ಕರುನಾಡಿನಲ್ಲಿ ಮಳೆಯೊಂದು ಹಬ್ಬವಾಗಲಿ!
ಕರ್ನಾಟಕದ ಪಶ್ಚಿಮ ಘಟ್ಟಗಳು, ಜೋಗ ಫಾಲ್ಸ್, ಕೂರ್ಗ್, ಚಿಕ್ಕಮಗಳೂರು, ಆಗುಂಬೆ ಮತ್ತು ದಾಂಡೇಲಿಯಂಥ ಸ್ಥಳಗಳು ಮಳೆಗಾಲದಲ್ಲಿ ಅತ್ಯಂತ ರಮಣೀಯವಾಗಿರುತ್ತವೆ. ಈ ಸ್ಥಳಗಳನ್ನು ಮಳೆಗಾಲದ ಪ್ರವಾಸಕ್ಕೆ ಕೇಂದ್ರಬಿಂದುವಾಗಿ ರೂಪಿಸಿದರೆ, ದೇಶ-ವಿದೇಶದ ಪ್ರವಾಸಿಗರನ್ನು ಆಕರ್ಷಿಸಬಹುದು.
ಮಳೆ ಬಂದಾಗ ಮನೆಯೊಳಗೆ ಬೆಚ್ಚಗೆ ಕೂರುವ ಕಾಲ ಈಗಿಲ್ಲ. ಪ್ರವಾಸಿ ಮನಸುಗಳಿಗೆ ಮಳೆಯೂ ಪ್ರವಾಸಕ್ಕೊಂದು ನೆಪ. ಅದರಿಂದಲೇ ಶುರುವಾದದ್ದು ರೇನ್ ಟೂರಿಸಂ ಅಥವಾ ಮಾನ್ ಸೂನ್ ಟೂರಿಸಂ ಪರಿಕಲ್ಪನೆ. ಕೇರಳದಲ್ಲಂತೂ ಈಗ ಮಾನ್ ಸೂನ್ ಟೂರಿಸಂ ಎಂಬುದು ರಾಜ್ಯ ಪ್ರವಾಸೋದ್ಯಮದ ಪಾಲಿಗೆ ದೊಡ್ಡ ನಿಧಿ. ದೇಶವಿದೇಶಗಳಿಂದ ಜೂನ್ ಜುಲೈ ತಿಂಗಳಲ್ಲಿ ಮುನ್ನಾರ್, ವಯನಾಡ್, ಅಲೆಪ್ಪೀ, ಟೇಕಡೀ ಇನ್ನಿತರ ಜಾಗಗಳಿಗೆ ಮಳೆ ನೋಡಲೆಂದೇ ಬರುತ್ತಾರೆ. ಹಾಗೆ ಬರುವ ಪ್ರವಾಸಿಗಳಿಗೆ ಮಳೆಯೊಂದಿಗೆ ಹಲವು ವಿಶೇಷಗಳನ್ನು ಆಫರ್ ಮಾಡುವ ಮೂಲಕ ಪ್ರವಾಸವನ್ನು ಸುಂದರವಾಗಿಸಲಾಗುತ್ತಿದೆ. ಕರ್ನಾಟಕ ಸರ್ಕಾರ ಯಾಕೆ ಈ ದಿಸೆಯಲ್ಲಿ ಯೋಚಿಸಿಲ್ಲ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಕೇರಳಕ್ಕಿಂತ ಕರ್ನಾಟಕ ಯಾವುದರಲ್ಲಿ ಕಮ್ಮಿ? ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ, ನೈಸರ್ಗಿಕವಾಗಿ ಕೇರಳದಷ್ಟೇ ಶಕ್ತವಾಗಿರುವ ಕರ್ನಾಟಕ, ಸರಕಾರಗಳ ಇಚ್ಛಾಶಕ್ತಿ ಕೊರತೆಯಿಂದ ಹಿಂದೆಬಿದ್ದಿತಾ?

ಕರ್ನಾಟಕದ ಪಶ್ಚಿಮ ಘಟ್ಟಗಳು, ಜೋಗ ಫಾಲ್ಸ್, ಕೂರ್ಗ್, ಚಿಕ್ಕಮಗಳೂರು, ಆಗುಂಬೆ ಮತ್ತು ದಾಂಡೇಲಿಯಂಥ ಸ್ಥಳಗಳು ಮಳೆಗಾಲದಲ್ಲಿ ಅತ್ಯಂತ ರಮಣೀಯವಾಗಿರುತ್ತವೆ. ಈ ಸ್ಥಳಗಳನ್ನು ಮಳೆಗಾಲದ ಪ್ರವಾಸಕ್ಕೆ ಕೇಂದ್ರಬಿಂದುವಾಗಿ ರೂಪಿಸಿದರೆ, ದೇಶ-ವಿದೇಶದ ಪ್ರವಾಸಿಗರನ್ನು ಆಕರ್ಷಿಸಬಹುದು. ಈಗಾಗಲೇ ಉತ್ತರಕನ್ನಡ, ದಕ್ಷಿಣಕನ್ನಡ ಮತ್ತು ಮಲೆನಾಡು ಪ್ರದೇಶಗಲ್ಲಿ ಖಾಸಗಿಯಾಗಿ ಹೋಮ್ ಸ್ಟೇ ರೆಸಾರ್ಟ್ ಗಳು ಮಳೆ ಹಬ್ಬ ಆಯೋಜಿಸಿ ಪ್ರವಾಸಿಗರನ್ನು ಸೆಳೆಯುತ್ತಿವೆ. ಆದರೆ ಒಟ್ಟಾರೆಯಾಗಿ ಇದು ಮಾನ್ ಸೂನ್ ಟೂರಿಸಂ ಆಗಿ ರೂಪುಗೊಳ್ಳುವುದು ಸಾಧ್ಯವಾಗಿಲ್ಲ. ಹಾಗಾಗಬೇಕೆಂದರೆ ಸರಕಾರ ಅಖಾಡಕ್ಕಿಳಿಯಬೇಕು. ಮಳೆ ಹಬ್ಬಗಳನ್ನು ದೊಡ್ಡಮಟ್ಟದಲ್ಲಿ ವಿವಿಧ ತಾಣಗಳಲ್ಲಿ ಆಚರಿಸಬೇಕು. ಅದಕ್ಕೆ ಬೇಕಿರೋ ಯೋಜನೆ ರೂಪಿಸಿ, ಮೂಲಸೌಕರ್ಯ ಅಭಿವೃದ್ಧಿಗೊಳಿಸಬೇಕು. ರಸ್ತೆಮಾರ್ಗದಿಂದ ಹಿಡಿದು, ವಸತಿ, ಗೈಡ್ ಇತ್ಯಾದಿಗಳ ವ್ಯವಸ್ಥೆ ಅದ್ಭುತವಾಗಬೇಕು. ಸ್ಥಳೀಯ ಸಮುದಾಯವನ್ನು ಒಳಗೊಳ್ಳಬೇಕು. ಇಷ್ಟೆಲ್ಲ ಆದರೆ ಮಳೆ ಹಬ್ಬ ಯಶಸ್ವಿಯಾಗುವುದರಲ್ಲಿ ಅನುಮಾನವೇ ಇಲ್ಲ. ಮಳೆಯ ಜೊತೆ ಸಂಸ್ಕೃತಿ, ಮನರಂಜನೆ, ಕ್ರೀಡೆ, ಆಧ್ಯಾತ್ಮ, ಆಹಾರ ಎಲ್ಲವನ್ನೂ ಬ್ಲೆಂಡ್ ಮಾಡಿ ಅದ್ಭುತ ವರುಣೋತ್ಸವ ಮಾಡಬಹುದು. ಇದು ಪರೋಕ್ಷವಾಗಿ ಪರಿಸರ ಸಂರಕ್ಷಣೆಯ ಜಾಗೃತಿ ಕಾರ್ಯಕ್ರಮವೂ ಆಗಬಲ್ಲದು.ಗ್ರಾಮೀಣ ಆರ್ಥಿಕತೆಗೂ ಬಲ ತುಂಬಬಹುದು. ಸರಕಾರ ಒಂದು ಹೆಜ್ಜೆ ಮುಂದಿಟ್ಟರೆ ಖಾಸಗಿ ಸಂಸ್ಥೆಗಳ ಸಹಯೋಗ ಸುಲಭವಾಗಿ ಸಿಗುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲೂ ಪ್ರಚಾರವಾಗುತ್ತದೆ. ಕೇರಳವನ್ನು ಮೀರಿಸುವ ಮಾನ್ ಸೂನ್ ಟೂರಿಸಂ ನಮ್ಮದಾಗುತ್ತದೆ. ಸರಕಾರದ ಪ್ರವಾಸೋದ್ಯಮ ಇಲಾಖೆ ಈ ದಿಸೆಯಲ್ಲಿ ಇನ್ನಾದರೂ ಯೋಚಿಸಬಹುದೇ?