Saturday, March 28, 2026
Saturday, March 28, 2026

ಡಾರ್ಕ್ ಟೂರಿಸಂ ಸೃಷ್ಟಿಗಾಗಿ ಯುದ್ಧ ಬಯಸಬೇಕೇ?

ಯುದ್ಧವು ಪ್ರವಾಸೋದ್ಯಮದ ಮೇಲೆ ಬೀರುವ ಪ್ರಭಾವ ಅಗಾಧ. ಹಲವಾರು ರೀತಿಯಲ್ಲಿ ಪರಿಣಾಮಗಳು ಯುದ್ಧಭೂಮಿಯ ಆಚೆಗೆ ಮನುಕುಲದ ನಿರಂತರತೆಯ ಮೇಲೂ ಇದೇ ಎನ್ನುವುದನ್ನು ಮೇಲ್ನೋಟಕ್ಕೆ ನಂಬಲು ಸಾಧ್ಯವಾಗುವುದಿಲ್ಲ. ನೇರವಾಗಿ ಯುದ್ಧದಲ್ಲಿ ಗುರಿಯಾಗದಿರುವ ಜನರ ಮನಸಿನ ಮೇಲೆ ಯುದ್ಧದ ಮೊದಲ ಪ್ರಭಾವ ಎಂದರೆ ಅಸುರಕ್ಷಿತ ಭಾವ ಬಿತ್ತುವುದು. ಜಗತ್ತಿನ ಮೇಲೆ ವಿಶ್ವಾಸ ಕಳೆದು ಹೋಗುತ್ತದೆ.

  • ಅಂಜಲಿ ರಾಮಣ್ಣ

“ಯುದ್ಧ ಆಗ್ತಿರೋದು ಒಳ್ಳೆಯದೇ ಆಯ್ತು ನೋಡಿ. ಪ್ರವಾಸ ಪ್ರವಾಸ ಅಂತ ಮೋಜಿಗಾಗಿ ಹೋಗಿ ಎಲ್ಲಾ ಜಾಗಗಳನ್ನು ಮನುಷ್ಯ ಕೆಡಿಸೋದು ತಪ್ಪಿತು” ಅಂತ ಮೊನ್ನೆ ಇಬ್ಬರು ಸಹೋದ್ಯೋಗಿಗಳು ಮಾತನಾಡಿಕೊಳ್ಳುತ್ತಿದ್ದದ್ದು ಕಿವಿಗೆ ಬಿತ್ತು. ಪ್ರವಾಸ ಎನ್ನುವುದಕ್ಕೆ ಮೋಜು ಮಸ್ತಿ ಎನ್ನುವ ಸೀಮಿತ ವ್ಯಾಖ್ಯಾನ ಕೊಟ್ಟಾಗ ಹೀಗೆ ಯುದ್ಧವಾಗುವುದು ಕೂಡ ಒಳ್ಳೆಯದೇ ಅನಿಸಿಬಿಡುತ್ತದೆ ಕೃಪಣ ಮನಸಿಗೆ. ಇಂದಿನ ಯುದ್ಧವು ಪ್ರವಾಸಕ್ಕೆ ಇರುವ ನಾನಾ ಮುಖಗಳ ಪರಿಚಯ ಮಾಡಿಕೊಡುವ ಒಂದು ಮಜಲು ಅಷ್ಟೇ. ಯುದ್ಧವು ನಿಗದಿತ ಸಮಯದಲ್ಲಿ ನಡೆದು ನಿಂತರೂ ಅದರ ಪರಿಣಾಮ ಹಲವಾರು ದಶಮಾನಗಳು ಇರುವುದನ್ನು ಈ ಜಗತ್ತು ಈಗಾಗಲೇ ಅನುಭವಕ್ಕೆ ತಂದುಕೊಂಡಿದೆ. ಯುದ್ಧವು ಪ್ರವಾಸೋದ್ಯಮದ ಮೇಲೆ ಬೀರುವ ಪ್ರಭಾವ ಅಗಾಧ. ಹಲವಾರು ರೀತಿಯಲ್ಲಿ ಪರಿಣಾಮಗಳು ಯುದ್ಧಭೂಮಿಯ ಆಚೆಗೆ ಮನುಕುಲದ ನಿರಂತರತೆಯ ಮೇಲೂ ಇದೇ ಎನ್ನುವುದನ್ನು ಮೇಲ್ನೋಟಕ್ಕೆ ನಂಬಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ: ಪ್ರವಾಸಿಗರಿಗೆ ಹೊಸ ಯುದ್ಧಸ್ಮಾರಕ ನೋಡುವ ಸಂಕಟ ಬಾರದಿರಲಿ

ನೇರವಾಗಿ ಯುದ್ಧದಲ್ಲಿ ಗುರಿಯಾಗದಿರುವ ಜನರ ಮನಸಿನ ಮೇಲೆ ಯುದ್ಧದ ಮೊದಲ ಪ್ರಭಾವ ಎಂದರೆ ಅಸುರಕ್ಷಿತ ಭಾವ ಬಿತ್ತುವುದು. ಜಗತ್ತಿನ ಮೇಲೆ ವಿಶ್ವಾಸ ಕಳೆದು ಹೋಗುತ್ತದೆ. ಈಗಾಗಲೇ ಪ್ರವಾಸಕ್ಕಾಗಿ ಮಾಡಿಕೊಂಡಿರುವ ಬುಕಿಂಗ್ಅನ್ನು ರದ್ದು ಪಡಿಸುವುದರಿಂದ ಹಣದ ನಷ್ಟ ಮಾತ್ರವಲ್ಲ ನಿರಾಸೆಯ ಆಘಾತವನ್ನು ಎದುರಿಸಬೇಕಿರುತ್ತದೆ. ಅಷ್ಟೇ ಅಲ್ಲ ಕಳೆದುಹೋದ ಧೈರ್ಯವನ್ನು ಮತ್ತೆ ಒಟ್ಟುಗೂಡಿಸಿಕೊಂಡು ಪ್ರವಾಸಕ್ಕೆ ಹೊರಡಲು ವರ್ಷಗಳೇ ಬೇಕಾದೀತು. ಶಾಂತಿಯ ಸಂಪೂರ್ಣ ಪುನಶ್ಚೇತನ ಅಷ್ಟು ಸುಲಭವಲ್ಲ.

Untitled design - 2026-03-27T201558.676

ಮಾರುಕಟ್ಟೆಯೂ ಬದಲಾಗಿ ಹೋಗುತ್ತದೆ. ವ್ಯಾಪಾರ, ಐಷಾರಾಮಿ ಮತ್ತು ವಿರಾಮ ಪ್ರವಾಸಗಳು ಮುಂದಿನ ಸಮಯದಲ್ಲಿ ವೇಗವಾಗಿ ಕಡಿಮೆಯಾಗುತ್ತವೆ. ವಿಮಾನ ನಿಲ್ದಾಣಗಳು, ರಸ್ತೆಗಳು, ಹೊಟೇಲ್‌ಗಳು, ತಂಗುದಾಣಗಳು, ಕ್ರೀಡಾ ಕೇಂದ್ರಗಳು ಹಾನಿಗೊಂಡಾಗ ಪುನರ್ ನಿರ್ಮಾಣ ಮಾಡಿ ಅದೇ ಉದ್ಯಮದಲ್ಲಿ ತೊಡಗಿಕೊಳ್ಳುವುದು ಅಪರೂಪ. ಬಹಳಷ್ಟು ಕಾಲ ಈ ಸ್ಥಳಗಳನ್ನು ಸೇನೆಗಳ ಅವಶ್ಯಕತೆಗಾಗಿ ಬಳಸಿಕೊಳ್ಳಲಾಗುತ್ತದೆ. ಐತಿಹಾಸಿಕ ಸ್ಥಳಗಳು ಹಿಂದಿನ ಇತಿಹಾಸದ ಯಾವ ಕುರುಹನ್ನೂ ಉಳಿಸದೆ ಪಳಿಯುಳಿಕೆಯಾಗಿ ಒಂದಷ್ಟು ಸ್ಥಳವನ್ನು ಆಕ್ರಮಿಸಿಕೊಳ್ಳುತ್ತವೆ ಅಷ್ಟೇ. ದೇಶರಕ್ಷಣೆ, ಪ್ರಜೆಗಳ ಮೂಲಭೂತ ಸೌಲಭ್ಯಗಳ ಮರುಸೃಷ್ಟಿಗೆ ಪ್ರವಾಸೋದ್ಯಮದಿಂದ ಬರುತ್ತಿದ್ದ ಹಣದ ನಿಲುಗಡೆಯಿಂದಾಗಿ ದೇಶದ ರಕ್ಷಣೆ ಮತ್ತು ಪ್ರಜೆಗಳ ಮೂಲಭೂತ ಸೌಕರ್ಯಗಳ ಮರುಸೃಷ್ಟಿ ಮಂದಗತಿಯಾಗುತ್ತದೆ.

ಬೇರೆಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಜನರು ಗತ್ಯಂತರವಿಲ್ಲದೆ ಒಂದೋ ಕಡ್ಡಾಯವಾಗಿ ಸೇನೆ ಸೇರುತ್ತಾರೆ ಇಲ್ಲವೇ ವಲಸೆ ಹೋಗಿಬಿಡುತ್ತಾರೆ. ಮಾನಸಿಕ ಅನಾರೋಗ್ಯ, ಕುಗ್ಗಿದ ದೈಹಿಕ ಸಾಮರ್ಥ್ಯದಿಂದ ಪ್ರವಾಸಿಗರಿಗೆ ಬೇಕಾದ ಆಕರ್ಷಣೆ ಮತ್ತು ಅವಶ್ಯಕತೆಗಳನ್ನು ಕಟ್ಟುವುದರಲ್ಲಿ ಗುಣಮಟ್ಟ ಇಳಿಯುತ್ತದೆ. ಸಮಯವೂ ಗೊತ್ತು ಗುರಿಯಿಲ್ಲದೇ ಓಡುತ್ತದೆ.

ಪ್ರವಾಸಕ್ಕೆ ಹೋಗುವವರು ವಿಮಾನಯಾನ ಮತ್ತು ವೀಸಾ ಅವಧಿಗೆ ಹೊಂದಾಣಿಕೆಯಾಗುವಷ್ಟು ಜೀವವಿಮೆಯನ್ನು ಮಾಡಿಸಬೇಕಿರುತ್ತದೆ ಇನ್ನು ಮುಂದೆ ವಿಮೆಯ ಮೊತ್ತವೂ ಹೆಚ್ಚುತ್ತದೆ. ವೆಚ್ಚವನ್ನು ಕಡಿಮೆಗೊಳಿಸುವ ಉದ್ದೇಶದಿಂದ ಮಾರ್ಗದರ್ಶಿ, ಚಾಲಕ, ಆಹಾರ ಸೇವೆ ಮುಂತಾದ ಪ್ರವಾಸ ಸಂಬಂಧಿತ ಉದ್ಯೋಗಗಳು ಕಣ್ಮರೆಯಾಗುತ್ತವೆ. ವಿದೇಶಿ ವಿನಿಮಯ ಕಡಿಮೆಯಾಗುವುದು. ಪ್ರವಾಸದಿಂದ ಬರುತ್ತಿದ್ದ ಆದಾಯ ಕಡಿಮೆಯಾಗಿ ಸರ್ಕಾರಕ್ಕೆ ತೆರಿಗೆಯ ಆದಾಯ ಇಳಿಮುಖವಾಗುತ್ತದೆ. ಅದು ನೇರವಾಗಿ ಪ್ರಜೆಗಳ ಬೊಕ್ಕಸಕ್ಕೆ ಬೀಳುವ ಹೊಡೆತವಾಗಿರುತ್ತದೆ.

ಧ್ವಂಸಗೊಂಡ ಐತಿಹಾಸಿಕ ಸ್ಥಳಗಳನ್ನು ಪುನರ್ ನಿರ್ಮಾಣ ಮಾಡಿದರೂ ಅದು ಮೂಲ ಇತಿಹಾಸದ ಅಥವಾ ಪುರಾಣದ ಪ್ರಾಮಾಣಿಕತೆಯನ್ನು ಉಳಿಸಿಕೊಳ್ಳಲಾರದು. ಹಾಗಾಗಿ ಜನಾಕರ್ಷಣೆಯನ್ನು ನಿರೀಕ್ಷಿಸಲಾಗದು. ಸಾಂಸ್ಕೃತಿಕ ಚಿತ್ರಣವು ಯುದ್ಧ ಕಾಲದಲ್ಲಿ ಅನುಭವಿಸಿದ ನೋವಿಗೆ ತಕ್ಕಂತೆ ಬದಲಾಗಿ ಹೋಗುತ್ತದೆ. ಸಹಜತೆ ಮತ್ತು ಸತ್ಯವನ್ನು ಲೈಬ್ರರಿಗಳಲ್ಲಿ ಮಾತ್ರ ಕಾಣುವಂತಾಗುತ್ತದೆ. ಆಯಾ ಸಮಯವನ್ನು ತನ್ನ ಗರ್ಭದಲ್ಲಿ ಹೊತ್ತು ನಿಂತಿದ್ದ ಗ್ರಂಥಗಳೂ, ಸಾಹಿತ್ಯ, ಜಾನಪದವೂ ನಶಿಸಿಹೋಗುತ್ತವೆ ಯುದ್ಧದ ಕಾವಿಗೆ.

ಚೇತರಿಸಿಕೊಂಡ ಕೆಲವು ದೇಶಗಳು ‘ಡಾರ್ಕ್ ಟೂರಿಸಮ್’ (ಯುದ್ಧ ಭೂಮಿಯಲ್ಲಿ ನಿರ್ಮಾಣವಾದ ಸ್ಮಾರಕಗಳನ್ನು ನೋಡಲು ಮಾಡುವ ಪ್ರವಾಸ ) ಅನ್ನು ಅಭಿವೃದ್ಧಿ ಪಡಿಸುವತ್ತ ಅನಿವಾರ್ಯದ ಆಸಕ್ತಿಯನ್ನು ತೋರಬಹುದು ಆದರೆ ನೋಡುವವರಿಗೂ ಅದಕ್ಕಾಗಿ ಹಣ ವ್ಯಯಿಸಿ ಪ್ರವಾಸ ಮಾಡುವ ಮನಸು ಇರುವುದು ಅಪರೂಪ. ಹಾಗಾಗಿ ಅದೊಂದು ಅಧ್ಯಯನ ಪ್ರವಾಸ ಆಗಬಹುದು ಅಷ್ಟೇ. ಯಾವುದರದ್ದೇ ಪುನರ್ ನಿರ್ಮಾಣದ ಬಗೆಗಿನ ಪ್ರಚಾರಕ್ಕೆ ದುಬಾರಿ ಹಣ ತೆತ್ತಬೇಕಿರುತ್ತದೆ ಸರಕಾರಗಳು.

ಯುದ್ಧದಲ್ಲಿ ನೇರವಾಗಿ ಪಾಲ್ಗೊಳ್ಳದ ದೇಶಗಳಲ್ಲೂ ಜನಜೀವನದ ಮೇಲೆ ಪರೋಕ್ಷ ಹೊಡೆತ ಬೀಳುವುದರಿಂದಾಗಿ ದೇಶದೊಳಗಿನ ಪ್ರವಾಸವೂ ಅದರಿಂದಾಗುತ್ತಿದ್ದ ಆದಾಯವೂ ಕುಂಟುತ್ತದೆ. ಇಷ್ಟೆಲ್ಲಾ ನಷ್ಟಗಳೇ ಇರುವಾಗ ಯಾಕಾಗಿ ಪ್ರವಾಸ ಮಾಡಬೇಕು ಎನ್ನುವ ಪ್ರಶ್ನೆ ಹುಟ್ಟಿದ್ದೇ ಆದರೆ ಅದು ಸಮಾಜದ ಸಾಗುವಳಿಯ ಬಗ್ಗೆ, ಆರ್ಥಿಕತೆ, ಆರೋಗ್ಯಗಳ ಬಗ್ಗೆ ನಮಗೆ ಇರುವ ಮೌಢ್ಯ ಎಂದಾಗುತ್ತದೆ.

ಪ್ರವಾಸ ಎಂದರೆ ಬರಿಯ ವಿಹಾರವಲ್ಲ. ಬುದ್ಧಿಗೆ, ಭಾವಕ್ಕೆ, ಸ್ವಾಸ್ಥ್ಯಕ್ಕೆ ಇರುವ ಆಹಾರವದು. ವಿಚಾರ ವಿಸ್ತಾರಕ್ಕೆ ಇರುವ ಮಾರ್ಗವದು. ಪ್ರವಾಸಿಗೆ ಅದು ಮನೋರಂಜನೆಯಾದರೂ ನಿವಾಸಿಗಳಿಗೆ ಬದುಕು ಕಟ್ಟಿಕೊಳ್ಳಲು ಇರುವ ಆಸರೆ ಅದು. ಪ್ರವಾಸವನ್ನು ಉದ್ಯಮವಾಗಿ ಗುರುತಿಸುವಾಗ ಜನರು ಯಾಕಾಗಿ ಪ್ರಯಾಣಿಸುತ್ತಾರೆ ಮತ್ತು ಏನನ್ನು ಮಾಡುತ್ತಾರೆ ಎನ್ನುವ ಅಧ್ಯಯನ ನಡೆಸಿ ಫಲಿತಾಂಶದ ಆಧಾರದ ಮೇಲೆ ಪ್ರವಾಸವನ್ನು ಹಲವು ವಿಧಗಳಲ್ಲಿ ವಿಂಗಡಿಸಲಾಗಿದೆ.

Untitled design - 2026-03-27T201551.842

ವಿರಾಮ ಪ್ರವಾಸ, ಸಾಂಸ್ಕೃತಿಕ ಪ್ರವಾಸ, ಪರಿಸರ ಪ್ರವಾಸ, ಸಾಹಸ ಪ್ರವಾಸ, ಪಾಕಕಲೆ ಕಲಿಕೆ ಮತ್ತು ಪ್ರಸರಣ ಪ್ರವಾಸ, ಆರೋಗ್ಯ ಮತ್ತು ಸುಸ್ಥಿತಿ ಪ್ರವಾಸ, ವ್ಯಾಪಾರ–ವಹಿವಾಟು ಪ್ರವಾಸ, ಆಧ್ಯಾತ್ಮಿಕ ಪ್ರವಾಸ, MICE ಪ್ರವಾಸ (Meetings, Incentives, Conferences and Exhibitions) ಕೃಷಿ ಪ್ರವಾಸ, VFR ಪ್ರವಾಸ ( Visiting Friends and Family), ವಿದ್ಯಾಭ್ಯಾಸಕ್ಕಾಗಿ ಪ್ರವಾಸ, ಡಾರ್ಕ್ ಟೂರಿಸಂ, ಪುನರುತ್ಪಾದಕ ಪ್ರವಾಸ ಹೀಗೆ ಇನ್ನೂ ಹಲವು ವಿಭಾಗಗಳಲ್ಲಿ ಅವಿರ್ಭವಿಸಿಕೊಳ್ಳುವ ಪ್ರವಾಸ ಎನಿಸಿಕೊಳ್ಳುವ ಪ್ರಯಾಣಕ್ಕೆ ಒಪ್ಪಿಗೆ ಕೊಡಲು ಇರುವ ವೀಸಾ ವಿಭಾಗಗಳದ್ದೇ ಒಂದು ಬೃಹತ್ತಾದ ಮತ್ತು ರೋಚಕವಾದ ಉದ್ಯಮ. ಅದೂ ಈಗ ಜರ್ಜರಿತಗೊಂಡಿದೆ.

ಈ ಯುದ್ಧ ಕಾಲದಲ್ಲಿ ಸ್ಥಗಿತವಾಗಿರುವ ಪ್ರವಾಸ ಎನ್ನುವ ಚಲನೆಯಲ್ಲಿ ನಿಸ್ತೇಜರಾಗಿದ್ದಾರೆ ದೂರದೇಶದಲ್ಲಿರುವ ತನ್ನ ಮಗಳನ್ನು ಕಾಣದೆ ಕೊರಗುತ್ತಿರುವ ತಂದೆ, ತಾಯಿಯ ಚಿಕಿತ್ಸೆಗೆ ಬಂದು ಪಕ್ಕದಲ್ಲಿ ನಿಲ್ಲಲಾಗದೆ ವಿದೇಶದಲ್ಲಿ ಅಳುತ್ತಿರುವ ಮಗ, ಗಂಡನ ಹೃದಯ ಶಸ್ತ್ರಚಿಕಿತ್ಸೆಗೆ ಪಯಣಿಸಲಾರದೇ ಕೊರಗುತ್ತಿರುವ ಹೆಂಡತಿ, ಹೊರ ದೇಶದ ನೆರವು ನಂಬಿ ಕೋಟಿ ಸಾಲ ಮಾಡಿ ಹೊಸ ಉದ್ದಿಮೆ ಶುರು ಮಾಡಿ ಅತಂತ್ರಕ್ಕೀಡಾಗಿರುವ ಉದ್ಯಮಿ, ಕುಟುಂಬ ನಿರ್ವಹಣೆಗೆ ತಿಂಗಳು ತಿಂಗಳು ಮತ್ತೊಂದು ದೇಶಕ್ಕೆ ಹೋಗಿ ಗುತ್ತಿಗೆಯಲ್ಲಿ ಕೆಲಸ ಮಾಡಿ ಸಂಪಾದನೆ ಮಾಡುತ್ತಿದ್ದ ಅವನು, ಅಂಗವಿಕಲ ಮಗುವನ್ನು ಆಶ್ರಮದಲ್ಲಿ ಬಿಟ್ಟು ಪರದೇಶದಲ್ಲಿ ನರ್ಸ್ ಕೆಲಸ ಮಾಡುತ್ತಾ ಆಗಾಗ್ಗೆ ಮಗುವನ್ನು ನೋಡಲು ಬರುವ ಅವಳು, ಖಿನ್ನತೆಯಿಂದ ಹೊರಬರಲು ಪ್ರವಾಸ ಹೊರಟು ರದ್ದುಗೊಂಡ ಟಿಕೆಟ್ ಅನ್ನು ಕೈಯಲ್ಲಿ ಹಿಡಿದು ನೋಡುತ್ತಿರುವ ಪಕ್ಕದ ಮನೆಯ ಯುವಕ, ಜೀವನದ ಒಂದೇ ಒಂದು ಕನಸನ್ನು Destination Weddingನಲ್ಲಿ ಸಾಕಾರಗೊಳಿಸಿಕೊಳ್ಳಲು ಸಜ್ಜಾಗಿ ನಿಂತಿದ್ದ ಆ ಹೊಸ ಹುಡುಗಿ ಹಾಗೂ ಇವರೆಲ್ಲರ ನಿಂತು ಹೋದ ಹೆಜ್ಜೆಗಳಲ್ಲಿ ಅಭದ್ರತೆಯನ್ನು ಅನುಭವಿಸುತ್ತಿರುವ ನಾವು. ಹೀಗೆ ಬದುಕನ್ನೇ ಆಪೋಷಣ ತೆಗೆದುಕೊಂಡಿರುವ ಯುದ್ಧವು ಪ್ರವಾಸವನ್ನು ಸ್ಥಿತ್ಯಂತರಗೊಳಿಸಿದೆ. ಸಾಮಾಜಿಕ, ಆರ್ಥಿಕ, ಆರೋಗ್ಯ, ಕಲಿಕೆ, ಗಳಿಕೆ, ಭಾವ, ಜೀವ ಎಲ್ಲಕ್ಕೂ ಬೇಗ ಪ್ರವಾಸ ಒದಗಿ ಬರಲಿ ಎನ್ನುವುದು ಈ ಹೊತ್ತಿನ ಪ್ರಾರ್ಥನೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?