ಗಾಳಿ ಬಂದಾಗ ತೂರಿಕೊಳ್ಳುವುದು ಒಂದು ಕಲೆ
ಕರ್ನಾಟಕ ಹಿಂದೆ ಬಿದ್ದಿರೋದು ಪ್ರವಾಸಿ ತಾಣಗಳ ಸಂಖ್ಯೆಯಲ್ಲಲ್ಲ. ಅಗ್ರೆಸಿವ್ ಮಾರ್ಕೆಟಿಂಗ್ ನಲ್ಲಿ. ಗೋವಾಗಿಂತ ಹೆಚ್ಚು ಬೀಚುಗಳು ಕರ್ನಾಟಕದಲ್ಲಿವೆ. ಬೀಚುಗಳ ಹೊರತಾಗಿ ಗೋವಾಗಿಂತ ಹೆಚ್ಚು ವೈವಿಧ್ಯಮಯ ಪ್ರವಾಸಿತಾಣಗಳು ಕರ್ನಾಟಕದಲ್ಲಿವೆ. ಆದರೂ ಗೋವಾ ಮಾಡಿಕೊಂಡ ಹಾಗೆ ಕರ್ನಾಟಕಕ್ಕೆ ಎನ್ ಕ್ಯಾಶ್ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಕಾರಣ ನೀರಸ ಮಾರ್ಕೆಟಿಂಗ್.
ಸಂಸ್ಕೃತಿ, ಪರಂಪರೆ ಇವೆಲ್ಲದರ ಆಚೆಗೆ ಪ್ರವಾಸ ಅನ್ನೋದು ಪ್ರತಿ ರಾಜ್ಯದ ಪಾಲಿಗೆ ಉದ್ಯಮ. ಪ್ರತಿ ರಾಜ್ಯಗಳು ಪ್ರವಾಸವೆಂಬ ಪ್ರಾಡಕ್ಟುಗಳನ್ನು ಮಾರುವ ಅಂಗಡಿಗಳು. ಹೀಗಾಗಿ ಇಲ್ಲಿ ಒಂದು ಆರೋಗ್ಯಕರ ಸ್ಪರ್ಧೆ ಅನಿವಾರ್ಯ. ಪ್ರತಿ ರಾಜ್ಯವೂ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡಲೇಬೇಕು. ಮಾಡಿಯೇ ಮಾಡುತ್ತವೆ. ಒಂದು ರಾಜ್ಯದ ಪ್ರವಾಸೋದ್ಯಮಕ್ಕೆ ಧಕ್ಕೆ ಆಗಿದೆ ಅಂದರೆ ಆ ರಾಜ್ಯಕ್ಕೆ ಹೋಗುತ್ತಿದ್ದ ಪ್ರವಾಸಿಗಳನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡಲೇಬೇಕು. ಅದೇ ಉದ್ಯಮದ ನೀತಿ.
ಕಳೆದ ಏಪ್ರಿಲ್ ನಲ್ಲಿ ನಡೆದ ಪಹಲ್ಗಾಮ್ ದಾಳಿಯಿಂದ ಕಾಶ್ಮೀರದ ಪ್ರವಾಸೋದ್ಯಮ ತತ್ತರಿಸಿದೆ. ತೀವ್ರ ಕುಸಿತ ಖಂಡಿದೆ. ಇತ್ತೀಚೆಗೆ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲ ಕೂಡ ಈ ವಾಸ್ತವವನ್ನು ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ, ಪ್ರವಾಸಿಗರ ಸುರಕ್ಷತೆಯ ಭರವಸೆ ನೀಡಿ, ಬನ್ನಿ ಬನ್ನಿ ಎಂದು ಒತ್ತಾಯಿಸುತ್ತಿದ್ದಾರೆ. ಕಾಶ್ಮೀರಕ್ಕೆ ಅತಿ ಹೆಚ್ಚು ಪ್ರವಾಸಿಗರು ಬರ್ತಾ ಇದ್ದದ್ದೇ ಮಹಾರಾಷ್ಟ್ರ, ಗುಜರಾತ್ ಮತ್ತು ಪಶ್ಚಿಮ ಬಂಗಾಳದಿಂದ.ಆದರೆ ಈಗ ಆ ಸಂಖ್ಯೆ ಗಣನೀಯ ಕುಸಿತ ಕಂಡಿದೆ. ಪ್ರವಾಸ ಎಂಬುದು ಒಂದು ವ್ಯಸನ. ಅದು ಅಂಟಿದವರು ಪ್ರವಾಸ ಮಾಡುವುದನ್ನು ನಿಲ್ಲಿಸುವುದಿಲ್ಲ. ಹೀಗಾಗಿ ಕಾಶ್ಮೀರ ಘಟನೆಯಿಂದ ಪ್ರವಾಸಿಗರು ತಮ್ಮ ಡೆಸ್ಟಿನೇಷನ್ ಬದಲಿಸಿದ್ದಾರೆಯೇ ಹೊರತು ಪ್ರವಾಸ ನಿಲ್ಲಿಸಿಲ್ಲ. ಹಾಗಾದರೆ ಬಂಗಾಳ, ಮಹಾರಾಷ್ಟ್ರ, ಗುಜರಾತ್ ಮತ್ತಿತರ ರಾಜ್ಯಗಳ ಪ್ರವಾಸಿಗರು ಹೋಗುತ್ತಿರುವುದು ಎಲ್ಲಿಗೆ? ಗೋವಾಗೆ. ಹೌದು ಕಳೆದ ಎರಡು ತಿಂಗಳಲ್ಲಿ ಆಫ್ ಸೀಸನ್ ಹೊರತಾಗಿಯೂ ಗೋವಾಗೆ ಬರುತ್ತಿರುವ ಪ್ರವಾಸಿಗರ ಸಂಖ್ಯೆ ಏಳು ಪರ್ಸೆಂಟ್ ಏರಿಕೆಯಾಗಿದೆ.. ಆದರೆ ಈ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಯಥಾಸ್ಥಿತಿಯಲ್ಲೇ ಇದೆ.

ಇನ್ ಫ್ಯಾಕ್ಟ್ ಕೊಂಚ ಇಳಿಕೆಯೇ ಆಗಿದೆ. ಗೋವಾ ಮಾಡಿದ ಮ್ಯಾಜಿಕ್ ಕರ್ನಾಟಕಕ್ಕೆ ಯಾಕೆ ಮಾಡಲಾಗಿಲ್ಲ? ಕರ್ನಾಟಕ ಹಿಂದೆ ಬಿದ್ದಿರೋದು ಪ್ರವಾಸಿ ತಾಣಗಳ ಸಂಖ್ಯೆಯಲ್ಲಲ್ಲ. ಅಗ್ರೆಸಿವ್ ಮಾರ್ಕೆಟಿಂಗ್ ನಲ್ಲಿ. ಗೋವಾಗಿಂತ ಹೆಚ್ಚು ಬೀಚುಗಳು ಕರ್ನಾಟಕದಲ್ಲಿವೆ. ಬೀಚುಗಳ ಹೊರತಾಗಿ ಗೋವಾಗಿಂತ ಹೆಚ್ಚು ವೈವಿಧ್ಯಮಯ ಪ್ರವಾಸಿತಾಣಗಳು ಕರ್ನಾಟಕದಲ್ಲಿವೆ. ಆದರೂ ಗೋವಾ ಮಾಡಿಕೊಂಡ ಹಾಗೆ ಕರ್ನಾಟಕಕ್ಕೆ ಎನ್ ಕ್ಯಾಶ್ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಕಾರಣ ನೀರಸ ಮಾರ್ಕೆಟಿಂಗ್. ಸಾಮಾಜಿಕ ಮಾಧ್ಯಮ ಅಭಿಯಾನಗಳು, ಆಕರ್ಷಕ ಜಾಹೀರಾತುಗಳು, ದಿ ಬೆಸ್ಟ್ ಅನಿಸುವ ಟೂರ್ ಪ್ಯಾಕೇಜ್ ಗಳು, ಮೂಲಸೌಕರ್ಯದ ಬಗ್ಗೆ ಭರವಸೆಗಳು ಸೆಳೆದಿದ್ದರೆ ಪ್ರವಾಸಿಗರು ಕರ್ನಾಟಕವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದರು.
ಪ್ರವಾಸಿಗರ ಸುರಕ್ಷತೆ ಎಂಬ ಅಂಶವನ್ನೇ ಹೈಲೈಟ್ ಮಾಡಿ ಕರ್ನಾಟಕ ಪ್ರವಾಸೋದ್ಯಮವನ್ನು ಪ್ರೊಮೋಟ್ ಮಾಡಬಹುದಿತ್ತು. ನೆಮ್ಮದಿ ಮತ್ತು ಶಾಂತಿಗಾಗಿ ಕರ್ನಾಟಕಕ್ಕೆ ಬನ್ನಿ ಎಂದೇ ಪ್ರವಾಸಿಗರನ್ನು ಕರೆಯಬಹುದಿತ್ತು. ಕೊಡಗು, ಚಿಕ್ಕಮಗಳೂರು, ಗೋಕರ್ಣದಂಥ ತಾಣಗಳನ್ನು ಈ ದಿಸೆಯಲ್ಲೇ ಪ್ರಚಾರ ಮಾಡಬಹುದಿತ್ತು. ಕರ್ನಾಟಕ ಪ್ರವಾಸೋದ್ಯಮ ಅದ್ಯಾಕೆ ವಿನೂತನವಾಗಿ ಯೋಚಿಸುತ್ತಿಲ್ಲವೋ ಭಗವಂತನೇ ಬಲ್ಲ. ಮತ್ತೊಮ್ಮೆ ಅದೇ ದೂಷಣೆ ಅನಿಸಿದರೂ ಸರಿಯೇ, ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಡಿಜಿಟಲ್ ವೇದಿಕೆಗಳಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗದೇ ಹೋದರೆ ಆರಕ್ಕೇರಲು ಸಾಧ್ಯವೇ ಇಲ್ಲ.ಪ್ರವಾಸಿಗರೇ ಪ್ರಚಾರ ಮಾಡುತ್ತಾರೆ ಬಿಡು ಎಂಬ ಧೋರಣೆ ಇದ್ದರೆ ಅದು ಭ್ರಮೆ. ಏಕೆಂದರೆ ಪ್ರವಾಸಿಗರು ಹೊಗಳುವಂಥ ಮೂಲಸೌಕರ್ಯಗಳು ನಮ್ಮ ರಾಜ್ಯದ ಪ್ರವಾಸಿ ತಾಣಗಳಲ್ಲಿಲ್ಲ. ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಎಚ್ಚೆತ್ತುಕೊಳ್ಳಲು ಮತ್ತು ಅಗ್ರೆಸಿವ್ ಆಗಲು ಇದು ಸಕಾಲ. ಈ ನಿಟ್ಟಿನಲ್ಲಿ ಒಮ್ಮೆ ಗಂಭೀರವಾಗಿ ಯೋಚಿಸಲಿ.