ಮೆಕಾಂಗ್ ಎಂಬ ಗಂಗೆ
ತೊಂಬತ್ತಾರು ಸಾವಿರ ಎಕರೆಯ ದೇವಾಲಯದ ಪರಿಸರದಲ್ಲಿ ಎಲ್ಲೆಡೆ ಬೆಳೆದಿರುವ ನಾಗಸಂಪಿಗೆಯ(ಲಾವೋಸ್ ನ ರಾಷ್ಟ್ರೀಯ ಪುಷ್ಪ) ಮರದ ಬೇರುಗಳು ದೇವಾಲಯದ ಬುನಾದಿಯನ್ನು ತಬ್ಬಿಕೊಂಡಂತೆ ಕಾಣುತ್ತದೆ, ಒಂದೊಮ್ಮೆ ಆಳಿದ ಸಾಮ್ರಾಜ್ಯಗಳ ಅನೇಕ ರಹಸ್ಯಗಳು ಬೇರುಗಳಲ್ಲಿ ಹುದುಗಿದಂತೆ ಅನಿಸುತ್ತದೆ.
- ಸ್ವಾತಿ ಉರಾಳ್
ಲಾವೋಸ್ ದೇಶದ ಚಂಪಾಸಕ್ ಪ್ರಾಂತ್ಯದಲ್ಲಿ ನೆಲೆಗೊಂಡಿರುವ ವಾಟ್ ಫು (ವಾಟ್ - ದೇವಾಲಯ, ಫು - ಬೆಟ್ಟ) ಸಂಕೀರ್ಣ ಪ್ರಾಚೀನ ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಗಳು ಆಗ್ನೇಯ ಏಷ್ಯಾದ ಮೇಲೆ ಬೀರಿದ ಆಳವಾದ ಪ್ರಭಾವವನ್ನು ವಾಟ್ ಫು ಪ್ರತಿಬಿಂಬಿಸುತ್ತದೆ. ಕ್ರಿ.ಶ.5ನೇ ಶತಮಾನದಿಂದ ಕ್ರಿ.ಶ.12ನೇ ಶತಮಾನದವರೆಗೂ ನಿರಂತರವಾಗಿ ನಿರ್ಮಾಣಗೊಂಡಿದೆ. ವಾಟ್ ಫು ಆಗ್ನೇಯ ಏಷ್ಯಾದಲ್ಲಿ ಆರನೇ ಶತಮಾನಗಳ ಪ್ರಭುತ್ವ ಮೆರೆದಿದ್ದ ಖ್ಮೇರ್ ವಾಸ್ತುಶಿಲ್ಪದ ಅದ್ಭುತ ಉದಾಹರಣೆಯಾಗಿದ್ದು, ಪ್ರಕೃತಿ ಮತ್ತು ಪಾರಮಾರ್ಥದ ಸಮ್ಮಿಲನವನ್ನು ತೋರಿಸುತ್ತದೆ. ಈ ದೇವಾಲಯವನ್ನು ಲಿಂಗಪರ್ವತ ಹಾಗೂ ಮೆಕಾಂಗ್ ನದಿ ಮುಖಾಮುಖಿಯಾಗಿರುವಂತೆ ನಿರ್ಮಿಸಲಾಗಿದೆ. ವಾಟ್ ಫು ದೇವಾಲಯದ ರಚನೆ ಹನ್ನೆರಡನೇ ಶತಮಾನದಲ್ಲಿ ಕಟ್ಟಿದ ವಿಶ್ವದ ಅತೀ ದೊಡ್ಡ ದೇವಾಲಯ ಅಂಕೋರ್ ವಾಟ್‌ಗೆ ಮೂಲ ಪ್ರೇರಣೆಯಾಗಿದೆ.

ವಾಸ್ತು ವಿನ್ಯಾಸ
ವಾಟ್ ಫು ವನ್ನು ಹಂತ ಹಂತವಾಗಿ ಏರುವ ಏಳು ಅಂತಸ್ತುಗಳ ಸರಣಿಯಾಗಿ ವಿನ್ಯಾಸಗೊಳಿಸಲಾಗಿದೆ. ದೇವಾಲಯದ ಶಿಲ್ಪ, ದೇವರ ಪ್ರತಿಮೆಗಳನ್ನು ಬಳಪದ ಕಲ್ಲಿನಲ್ಲಿ(Sandstone) ಸುಂದರವಾಗಿ ಕೆತ್ತಲ್ಪಟ್ಟಿದ್ದು, ಗೋಡೆ, ಮೆಟ್ಟಿಲುಗಳಿಗೆ ಲಾಟರೈಟ್ (Laterite) ಕಲ್ಲುಗಳನ್ನು ಬಳಸಲಾಗಿದೆ.
ಪ್ರವೇಶದಲ್ಲಿ ಮೊದಲಿಗೆ ತಾವರೆಗಳಿಂದ ಕಂಗೊಳಿಸುವ ಕೃತಕ ಜಲಾಶಯಗಳಿವೆ. ನಂತರದ ಹಂತದಲ್ಲಿ ದೊಡ್ಡ ಸಮಪ್ರಮಾಣದ ಮುಖಮಂಟಪಗಳು ಎದುರು ಬದುರಾಗಿದೆ. ಈ ಮಂಟಪಗಳ ಉದ್ದೇಶವೇನೆಂದು ತಿಳಿದಿಲ್ಲವಾದರೂ, ಭಕ್ತಾದಿಗಳ ತಂಗುದಾಣವಿರಬಹುದೆಂದು ಇತಿಹಾಸಕಾರರು ಅಂದಾಜಿಸುತ್ತಾರೆ.
ಮುಂದೆ ನಂದಿ ಮಂಟಪವಿದೆ. ಇಲ್ಲಿಂದ ಆರಂಭವಾಗುವ ದಕ್ಷಿಣ ದಿಕ್ಕಿನ ರಸ್ತೆ ನೇರವಾಗಿ ಅಂಕೋರ್ ವಾಟ್‌ಗೆ ಸಂಪರ್ಕ ಹೊಂದಿದೆ ಎಂದು ಹೇಳುತ್ತಾರೆ. ಮೇಲೇರಿದಂತೆ ದ್ವಾರಪಾಲಕರ ಶಿಲ್ಪಗಳಿವೆ, ಕಮ್ಮತನೆಂಬ ರಾಜನನ್ನು ದ್ವಾರಪಾಲಕನಾಗಿ ಪೂಜಿಸಲಾಗುತ್ತದೆ. ಕೊನೆಗೆ ಏಳನೇ ಅಂತಸ್ತಿನಲ್ಲಿ ಗರ್ಭಗುಡಿಯಿದೆ. ಇಲ್ಲಿ ಲಿಂಗಪರ್ವತದ ಶ್ರೋತಸ್ಸಿನಿಂದ ನೇರವಾಗಿ ಅಭಿಷೇಕಗಳ್ಳುವ ವಿಶಿಷ್ಟ ವ್ಯವಸ್ಥೆಯನ್ನು ಹೊಂದಿದೆ. ಗರ್ಭಗುಡಿಯ ಭಿತ್ತಿಗಳಲ್ಲಿ ಕೃಷ್ಣಾವತಾರ, ರಾಮಾಯಣ, ಇಂದ್ರನ ಐರಾವತ, ಅಪ್ಸರೆಯರ ಕೆತ್ತನೆಗಳನ್ನು ಈಗಲೂ ಕಾಣಬಹುದು. ಹದಿಮೂರನೇ ಶತಮಾನದ ನಂತರ ಬೌದ್ಧರ ಪ್ರಭಾವ ಹೆಚ್ಚಾದ ಕಾಲದಲ್ಲಿ ಗರ್ಭಗುಡಿಯಲ್ಲಿ ಶಿವಲಿಂಗದ ಬದಲಿಗೆ ಬುದ್ಧ ದೇವರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಗರ್ಭಗುಡಿಯ ಸಮೀಪದಲ್ಲಿ ಗ್ರಂಥಾಲಯದ ಅವಶೇಷಗಳಿವೆ. ಗರ್ಭಗುಡಿಯ ಉತ್ತರದಲ್ಲಿ ಬೃಹತ್ ಕಲ್ಲಿನ ಮೇಲೆ ಮೊಸಳೆ ಹಾಗು ಆನೆಯ ಹೆಜ್ಜೆಯಂತಿರುವ ಉಬ್ಬುಶಿಲ್ಪವಿದೆ. ಇದನ್ನು ಬಲಿಪೀಠವಿರಬಹುದೆಂದು ಅನುಮಾನಿಸಲಾಗಿದೆ. ಈ ಅಂತಸ್ತಿನಿಂದ ಹಿಂದಿರುಗಿ ನೋಡಿದರೆ ಮೆಕಾಂಗ್ ನದಿಯ ಹರಿವು, ಫಲವತ್ತಾದ ಕೃಷಿ ಭೂಮಿ, ಸಣ್ಣಪುಟ್ಟ ಹಳ್ಳಿಗಳ ವಿಹಂಗಮ ನೋಟ ಕಾಣುತ್ತದೆ.

ಪ್ರಶಾಂತ ವಾಟ್ ಫು
ಖ್ಮೇರ್ ಸಾಮ್ರಾಜ್ಯದ ಮುಕುಟಮಣಿಯಾದ ಅಂಕೋರ್ ವಾಟ್‌ನ ವೈಭವ, ಅಗಾಧತೆ, ಪ್ರಸಿದ್ಧಿ ವಾಟ್ ಫುಗಿಲ್ಲ. ಆದರೆ ಇಲ್ಲಿ ಹರಡಿರುವ ಮೌನವೇ ಆಪ್ತ ಅನುಭವವನ್ನು ನೀಡುತ್ತದೆ. ಶತಮಾನಗಳ ಇತಿಹಾಸದ ಕಥೆಗಳನ್ನು ಹೊತ್ತ ಕಲ್ಲುಗಳು ಇಂದು ಶಿಲೀಂಧ್ರಗಳನ್ನು(lichens) ಹೊದ್ದು ಮಲಗಿದೆ. ಇತಿಹಾಸವೇ ಪ್ರಕೃತಿಯ ಮಡಿಲಿನಲ್ಲಿ ಲೀನವಾದಂತೆ ಭಾಸವಾಗುತ್ತದೆ. ತೊಂಬತ್ತಾರು ಸಾವಿರ ಎಕರೆಯ ದೇವಾಲಯದ ಪರಿಸರದಲ್ಲಿ ಎಲ್ಲೆಡೆ ಬೆಳೆದಿರುವ ನಾಗಸಂಪಿಗೆಯ(ಲಾವೋಸ್ ನ ರಾಷ್ಟ್ರೀಯ ಪುಷ್ಪ) ಮರದ ಬೇರುಗಳು ದೇವಾಲಯದ ಬುನಾದಿಯನ್ನು ತಬ್ಬಿಕೊಂಡಂತೆ ಕಾಣುತ್ತದೆ, ಒಂದೊಮ್ಮೆ ಆಳಿದ ಸಾಮ್ರಾಜ್ಯಗಳ ಅನೇಕ ರಹಸ್ಯಗಳು ಬೇರುಗಳಲ್ಲಿ ಹುದುಗಿದಂತೆ ಅನಿಸುತ್ತದೆ.
ತಲುಪುವುದು ಹೇಗೆ?
ವಾಟ್ ಫು ದಕ್ಷಿಣ ಲಾವೋಸ್‌ನ ಚಂಪಾಸಕ್ ಪ್ರಾಂತ್ಯದ ರಾಜಧಾನಿ ಪಕ್ಸೆ ನಗರದಿಂದ ನಲವತ್ತೈದ ಕಿಮೀ ದೂರದಲ್ಲಿದೆ. ಲಾವೋಸ್ ನ ರಾಜಧಾನಿ ವಿಯಂಟಿಯಾನ್ ನಗರದಿಂದ ಪಕ್ಸೆಗೆ ಪ್ರತಿದಿನ ವಿಮಾನದ ಸೌಲಭ್ಯವಿದೆ. ಪಕ್ಸೆಯಿಂದ ಕಾರು ಅಥವಾ ಬೈಕಿನಲ್ಲಿ ವಾಟ್ ಫು ತಲುಪಬಹುದು. ಅಲ್ಲದೆ ಆಯೋಜಿತ ದಿನದ ಪ್ರವಾಸಗಳೂ ಇವೆ. ಆಧುನಿಕತೆಯು ಸೋಕಿರದ, ಹಸಿರು ಬೆಟ್ಟ ಗುಡ್ಡಗಳಿಂದ ಸುತ್ತುವರೆದ ಭತ್ತದ ಗದ್ದೆಗಳು, ಅಲ್ಲಲ್ಲಿ ಹರಿಯುವ ತೊರೆಗಳು, ಸಣ್ಣ ಸಣ್ಣ ಸೇತುವೆಗಳು, ಬಯಲಿನಲ್ಲಿ ಸ್ವಚ್ಛಂದವಾಗಿ ಮೇಯುತ್ತಿರುವ ಜಾನುವಾರುಗಳು, ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಹಳ್ಳಿಗರು, ರಾಷ್ಟ್ರೀಯ ಹೆದ್ದಾರಿಯಾದರೂ ಧಾವಂತವಿಲ್ಲದೆ ನಗುಮೊಗದಿಂದ ಆರಾಮವಾಗಿ ವಾಹನ ಚಾಲನೆ ಮಾಡುವ ಚಾಲಕರು ಇವುಗಳ ಮಧ್ಯೆ ಸುಮಾರು ಒಂದು ಗಂಟೆಯ ಪ್ರಯಾಣ ಮುದ ನೀಡುತ್ತದೆ. ವಾಟ್ ಫು ಪ್ರವೇಶ ದರ ಐವತ್ತು ಸಾವಿರ ಕಿಪ್ (ಅಂದಾಜು ಇನ್ನೂರು ರುಪಾಯಿಗಳು).

ಯುನೆಸ್ಕೋ ಮಾನ್ಯತೆ
ಮೊದಲಿಗೆ ವಸ್ತು ಸಂಗ್ರಹಾಲಯವಿದೆ. ವಾಟ್ ಫು ಅಂಗಳದಲ್ಲಿ ಸಿಕ್ಕ ಶಿಲ್ಪಗಳು, ಹಿಂದೂ ದೇವತೆಗಳ ಕೆತ್ತನೆಗಳಿರುವ ಭಿತ್ತಿಗಳು, ಕಂಬಗಳನ್ನು ಸಂಗ್ರಹಾಲಯದಲ್ಲಿ ಜೋಡಿಸಿಡಲಾಗಿದೆ. ಅಲ್ಲಿಂದ ದೇವಾಲಯದ ಜಲಾಶಯದವರೆಗೂ ಬಗ್ಗಿ(buggy)ಯಲ್ಲಿ ಪ್ರವಾಸಿಗರನ್ನು ತಂದುಬಿಡಲಾಗುತ್ತದೆ. ಅಲ್ಲಿಂದ ಗೈಡ್ ಸಹಾಯದೊಂದಿಗೆ ದೇವಾಲಯದ ಅಂಗಳದಲ್ಲಿ ಓಡಾಡಬಹುದು. ಜನಸಂದಣಿ ಕಡಿಮೆ. ಆದರೆ ಪ್ರತಿ ವರ್ಷ ಫೆಬ್ರವರಿಯಲ್ಲಿ ನಡೆಯುವ ಉತ್ಸವದಲ್ಲಿ ಸಾವಿರಾರು ಭಕ್ತಾದಿಗಳು ಈಗಿರುವ ಬುದ್ಧ ದೇವರ ಪೂಜೆ, ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. 1991ರಲ್ಲಿ ಯುನೆಸ್ಕೊ(UNESCO) ವಿಶ್ವ ಪಾರಂಪರಿಕ ತಾಣವಾಗಿ ಘೋಷಿಸಲ್ಪಟ್ಟ ವಾಟ್ ಫು ಇಂದು ಸಂರಕ್ಷಿತವಾಗಿದೆ, ಲಾವೋಸ್ ಸರ್ಕಾರ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣ(ASI) ಸಹಯೋಗದೊಂದಿಗೆ ಪುನರುಜ್ಜೀವನಗೊಳ್ಳುತ್ತಿದೆ.
ವಾಟ್ ಫು(ವಾಟ್ - ದೇವಾಲಯ, ಫು - ಬೆಟ್ಟ) ಕೇವಲ ಪುರಾತನ ಸಾಮ್ರಾಜ್ಯದ ಅವಶೇಷಗಳಲ್ಲ. ಪ್ರಕೃತಿ, ಇತಿಹಾಸ ಮತ್ತು ಧರ್ಮದ ತ್ರಿವೇಣಿ ಸಂಗಮ. ಪ್ರವಾಸಿಗರಿಗೆ ಶಾಂತ ಸುಂದರ ತಾಣವಾಗಿಯೂ, ಪುರಾತತ್ವಾಸಕ್ತರಿಗೆ ಸಂಶೋಧನೆಯ ನೆಲೆಯಾಗಿಯೂ, ಭಕ್ತರಿಗೆ ಅಧ್ಯಾತ್ಮಿಕ ಆವರಣವಾಗಿದೆ.