ಬೇಸಗೆ ರಜೆ ಶುರುವಾಗಿದೆ. ಮಕ್ಕಳಿಂದ ಹಿಡಿದು ಯುವಕರ ತನಕ ಪ್ರತಿಯೊಬ್ಬರಿಗೂ ಇದು ಸಾಮಾನ್ಯ ರಜೆಯ ಅವಧಿ. ಸಮೂಹ ಪ್ರವಾಸಗಳು ಏರ್ಪಡುವ ಸಮಯ. ಇಂದಿನ ಪ್ರವಾಸಗಳು ಅಂದರೆ ಅದರಲ್ಲಿ ಸಾಹಸಗಳಿಗೆ ಮತ್ತು ತೋರಿಕೆಗೆ ಆದ್ಯತೆ. ಸೋಷಿಯಲ್ ಮೀಡಿಯಾಗಾಗಿಯೇ ಪ್ರವಾಸ ಹೋಗುವುದು, ಪ್ರವಾಸಾವಧಿಯಲ್ಲಿ ತಾವು ಮಾಡುವ ಸೋ ಕಾಲ್ಡ್ ಸಾಹಸಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ಲೈಕ್ ಕಮೆಂಟ್ ಗಿಟ್ಟಿಸುವುದು ಇಂದಿನ ಪೀಳಿಗೆಯ ಅಜೆಂಡಾ ಎಂಬಂತಾಗಿದೆ. ಅದಕ್ಕೆ ತಕ್ಕಂತೆಯೇ ಟೂರ್ ಆಪರೇಟರ್ಸ್, ಪ್ರವಾಸಿ ತಾಣಗಳ ಬಳಿ ಇರುವ ರೆಸಾರ್ಟ್ ಹೋಮ್ ಸ್ಟೇಗಳು ಕೂಡ ಅಪಾಯಕಾರಿ ಆಟಗಳು, ಜಲಕ್ರೀಡೆಗಳು, ಜೀವನದ ಕೊನೆಯ ಫೊಟೋ ಆಗಬಹುದಾದ ಸೆಲ್ಫೀ ಸ್ಪಾಟ್ ಗಳನ್ನು ತೋರಿಸಿ ಆಕರ್ಷಿಸುತ್ತಿದ್ದಾರೆ. ಪ್ರವಾಸಿಗರು ಯಾವುದೇ ರೆಸಾರ್ಟ್ ಹೋಮ್ ಸ್ಟೇ ಬುಕ್ ಮಾಡಿದರೂ, ಸ್ವಿಮ್ಮಿಂಗ್ ಇದೆಯಾ? ಚಾರಣ ಹೋಗಬಹುದಾ? ಫಾಲ್ಸ್ ಇದೆಯಾ? ಹಿಡನ್ ಜೆಮ್ ಇದೆಯಾ ಎಂದೆಲ್ಲ ಹುಡುಕಾಡುತ್ತಾರೆ. ಸ್ವಿಮ್ಮಿಂ ಪೂಲ್ ಇದ್ದರೆ ಸಾಕಾಗುವುದಿಲ್ಲ, ಯಾವುದೋ ಹೊಳೆ, ಕೆರೆ, ಜಲಪಾತದ ಆಳ ಇಂಥವುಗಳ ಬಳಿ ಕರೆದೊಯ್ಯುವ ಹೋಮ್ ಸ್ಟೇಗಳಿಗೆ ಡಿಮ್ಯಾಂಡ್ ಜಾಸ್ತಿ. ಆದರೆ ರಜೆಯ ಮೋಜಿಗಾಗಿ ಇವರು ಪಣಕ್ಕಿಡುತ್ತಿರುವುದು ಏನನ್ನು? ಅಮೂಲ್ಯ ಜೀವವನ್ನು. ಹೋದರೆ ಮತ್ತೆ ಮರಳಿ ಬಾರದ ಪ್ರಾಣವನ್ನು.

ಸಿಟಿಯಿಂದ ದೂರದ ಸ್ಥಳಕ್ಕೆ ಪ್ರವಾಸ ಮಾಡುವ ಯುವ ಜನತೆಗೆ ಆ ಜಾಗದ ಆಳ ಅರಿವುಗಳಿರುವುದಿಲ್ಲ. ಅಲ್ಲಿನ ನೀರಿನ ಸೆಳವು, ಗಾಳಿಯ ತೀವ್ರತೆ, ಪ್ರಾಣಿಗಳ ಅಪಾಯ ಇವ್ಯಾವುದೂ ತಿಳಿದಿರುವುದಿಲ್ಲ. ಕೇವಲ ಸಾಹಸಗೈಯುವ ಹುಚ್ಚು ಮನಸು ಮಾತ್ರ ಅವರನ್ನು ಆಳುತ್ತಿರುತ್ತದೆ. ಇಂಥ ಸಮಯದಲ್ಲಿ ಅವರನ್ನು ನಿಯಂತ್ರಿಸಬೇಕಿರೋದು ಸ್ಥಳೀಯ ಹೋಮ್ ಸ್ಟೇಗಳ ಗೈಡ್ ಗಳು ಮತ್ತು ಟೂರ್ ಆಪರೇಟರ್ ಗಳು ಅಥವಾ ಯುವಮನಸುಗಳೊಂದಿಗೆ ಹೋಗಿರುವ ಪೋಷಕರು.

ಇದನ್ನೂ ಓದಿ: ಡೋಂಟ್ ಕೇರ್ ಎಂದು ಪುಟಿದೆದ್ದ ಪ್ರವಾಸೋದ್ಯಮ

ಮಳೆಗಾಲದಲ್ಲಿ ಪ್ರವಾಸಕ್ಕೆ ಹೋದಾಗ ಸೆಲ್ಫೀ ತೆಗೆದುಕೊಳ್ಳಲು ಅಥವಾ ಈಜಾಡಲು ಹೋಗಿ ಪ್ರಾಣ ಕಳೆದುಕೊಳ್ಳುವ ಘಟನೆಗಳನ್ನು ಗಮನಿಸಿ ಎಷ್ಟೋ ಕಡೆ ಪ್ರವಾಸಿ ತಾಣಗಳನ್ನೇ ಬಂದ್ ಮಾಡಿಬಿಡುವ ಅತಿರೇಕವನ್ನು ಸರಕಾರ ಮಾಡಿದೆ. ಆದರೆ ಬೇಸಗೆ ಸಮಯದಲ್ಲಿ ಇಂಥ ಅಪಾಯಗಳು ಆಗಲಿಕ್ಕಿಲ್ಲ ಎಂದು ಸರ್ವರೂ ರಿಲ್ಯಾಕ್ಸ್ ಆಗಿಬಿಡುತ್ತಾರೆ. ಇದರಿಂದಾಗಿ ಈಗ ಬೇಸಗೆ ಸಮಯದಲ್ಲೂ ಪ್ರಾಣಗಳು ಹೋಗುತ್ತಿವೆ. ಹೌದು. ಮುತ್ತತ್ತಿ, ಮುತ್ಯಾಲಮಡುವು, ಹೊಗೈನಕಲ್, ಮೇಕೆದಾಟು ಥರದ ನೀರಿನ ಜಾಗಗಳು, ಕಡಿಮೆ ನೀರಿರುವ ಜಲಪಾತಗಳು, ಬೆಟ್ಟದ ತುದಿಗಳು ಇಂಥಲ್ಲಿಗೆ ಸಲೀಸಾದ ಪ್ರವೇಶ ಸಿಗುತ್ತಿದೆ. ಮೇಲ್ವಿಚಾರಕರು, ಭದ್ರತಾ ಸಿಬ್ಬಂದಿ ಇಲ್ಲದ ಜಾಗಕ್ಕೆ ಪ್ರವಾಸಿಗರು ಹೋಗಿ ಅಪಾಯಕಾರಿ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ. ಹರಿಯುವ ನೀರಿನ ಸುಳಿಗೆ, ಗೊತ್ತಿಲ್ಲದ ಆಳಕ್ಕೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸೆಲ್ಫೀ ಹುಚ್ಚಿನಿಂದ ಜೀವಹಾನಿ ಮಾಡಿಕೊಳ್ಳುತ್ತಿದ್ದಾರೆ.ರೀಲ್ಸ್ ಗಾಗಿ ಇಲ್ಲದ ಹುಚ್ಚುತನ ಮೆರೆಯುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ರಜೆಯ ಪ್ರವಾಸಕ್ಕೆ ಗೆಳೆಯರೊಂದಿಗೆ ಕಳಿಸುವಾಗ ಅತ್ಯಂತ ಎಚ್ಚರಿಕೆ ವಹಿಸುವ ಅಗತ್ಯವಿದೆ. ಕಿರಿಯರೊಂದಿಗೆ ಒಬ್ಬರಾದರೂ ಪ್ರಬುದ್ಧ ಜವಾಬ್ದಾರಿಯುತ ವ್ಯಕ್ತಿಯನ್ನು ಜತೆ ಮಾಡಿ ಕಳಿಸಬೇಕಿದೆ. ರೆಸಾರ್ಟ್ ಮತ್ತು ಹೋಮ್ ಸ್ಟೇಗಳು ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕಿದೆ. ನುರಿತ ಈಜುಗಾರರು, ರೆಸ್ಕ್ಯೂ ಟೀಮ್ ಇಲ್ಲದೆಯೇ, ಫಸ್ಟ್ ಏಡ್ ವ್ಯವಸ್ಥೆ ಇಲ್ಲದೆಯೇ ಯಾವ ಸಾಹಸಕ್ಕೂ ಪ್ರವಾಸಿಗರನ್ನು ಕರೆಯಕೂಡದು. ಲೈಫ್ ಜಾಕೆಟ್ ಇಲ್ಲದೆ ನೀರಿಗಿಳಿಸಕೂಡದು.

Untitled design (1)

ಚಾರಣಕ್ಕೆ ಹೋದ ಮಂದಿಯನ್ನೂ ಮದ್ಯ ಮತ್ತು ಧೂಮಪಾನ ಮಾಡದಂತೆ ತಡೆಯಲು ಭದ್ರತಾ ವ್ಯವಸ್ಥೆ ಗಟ್ಟಿಗೊಳಿಸಬೇಕು. ಇಲ್ಲವಾದಲ್ಲಿ ಕಾಡ್ಗಿಚ್ಚು ಸೇರಿದಂತೆ ಹಲವು ದುರಂತಗಳನ್ನು ನೋಡಬೇಕಾಗುತ್ತದೆ.

ಪ್ರವಾಸಿಗರಲ್ಲಿ ಜವಾಬ್ದಾರಿಯುತ ಪ್ರವಾಸೋದ್ಯಮದ ಅರಿವು ತಂತಾನೇ ಹುಟ್ಟುವುದಿಲ್ಲ. ಕಾನೂನು ನಿಯಮಗಳ ಮೂಲಕ ಅವರನ್ನು ಹತೋಟಿಯಲ್ಲಿಟ್ಟು ಅದನ್ನು ಅಭ್ಯಾಸವಾಗಿಸಬೇಕು. ಪ್ರಾಣಾಪಾಯವಿದೆ ಎಂದಷ್ಟೇ ಹೇಳಿದರೆ ಆ ಥ್ರಿಲ್ ಅನುಭವಿಸಲು ಮುಂದಾಗುವ ಯುವ ಜನತೆಗೆ ಕಾನೂನು ಕಟ್ಟಳೆಯ ಮೂಲಕವೇ ಕಟ್ಟಿ ಹಾಕಬೇಕು. ಹೋಮ್ ಸ್ಟೇ, ರೆಸಾರ್ಟ್ ಟೂರ್ ಆಪರೇಟರ್ ಗಳಿಗೂ ಕೆಲವು ಕಾನೂನುಭಯ ಮೂಡಿಸದಿದ್ದರೆ, ಅವರು ತಾವೂ ಹಾದಿ ತಪ್ಪಿ ಪ್ರವಾಸಿಗರನ್ನೂ ಹಾದಿ ತಪ್ಪಿಸುತ್ತಾರೆ. ಜತೆಗೆ ಪ್ರವಾಸಿಗರ ಜೀವಕ್ಕೆ ಕುತ್ತು ತರುತ್ತಾರೆ. ಬೇಸಗೆ ರಜೆಯ ಪ್ರವಾಸ ಒಂದು ಮಧುರ ನೆನಪಾಗಿ ದಾಖಲಾಗಬೇಕೇ ಹೊರತು ದುಃಸ್ವಪ್ನವಾಗಿ ಅಲ್ಲ. ’ಟೂರ್ ಸೇಫ್’ ಇದು ಪ್ರವಾಸಿ ಪ್ರಪಂಚದ ಕಳಕಳಿ. ಎಲ್ಲ ಪ್ರವಾಸಿಗರಿಗೂ ಬೇಸಗೆ ರಜೆಯ ಶುಭಾಶಯಗಳು.