ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ, ಸಾರಿಗೆ ಇಲಾಖೆ ಈ ಮೂರೂ ಇಲಾಖೆಗಳು ಒಂದು ಸಮನ್ವಯದಲ್ಲಿ ಮುನ್ನಡೆಯಬೇಕಾಗಿರುವ ವಿಭಾಗಗಳು. ಇನ್ನೂ ಸರಿಯಾಗಿ ಹೇಳುವುದಾದರೆ ಸರಕಾರದ ಪ್ರತಿ ಇಲಾಖೆಯೂ ಮತ್ತೊಂದು ಇಲಾಖೆಗೆ ಪೂರಕವಾಗಿಯೇ ಕಾರ್ಯನಿರ್ವಹಿಸಬೇಕು. ಆದರೆ ಇಲ್ಲಿ ಆಗುವುದೇನು? ಪ್ರತಿ ಇಲಾಖೆಯೂ ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು ಎಂಬಂತೆ ಆಡುತ್ತವೆ. ನಗರದ ಕಾಮಗಾರಿಗಳ ಕಾಮಿಡಿ ಶೋಗಳನ್ನು ನಿತ್ಯ ನೋಡುವವರಿಗೆ ಇದರ ಬಗ್ಗೆ ಹೊಸತಾಗಿ ವಿವರಿಸುವ ಅಗತ್ಯವಿಲ್ಲ.

ಇತ್ತ ಒಂದು ಇಲಾಖೆ ರಸ್ತೆ ಮಾಡುತ್ತದೆ. ಅದರ ಬೆನ್ನಲ್ಲೇ ಬಂದು ಬಿಡಬ್ಲುಎಸ್‌ಎಸ್‌ಬಿ ಒಳಚರಂಡಿ ಕಾಮಗಾರಿಗಾಗಿ ಗುಂಡಿ ತೆಗೆಯುತ್ತದೆ. ಅದು ಮುಗಿದು ಗುಂಡಿ ಮುಚ್ಚಿತೆನ್ನುವ ಹೊತ್ತಿಗೆ ಟೆಲಿಫೋನ್ ವೈರ್ ಎಳೆಯುವ ಕಾಮಗಾರಿ ಶುರುವಾಗುತ್ತದೆ. ಮತ್ತೆ ರಸ್ತೆಯ ಅಗೆತ. ಅಷ್ಟರಲ್ಲಿ ಮೆಟ್ರೋ, ಗ್ರೇಡ್ ಸಪರೇಟರ್, ಫ್ಲೈ ಓವರ್ ಅಂತ ಇನ್ನೇನೋ ಹೊಸತೊಂದು ಪ್ರಾರಂಭವಾಗುತ್ತದೆ. ಒಂದೆಡೆ ಗಿಡ ನೆಡುತ್ತಿದ್ದರೆ, ಅದೇ ರಸ್ತೆಯಲ್ಲಿ ಮರ ಉರುಳಿಸುವ ಕೆಲಸವೂ ನಡೆಯುತ್ತಿರುತ್ತದೆ. ಇದನ್ನು ಉದಾಹರಣೆಯಾಗಿ ಹೇಳಿದ್ದು ಯಾಕೆಂದರೆ, ಹೊಸವರ್ಷದ ಆರಂಭದಲ್ಲಿ ಟ್ರಿಪ್ ಪ್ಲ್ಯಾನ್ ಮಾಡಿದ್ದ ಪ್ರವಾಸಿಗರ ಉತ್ಸಾಹಕ್ಕೆ ಏಕಾಏಕಿ ತಣ್ಣೀರೆರಚಿದೆ ಸರಕಾರ. ಜನವರಿ ಐದರಿಂದ ಹನ್ನೆರಡರ ತನಕ ಎಂಟು ದಿನಗಳ ಕಾಲ ಕುದುರೆಮುಖ, ವಾಲಿಕುಂಜ, ಕೆರೆಕಟ್ಟೆ, ನೇತ್ರಾವತಿ, ಕೊಡಚಾದ್ರಿ, ಹಿಡ್ಲು ಜಲಪಾತ, ನರಸಿಂಹ ಪರ್ವತ, ಬಂಡಾಜ ಹೀಗೆ ಇರೋಬರೋ ಟ್ರೆಕ್ಕಿಂಗ್ ಸ್ಪಾಟ್‌ಗಳಿಗೆಲ್ಲ ಬೀಗ ಜಡಿದು ಕೂತಿದೆ ಅರಣ್ಯ ಇಲಾಖೆ.

ಇದನ್ನೂ ಓದಿ: ಹೆಸರೆಲ್ಲ ಹೀಗಿದ್ದರೆ ಹೇಗೆ?

ಸಾಲದು ಅಂತ ಹಲವಾರು ಜಲಪಾತಗಳಿಗೂ ಪ್ರವೇಶ ನಿರ್ಬಂಧ ಹೇರಲಾಗಿದೆ. ಮಳೆಗಾಲದಲ್ಲಿ ಜಲಪಾತ ನೋಡುವಂತಿಲ್ಲ, ಚಳಿಗಾಲದಲ್ಲಿ ಚಾರಣ ಮಾಡುವಂತಿಲ್ಲ ಅಂತ ನಿರ್ಬಂಧ ಹಾಕಿಬಿಟ್ಟರೆ ಪ್ರವಾಸಿಗರು ಏನು ಮಾಡಬೇಕು? ಇತರ ರಾಜ್ಯಗಳಿಗೆ ಹೋಗಬೇಕಷ್ಟೆ! ಇಷ್ಟಕ್ಕ ಈ ನಿರ್ಬಂಧಕ್ಕೆ ಕಾರಣ ಏನು? ಅರಣ್ಯ ಇಲಾಖೆ ಹುಲಿಗಣತಿ ನಡೆಸಬೇಕಂತೆ. ಸಿಬ್ಬಂದಿಯ ಕಾರ್ಯಕ್ಕೆ ತೊಂದರೆ ಆಗಬಾರದು ಅಂತ ಈ ನಿರ್ಬಂಧವಂತೆ. ಇತ್ತೀಚೆಗೆ ಸಫಾರಿ ನಿರ್ಬಂಧ ಹೇರಿದ್ದರ ಹಿಂದೆಯೂ ಸಿಲ್ಲಿ ಕಾರಣಗಳಿದ್ದವು. ಮಳೆಗಾಲದಲ್ಲಿ ಉತ್ತರಕನ್ನಡದ ಜಲಪಾತಗಳ ವೀಕ್ಷಣೆಗೆ ನಿರ್ಬಂಧ ಹೇರಿದ್ದಕ್ಕೂ ತರ್ಕರಹಿತ ಕಾರಣಗಳಿದ್ದವು. ಅರಣ್ಯ ಇಲಾಖೆ ಇಂಥ ಆದೇಶ ಹೊರಡಿಸಿದಾಗ ಪ್ರವಾಸೋದ್ಯಮ ಇಲಾಖೆಗೆ ಅನ್ಯಮಾರ್ಗವೇ ಇಲ್ಲ. ಬೇಸರದ ಸಂಗತಿ ಏನೆಂದರೆ, ಹೊಸವರ್ಷದ ಮೊದಲವಾರದಲ್ಲಿ ನೂರಾರು ಚಾರಣಿಗರು ಟ್ರೆಕ್ಕಿಂಗ್ ಹೋಗಲು ಬುಕಿಂಗ್ ಮಾಡಿಕೊಂಡಿದ್ದರು.

ಅರಣ್ಯ ಇಲಾಖೆಗಾಗಲೀ ಪ್ರವಾಸೋದ್ಯಮ ಇಲಾಖೆಗಾಗಲೀ ಹುಲಿಗಣತಿಯ ವಿಚಾರ ಮೊದಲೇ ಗೊತ್ತಿರುತ್ತದೆ ಅಲ್ಲವೇ? ಪ್ರವಾಸಿಗರಿಂದ ಬುಕಿಂಗ್ ಸ್ವೀಕರಿಸದೆಯೇ ಈ ಮಾಹಿತಿ ಕೊಟ್ಟು ಕಳಿಸಬಹುದಿತ್ತಲ್ಲವಾ? ಕೊನೆಘಳಿಗೆಯಲ್ಲಿ ಆದೇಶದ ಬಗ್ಗೆ ವಿವರಿಸಿ ಪ್ರವಾಸಿಗರ ವೇಳಾಪಟ್ಟಿ ಮತ್ತು ಯೋಜನೆ ಹಾಳುಗೆಡವುವುದು ತಪ್ಪಲ್ಲವೇ? ಹೊಸವರ್ಷದಲ್ಲೇ ಪ್ರವಾಸೋದ್ಯಮ ತನ್ನ ಗ್ರಾಹಕರಿಗೆ ಈ ರೀತಿ ನಿರಾಶೆಗೆ ತಳ್ಳುವುದು ಉದ್ಯಮದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ. ರಾಜ್ಯದಲ್ಲಿ ಎಲ್ಲದಕ್ಕೂ ನಿರ್ಬಂಧ,ನಿಯಂತ್ರಣ ಎಂದು ಬೇಸರದಿಂದ ನಮ್ಮ ರಾಜ್ಯದ ಪ್ರವಾಸಿಗರು ಇತರ ರಾಜ್ಯಗಳತ್ತ ಮುಖ ಮಾಡುವ ಸಾಧ್ಯತೆ ಇರುತ್ತದೆ. ಇದು ಪರರಾಜ್ಯದ ಪ್ರವಾಸಿಗರಿಗೂ ಅಂಥದ್ದೇ ಸಂದೇಶ ರವಾನೆ ಮಾಡುತ್ತದೆ. ಪ್ರವಾಸ ತಾಣಗಳು ಯಾವತ್ತಿಗೂ ಅತಿಥಿಗಳಿಗೆ ಮುಕ್ತವಾಗಿರಬೇಕು. ಇತರ ಕೆಲಸಗಳೇನೇ ಇದ್ದರೂ ಅದು ಅದರ ಪಾಡಿಗೆ ಆಗುವಂತಿರಬೇಕು. ಹುಲಿಗಣತಿ ಕೂಡ ಪ್ರವಾಸಿಗರನ್ನು ತಡೆಯದೆಯೇ ಮಾಡಬಹುದಾದ ಕೆಲಸ. ಆದರೆ ಅದಕ್ಕೆ ಸರಿಯಾದ ಯೋಜನೆ ಇರಬೇಕು. ವಿವಿಧ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಿ, ಗ್ರಾಹಕರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯೋಜನೆ ರೂಪಿಸಿದರೆ ಎಲ್ಲವೂ ಸಾಧ್ಯ. ಇತರ ಉದ್ಯಮಗಳು ಹೇಗೆ ತಡೆರಹಿತವಾಗಿ ನಡೆಯುತ್ತವೆಯೋ ಹಾಗೆಯೇ ಪ್ರವಾಸೋದ್ಯಮವೂ ನಡೆಯುವಂತಾಗಬೇಕು. ಏಕೆಂದರೆ ಪ್ರವಾಸೋದ್ಯಮ ಎಂಬುದು ಅಪ್ಶನ್ ಅಲ್ಲ. ಪ್ರಯಾರಿಟಿ. ಅದು ದೇಶದ ಎಕಾನಮಿ, ಸಂಸ್ಕೃತಿ ಇವೆಲ್ಲದರಲ್ಲಿ ಪ್ರಮುಖ ಪಾತ್ರ ಹೊಂದಿರುವ ವಿಭಾಗ.