Wednesday, August 12, 2026
Wednesday, August 12, 2026

ಸುಳ್ಳಲ್ಲ.. ನಂಬಿ..! ಇದು ಸೊಳ್ಳೆ ಬಿಡುಗಡೆಯ ಪ್ರವಾಸೋದ್ಯಮ!

ಇದು ಸೊಳ್ಳೆ ಬಿಡುಗಡೆಯ ಪ್ರವಾಸೋದ್ಯಮ. ನೀವು ಇನ್ನೂ ಕೇಳಿಲ್ಲದಿದ್ದರೆ, ಇನ್ನು ಮುಂದೆ ಕೇಳುವಿರಿ ಪದೇಪದೆ ಕೇಳಲಿರುವಿರಿ ಮತ್ತು ಪ್ರಯಾಣಕ್ಕೆ ಹೊರಡುವಿರಿ ಕೂಡ. ಏಕೆಂದರೆ ಈ ಶತಮಾನದ ಏಕೈಕ ವೈಜ್ಞಾನಿಕ ಕಾವ್ಯ ಈ ಪ್ರವಾಸ ಆಗಲಿದೆ. ಅನಿರೀಕ್ಷಿತ ಸಾಹಸವೂ ಇದಾಗಿರಬಹುದು ಮತ್ತು ಕುತೂಹಲಕಾರಿ ವಿಷಯವೆಂದರೆ ಈ ಪ್ರಯಾಣಕ್ಕೆ ಹೋಗಲು ನಾವುಗಳು ವಿಜ್ಞಾನಿಯಾಗಿರಬೇಕಿಲ್ಲ.

  • ಅಂಜಲಿ ರಾಮಣ್ಣ

ಒಂದು ಕಾಲವಿತ್ತು, ಪ್ರವಾಸ ಎಂದರೆ ಹೊಸ ಕ್ಷಿತಿಜಗಳ ಹುಡುಕಾಟ, ಮೊಹರುಗಳಿಂದ ತುಂಬಿದ ಪಾಸ್‌ಪೋರ್ಟ್, ಸೂರ್ಯಾಸ್ತಗಳಿಗೆ ಸಾಕ್ಷಿಯಾದ ಕ್ಯಾಮೆರಾ, ಮರೆಯಾದರೂ ಮನದಿಂದ ಅಳಿಯದ ಕಡಲ ಮರಳಿನಲ್ಲಿ ಮೂಡಿದ್ದ ಪಾದಗಳು. ನೀಲಿಯಲ್ಲಿ ಅಲೆಯಾದ ನೀರು, ಕಲ್ಲು ಹೇಳಿದ ಕಥೆಗಳು, ಸಂಜೆಯ ಮಾರುಕಟ್ಟೆಗಳಲ್ಲಿ ಸಿಗುವ ಮಸಾಲೆಯ ಪರಿಮಳ ಹೀಗೆ ಪ್ರಯಾಣವನ್ನು ಕಟ್ಟಿಕೊಡಬಹುದಿತ್ತು. ಆದರೆ ಈಗ ಪ್ರವಾಸವು ಅದರ ಚರ್ಯೆಯನ್ನು ಬದಲಾದ ನಾನಾ ಮುಖಗಳಲ್ಲಿ ತೋರಿಸುತ್ತಿದೆ. ಪ್ರವಾಸಿಗರ ’ದಾಹ ಜೋಳಿಗೆ’ಯನ್ನು ವಿಭಿನ್ನವಾದ ಸೊಗಸಿನಿಂದ, ಕುತೂಹಲದಿಂದ ತುಂಬಿಸುತ್ತಿದೆ.

ಪ್ರಯಾಣದ ಬ್ಯಾಗ್ ಈಗ ಸನ್‌ಸ್ಕ್ರೀನ್ ಟ್ಯೂಬ್‍ನಿಂದಷ್ಟೇ ತುಂಬಿರುವುದಿಲ್ಲ, ಶೂಸ್‌, ಟೋಪಿ, ತಂಪು ಕನ್ನಡಕಗಳಿಂದ ಮಾತ್ರವಲ್ಲ; ಪ್ರಶ್ನೆಗಳನ್ನು, ವಿಚಿತ್ರವಾದ ಧೈರ್ಯವನ್ನು ಒಳಗಿಳಿಸಿಕೊಂಡಿದೆ. ಪ್ರವಾಸಿಯ ದಿಕ್ಸೂಚಿ ಬರೀ ಕೋಟೆ ಕೊತ್ತಲ, ಕಡಲ ಕಿನಾರೆಗಳ ಕಡೆಗೆ ಮಾತ್ರವಲ್ಲ ಸೊಳ್ಳೆಗಳ ಬಿಡುಗಡೆಯತ್ತಲೂ ತಿರುಗಿದೆ. ಹೌದು, ’ಸೊಳ್ಳೆಗಳ ಬಿಡುಗಡೆ’ ಇದನ್ನು ನೋಡಲು ಪ್ರವಾಸ ಏರ್ಪಾಡಾಗುತ್ತಿದೆ. ಮನುಷ್ಯನನ್ನು ಉಳಿಸಲು ಸೊಳ್ಳೆಗಳನ್ನು ಮುಕ್ತವಾಗಿಸುವ ಪ್ರಯೋಗಾಲಯಗಳು ಮೌನವಾಗಿ ಗುನುಗುತ್ತಾ ಪ್ರವಾಸಿಯನ್ನು ಕರೆಯುತ್ತಿವೆ.

ಇದನ್ನೂ ಓದಿ: ಶಾಂತಿಗಾಗಿ ನಲವತ್ತು ಸಾವಿರ ಹೃದಯಗಳ ಲಬ್‌ಡಬ್‌ ಲಬ್‌ಡಬ್‌!

ಇದು ಸೊಳ್ಳೆ ಬಿಡುಗಡೆಯ ಪ್ರವಾಸೋದ್ಯಮ. ನೀವು ಇನ್ನೂ ಕೇಳಿಲ್ಲದಿದ್ದರೆ, ಇನ್ನು ಮುಂದೆ ಕೇಳುವಿರಿ ಪದೇಪದೆ ಕೇಳಲಿರುವಿರಿ ಮತ್ತು ಪ್ರಯಾಣಕ್ಕೆ ಹೊರಡುವಿರಿ ಕೂಡ. ಏಕೆಂದರೆ ಈ ಶತಮಾನದ ಏಕೈಕ ವೈಜ್ಞಾನಿಕ ಕಾವ್ಯ ಈ ಪ್ರವಾಸ ಆಗಲಿದೆ. ಅನಿರೀಕ್ಷಿತ ಸಾಹಸವೂ ಇದಾಗಿರಬಹುದು ಮತ್ತು ಕುತೂಹಲಕಾರಿ ವಿಷಯವೆಂದರೆ ಈ ಪ್ರಯಾಣಕ್ಕೆ ಹೋಗಲು ನಾವುಗಳು ವಿಜ್ಞಾನಿಯಾಗಿರಬೇಕಿಲ್ಲ.

Untitled design (83)

ಇದೊಂದು ಯಾರೂ ಕಲ್ಪಿಸದ ಆಕರ್ಷಣೆಯೇ ಆಗಿದೆ. ಹೀಗೆ ಊಹಿಸಿಕೊಳ್ಳಿ, ನೀವು ಸಿಂಗಾಪುರ್‌ನಲ್ಲಿ ಮುಂಜಾನೆ ವಿಮಾನ ನಿಲ್ದಾಣದಿಂದ ಹೊರ ಬರುತ್ತೀರಿ. ಲಿಟಲ್ ಇಂಡಿಯಾಕ್ಕೆ ಹೋಗಲು ಮೊದಲೇ ಯೋಜನೆ ತಯಾರಿದೆ. ಮುಸ್ತಫಾದಲ್ಲಿ ಖರೀದಿ ಮಾಡಬೇಕಿರುವ ಸಾಮಾನುಗಳ ಪಟ್ಟಿಯು ಕೈಯಲ್ಲಿದೆ. ಹತ್ತು ಹೆಜ್ಜೆಗೊಮ್ಮೆ ತುಂತುರು ಮಳೆ, ಐದೇ ಹೆಜ್ಜೆಗಳಲ್ಲಿ ಬೆವರು ಒರೆಸಿಕೊಳ್ಳುತ್ತಾ ’ವಾಹ್ ವಾಗ್ದಾನದಷ್ಟು ಕರಾರುವಕ್ಕಾದ ನಗರವಿದು’ ಎಂದುಕೊಳ್ಳುವಷ್ಟರಲ್ಲಿ ನಿಮ್ಮ ಕಾರು ಆಂಗ್ ಮೋ ಕಿಯೊದ ಕೈಗಾರಿಕಾ ಪ್ರದೇಶದ ತಿರುವಿಗೆ ಹೊರಳುತ್ತದೆ.

ಅಲಂಕಾರ ರಹಿತ ಸರಳ ಕಟ್ಟಡದ ಬಾಗಿಲು ತೆರೆಯುತ್ತದೆ. ಒಳಗಿನ ತಂಪು ಹವೆಗೆ ಹಣೆಯೊಡ್ಡುವಾಗ ಕೋಣೆಯನ್ನು ತುಂಬುತ್ತದೆ ಮೃದುವಾದ ಶಬ್ದ. ಆದರೆ ಅದು ಸಂಗೀತವಲ್ಲ. ಲಕ್ಷಾಂತರ ಕಾಗದದ ರೆಕ್ಕೆಗಳು ಒಂದಕ್ಕೊಂದು ಉಜ್ಜಿದಾಗ ಏಳುವ ಗುಂಯ್‍ಗುಡುವ ಸದ್ದು. ಒಂದು ಭುಜದಷ್ಟೇ ಅಂತರದಲ್ಲಿ ಬಿಳಿಬಿಳಿ ಪಂಜರಗಳ ಸಾಲುಗಳು. ಪ್ರತಿಯೊಂದರ ಒಳಗೆ Aedes aegypti ಗಂಡು ಸೊಳ್ಳೆಗಳು ತೇಲುತ್ತಾ ವಿಶ್ರಮಿಸುತ್ತಿವೆ. ಏಕ್‍ದಂ ಮೈಯೆಲ್ಲಾ ಸೊಳ್ಳೆ ಕಚ್ಚಿದ ಅನುಭವದಂತಾಗಿ ಕೆರೆತ ಶುರುವಾಗುತ್ತದೆ ಅಲ್ಲವಾ? ನನಗಾಗಿದ್ದೂ ಅದೇ!

ಸಿಂಗಾಪುರ್ ದೇಶವು ಸಿಂಗಾಪುರ್ ದೇಶವಾಗಲು ಅಲ್ಲಿನ ಆಡಳಿತದ ನಕ್ಷತ್ರಿಕನಂಥ ಮನೋಧರ್ಮವೇ ಕಾರಣವಿರಬೇಕು. ಸಮಸ್ಯೆಗೆ ಪರಿಹಾರ ಕಂಡುಕೊಳ್ಳದೆ ಬೆನ್ನು ನೇವರಿಸಿಕೊಳ್ಳದ ಸರಕಾರ ಅಲ್ಲಿರುವುದು. ಸಿಂಗಾಪುರ್‌ನಲ್ಲಿ ವರ್ಷವಿಡೀ Aedes aegypti ಸೊಳ್ಳೆಗಳಿಂದ ಡೆಂಘಿ ಕಾಡುತ್ತದೆ. ಔಷಧ ಸಿಂಪಡಿಸಿ, ಸೊಳ್ಳೆಮರಿಗಳು ಹುಟ್ಟುವ ಜಾಗಗಳನ್ನು ನಾಶಪಡಿಸಿದರೂ ಕಾಯಿಲೆಯನ್ನು ತಡೆಗಟ್ಟುವುದು ಸಾಧ್ಯವಾಗುತ್ತಿರಲಿಲ್ಲ. ’ನಿಂತ ನೀರನ್ನು ಒಣಗಿಸಿ’ ಎನ್ನುವ ಭಿತ್ತಿಪತ್ರವೂ ಯಾವುದೇ ಫಲ ನೀಡಲಿಲ್ಲ. ಆಗ ಆರಂಭವಾಗಿದ್ದು NEA ’Project Wolbachia’ ಸೊಳ್ಳೆಗಳ ಸಂಖ್ಯೆಯನ್ನೇ ಕಡಿಮೆ ಮಾಡುವ ಯೋಜನೆ. ವಿಜ್ಞಾನಿಗಳು ಸೊಳ್ಳೆಗಳಿಂದ ಸೊಳ್ಳೆಗಳ ನಾಶ ಯಾಕಾಗಬಾರದು ಎನ್ನುವ ಅಸಾಮಾನ್ಯ ಪ್ರಶ್ನೆಯನ್ನು ಕೇಳಿಕೊಂಡಾಗ ಶುರುವಾಗಿದ್ದು ’ಸೊಳ್ಳೆಗಳ ಬಿಡುಗಡೆ ಕಾರ್ಯಕ್ರಮ’.

ಈ ವಿಧಾನದಲ್ಲಿ Wolbachia ಬ್ಯಾಕ್ಟೀರಿಯಾ ಇರುವ ಗಂಡು Aedes aegypti ಸೊಳ್ಳೆಗಳನ್ನು ಗಾಳಿಗೆ ಬಿಡುತ್ತಾರೆ. ಈ ಗಂಡು ಸೊಳ್ಳೆಗಳು ಮನುಷ್ಯರನ್ನು ಕಚ್ಚುವುದಿಲ್ಲ. ಅವುಗಳು ಸಾಮಾನ್ಯ ಹೆಣ್ಣು ಸೊಳ್ಳೆಗಳೊಂದಿಗೆ ಸಂಯೋಗವಾದಾಗ ಬರುವ ಮೊಟ್ಟೆ ಫಲವತ್ತಾಗುವುದಿಲ್ಲ. ಹಾಗಾಗಿ ಮರಿಗಳೇ ಹುಟ್ಟುವುದಿಲ್ಲ. ಆದ್ದರಿಂದ ಸೊಳ್ಳೆಗಳ ಸಂಖ್ಯೆ ಕಡಿಮೆಯಾಗಿ ಡೆಂಘಿ ಅಪಾಯ ಇಳಿಯುತ್ತದೆ. ಈ ಕಾರ್ಯಕ್ರಮವು 2014ರ ಜೂನ್‌ನಲ್ಲಿ ಜಾರಿಗೆ ಬಂದ ಮೇಲೆ ಸಿಂಗಾಪುರ್‌ನಲ್ಲಿ ಸೊಳ್ಳೆಗಳು 80-90% ಕಡಿಮೆಯಾಗಿವೆ. ಡೆಂಘಿ ಬರುವ ಅಪಾಯ 70% ಗಿಂತ ಹೆಚ್ಚು ಕಡಿಮೆಯಾಗಿದೆ.

’Mosquito Release Program’ ಎನ್ನುವ ಪದಪುಂಜ ಕೇಳಿಸಿಕೊಂಡಾಗ ಜಗನ್‍ಮೋಹನ ಅರಮನೆಯಲ್ಲಿ ಶ್ರಾವಣಮಾಸದಲ್ಲಿ ನಡೆಯುವ ಯಾವುದೋ ನೃತ್ಯ ಕಾರ್ಯಕ್ರಮವೇನೋ ಎನ್ನುವಂತೆ ಭಾಸವಾಗುತ್ತದೆ. ಆದರೆ ಇದು ವಾರಕ್ಕೆ ಎರಡು ದಿನ ಪ್ರಯೋಗಾಲಯ ಸೃಷ್ಟಿತ ಲಕ್ಷಾಂತರ ಗಂಡು ಸೊಳ್ಳೆಗಳನ್ನು ಗಾಳಿಯಲ್ಲಿ ತೇಲಿ ಬಿಡುವ ಕ್ರಿಯೆ. ಜೀವಶಾಸ್ತ್ರ ಜಗತ್ತಿನ ಪ್ರವಾಸ ಎಂದು ವರ್ಗೀಕರಿಸಿ ಸಾಮಾನ್ಯ ಪ್ರವಾಸಿಗೂ ಇಲ್ಲಿ ಪ್ರವೇಶವನ್ನು ಕಲ್ಪಿಸಲಾಗಿದೆ. ಈವರೆಗೂ ಅಲ್ಲಿನ ನಿವಾಸಿಗಳು, ಪ್ರಪಂಚದಾದ್ಯಂತದ ಶಿಕ್ಷಕರು, ವಿದ್ಯಾರ್ಥಿಗಳು, ಮಾಧ್ಯಮದವರು, ಸಂಶೋಧಕರನ್ನು ಹೊರತು ಪಡಿಸಿ 700 ಜನ ಪ್ರವಾಸಿಗಳು ಈ ಕಾರ್ಯಕ್ರಮಕ್ಕೆ ಭೇಟಿಕೊಟ್ಟಿದ್ದಾರೆ. Project_Wolbachia@nea.gov.sg ಗೆ ಇಮೇಲ್ ಮಾಡಿ ನಮ್ಮ ಭೇಟಿಯನ್ನು ಖಚಿತ ಪಡಿಸಿಕೊಳ್ಳಬಹುದು.

Untitled design (81)

ಹೊಳಪುಗಣ್ಣಿನ ಯುವ ಮಾರ್ಗದರ್ಶಕನೊಬ್ಬ ’ಪ್ರತಿ ಬೆಳಗ್ಗೆ ನಾವು ಐದು ದಶಲಕ್ಷ ಗಂಡುಗಳನ್ನು ಎಬ್ಬಿಸುತ್ತೇವೆ. ನಾವು ಅವರಿಗೆ ಸಕ್ಕರೆ ನೀರನ್ನು ಕುಡಿಸುತ್ತೇವೆ. ಅವರು Wolbachia ಬ್ಯಾಕ್ಟೀರಿಯಾವನ್ನು ಹೊಂದಿದ್ದಾರೆಯೇ ಎಂದು ಪರಿಶೀಲಿಸುತ್ತೇವೆ. ನಂತರ ಅವರುಗಳನ್ನು ಪಂಜರದಿಂದ ಬಿಡುಗಡೆ ಮಾಡುತ್ತೇವೆ. ಅವುಗಳು ನಗರದಲ್ಲಿನ ಹೆಣ್ಣು ಸೊಳ್ಳೆಗಳ ಎದುರು ನೃತ್ಯ ಮಾಡಿ ಸಂಯೋಗ ಮಾಡುತ್ತವೆ, ಆದರೆ ಆಗ ಉತ್ಪತ್ತಿಯಾಗುವ ಮೊಟ್ಟೆಗಳು ಒಡೆದು ಮರಿಗಳಾಗುವುದಿಲ್ಲ. ಸೊಳ್ಳೆಗಳು ಸಾಯುತ್ತವೆ. ಪ್ರಜೆಗಳು ಅನಾರೋಗ್ಯದಿಂದ ದೂರಾಗುತ್ತಾರೆ’ ಎಂದು ಯಾವುದೇ ಏರಿಳಿತವಿಲ್ಲದ ಧ್ವನಿಯಲ್ಲಿ ಹೇಳುವಾಗ ಸಕ್ಕರೆ ನೀರು ಕುಡಿದರೆ ಮನುಷ್ಯನ ಮೈ ತಿರುಗುವುದು ಮಾತ್ರವಲ್ಲ ಸೊಳ್ಳೆಗಳದ್ದೂ ವಾಲುತ್ತದೆ ಎನ್ನುವ ವಿಜ್ಞಾನವನ್ನು ನಾವು ನೋಡುವುದಿಲ್ಲ ಬದಲಿಗೆ ಅಲ್ಲಿ ಅದನ್ನು ಅನುಭವಿಸುತ್ತೇವೆ.

ಆಸ್ಟ್ರೇಲಿಯಾ, ಬ್ರೆಜ಼ಿಲ್ ಮತ್ತು ಅಮೆರಿಕ ದೇಶಗಳಲ್ಲೂ ಇದೆ ಸೊಳ್ಳೆ ಬಿಡುಗಡೆ ಕಾರ್ಯಕ್ರಮ. ಆದರೆ ಸಿಂಗಾಪುರ್‌ನಲ್ಲಿ ಮಾತ್ರ ಸಾಮಾನ್ಯ ಪ್ರವಾಸಿಗೆ ನೋಡಲು ಅವಕಾಶವಿದೆ. ಭಾರತದಲ್ಲಿ ಇನ್ನೂ ಶೈಶವಾವಸ್ಥೆಯಲ್ಲಿ ಈ ಕಾರ್ಯಕ್ರಮ ಅಂಬೆಗಾಲಿಡುತ್ತಿದೆ. ಬೆಂಗಳೂರಿನ ಅಶೋಕನಗರ ಮತ್ತು ಚೆನ್ನೈನಲ್ಲಿ, ICMR, NIMR ಮತ್ತು WMP ಇಂಡಿಯಾದ ವಿಜ್ಞಾನಿಗಳು ovitraps ಬಿಡುಗಡೆ ಪೆಟ್ಟಿಗೆಗಳನ್ನು ಇಡುತ್ತಿದ್ದಾರೆ. ಇಲ್ಲಿಂದ ಸೊಳ್ಳೆಗಳ ಪ್ರವಾಸೋದ್ಯಮ ಆಗುವುದು ಅಸಾಧ್ಯ ಎನ್ನುವುದು ಇಂದಿನ ಪರಿಸ್ಥಿತಿ.

ಮತ್ತ್ಯಾವ ಮಾದರಿಯ ಪ್ರವಾಸವೂ ಕಲಿಸದ್ದನ್ನು, ತೋರಿಸದ್ದನ್ನು ಸೊಳ್ಳೆಗಳ ಬಿಡುಗಡೆ ಪ್ರವಾಸ ತೋರಿಸುತ್ತದೆ. ವಿಜ್ಞಾನಕ್ಕೂ ನಾಡಿ ಮಿಡಿತವಿದೆ ಎನ್ನುವ ಸತ್ಯ ಕಾಣಸಿಗುತ್ತದೆ ಸೊಳ್ಳೆಗಳ ಮುಕ್ತಿಯಲ್ಲಿ ಮತ್ತು ಸೊಳ್ಳೆಗಳು ಮನುಷ್ಯ ಮತ್ತು ರೋಗದ ನಡುವೆ ಶಾಂತಿಯ ಮಾತುಕತೆ ನಡೆಸುವ ಸಂದೇಶವಾಹಕಗಳಂತೆ ಎನಿಸುತ್ತದೆ. ಈಗ ನಿಮ್ಮ ಪ್ರವಾಸ ಸಂಗಾತಿಗಳನ್ನು ಕೇಳಿ ’ಸೊಳ್ಳೆಗಳಿಗಾಗಿ ಸಿಂಗಾಪುರ್‌ಗೆ ಹೋಗೋಣವೇ?’ ಅಂತ. ಶಾಂತಿಧೂತ ಸೊಳ್ಳೆಗಳ ಮುಕ್ತಿಯಲ್ಲಿ ನಮ್ಮದೂ ಒಂದು ಪಾಲಿರಲಿ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?