Friday, October 3, 2025
Friday, October 3, 2025

ನಗುವಾಗ ಬಾಯಿ ಮುಚ್ಚಿ

ಜಪಾನಿನಲ್ಲಿ ಶರೀರ ಭಾಷೆ (body language) ತುಂಬಾ ಶಿಷ್ಟ, ನಗುವಾಗ ಬಾಯಿಯನ್ನು ಮುಚ್ಚುವುದು 'ಉಚಿರೆಮಸು' ಎಂಬ ನಡವಳಿಕೆಗೆ ಸೇರಿದೆ. ಹಾಗೆಯೇ ಬಹಿರಂಗವಾಗಿ ಭಾವನೆಗಳನ್ನು ತೀವ್ರವಾಗಿ ತೋರಿಸುವುದನ್ನು ಅವರು ಒಪ್ಪಿಕೊಳ್ಳುವುದಿಲ್ಲ. - ವಿಶ್ವೇಶ್ವರ ಭಟ್

ಸಾಮಾನ್ಯವಾಗಿ ಹೆಂಗಸರು ನಗುವಾಗ ಬಾಯಿ ಮುಚ್ಚಿಕೊಳ್ಳುತ್ತಾರೆ. ಇದನ್ನು ಜಗತ್ತಿನ ಬಹುತೇಕ ದೇಶಗಳಲ್ಲಿ ಗಮನಿಸಬಹುದು. ಆದರೆ ಜಪಾನಿನ ಸಂಸ್ಕೃತಿಯಲ್ಲಿ ಮಹಿಳೆಯರು ನಗುವಾಗ ಬಾಯಿಯನ್ನು ಮುಚ್ಚುವುದು ಒಂದು ವಿಶಿಷ್ಟ ಸಾಮಾಜಿಕ ಆಚರಣೆ. ಕೆಲವು ಕುಟುಂಬಗಳಲ್ಲಿ ಈಗಲೂ, ನಗುವಾಗ ಬಾಯಿಗೆ ಕೈಯನ್ನು ಅಡ್ಡವಾಗಿ ಹಿಡಿದು ನಗಬೇಕು ಎಂದು ಮಕ್ಕಳಿಗೆ ತಾಯಂದಿರು ಹೇಳುವುದುಂಟು. ಈ ನಡೆಗೆ ಹಲವು ಐತಿಹಾಸಿಕ, ಸಾಂಸ್ಕೃತಿಕ ಮತ್ತು ಮನೋವೈಜ್ಞಾನಿಕ ಕಾರಣಗಳೂ ಇವೆ.

ಜಪಾನಿನ ಹೆಯಾನ್ ಯುಗ (7941185)ದಲ್ಲಿ, ಮಹಿಳೆಯರು ತಮ್ಮ ಹಲ್ಲುಗಳನ್ನು ಕಪ್ಪು ಬಣ್ಣ ಹಚ್ಚಿಕೊಳ್ಳುವ ಓಹಾಗುರೊ ಎಂಬ ವಿಚಿತ್ರ ಪದ್ಧತಿ ಪ್ರಚಲಿತವಾಗಿತ್ತು. ಈ ಪದ್ಧತಿ ಮಹಿಳೆಯರ ವೈವಾಹಿಕ ಸ್ಥಿತಿಯನ್ನು ಸೂಚಿಸಲು ಮತ್ತು ಸಾಮಾಜಿಕ ಸ್ಥಿತಿಯನ್ನು ಪ್ರತಿಬಿಂಬಿಸಲು ಬಳಸಲಾಗುತ್ತಿತ್ತು. ಹಲ್ಲುಗಳನ್ನು ಕಪ್ಪು ಬಣ್ಣದಿಂದ ಬಣ್ಣಿಸುವುದು ಶ್ರದ್ದೆ ಮತ್ತು ಶಿಷ್ಟಾಚಾರದ ಸಂಕೇತವಾಗಿತ್ತು.

laughing

ಹಲ್ಲುಗಳನ್ನು ಬಹಿರಂಗವಾಗಿ ತೋರಿಸುವುದನ್ನು ತಪ್ಪಿಸಲು, ಮಹಿಳೆಯರು 'ನಗುವಾಗ ಅಥವಾ ಮಾತನಾಡುವಾಗ ತಮ್ಮ ಬಾಯಿಯನ್ನು ಕೈಯಿಂದ ಅಥವಾ ಕಿಮೋನೋ ಸ್ಟೀವ್‌ನಿಂದ ಮುಚ್ಚುತ್ತಿದ್ದರುʼ. ಜಪಾನಿನ ಶಿಷ್ಟಾಚಾರದಲ್ಲಿ, ನಗುವಾಗ ಬಾಯಿಯನ್ನು ಮುಚ್ಚುವುದು ವಿನಯ, ಸೌಮ್ಯತೆ ಮತ್ತು ಶಿಷ್ಟತೆಯ ಸಂಕೇತ. ಮಹಿಳೆಯರು ತಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮತ್ತು ಅತಿಯಾದ ಉಲ್ಲಾಸವನ್ನು ತೋರಿಸದಿರುವುದು ಆ ಶಿಷ್ಟಾಚಾರದ ಭಾಗವಾಗಿದೆ. ಬಾಯಿ ಮುಚ್ಚಿಕೊಳ್ಳದೇ ಜೋರಾಗಿ ನಕ್ಕರೆ, 'ನೋಡಿ, ಎಷ್ಟು ಅಸಹ್ಯವಾಗಿ ಹಲ್ಲನ್ನು ಕಾಣಿಸುವಂತೆ ನಗುತ್ತಾಳೆ' ಎಂದು ಛೇಡಿಸುವುದುಂಟು.

ನಗುವಾಗ ಬಾಯಿಯನ್ನು ಮುಚ್ಚುವುದು ಕೆಲವೊಮ್ಮೆ ವ್ಯಕ್ತಿಯ ಅಂತರಂಗದ ಭಾವನೆಗಳನ್ನು ತೋರಿಸದಿರುವುದಕ್ಕೆ ಮನೋವೈಜ್ಞಾನಿಕ ಕಾರಣವೂ ಇದ್ದಿರಬಹುದು. ಇದು ವ್ಯಕ್ತಿಯ ಆತ್ಮವಿಶ್ವಾಸದ ಕೊರತೆ, ಸಾಮಾಜಿಕ ಆತಂಕ ಅಥವಾ ಅಜ್ಞಾತ ಭಾವನೆಗಳನ್ನೂ ಸೂಚಿಸಬಹುದು. ಬಾಯಿಯನ್ನು ಮುಚ್ಚುವುದರಿಂದ ವ್ಯಕ್ತಿಯ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಾಯವಾಗುವುದಂತೆ. ಈಗಲೂ ಮಹಿಳೆಯರು ಜೋರಾಗಿ ನಗುವುದು ಅಷ್ಟೇನೂ ಉತ್ತಮ ನಡೆವಳಿಕೆ ಅಲ್ಲವೆಂಬ ಭಾವನೆ ಜಪಾನಿಯರಲ್ಲಿದೆ. (ಈ ಶಿಷ್ಟಾಚಾರ ನಮ್ಮಲ್ಲೂ ಇದೆ.)

ಜೋರಾಗಿ ನಗುವ ಸ್ವಭಾವವಿದ್ದವರು, ಸುತ್ತ-ಮುತ್ತ ನೋಡಿ, ಯಾರೂ ಇಲ್ಲದಿರುವುದನ್ನು ಖಾತ್ರಿ ಪಡಿಸಿಕೊಂಡು ನಗುತ್ತಾರೆ. ಪಶ್ಚಿಮ ಸಂಸ್ಕೃತಿಯ ಪ್ರಭಾವದಿಂದಾಗಿ, ಈ ಪದ್ಧತಿ ಕೆಲವೊಂದು ನಗರ ಅಥವಾ ಸಮಾಜದಲ್ಲಿ ಕಡಿಮೆಯಾಗುತ್ತಿದೆ. ಜಪಾನಿನಂತೆ, ಇತರ ಕೆಲವು ಸಂಸ್ಕೃತಿಗಳಲ್ಲಿಯೂ ಮಹಿಳೆಯರು ನಗುವಾಗ ಬಾಯಿಯನ್ನು ಮುಚ್ಚುವ ಪದ್ಧತಿ ಇದೆ. ಇದು ಸಾಮಾನ್ಯವಾಗಿ ಶಿಷ್ಟಾಚಾರ, ವಿನಯ ಮತ್ತು ಸೌಮ್ಯತೆಯ ಸಂಕೇತವಾಗಿ ಪರಿಗಣಿಸಲಾಗುತ್ತದೆ. 'ಬಾಯಿಗೆ ಕೈ ಅಡ್ಡ ಹಿಡಿದು ನಗಬಾರದೇ ? ಜೋರಾಗಿ ನಕ್ಕರೆ, ನಿನ್ನ ಹಲ್ಲುಗಳು ಎಷ್ಟು ಹುಳುಕಾಗಿವೆ ಎಂಬುದು ಎಲ್ಲರಿಗೂ ಗೊತ್ತಾಗುತ್ತವೆ' ಎಂದು ಮನೆಯಲ್ಲಿ ಹಿರಿಯರು, ತಂದೆ-ತಾಯಿ ಹೇಳುವುದೂ ಉಂಟು.

young-business-chinese-woman-laughing-about-something-covering-mouth-with-hands_1187-26410

ಜಪಾನಿನಲ್ಲಿ ಶರೀರ ಭಾಷೆ (body language) ತುಂಬಾ ಶಿಷ್ಟ, ನಗುವಾಗ ಬಾಯಿಯನ್ನು ಮುಚ್ಚುವುದು 'ಉಚಿರೆಮಸು' ಎಂಬ ನಡವಳಿಕೆಗೆ ಸೇರಿದೆ. ಹಾಗೆಯೇ ಬಹಿರಂಗವಾಗಿ ಭಾವನೆಗಳನ್ನು ತೀವ್ರವಾಗಿ ತೋರಿಸುವುದನ್ನು ಅವರು ಒಪ್ಪಿಕೊಳ್ಳುವುದಿಲ್ಲ. ಜೋರಾದ ನಗು, ಉತ್ಸಾಹ ವ್ಯಕ್ತಪಡಿಸುವುದನ್ನು 'ಅರೈಗಟಾ' (ನಿಗ್ರಹಿತ ಶೈಲಿ) ಸಂಸ್ಕೃತಿಯಲ್ಲಿ ನಿಷಿದ್ಧ. ಈ ಕಾರಣದಿಂದಲೂ ಮಹಿಳೆಯರು ತಮ್ಮ ನಗುವನ್ನು ಮಿತವಾಗಿ ತೋರಿಸಲು ಬಾಯಿಯನ್ನು ಮುಚ್ಚುತ್ತಾರೆ.

ಕೆಲವರ ಹಲ್ಲು ಉಬ್ಬು, ಸೊಟ್ಟವಿರಬಹುದು. ಅಂಥವರು ನಕ್ಕಾಗ ವಿಚಿತ್ರವಾಗಿ ಕಾಣಬಹುದು. ಕಿಮೊನೋ ಅಥವಾ ಯುಕಾತಾ ಧರಿಸುವ ಮಹಿಳೆಯರು ತಮ್ಮ ನಡವಳಿಕೆಯಲ್ಲಿ ಮಿತವ್ಯಯ ತೋರಿಸುತ್ತಾರೆ. ನಗುವಾಗ ಬಾಯಿಯನ್ನು ಮುಚ್ಚುವುದು ಈ ಶಿಷ್ಟತೆ ಮತ್ತು ಸಂಯಮದ ಭಾಗವಾಗಿದೆ. ಟಿವಿ ಶೋಗಳು, ಮ್ಯಾಗಜಿನ್‌ಗಳು ಮತ್ತು ಪುರುಷರ ಮಾನಸಿಕತೆಗಳು ಸಹ ಈ ಪದ್ಧತಿಗೆ ಪೋಷಣೆ ನೀಡಿವೆ. ಇತ್ತೀಚೆಗೆ ಯುವತಿಯರಲ್ಲಿ ಪಾಶ್ಚಾತ್ಯ ಪ್ರಭಾವದಿಂದಾಗಿ, ಈ ಪದ್ಧತಿಗೆ ವ್ಯತಿರಿಕ್ತವಾದ ದೃಷ್ಟಿಕೋನಗಳು ಹುಟ್ಟಿಕೊಂಡಿವೆ. ಹಲವು ಮಹಿಳೆಯರು ತಮ್ಮ ನಗುವನ್ನು ಮುಕ್ತವಾಗಿ ತೋರಿಸಲೂ ಹಿಂಜರಿಯುತ್ತಿಲ್ಲ. ಬಾಯಿಯನ್ನು ಮುಚ್ಚದೇ ನಗುವುದು ಈಗ 'ಆತ್ಮವಿಶ್ವಾಸದ ಸಂಕೇತ' ಎಂಬ ನವ ಚಿಂತನೆಯೆಂದು ಪರಿಗಣಿಸಲಾಗುತ್ತಿದೆ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

Read Previous

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!

Read Next

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!