ʼಟೂರಿಸ್ಟ್ ವಿಲೇಜ್ʼನಿಂದ ಪ್ರಯಾಗ್‌ರಾಜ್‌ಗೆ ಹೊಸ ಇಮೇಜ್ ?
ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಪ್ರಕಾರ, ಈ ಯೋಜನೆಯಿಂದ ಗ್ರಾಮಸ್ಥರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗುವುದಲ್ಲದೆ, ಪಾರಂಪರಿಕ ಕಲೆ ಮತ್ತು ಸಂಸ್ಕೃತಿಗೂ ಹೊಸ ಉಜ್ವಲ ಭವಿಷ್ಯ ದೊರೆಯಲಿದೆ.
ಪ್ರಯಾಗ್‌ರಾಜ್ ಪ್ರದೇಶದ ಸಾಂಸ್ಕೃತಿಕ ಮತ್ತು ಐತಿಹಾಸಿಕ ವೈಭವವನ್ನು ಉತ್ತೇಜಿಸಿ, ಗ್ರಾಮೀಣ ಪ್ರವಾಸೋದ್ಯಮವನ್ನು ಬಲಪಡಿಸುವ ಉದ್ದೇಶದಿಂದ, ಉತ್ತರ ಪ್ರದೇಶ ಸರ್ಕಾರದ ಮಹತ್ವಾಕಾಂಕ್ಷಿ ʼಟೂರಿಸ್ಟ್ ವಿಲೇಜ್ʼ ಯೋಜನೆ ಅಡಿಯಲ್ಲಿ ಪ್ರಯಾಗ್‌ರಾಜ್ ಜಿಲ್ಲೆಯ ಮೂರು ಗ್ರಾಮಗಳನ್ನು ಅಭಿವೃದ್ಧಿಗೆ ಆಯ್ಕೆ ಮಾಡಿದೆ.
ಸಿಂಗ್ರೌರ್, ಗರ್ಹ ಕತ್ರಾ ಮತ್ತು ಘೂರ್ಪುರ್ ಗ್ರಾಮಗಳು ಈ ಯೋಜನೆಯಡಿ ಹೊಸ ರೂಪ ಪಡೆಯಲಿವೆ. ತಮ್ಮ ಪೌರಾಣಿಕ ಹಿನ್ನೆಲೆ, ನೈಸರ್ಗಿಕ ಸೌಂದರ್ಯ ಮತ್ತು ಐತಿಹಾಸಿಕ ಆಕರ್ಷಣೆಗಳಿಂದಾಗಿ ಈ ಗ್ರಾಮಗಳನ್ನು ಪ್ರವಾಸಿಗರ ಪ್ರಮುಖ ತಾಣಗಳಾಗಿ ರೂಪಿಸುವ ಗುರಿಯಿದೆ.

- ಸಿಂಗ್ರೌರ್: ಯಮುನಾ ತೀರದಲ್ಲಿರುವ ಈ ಗ್ರಾಮವು ರಾಮಾಯಣ ಕಥೆಗಳೊಂದಿಗೆ ನಂಟು ಹೊಂದಿದೆ. ನಿಶಾದರಾಜ ಕೋಟೆ, ಶೃಂಗಿ ಋಷಿ ದೇವಾಲಯ ಹಾಗೂ ಬೋಟ್ ಮ್ಯೂಸಿಯಂ ಇಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಕೇಂದ್ರಗಳಾಗಿವೆ.
- ಗರ್ಹಾ ಕತ್ರಾ: ಗರ್ಹಾ ಕತ್ರಾ 11–12ನೇ ಶತಮಾನಕ್ಕೆ ಸೇರಿದ ಶಿಲ್ಪ, ಅವಶೇಷಗಳಿಗಾಗಿ ಪ್ರಸಿದ್ಧ. ವಿಷ್ಣುವಿನ ದಶಾವತಾರದ ಶಿಲ್ಪಗಳು ಇಲ್ಲಿ ಕಾಣಸಿಗುತ್ತವೆ.
- ಘೂರ್ಪುರ್: ಪೌರಾಣಿಕತೆ ಮತ್ತು ಪ್ರಕೃತಿ ಸೌಂದರ್ಯದ ಸಮನ್ವಯ ಇಲ್ಲಿನ ವೈಶಿಷ್ಟ್ಯ. ಭಿತಾ ಕೋಟೆ, ಸೀತಾ ರಸೋಯಿ ಹಾಗೂ ಯಮುನಾ ನದಿ ತೀರ ಪ್ರವಾಸಿಗರಿಗೆ ಹೊಸ ಅನುಭವವನ್ನು ನೀಡಲಿವೆ. ದೋಣಿ ವಿಹಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಇಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.
ಪ್ರತಿ ಗ್ರಾಮದಲ್ಲೂ ಕನಿಷ್ಠ ಹತ್ತು ಹೋಮ್ ಸ್ಟೇಗಳು ನಿರ್ಮಾಣವಾಗಲಿದ್ದು, ಸ್ಥಳೀಯ ಆಹಾರ, ಕೈಮಗ್ಗ ಉತ್ಪನ್ನಗಳು ಮತ್ತು ಜನಪದ ಕಲೆಗಳಿಗೆ ವಿಶೇಷ ಪ್ರೋತ್ಸಾಹ ನೀಡಲಾಗುತ್ತಿದೆ. ಜತೆಗೆ ಮೂಲಸೌಕರ್ಯ ಸುಧಾರಣೆ, ಉತ್ತಮ ಸಂಪರ್ಕ ವ್ಯವಸ್ಥೆ ಮತ್ತು ವರ್ಷಪೂರ್ತಿ ಪ್ರವಾಸಿ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಆರ್ಥಿಕತೆಗೆ ಬಲ ಸಿಗಲಿದೆ.

ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಪ್ರಕಾರ, ಈ ಯೋಜನೆಯಿಂದ ಗ್ರಾಮಸ್ಥರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗುವುದಲ್ಲದೆ, ಪಾರಂಪರಿಕ ಕಲೆ ಮತ್ತು ಸಂಸ್ಕೃತಿಗೂ ಹೊಸ ಉಜ್ವಲ ಭವಿಷ್ಯ ದೊರೆಯಲಿದೆ.
ಪ್ರಯಾಗ್‌ರಾಜ್ ಈಗಾಗಲೇ ಧಾರ್ಮಿಕ ಹಾಗೂ ಐತಿಹಾಸಿಕ ಪ್ರವಾಸಿಗರ ತಾಣವಾಗಿರುವುದರಿಂದ, ಈ ಮೂರು ಗ್ರಾಮಗಳ ಅಭಿವೃದ್ಧಿ ಪ್ರವಾಸಿಗರಿಗೆ ಇನ್ನಷ್ಟು ಆಕರ್ಷಕ ಅನುಭವವನ್ನು ನೀಡಲಿದೆ.