ಮಲಯನ್ನರ ನೆಲದಲ್ಲಿ
ಪೆನಾಂಗ್ ಹಿಲ್ಸ್ ಏರಲು ನಮಗೆ ಸಾಥ್ ನೀಡಿದ್ದು ಅಲ್ಲಿನ ವಿಶೇಷ 'ಫ್ಯುನಿಕುಲರ್ ಟ್ರೇನ್ʼ. ಕಡಿದಾದ ಹಳಿಗಳ ಮೇಲೆ ಕಾಡಿನ ನಡುವೆ ಮುನ್ನುಗ್ಗುವ ಈ ರೈಲು ಪ್ರಯಾಣ ಅತ್ಯಂತ ರೋಚಕವಾಗಿತ್ತು. ಬೆಟ್ಟದ ಮೇಲಿರುವ 'ದ ಹ್ಯಾಬಿಟ್ಯಾಟ್' ಮಳೆಕಾಡು ಅಮೆಜಾನ್ ಮಳೆಕಾಡಿಗಿಂತಲೂ ಪುರಾತನವಾಗಿದ್ದು ಯುನೆಸ್ಕೋ ಮಾನ್ಯತೆ ಪಡೆದಿದೆ. ಇಲ್ಲಿನ ಎತ್ತರದ 'ಲ್ಯಾಂಗರ್ ವೇ ಕ್ಯಾನೋಪಿ ವಾಕ್' ಮೇಲೆ ನಡೆಯುತ್ತಾ, ಅಲ್ಲಲ್ಲಿ ಕಾಣಸಿಗುವ ಅಪರೂಪದ ಪ್ರಾಣಿ-ಪಕ್ಷಿಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಾ ಸಾಗಿದರೆ ಪೆನಾಂಗ್‌ನ ಅತ್ಯಂತ ಎತ್ತರದ ಸಾರ್ವಜನಿಕ ವೀಕ್ಷಣಾ ತಾಣ 'ಕರ್ಟಿಸ್ ಕ್ರೆಸ್ಟ್ ಟ್ರೀ ಟಾಪ್ ವಾಕ್' ತಲುಪಬಹುದು.
- ಚೈತ್ರ ಹೆಗಡೆ
ಪ್ರತಿ ಬೇಸಗೆಯ ರಜೆ ಬಂತೆಂದರೆ ಸಾಕು, ನನ್ನ ಮಗಳು 'ಈ ಬಾರಿ ಪ್ರವಾಸಕ್ಕೆ ಎಲ್ಲಿಗೆ ಹೋಗೋಣ?' ಎಂದು ಯೋಚಿಸುವುದಕ್ಕೆ ಶುರು ಮಾಡುತ್ತಾಳೆ. ಅಲ್ಲದೆ ಹೋಗಬಹುದಾದ ಪ್ರವಾಸಿ ತಾಣಗಳ ಕುರಿತು ನಮ್ಮೊಂದಿಗೆ ಸಾಕಷ್ಟು ಚರ್ಚೆ ನಡೆಸುತ್ತಾಳೆ. ಇದರ ಪರಿಣಾಮ ಎಂಬಂತೆ ಈ ಬಾರಿಯ ರಜಾ ದಿನಗಳನ್ನು ಮಲೇಷ್ಯಾದ ಸುಂದರ ಪರಿಸರದಲ್ಲಿ ಸ್ಮರಣೀಯವಾಗಿ ಕಳೆದೆವು.
ಕೌಲಾಲಂಪುರದ ಭವ್ಯತೆ
ಮಲೇಷ್ಯಾದ ರಾಜಧಾನಿ ಕೌಲಾಲಂಪುರದ ವಿಮಾನ ನಿಲ್ದಾಣದಿಂದ ನಗರದ ಕಡೆಗೆ ಸಾಗುತ್ತಿರುವಾಗ ದೂರದಿಂದಲೇ ಮಿನುಗುವ ಪೆಟ್ರೋನಾಸ್ ಅವಳಿ ಗೋಪುರಗಳು, ವಿಶ್ವದ ಎರಡನೇನೆಯ ಅತಿ ಎತ್ತರದ ಕಟ್ಟಡವಾದ 'ಮರ್ಡೆಕಾ 118' ಮತ್ತು 'ದಿ ಎಕ್ಸ್‌ಚೇಂಜ್ 106' ಕಟ್ಟಡಗಳನ್ನು ಕಣ್ಣಾರೆ ಕಂಡೆವು. ಅವು ಅದ್ಭುತ ಸೌಂದರ್ಯದ ಖನಿಗಳು.
ಆ ಗಗನಚುಂಬಿ ಕಟ್ಟಡಗಳ ವಿನ್ಯಾಸ ಮತ್ತು ಅಲ್ಲಿನ ಆಧುನಿಕತೆ ನಿಜಕ್ಕೂ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ಅಲ್ಲಿನ ವ್ಯವಸ್ಥಿತ ರಸ್ತೆಗಳು ಮತ್ತು ನಗರದ ಶಿಸ್ತು ತುಂಬಾ ಮೆಚ್ಚುಗೆ ಆಯಿತು.
ಇದನ್ನೂ ಓದಿ: ಕ್ಲೀನ್ ನೇಷನ್ ಸಿಂಗಾಪುರದಲ್ಲಿ ನಾನು ನನ್ನ ಮಗಳು
ಕೌಲಾಲಂಪುರದ ಆಕರ್ಷಣೆಗಳು
ಪೆಟ್ರೋನಾಸ್ ಅವಳಿ ಗೋಪುರಗಳು, ವಿಶಾಲ ಕೆಎಲ್‌ಸಿಸಿ ಪಾರ್ಕ್, ಐತಿಹಾಸಿಕ ಕೆಎಲ್ ಟವರ್, ಪವಿತ್ರವಾದ ಬಾತು ಗುಹೆ, ಆಧುನಿಕತೆಯ ಸಂಕೇತವಾದ ಸಲೋಮಾ ಬ್ರಿಡ್ಜ್ ಮತ್ತು ಬೃಹತ್ ಮರ್ಡೆಕಾ ಸ್ಕ್ವೇರ್, ಅಕ್ವೇರಿಯಂ ಹಾಗೂ ಸುಂದರವಾದ ಚೀನಾ ದೇವಸ್ಥಾನಗಳಾದ ಥಿಯಾನ್ ಹೌ ಮತ್ತು ಚಿನ್ ಸ್ವೀ ಕೇವ್ಸ್ ನೋಡಿ ನಾವು ಹೊರಟಿದ್ದು, ತುಂಬಾ ಸುಂದರವಾದ ದ್ವೀಪ 'ಪೆನಾಂಗ್'ಗೆ.

ಸಂಸ್ಕೃತಿ ಮತ್ತು ಪ್ರಕೃತಿಯ ಸಂಗಮ
ಕೌಲಾಲಂಪುರದಿಂದ ಸುಮಾರು ಒಂದು ತಾಸಿನ ವಿಮಾನ ಪ್ರಯಾಣದ ನಂತರ ಪೆನಾಂಗ್ ದ್ವೀಪಕ್ಕೆ ತಲುಪಿದೆವು. ಕೌಲಾಲಂಪುರ ಗಗನಚುಂಬಿ, ಆಧುನಿಕ ಕಟ್ಟಡಗಳನ್ನು ಹೊಂದಿದ್ದರೆ, ಪೆನಾಂಗ್‌ನಲ್ಲಿ ಹಳೆಯ ಕಾಲದ ಐತಿಹಾಸಿಕ ಕಟ್ಟಡಗಳು, ಕಲಾತ್ಮಕ ಬೀದಿಗಳು ಮತ್ತು ನೈಸರ್ಗಿಕ ತಾಣಗಳು ಮನಸಿಗೆ ನೆಮ್ಮದಿ ನೀಡುತ್ತವೆ. ಇಲ್ಲಿ ಭಾರತೀಯರು, ಚೀನಿಯರು ಮತ್ತು ಮಲಯನ್ನರು ಹೆಚ್ಚಾಗಿ ಕಂಡುಬರುತ್ತಾರೆ.
ಕೆಕ್ ಲೋಕ್ ಸಿ ದೇವಾಲಯ
ಇದು ಮಲೇಷ್ಯಾದಲ್ಲೇ ಅತಿದೊಡ್ಡ ಬೌದ್ಧ ಮಂದಿರಗಳಲ್ಲಿ ಒಂದು. ನಾವು ಬೆಳಗ್ಗೆ 8 ಗಂಟೆಗೆ ಹೊಟೇಲ್‌ನಿಂದ ಟ್ಯಾಕ್ಸಿ ಬುಕ್ ಮಾಡಿ ಹೊರಟು ಅಲ್ಲಿಗೆ ತಲುಪಿದೆವು. ಈ ದೇವಾಲಯದ ಏಳು ಅಂತಸ್ತುಗಳ ಪಗೋಡ ಮತ್ತು ಬೃಹತ್ ಗಾತ್ರದ ಕಂಚಿನ ಬೌದ್ಧ ಪ್ರತಿಮೆ ನೋಡುಗರನ್ನು ಆಕರ್ಷಿಸುತ್ತವೆ. ಬೆಟ್ಟದ ಮೇಲಿರುವ ಪ್ರತಿಮೆಯ ಬಳಿ ತಲುಪಲು ಕೇಬಲ್ ಟ್ರೇನ್ ವ್ಯವಸ್ಥೆಯಿದೆ. ಈ ಪ್ರಯಾಣದ ವೇಳೆ ಸುತ್ತಲಿನ ಹಸಿರು ಬೆಟ್ಟಗುಡ್ಡಗಳ ನೋಟ ತುಂಬಾ ಹಿತವಾದ ಅನುಭವ ನೀಡುತ್ತದೆ. ಮಂದಿರದ ಕಾಂಪ್ಲೆಕ್ಸ್‌ನಲ್ಲಿನ ಅಂಗಡಿಗಳಲ್ಲಿ ಫ್ರಿಡ್ಜ್ ಮ್ಯಾಗ್ನೆಟ್ ಖರೀದಿಸಿ, ಹತ್ತಿರದಲ್ಲಿದ್ದ 'ಪೆನಾಂಗ್ ಹಿಲ್ಸ್ ಅಂಡ್ ದ ಹ್ಯಾಬಿಟ್ಯಾಟ್'ಗೆ ತಲುಪಿದೆವು.
ಪೆನಾಂಗ್ ಹಿಲ್ಸ್‌ನಿಂದ ದ ಹ್ಯಾಬಿಟ್ಯಾಟ್ನೆಡೆಗೆ
ಪೆನಾಂಗ್ ಹಿಲ್ಸ್ ಏರಲು ನಮಗೆ ಸಾಥ್ ನೀಡಿದ್ದು ಅಲ್ಲಿನ ವಿಶೇಷ 'ಫ್ಯುನಿಕುಲರ್ ಟ್ರೇನ್ʼ. ಕಡಿದಾದ ಹಳಿಗಳ ಮೇಲೆ ಕಾಡಿನ ನಡುವೆ ಮುನ್ನುಗ್ಗುವ ಈ ರೈಲು ಪ್ರಯಾಣವು ಅತ್ಯಂತ ರೋಚಕವಾಗಿತ್ತು. ಬೆಟ್ಟದ ಮೇಲಿರುವ 'ದ ಹ್ಯಾಬಿಟ್ಯಾಟ್' ಮಳೆಕಾಡು ಅಮೆಜಾನ್ ಮಳೆಕಾಡಿಗಿಂತಲೂ ಪುರಾತನವಾದ ಈ ತಾಣ ಯುನೆಸ್ಕೋ ಮಾನ್ಯತೆ ಪಡೆದಿದೆ. ಇಲ್ಲಿನ ಎತ್ತರದ 'ಲ್ಯಾಂಗರ್ ವೇ ಕ್ಯಾನೋಪಿ ವಾಕ್' ಮೇಲೆ ನಡೆಯುತ್ತಾ, ಅಲ್ಲಲ್ಲಿ ಕಾಣಸಿಗುವ ಅಪರೂಪದ ಪ್ರಾಣಿ-ಪಕ್ಷಿಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಾ ಸಾಗಿದರೆ ಪೆನಾಂಗ್‌ನ ಅತ್ಯಂತ ಎತ್ತರದ ಸಾರ್ವಜನಿಕ ವೀಕ್ಷಣಾ ತಾಣ 'ಕರ್ಟಿಸ್ ಕ್ರೆಸ್ಟ್ ಟ್ರೀ ಟಾಪ್ ವಾಕ್' ತಲುಪಬಹುದು. ಇಲ್ಲಿಂದ ಇಡೀ ಪೆನಾಂಗ್ ದ್ವೀಪದ 360 ಡಿಗ್ರಿ ನೋಟ, ಅಂಡಮಾನ್ ಸಮುದ್ರದ ನಡುವೆ ಮಾನವ ನಿರ್ಮಿತ ದ್ವೀಪಗಳನ್ನೂ ಕಾಣಬಹುದು.

ʻದ ಟಾಪ್'
'ಕರ್ಟಿಸ್ ಕ್ರೆಸ್ಟ್ ಟ್ರೀ ಟಾಪ್ ವಾಕ್' ನಂತರ ನಾವು ಹೊರಟಿದ್ದು ಜಾರ್ಜ್ ಟೌನ್ ಮಧ್ಯಭಾಗದಲ್ಲಿನ 'ದ ಟಾಪ್' ಕಟ್ಟಡಕ್ಕೆ. ಇದು ಮಕ್ಕಳಿಗೆ ಇಷ್ಟವಾಗುವ ತಾಣ. ಪೆನಾಂಗ್ ದ್ವೀಪದ ಅತ್ಯಂತ ಎತ್ತರದ ಕಟ್ಟಡ. ಇಲ್ಲಿಂದ ಸೂರ್ಯಾಸ್ತದ ದೃಶ್ಯ ಮನಮೋಹಕವಾಗಿರುತ್ತದೆ. ಇಲ್ಲಿ ಮಗಳ ಆಸೆಯ ಪ್ರಕಾರ ಅಕ್ವೇರಿಯಂ, ಜುರಾಸಿಕ್ ರಿಸರ್ಚ್ ಸೆಂಟರ್ ಮತ್ತು 7ಡಿ ಡಿಸ್ಕವರಿ ಥಿಯೇಟರ್, ವೀಕ್ಷಣಾಲಯದ ಡೆಕ್‌ನಿಂದ ದ್ವೀಪದ ವಿಹಂಗಮ ನೋಟ ನೋಡಿ ಖುಷಿಯಾಯಿತು. ಇವೆಲ್ಲ ನೋಡಿ ಮುಗಿದಾಗ ಸೂರ್ಯಾಸ್ತದ ಸಮಯ ಬಂದೇ ಬಿಟ್ಟಿತು.
68ನೆಯ ಮಹಡಿಯಲ್ಲಿ 'ರೇನ್‌ಬೋ ಸ್ಕೈವಾಕ್'
ಗಾಜಿನ ಸೇತುವೆಯ ಮೇಲೆ ನಡೆಯುತ್ತ ಇಡೀ ಜಾರ್ಜ್ ಟೌನ್, ಸಮುದ್ರ ಮತ್ತು ಬೆಟ್ಟಗಳ 360 ಡಿಗ್ರಿ ನೋಟ ಜತೆಗೆ ಸೂರ್ಯಾಸ್ತ, ನಗರದ ದೀಪಗಳು ಒಂದೊಂದಾಗಿ ಬೆಳಗುತ್ತಾ ಹೋದಂತೆ ಅಲ್ಲಿಂದ ಹೊರಬರಲು ನಮಗೆ ಮನಸೇ ಬರಲಿಲ್ಲ. ಅಷ್ಟು ಅದ್ಭುತ ಸನ್ನಿವೇಶ ಅಲ್ಲಿ ಸೃಷ್ಟಿಯಾಗಿತ್ತು.
ಜಾರ್ಜ್ ಟೌನ್ ಸ್ಟ್ರೀಟ್ ಆರ್ಟ್
ನನಗೆ ಹಳೆಯ ವಸ್ತುಗಳು ಮತ್ತು ಪ್ರಾಚೀನ ಕಟ್ಟಡಗಳೆಂದರೆ ಹೆಚ್ಚು ಪ್ರೀತಿ. ಹಾಗಾಗಿ ಜಾರ್ಜ್ ಟೌನ್‌ನ ‘ಸ್ಟ್ರೀಟ್ ಆರ್ಟ್’ ವೀಕ್ಷಣೆ ನನಗೆ ಅದ್ಭುತ ಅನುಭವ ನೀಡಿತು. ಇಲ್ಲಿನ ಪ್ರತಿಯೊಂದು ಹಳೆಯ ಕಟ್ಟಡದ ಗೋಡೆಗಳ ಮೇಲಿರುವ ಪೇಂಟಿಂಗ್‌ಗಳು ಒಂದಕ್ಕಿಂತ ಒಂದು ಭಿನ್ನವಾಗಿದ್ದು, ಕಲಾತ್ಮಕ ಆಗಿವೆ. ಪ್ರವಾಸಿಗರು ಅಲ್ಲಿ ಫೊಟೋಗಳನ್ನು ಕ್ಲಿಕ್ಕಿಸಿಕೊಳ್ಳಲು ಕಾಯುತ್ತಾರೆ.
ಸಂಜೆ ಸಮೀಪಿಸುತ್ತಿದ್ದಂತೆ ನಾವು ನಗರದಿಂದ ಸ್ವಲ್ಪ ದೂರದಲ್ಲಿರುವ ‘ಚೂ ಬೆಟ್ಟಿ’ಗೆ ಭೇಟಿ ನೀಡಿದೆವು. ಇದು ಸಮುದ್ರದ ನೀರಿನ ಮೇಲೆ ಮರದ ಹಲಗೆಗಳಿಂದ ನಿರ್ಮಿಸಲಾದ ಮನೆಗಳಿರುವ ಒಂದು ಪುರಾತನ ಹಳ್ಳಿ. ಮರದ ಹಲಗೆಯ ಮೇಲೆ ನಡೆಯುತ್ತಾ, ಅಲ್ಲಿನ ಪುಟ್ಟ ಅಂಗಡಿಗಳಲ್ಲಿ ಪುರಾತನ ವಸ್ತುಗಳನ್ನು ನೋಡುವುದು ಹಾಗೂ ‘ಆರ್ಟ್ ಅಂಡ್ ಕ್ರಾಫ್ಟ್’ ವಸ್ತುಗಳನ್ನು ಖರೀದಿಸುವುದು ಖುಷಿ ನೀಡಿತ್ತದೆ. ಆ ಹಳ್ಳಿಯ ಕೊನೆಯ ತುದಿಗೆ ತಲುಪಿದಾಗ ಕಂಡದ್ದು ಸಮುದ್ರದ ಅಲೆಗಳು, ದೂರದಲ್ಲಿ ಸಾಗುತ್ತಿದ್ದ ಹಡಗುಗಳು ಮತ್ತು ಮೈನ್ ಲ್ಯಾಂಡ್ ಮಲೇಷ್ಯಾ ಮತ್ತು ದ್ವೀಪಗಳ ನಡುವೆ ಕಟ್ಟಿರುವ ಬೃಹತ್ ಸೇತುವೆ!

ಸಮುದ್ರದ ಮೇಲೊಂದು ಸೇತುವೆ
ಸುಲ್ತಾನ್ ಅಬ್ದುಲ್ ಹಲೀಮ್ ಮಜ್ಜಮ್ ಶಾ ಸೇತುವೆ, ಸುಮಾರು 24- 25 ಕಿಮೀ ಉದ್ದವಿದೆ. ಈ ಬೃಹತ್ ಸೇತುವೆಯು ಮಲೇಷ್ಯಾದ ಪ್ರಧಾನ ಭೂಭಾಗ ಮತ್ತು ಪೆನಾಂಗ್ ದ್ವೀಪದ ನಡುವೆ ಸಂಪರ್ಕ ಕಲ್ಪಿಸುವ ಪ್ರಮುಖ ಸಮುದ್ರ ಮಾರ್ಗ. ನಮಗೆ ಸಮಯದ ಅಭಾವವಿದ್ದ ಕಾರಣ, ಈ ಬೃಹತ್ ಸೇತುವೆಯ ಮೇಲೆ ಸಂಚರಿಸಲು ಸಾಧ್ಯವಾಗದಿದ್ದರೂ, ದೂರದಿಂದಲೇ ಅದರ ವೈಭವವನ್ನು ಕಂಡು ಬೆರಗಾಗಿದ್ದೇವೆ.
ಎಂಟೋಪಿಯಾ ಬಟರ್‌ಫ್ಲೈ ಫಾರ್ಮ್
ಇದು ಏಷ್ಯಾ ದ ಅತಿ ದೊಡ್ಡ ಚಿಟ್ಟೆ ಪಾರ್ಕ್. ಇದರ ಒಳಗೆ ಪ್ರವೇಶಿಸುತ್ತಿದ್ದಂತೆಯೇ ನಾವು ಯಾವುದೋ ದಟ್ಟ ಅಡವಿಯೊಳಗೆ ಸಂಚರಿಸುತ್ತಿರುವಂತೆ ಭಾಸವಾಯಿತು. ನೂರಾರು ಬಣ್ಣ ಬಣ್ಣದ ಚಿಟ್ಟೆಗಳು ನಮ್ಮ ಸುತ್ತಲೂ ಹಾರಾಡುತ್ತಾ, ಮೈಮೇಲೆ ಬಂದು ಕುಳಿತುಕೊಳ್ಳುವುದನ್ನು ಅನುಭವಿಸಿ ಮಗಳು ಖುಷಿಯಿಂದ ಕುಣಿದಳು. ಇಲ್ಲಿ ಮಗಳ ಆಸೆಯಂತೆ ಚಿಟ್ಟೆಗಳ ಸಂಪೂರ್ಣ ಜೀವನ ಚಕ್ರವನ್ನು ಹತ್ತಿರದಿಂದ ವೀಕ್ಷಿಸಿದೆವು. ಅಷ್ಟೇ ಅಲ್ಲದೆ, ರೇಷ್ಮೆ ಬಟ್ಟೆಯ ತಯಾರಿಕೆಯ ಹಂತಗಳನ್ನು ಕೂಡ ಅರಿತುಕೊಂಡೆವು.
ಒಟ್ಟಾರೆ ಕೌಲಾಲಂಪುರ್ ಮತ್ತು ಪೆನಾಂಗ್ ದ್ವೀಪಗಳ ಈ ಪ್ರವಾಸ ನಮ್ಮ ಜೀವನದಲ್ಲಿ ಮರೆಯಲಾಗದ ಸುಂದರ ನೆನಪುಗಳನ್ನು ಮತ್ತು ಅದ್ಭುತ ಅನುಭವಗಳನ್ನು ನೀಡಿದ್ದಂತೂ ನಿಜ.
ಪ್ರವಾಸಿಗೆ ಸಲಹೆಗಳು:
- ಸಾರಿಗೆ ಸೌಲಭ್ಯಕ್ಕೆ 'ಗ್ರಾಬ್ ಕ್ಯಾಬ್' ಬಳಸಿ.
- ಪ್ರತಿಯೊಂದು ವೀಕ್ಷಣೆಗೆ ಆನ್‌ಲೈನ್ ಟಿಕೆಟ್ ಪಡೆದುಕೊಳ್ಳುವುದು ಉತ್ತಮ.
- ಲಿಟಲ್ ಇಂಡಿಯಾ ಮತ್ತು ಚೀನಾ ಟೌನ್‌ಗೆ ಭೇಟಿನೀಡಲು ಮರೆಯದಿರಿ.
- ಮಲೇಷ್ಯಾದ ಪ್ರಸಿದ್ಧ ಹಣ್ಣು 'ಡ್ಯೂರಿಯನ್'. ಆದರೆ ಈ ಹಣ್ಣನ್ನು ಸಾರ್ವಜನಿಕ ಸ್ಥಳಗಳಲ್ಲಿ ತಿನ್ನಲು ಕೆಲವು ನಿರ್ಬಂಧಗಳಿವೆ. ಹಾಗಾಗಿ ನಿಗದಿತ ಹೊಟೇಲ್ ಅಥವಾ ತೆರೆದ ಸ್ಥಳಗಳಲ್ಲಿ ಮಾತ್ರ ಸೇವಿಸುವುದು ಉತ್ತಮ.