮಾನದ ಅಧಿಕ ಒತ್ತಡವನ್ನು ತಡೆಯಲು ಸಹಾಯ ಮಾಡುತ್ತದೆ. ನೀವು ಕಿಟಕಿಗಳನ್ನು ಗಮನಿಸಿದರೆ, ಅದರ ಕೆಳಗಡೆ ಒಂದು ಸಣ್ಣ ರಂಧ್ರ ( The Bleed Hole) ಇರುವುದನ್ನು ನೋಡಬಹುದು.

ವಿಮಾನದ ಎತ್ತರ ಹೆಚ್ಚಾದಂತೆ, ಹೊರಗಿನ ಗಾಳಿಯ ಒತ್ತಡ ಕಡಿಮೆಯಾಗುತ್ತದೆ, ಆದರೆ ವಿಮಾನದ ಒಳಗಡೆ ಒತ್ತಡವನ್ನು ನಿಯಂತ್ರಿಸಿ ಸಹಜವಾಗಿ ಇರಿಸಲಾಗಿರುತ್ತದೆ. ಈ ರಂಧ್ರವು ಈ ಎರಡು ಒತ್ತಡಗಳ ನಡುವಿನ ವ್ಯತ್ಯಾಸವನ್ನು ಸಮತೋಲನಗೊಳಿಸುತ್ತದೆ. ಇದರಿಂದ ಕಿಟಕಿಗಳು ಬಿರುಕು ಬಿಡುವುದು ಅಥವಾ ಒಡೆಯುವುದು ತಪ್ಪುತ್ತದೆ. ಇದು ಒಂದು ಪ್ರಮುಖ ಸುರಕ್ಷತಾ ವೈಶಿಷ್ಟ್ಯ. ವಿಮಾನದ ಕಿಟಕಿಗಳನ್ನು ಗಾಜಿನ ಬದಲು ಹೆಚ್ಚು ಬಾಳಿಕೆ ಬರುವ ಮತ್ತು ಗಟ್ಟಿಯಾಗಿರುವ ವಸ್ತುಗಳಿಂದ ತಯಾರಿಸಲಾಗುತ್ತದೆ. ಈ ವಸ್ತುಗಳು ಯಾವುದೇ ಆಘಾತ ಅಥವಾ ತಾಪಮಾನದ ಬದಲಾವಣೆಗಳನ್ನು ಸುಲಭವಾಗಿ ತಡೆದುಕೊಳ್ಳಬಲ್ಲವು.

window

ಹೀಗಾಗಿ, ವಿಮಾನದ ಕಿಟಕಿಗಳು ಕೇವಲ ಆಕರ್ಷಕವಾಗಿ ಕಾಣಿಸುವುದು ಮಾತ್ರವಲ್ಲ, ಅವು ನಿಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪ್ರಮುಖ ಪಾತ್ರ ವಹಿಸುತ್ತವೆ. ಕಾರ್ಗೋ ವಿಮಾನಗಳಲ್ಲಿ ಕಿಟಕಿಗಳಿರುವುದಿಲ್ಲ. ಏಕೆಂದರೆ ಕಾರ್ಗೋ ವಿಮಾನಗಳ ವಿನ್ಯಾಸವು ಗರಿಷ್ಠ ಸರಕು ಸಾಗಣೆ ಸಾಮರ್ಥ್ಯ, ಸುರಕ್ಷತೆ ಮತ್ತು ಇಂಧನ ದಕ್ಷತೆಯನ್ನು ಗುರಿಯಾಗಿರಿಸಿಕೊಂಡಿದೆ.

ಪ್ರಯಾಣಿಕರಿಗೆ ಹೊರಗಿನ ನೋಟವು ಮುಖ್ಯವಾಗಿದ್ದರೆ, ಕಾರ್ಗೋ ವಿಮಾನಗಳಿಗೆ ಸಂಪೂರ್ಣವಾಗಿ ಕಾರ್ಯಕ್ಷಮತೆ ಮತ್ತು ತೂಕ ಮುಖ್ಯವಾಗಿರುತ್ತದೆ. ಕಿಟಕಿಗಳು ಮತ್ತು ಅವುಗಳ ಸುತ್ತ ಇರುವ ರಚನೆಗಳು ಗಣನೀಯ ತೂಕವನ್ನು ಹೊಂದಿರುತ್ತವೆ. ಕಿಟಕಿಗಳನ್ನು ತೆಗೆದುಹಾಕುವುದರಿಂದ ವಿಮಾನದ ತೂಕ ಕಡಿಮೆಯಾಗುತ್ತದೆ. ಇದರಿಂದ ಇಂಧನ ಉಳಿತಾಯವಾಗುತ್ತದೆ. ಕಾರ್ಗೋ ವಿಮಾನಗಳಲ್ಲಿ ಹೆಚ್ಚುವರಿ ಕಿಲೋ ತೂಕವು ಕೂಡಾ ಆದಾಯದ ಮೇಲೆ ಪರಿಣಾಮ ಬೀರುವುದರಿಂದ, ತೂಕವನ್ನು ಕಡಿಮೆ ಮಾಡುವುದು ಮುಖ್ಯ.

Vishweshwar Bhat

Vishweshwar Bhat

Editor in Chief

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?