Saturday, July 26, 2025
Saturday, July 26, 2025

ಇವು ಅಂಬಾರಿ ಏರಿದರೆ, ದುಬೈ ಅಂಬರ ಏರಿಬಿಟ್ಟಿದೆ!

ದುಬೈಗೆ ಹೋದವರಿಗೆ ಅದು ವಿದೇಶಿ ನೆಲ ಎಂದು ಅನಿಸುವುದಿಲ್ಲ. ಅದು ಇಸ್ಲಾಮಿಕ್ ದೇಶವಾದರೂ, ಆ ಧರ್ಮದ ಕಟ್ಟುಪಾಡುಗಳು ಅಲ್ಲಿ ಅನ್ವಯವಾಗುವುದಿಲ್ಲ. ಅದು ನಮ್ಮ ನೆಲ ಎಂದು ಅನಿಸಲು ಅದೊಂದೇ ಕಾರಣ ಸಾಕು. ಆ ದೇಶ ಜಗತ್ತಿನ ಎಲ್ಲ ದೇಶದ ಜನರಿಗೂ 'ಮನೆ'ಯಾಗಿಬಿಟ್ಟಿದೆ.

Do it now. Sometimes 'later' becomes 'never' ಎಂಬ ಮಾತಿದೆ. ಈ ಮಾತು ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಿದೆ. ಇಂದು ನೀವು ಮಾಡದಿದ್ದರೆ, ನಾಳೆ ಮತ್ಯಾರೋ ಮಾಡಿರುತ್ತಾರೆ. 'ನಾನೇ ಮೊದಲು' ಎಂಬ ಹಣೆಪಟ್ಟಿ ನಿಮ್ಮ ಕೈತಪ್ಪಿ ಹೋಗುತ್ತದೆ. ಪ್ರವಾಸೋದ್ಯಮದಲ್ಲಿ ಇನ್ನೊಂದು ಮಾತಿದೆ - Life is short and the world is wide. ಜಗತ್ತು ವಿಶಾಲವಾಗಿದೆ, ಆದರೆ ಜೀವನ ಚಿಕ್ಕದು. ಅಂದುಕೊಂಡಿದ್ದನ್ನು ಇಂದೇ ಮಾಡಿಬಿಡಬೇಕು. ಇಲ್ಲದಿದ್ದರೆ ಅದನ್ನು ಬೇರೆಯವರು ಮಾಡಿಬಿಡುತ್ತಾರೆ.

ಕರ್ನಾಟಕ ಪ್ರವಾಸೋದ್ಯಮ ಇಲಾಖೆ, 'ಮಳೆಗಾಲದ ಅದ್ಭುತ ಅನುಭವಗಳನ್ನು ಅನುಭವಿಸಲು ಕರ್ನಾಟಕಕ್ಕೆ ಬನ್ನಿ' ಎಂದು ಹೇಳಿದರೆ, ಯಾರೂ ಬರುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ನಿಮ್ಮ ಮಾತುಗಳನ್ನು ಯಾರೂ ಕೇಳಿಸಿಕೊಳ್ಳುವುದಿಲ್ಲ. ಕಾರಣ 'ಮಾನ್ಸೂನ್ ಟೂರಿಸಂ'ನ್ನು ಕೇರಳ ಪ್ರವಾಸೋದ್ಯಮ ತನ್ನದೇ ಕಬ್ಜ ಮಾಡಿಕೊಂಡುಬಿಟ್ಟಿದೆ. ಸುರಿಯುವ ಮಳೆಯನ್ನು ನೋಡುವುದಿದ್ದರೆ ತಮ್ಮ ರಾಜ್ಯಕ್ಕೆ ಬರಬೇಕು ಎಂಬ ಇಂಪ್ರೆಷನನ್ನು ಕೇರಳ ಈಗಾಗಲೇ ಜನಮಾನಸದಲ್ಲಿ ಬಿತ್ತಿಬಿಟ್ಟಿದೆ. ಕರ್ನಾಟಕದಲ್ಲಿ ಕೇರಳದ ಅಪ್ಪನಂಥ ಮಳೆ ಸುರಿಯುವ ಪ್ರದೇಶಗಳಿವೆ. ನಾಲ್ಕು ತಿಂಗಳು ಬಿಡದೇ ಮಳೆ ಸುರಿಯುವ ಜಾಗಗಳಿವೆ. ಆದರೆ ಕೇರಳ ಈ ಐಡಿಯಾವನ್ನು ಹೈಜಾಕ್ ಮಾಡಿಬಿಟ್ಟಿದೆ. ಈಗ ಕರ್ನಾಟಕ ಎಷ್ಟೇ ಬೊಂಬಡಾ ಬಡಿದುಕೊಂಡರೂ ಮಳೆ ನೋಡಲು ಕೇರಳಕ್ಕೆ ಹೋಗುತ್ತಾರೆಯೇ ಶಿವಾಯ್, ಕರ್ನಾಟಕಕ್ಕೆ ಬರುವುದಿಲ್ಲ.

dubai 4

Only one who wanders finds new paths ಎಂಬ ಮಾತಿದೆ. ಯಾರು ತಿರುಗಾಡುತ್ತಾರೋ, ಅವರಿಗೆ ಮಾತ್ರ ಹೊಸ ಮಾರ್ಗಗಳು ಕಾಣಲು ಸಾಧ್ಯ. ಯಾರು ಹೊಸ ಹೊಸ ಯೋಚನೆಗಳನ್ನು ಮಾಡುತ್ತಾರೋ, ಅಂಥವರು ಮಾತ್ರ ಹೊಸ ಹೊಸ ಪ್ರಯೋಗಗಳನ್ನು ಮಾಡಲು ಸಾಧ್ಯ. ಈ ಮಾತು ಸಹ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಿದೆ. ಪ್ರವಾಸಿಗರಿಗೆ ಸದಾ ಹೊಸತನ್ನು ಹೇಳುತ್ತಲೇ ಇರಬೇಕು, ಹೊಸ ಹೊಸ ಸಾಧ್ಯತೆಗಳ ಪರಿಚಯ ಮಾಡಿಸುತ್ತಲೇ ಇರಬೇಕು. ಆಗ ಮಾತ್ರ ನಿರಂತರವಾಗಿ ಪ್ರವಾಸಿಗರನ್ನು ಸೆಳೆಯಲು ಸಾಧ್ಯ.

ಇದಕ್ಕೆ ದುಬೈ ಒಂದು ತಾಜಾ ನಿದರ್ಶನ. 'ದುಬೈಗೆ ಯಾರೂ ಒಂದು ಸಲ ಹೋಗುವುದಿಲ್ಲ' ಎಂಬ ಮಾತಿದೆ. ಒಂದು ಸಲ ಹೋದವನು ಮೇಲಿಂದ ಮೇಲೆ ಹೋಗುತ್ತಾನೆ. ಪದೇ ಪದೆ ಅಲ್ಲಿಗೆ ಹೋಗಬೇಕು ಎನಿಸುತ್ತದೆ. ಕಾರಣ ಅಲ್ಲಿ ಪ್ರತಿ ಸಲ ಹೋದಾಗಲೂ ನೋಡಲು ಹೊಸ ಹೊಸ ಸಂಗತಿಗಳಿರುತ್ತವೆ. ತೋರಿಸಲು ಮತ್ತೇನೂ ಸಿಗಲಿಲ್ಲ ಅನ್ನಿ, ಅವರು ಚೌಕಾಕಾರದ ಚೌಕಟ್ಟು ನಿಲ್ಲಿಸಿ 'ಇದೋ ನೋಡಿ, ದುಬೈ ಫ್ರೇಮ್' ಎಂದು ಇಡೀ ದುಬೈಯನ್ನು ಶೋಕೇಸ್ ಮಾಡುತ್ತಾರೆ. ಅಂಡಾಕಾರದ ಕಟ್ಟಡ ಕಟ್ಟಿ 'ಭವಿಷ್ಯದ ಮ್ಯೂಸಿಯಮ್' ಎಂದು ಮರುಳು ಮಾಡುತ್ತಾರೆ.

ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ನಿತ್ಯವೂ ದುಬೈ ಹೊಸತನಕ್ಕೆ ಅಪ್ಡೇಟ್ ಆಗುತ್ತದೆ. ಒಂದು ವರ್ಷದ ನಂತರ ದುಬೈಗೆ ಹೋದರೆ ನೋಡಲು ಹತ್ತಾರು ಹೊಸ ಆಕರ್ಷಣೆಗಳಿರುತ್ತವೆ. There are no foreign lands. It is the traveler only who is foreign ಎಂಬ ಮಾತನ್ನು ದುಬೈ ನಿಜಗೊಳಿಸಿದೆ. ದುಬೈಗೆ ಹೋದವರಿಗೆ ಅದು ವಿದೇಶಿ ನೆಲ ಎಂದು ಅನಿಸುವುದಿಲ್ಲ. ಅದು ಇಸ್ಲಾಮಿಕ್ ದೇಶವಾದರೂ, ಆ ಧರ್ಮದ ಕಟ್ಟುಪಾಡುಗಳು ಅಲ್ಲಿ ಅನ್ವಯವಾಗುವುದಿಲ್ಲ. ಅದು ನಮ್ಮ ನೆಲ ಎಂದು ಅನಿಸಲು ಅದೊಂದೇ ಕಾರಣ ಸಾಕು. ಆ ದೇಶ ಜಗತ್ತಿನ ಎಲ್ಲ ದೇಶದ ಜನರಿಗೂ 'ಮನೆ'ಯಾಗಿಬಿಟ್ಟಿದೆ.

ನೀವು ಸುಮ್ಮನೆ ದುಬೈಯ ಯಾವುದಾದರೂ ಸ್ಕೂಲಿನ ಕ್ಲಾಸ್ ರೂಮ್ ಗೆ ಹೋಗಿ. ನೂರು ವಿದ್ಯಾರ್ಥಿಗಳಿರುವ ಒಂದೇ ಕೋಣೆಯಲ್ಲಿ ಕನಿಷ್ಠ ತೊಂಬತ್ತು ದೇಶಗಳ ವಿದ್ಯಾರ್ಥಿಗಳಿರುತ್ತಾರೆ. ಅಂದರೆ ಇಂದು ದುಬೈ ಇಡೀ ಜಗತ್ತನ್ನು ಒಲಿಸಿಕೊಂಡಿದೆ. ಬಹುತೇಕರಿಗೆ ಎರಡನೇ ಮನೆಯಾಗಿದೆ. ಪ್ರವಾಸಿಗರಿಗೆ ಮತ್ತೆ ಮತ್ತೆ ಹೋಗಬೇಕು ಎನ್ನುವ ನಗರವಾಗಿದೆ. ಅನ್ವೇಷಣೆ, ಹೊಸತನ ಮತ್ತು Do it now, Sometimes 'later' becomes 'never' ಎಂಬ ಮಾತನ್ನು ದುಬೈ ತನ್ನ ಘೋಷವಾಕ್ಯವಾಗಿ ಮಾಡಿಕೊಂಡಿದೆ.

ಸೌದಿ ಅರೇಬಿಯಾ, ಕತಾರ್, ಒಮಾನ್, ಅಬುಧಾಬಿ ಸೇರಿದಂತೆ ಹತ್ತಾರು ಅರಬ್ ರಾಷ್ಟ್ರಗಳು ಓಡಲು ಈಗ ಸನ್ನದ್ಧವಾಗುತ್ತಿದ್ದರೆ, ದುಬೈ ಎಂದೋ ನಾಗಾಲೋಟದಲ್ಲಿ ಓಡುತ್ತಲೇ ಇದೆ. ಈ ದೇಶಗಳು ಇತ್ತೀಚೆಗೆ ತಮ್ಮ ಆರ್ಥಿಕತೆಯನ್ನು ಬದಲಾಯಿಸುವ, ತೈಲ ಆಧಾರಿತ ಆರ್ಥಿಕತೆಯಿಂದ ವಿಭಿನ್ನ ಕ್ಷೇತ್ರಗಳತ್ತ ಮುಖ ಮಾಡುವ ಪ್ರಯತ್ನದಲ್ಲಿವೆ. ಪ್ರವಾಸೋದ್ಯಮ, ತಂತ್ರಜ್ಞಾನ, ಶಿಕ್ಷಣ ಮುಂತಾದ ಯೋಜನೆಗಳಲ್ಲಿ ತೊಡಗಿಕೊಂಡಿವೆ.

dubai 1

ಆದರೆ, ಈ ಎಲ್ಲದಕ್ಕೂ ಮುಂಚೆ ಹಲವಾರು ವರ್ಷಗಳ ಹಿಂದೆಯೇ ದುಬೈ, ಈ ಓಟವನ್ನು ಆರಂಭಿಸಿತ್ತು. 1990ರ ದಶಕದಲ್ಲಿಯೇ ದುಬೈ ತೈಲದ ಆಧಾರದ ಬದಲು ಸೇವಾ ಕ್ಷೇತ್ರ, ಪ್ರವಾಸೋದ್ಯಮ ಮತ್ತು ಅಂತಾರಾಷ್ಟ್ರೀಯ ವ್ಯಾಪಾರವನ್ನು ಉತ್ತೇಜಿಸಲು ಆರಂಭಿಸಿತು. ಏರ್ಪೋರ್ಟ್, ಮರೀನಾ, ಬುರ್ಜ್ ಖಲೀಫಾ, ಪಾಮ್ ಐಲ್ಯಾಂಡ್ ಮುಂತಾದ ಜಗತ್ಪ್ರಸಿದ್ಧ ಮೂಲಸೌಕರ್ಯ ಯೋಜನೆಗಳು, ದುಬೈಯನ್ನು ಪ್ರವಾಸೋದ್ಯಮದ ಹಾಗೂ ಬಂಡವಾಳ ಆಕರ್ಷಣೆಯ ಕೇಂದ್ರವಾಗಿ ರೂಪಿಸಿದವು. ಇಂದಿನ ದುಬೈನಲ್ಲಿ ತೈಲದ ಕೊಡುಗೆ ಒಟ್ಟು ಜಿಡಿಪಿಯಲ್ಲಿ ಕೇವಲ ಶೇ.2% ರಷ್ಟು.

ಇತ್ತೀಚಿನ ವರ್ಷಗಳಲ್ಲಿ ರಿಯಲ್ ಎಸ್ಟೇಟ್, ಫೈನಾನ್ಸ್, ಲಾಜಿಸ್ಟಿಕ್ಸ್, ಮಾಹಿತಿ ತಂತ್ರಜ್ಞಾನ, ಮಾಧ್ಯಮ ಮುಂತಾದ ಕ್ಷೇತ್ರಗಳಲ್ಲಿ ದುಬೈ ಸಾಕಷ್ಟು ಬಂಡವಾಳ ಹೂಡಿಕೆ ಮಾಡಿದೆ. ದುಬೈ ತನ್ನನ್ನು ಬೃಹತ್ ಬಹುಸಂಸ್ಕೃತಿಯ ನಗರವಾಗಿ ರೂಪಿಸಿಕೊಂಡಿದೆ. ಇಲ್ಲಿನ ಜನಸಂಖ್ಯೆಯ ಬಹುಪಾಲು ವಿದೇಶಿಯರೇ ಆಗಿದ್ದು, ವಿವಿಧ ಸಂಸ್ಕೃತಿಗಳನ್ನು ಅಂಗೀಕರಿಸಲು ನಗರ ಸಿದ್ಧವಾಗಿದೆ.

ಸೌದಿ ಅರೇಬಿಯಾ, ಕತಾರ್, ಒಮಾನ್, ಅಬುಧಾಬಿ ಈಗ ನಿದ್ದೆಯಿಂದ ಮೈಕೊಡವಿಕೊಂಡು ಓಡಲು ಸಿದ್ಧವಾಗುತ್ತಿವೆ. ಸೌದಿ ಅರೇಬಿಯಾ "ವಿಷನ್ 2030" ಯೋಜನೆಯ ಮೂಲಕ ದುಬೈ ಮಾದರಿಯನ್ನು ಅನುಸರಿಸುತ್ತಿದೆ. ನೀಓಮ್ (NEOM) ಎಂಬ ಭವಿಷ್ಯದ ನಗರ ಯೋಜನೆ, ಪ್ರವಾಸೋದ್ಯಮದಲ್ಲಿ ಭಾರಿ ಹೂಡಿಕೆಗೆ ಮುಂದಾಗಿದೆ. ಈಗ ಸೌದಿ ಏನೇ ಮಾಡಿದರೂ ಅದು ದುಬೈ ನಕಲಾಗಬಹುದೇ ಹೊರತು, ಸಂಪೂರ್ಣ ಹೊಸತೇನೂ ಅಲ್ಲ.

ದುಬೈ ಕಣ್ಣು ಕುಕ್ಕುವ ರೀತಿಯಲ್ಲಿ ಹೊಳೆಯುತ್ತಿರುವುದನ್ನು ಮನಗಂಡ ಕತಾರ್, ಜಗತ್ತಿನ ಗಮನವನ್ನು ಸೆಳೆಯಲು, 2022 ರಲ್ಲಿ ಫಿಫಾ ವಿಶ್ವಕಪ್ ಕ್ರೀಡಾಕೂಟವನ್ನು ಆಯೋಜಿಸಿತು. ಆ ನಿಮಿತ್ತ ಇಡೀ ದೇಶವನ್ನು ಪುನರ್ ನಿರ್ಮಾಣ ಮಾಡಿತು. ಆಗಲೂ ಅದು ತಾನು ಹೊಸತೇನನ್ನು ಮಾಡುತ್ತಿದ್ದೇನೆ ಎಂದು ಭಾವಿಸಿತು. ಆದರೆ ಅದಕ್ಕೆ ತಾನು ದುಬೈಯನ್ನು ಅನುಕರಿಸುತ್ತಿದ್ದೇನೆ ಎಂಬ ಸರಳ ಸತ್ಯ ಅರ್ಥವಾಗಲಿಲ್ಲ. ಅಷ್ಟಾದರೂ ದುಬೈಗೆ ಸೆಡ್ಡು ಹೊಡೆಯಲು ಆಯಿತಾ? ಉಹುಂ.. ಇಲ್ಲ. ದುಬೈ ಮುಂದೆ ಕತಾರ್ 'Early Bird' ಪೈಪೋಟಿಯಲ್ಲಿ ಎಂದೋ ಸೋತು ಹೋಗಿತ್ತು.

oman

ಈ ಮಧ್ಯೆ, ಒಮಾನ್ ಮತ್ತು ಅಬುಧಾಬಿ ಸಂಕಟವೇ ಬೇರೆ. ಅವುಗಳಿಗೆ ಸುಮ್ಮನಿರಲು ಆಗುತ್ತಿಲ್ಲ. ಆದರೆ ದುಬೈ ಎತ್ತರಕ್ಕೆ ಏರಲು ಆಗುತ್ತಿಲ್ಲ. ದುಬೈಗೆ ತಾವು ಸಾಟಿ ಅಲ್ಲ ಎಂದು ಅವುಗಳಿಗೆ ಅನಿಸಿಬಿಟ್ಟಿದೆ. ಹಾಗಂತ ಸುಮ್ಮನೆ ಕೂರಲೂ ಆಗುತ್ತಿಲ್ಲ. Sometimes there is no next time, no time-outs, no second chances ಎಂಬ ಮಾತಿನಂತೆ, ಏನಾದರೂ ಮಾಡಲೇ ಬೇಕು ಎಂದು ಆ ಎರಡೂ ದೇಶಗಳು ನಿರ್ಧರಿಸಿದಂತಿವೆ. ಆದರೆ ಅವು ಏನೇ ಮಾಡಿದರೂ ದುಬೈ ಸನಿಹಕ್ಕೂ ಬರುವುದಿಲ್ಲ. ಒಮಾನ್ ತನ್ನ ನೈಸರ್ಗಿಕ ಸೌಂದರ್ಯವನ್ನು ಪ್ರವಾಸೋದ್ಯಮದ ಮೂಲಕ ಬಳಸಿ ಜನರನ್ನು ಆಕರ್ಷಿಸಲು ಶತಪ್ರಯತ್ನ ಮಾಡುತ್ತಿದೆ. ಹಾಗೆ ಅಬುಧಾಬಿ ತನ್ನ ಸಂಪತ್ತನ್ನು ಸಂಸ್ಕೃತಿಯ ಅಭಿವೃದ್ಧಿಗೆ ಬಳಸುತ್ತಿದೆ. ಹೆಚ್ಚೆಂದರೆ ಅದರ ಓಟ, ಹೆಳವನ ನಾಗಾಲೋಟವಾದೀತು. Let's start a new tomorrow, today ಎಂದು ಭಾವಿಸಿ ಹೊರಟರೂ, ದುಬೈ ಸರಿಗಟ್ಟಲು ಅಂಥ ಅಸಂಖ್ಯ ನಾಳೆಗಳೇ ಬೇಕು.

ಉಳಿದ ಅರಬ್ ದೇಶಗಳು ತಾವು ಅಂಬಾರಿ ಏರಿದ್ದೇವೆಂದು ಭಾವಿಸಿರಬಹುದು. ಆದರೆ ದುಬೈ ಈಗಾಗಲೇ ಅಂಬರವೇರಿ ಕುಳಿತುಕೊಂಡಿದೆ. ಮೂಲಸೌಕರ್ಯ, ಸೇವಾ ವಲಯ, ಪ್ರವಾಸೋದ್ಯಮ ಮತ್ತು ಜಾಗತಿಕ ಪಾಲುದಾರಿಕೆಯಲ್ಲಿ ಇತರ ಅರಬ್ ರಾಷ್ಟ್ರಗಳು ದುಬೈಯಿಂದ ಈಗ ಪಾಠ ಕಲಿಯುತ್ತಿವೆ. ತೈಲದ ಅವಲಂಬನೆಯಿಂದ ಹೊರಬಂದು ನೂತನ ಬೆಳವಣಿಗೆಗೆ ಪ್ರಯತ್ನಿಸುತ್ತಿವೆ. ದುಬೈನ ಅನುಭವಗಳು ಇತರ ರಾಷ್ಟ್ರಗಳಿಗೆ ಮಾದರಿಯಾಗಿವೆ. ಆದರೆ, ಈ ರಾಷ್ಟ್ರಗಳು ತಮ್ಮದೇ ಆದ ಸಂಸ್ಕೃತಿ, ಸಹಿಷ್ಣುತೆ ಮತ್ತು ರಾಜಕೀಯ ಚಟುವಟಿಕೆಯಿಂದ ನಿಧಾನ ಗತಿಯಲ್ಲಿ ಬೆಳೆಯುತ್ತಿವೆ. ದುಬೈ ಈಗಾಗಲೇ ಜಾಗತಿಕ ರಾಜಧಾನಿಗಳ ಪೈಕಿ ಒಂದಾಗಿ ಹೊರಹೊಮ್ಮಿದರೆ, ಇತರ ಅರಬ್ ರಾಷ್ಟ್ರಗಳು ಈಗ ಆ ದಾರಿಯಲ್ಲಿ ತೆವಳುವ ಪ್ರಯತ್ನದಲ್ಲಿವೆ.

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಏನು ಮಾಡುತ್ತೇವೆ ಎಂಬುದಕ್ಕಿಂತ, ಏನನ್ನು ಯಾವಾಗ ಮಾಡುತ್ತೇವೆ ಎಂಬುದು ಮುಖ್ಯ. 'ಕಾಲವೇ ರಾಜ' ಎಂಬುದು ಪ್ರವಾಸೋದ್ಯಮ ಮಟ್ಟಿಗಂತೂ ನೂರಕ್ಕೆ ನೂರು ಸತ್ಯ. ಅವಕಾಶ ಬರುವ ಮೊದಲು ತಯಾರಿ ಮಾಡಿಕೊಂಡ ರಾಷ್ಟ್ರಗಳೇ ಮುಂದೆ ಓಡುವುದನ್ನು ನೋಡಿದ್ದೇವೆ. ಸರಿಯಾದ ಯೋಜನೆಯು ಸರಿಯಾದ ಕಾಲದಲ್ಲಿ ಜಾರಿಗೆ ಬಂದಾಗ, ಅದು ಗೆಲುವಿನ ಮಾರ್ಗವನ್ನು ತೆರೆದಿಡುತ್ತದೆ.

Vishweshwar Bhat

Vishweshwar Bhat

Editor in Chief