ಗುಲ್ಮಾರ್ಗ್ ಭೇಟಿಯ ಮುನ್ನ ನೀವು ತಿಳಿದಿರಲೇಬೇಕಾದ ವಿಚಾರಗಳಿವು…
ಕಾಶ್ಮೀರದ ಪ್ರಸಿದ್ಧ ತಾಣ ಗುಲ್ಮಾರ್ಗ್‌ನ ಪ್ರಕೃತಿ ರಮಣೀಯತೆಯನ್ನು ವಿಡಿಯೋ ತುಣುಕಿನ ಮೂಲಕ ಪ್ರವಾಸಿಗನೊಬ್ಬ ಹಂಚಿಕೊಂಡಿದ್ದಾನೆ. ನದಿಯ ಪಕ್ಕದಲ್ಲಿ ಹೊಸದಾಗಿ ಬೆಳೆದ ನೇರಳೆ ಬಣ್ಣದ ಲುಪಿನ್‌ಗಳ ಹೊಲದ ವಿಡಿಯೋವನ್ನು ಕಂಡ ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಕಾಶ್ಮೀರ ಪ್ರವಾಸ ಕೈಗೊಳ್ಳಬೇಕು ಎಂಬುದು ಅದೆಷ್ಟೋ ಭಾರತೀಯರ ಕನಸು. ಭಾರತೀಯರಷ್ಟೇ ಅಲ್ಲದೆ ಪ್ರಪಂಚದಾದ್ಯಂತ ಪ್ರವಾಸಿಗರು ಮೆಚ್ಚಿಕೊಳ್ಳುವ ತಾಣವಿದು. ಇತ್ತೀಚೆಗಷ್ಟೇ ಕಾಶ್ಮೀರದ ಅತ್ಯಂತ ಪ್ರಸಿದ್ಧ ಸ್ಥಳಗಳಲ್ಲಿ ಒಂದಾದ ಗುಲ್ಮಾರ್ಗ್‌ಗೆ ಭೇಟಿ ನೀಡಿದ ಪ್ರವಾಸಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಅನುಭವಗಳನ್ನು ಹಂಚಿಕೊಂಡಿರುವುದು ಹೀಗೆ.
ಭಾರತೀಯರಿಗೆ ಪ್ರೇಮ ಕಾಶ್ಮೀರವಾಗಿ ಗುರುತಿಸಿಕೊಂಡು, ವಿಶ್ವದ ಅತ್ಯಂತ ಬೇಡಿಕೆಯ ಪ್ರಯಾಣ ತಾಣಗಳಲ್ಲಿ ಪ್ರಮುಖವಾದುದು ಜಮ್ಮು- ಕಾಶ್ಮೀರ. ದೈನಂದಿನ ಜಂಜಾಟದಿಂದ ಪಾರಾಗಿ, ಪ್ರಕೃತಿಯೊಂದಿಗೆ ಬೆರೆತು ಕಾಲ ಕಳೆಯಲು ಕಾಶ್ಮೀರಕ್ಕಿಂತ ಉತ್ತಮ ಆಯ್ಕೆ ಬೇರೊಂದಿಲ್ಲ. ಹಸಿರಿನ ಮಡಿಲು, ಪರ್ವತ ಶ್ರೇಣಿಗಳು, ಶುದ್ಧವಾದ ತಿಳಿ ಗಾಳಿ, ಮೆಚ್ಚಿಕೊಳ್ಳುವಂತಹ ವಿಭಿನ್ನ ಆಹಾರಕ್ರಮ ಹೀಗೆ ಕಾಶ್ಮೀರದ ಬಗ್ಗೆ ಹೇಳುತ್ತ ಹೋದರೆ ಪದಗಳೇ ಸಾಲುವುದಿಲ್ಲ.
ಇಂಥ ವಿಶೇಷ ವಾತಾವರಣವನ್ನು ಕಲ್ಪಿಸಿಕೊಡುವ ಕಾಶ್ಮೀರದ ಬಗ್ಗೆ ಇತ್ತೀಚೆಗಷ್ಟೇ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ. ಅದರಲ್ಲಿ, ಪ್ರವಾಸಿಗರೊಬ್ಬರು ಕಾಶ್ಮೀರದ ಪ್ರಸಿದ್ಧ ತಾಣ ಗುಲ್ಮಾರ್ಗ್‌ನ ಪ್ರಕೃತಿ ರಮಣೀಯತೆಯನ್ನು ವಿಡಿಯೋ ತುಣುಕಿನ ಮೂಲಕ ಹಂಚಿಕೊಂಡಿದ್ದಾನೆ. ನದಿಯ ಪಕ್ಕದಲ್ಲಿ ಹೊಸದಾಗಿ ಬೆಳೆದ ನೇರಳೆ ಬಣ್ಣದ ಲುಪಿನ್‌ಗಳ ಹೊಲದ ವಿಡಿಯೋವನ್ನು ಕಂಡ ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. "ಈ ವರ್ಣಚಿತ್ರದ ಬೆಲೆ ಎಷ್ಟು?" ಎಂದು ಒಬ್ಬ ಪ್ರತಿಕ್ರಿಯೆ ನೀಡಿದ್ದರೆ, ಇನ್ನೊಬ್ಬ "ಭೂಮಿಯ ಮೇಲಿನ ಸ್ವರ್ಗ ಈ ಕಾಶ್ಮೀರ " ಎಂದು ಬರೆದಿದ್ದಾನೆ.
ಗುಲ್ಮಾರ್ಗ್‌ನ ವಿಡಿಯೋ ನೋಡಿ, ಹೇಗಾದರೂ ಸರಿಯೇ ಇಲ್ಲಿಗೆ ಒಂದು ಬಾರಿ ಪ್ರವಾಸ ಕೈಗೊಳ್ಳಲೇಬೇಕು ಎಂದು ನೀವಂದುಕೊಂಡಿದ್ದರೆ, ಹೋಗುವ ಮುನ್ನ ನೀವು ತಿಳಿದುಕೊಳ್ಳಬೇಕಿರುವ ವಿಚಾರಗಳು ಹಲವಿದೆ.
ಆ್ಯಕ್ರೋ ಫೋಬಿಯಾವುಳ್ಳವರು ಮುನ್ನೆಚ್ಚರಿಕೆಯಿಂದಿರಿ:
ಕಾಶ್ಮೀರ ಕಣಿವೆಗಳ ನಾಡು. ಇಲ್ಲಿರುವ ಗುಲ್ಮಾರ್ಗ್ ಬಲು ಎತ್ತರದಲ್ಲಿರುವ ಪ್ರದೇಶ. ನೀವು ಆ್ಯಕ್ರೋ ಫೋಬಿಯಾವುಳ್ಳವರಾದರೆ, ನಿಮ್ಮ ದೇಹವು ಆ ಎತ್ತರಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯಾವಕಾಶ ನೀಡಿ. ಬೆಚ್ಚಗಿನ ಬಟ್ಟೆಗಳನ್ನು ಪ್ಯಾಕ್ ಮಾಡಿಕೊಳ್ಳಿ. ಹೈಡ್ರೇಟೆಡ್ ಆಗಿರಿ.
ಗುಲ್ಮಾರ್ಗ್‌ನಲ್ಲಿನ ಇತರ ಚಟುವಟಿಕೆಗಳು:
ಬರಿಯ ಪ್ರಕೃತಿಯ ಸೌಂದರ್ಯವನ್ನಷ್ಟೇ ಆಸ್ವಾದಿಸಲು ಗುಲ್ಮಾರ್ಗ್ ಗೆ ಹೋಗುವುದಲ್ಲ. ಬದಲಾಗಿ ಅಲ್ಲಿನ ಪ್ರಮುಖ ಸಾಹಸ ಚಟುವಟಿಕೆಗಳಾದ ಸ್ಕೀಯಿಂಗ್, ಸ್ನೋಬೋರ್ಡಿಂಗ್ (ಚಳಿಗಾಲದಲ್ಲಿ), ಗೊಂಡೊಲಾ, ಗಾಲ್ಫಿಂಗ್, ಕುದುರೆ ಸವಾರಿ, ಪಿಕ್ನಿಕ್ ಮತ್ತು ಹೂವಿನ ತೋಟಗಳಿಗೆ ಭೇಟಿ ನೀಡೋದು ಸೇರಿದಂತೆ ಅಲ್ಲಿ ಹಲವಾರು ಚಟುವಟಿಕೆಗಳಲ್ಲಿ ನೀವು ಭಾಗಿಯಾಗಬಹುದು.

ಗೊಂಡೊಲಾ ಟಿಕೆಟ್‌ಗಳನ್ನು ಮುಂಚಿತವಾಗಿ ಬುಕ್ ಮಾಡಿ:
ಚಳಿಗಾಲದ ಕ್ರೀಡಾ ಚಟುವಟಿಕೆಗಳಿಗೆ ಗುಲ್ಮಾರ್ಗ್ ಜನಪ್ರಿಯವಾಗಿದೆ. ಆದರೆ ಅಧಿಕ ಸಮಯವನ್ನೂ ಸರತಿ ಸಾಲುಗಳಲ್ಲೇ ಕಳೆಯುವ ಬದಲು, ಪೀಕ್ ಸೀಸನ್‌ನಲ್ಲಿ, ನೀವು ನಿಮ್ಮ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಅಥವಾ ಪ್ರಯಾಣ ಏಜೆನ್ಸಿ ಮೂಲಕ ಮುಂಚಿತವಾಗಿ ಬುಕ್ ಮಾಡಿಕೊಳ್ಳುವುದು ಒಳ್ಳೆಯದು.
ಸ್ಥಳೀಯ ಸಂಪ್ರದಾಯಗಳಿಗೆ ಧಕ್ಕೆ ತರದಿರಿ:
ಗುಲ್ಮಾರ್ಗ್ ಪ್ರಾಕೃತಿಕವಾಗಿ ಎಷ್ಟು ಸೌಂದರ್ಯಯುತವಾಗಿದೆಯೋ, ಇಲ್ಲಿನ ಸಂಪ್ರದಾಯ, ಆಚಾರ ವಿಚಾರಗಳೂ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಅಂತಹ ಸ್ಥಳೀಯ ಪದ್ಧತಿಗಳ ಬಗ್ಗೆ ಪ್ರವಾಸಿಗರು ಗೌರವವಿರಬೇಕು. ದೇವಾಲಯಗಳು ಮತ್ತು ಇತರ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಾಗ ಅದಕ್ಕೆ ತಕ್ಕಂತೆ ಉಡುಗೆ ತೊಡುಗೆಯಿದ್ದರೆ ಒಳ್ಳೆಯದು.
ಶುಚಿತ್ವದ ಕಡೆಗೆ ಇರಲಿ ಗಮನ:
ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ವೇಳೆ ಅಲ್ಲಿರುವ ಧಾರ್ಮಿಕ ತಾಣಗಳನ್ನು ನೋಡಿಬರುವುದಿದೆ. ಅಂಥ ಸಂದರ್ಭಗಳಲ್ಲಿ ನೀವು ಬಹಳ ಜಾಗರೂಕರಾಗಿರಬೇಕು. ಪ್ಲಾಸ್ಟಿಕ್ ಬಾಟಲ್ ಗಳು, ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಕಡಿಮೆ ಮಾಡುವುದು ಅಥವಾ ಮರುಬಳಕೆಗೆ ಯೋಗ್ಯವಾದ ವಸ್ತುಗಳನ್ನು ಉಪಯೋಗಿಸುವುದು ಉತ್ತಮ. ಒಂದು ವೇಳೆ ಪ್ಲಾಸ್ಟಿಕ್ ಬಳಸಿದರೂ, ಅವುಗಳನ್ನು ಎಲ್ಲೆಂದರಲ್ಲಿ ಎಸೆಯದೆ, ಸೂಕ್ತವಾದ ಕಸದ ತೊಟ್ಟಿಯಲ್ಲಿಯೇ ಹಾಕುವ ಮೂಲಕ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು.