ಕಿನುಕೋನಿಯ ಪುಸ್ತಕ ಮಳಿಗೆ
ನಾನು ಸಿಂಗಾಪುರಕ್ಕೆ ಹೋದಾಗಲೆಲ್ಲ ಕಿನೋಕುನಿಯ ಪುಸ್ತಕದ ಅಂಗಡಿಗೆ ಭೇಟಿ ನೀಡದೇ ಬಂದಿದ್ದೇ ಇಲ್ಲ. ಇದೊಂದು ಅದ್ಭುತ ಪುಸ್ತಕ ಲೋಕ. ಪ್ರಾಯಶಃ ಜಗತ್ತಿನ ಅತಿ ದೊಡ್ಡ ಮತ್ತು ಸುಂದರ ಪುಸ್ತಕ ಮಳಿಗೆಗಳಲ್ಲೊಂದು. ಇಲ್ಲಿ ನಿಮಗೆ ಯಾವುದಾದರೂ ಪುಸ್ತಕ ಸಿಗದಿದ್ದರೆ, ಅದನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತಾರೆ.
- ವಿಶ್ವೇಶ್ವರ ಭಟ್
ನಾನು ಸಿಂಗಾಪುರಕ್ಕೆ ಹೋದಾಗಲೆಲ್ಲ ಕಿನೋಕುನಿಯ ಪುಸ್ತಕದ ಅಂಗಡಿಗೆ ಭೇಟಿ ನೀಡದೇ ಬಂದಿದ್ದೇ ಇಲ್ಲ. ಇದೊಂದು ಅದ್ಭುತ ಪುಸ್ತಕ ಲೋಕ. ಪ್ರಾಯಶಃ ಜಗತ್ತಿನ ಅತಿ ದೊಡ್ಡ ಮತ್ತು ಸುಂದರ ಪುಸ್ತಕ ಮಳಿಗೆಗಳಲ್ಲೊಂದು. ಇಲ್ಲಿ ನಿಮಗೆ ಯಾವುದಾದರೂ ಪುಸ್ತಕ ಸಿಗದಿದ್ದರೆ, ಅದನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತಾರೆ.
ಹಿಂದಿನ ಸಲ ನಾನು ಇಲ್ಲಿಗೆ ಬಂದಾಗ, ಒಂದು ಪುಸ್ತಕ ಕೇಳಿದ್ದೆ. ಅದಾಗಿ ನಾಲ್ಕು ದಿನಗಳ ನಂತರ, ನಾನು ಬೆಂಗಳೂರಿಗೆ ಬರುವುದಕ್ಕಿಂತ ಮುನ್ನ ಆ ಪುಸ್ತಕ ನನ್ನ ಮನೆ ತಲುಪಿತ್ತು. ಅರ್ಧ ಗಂಟೆ ಸಮಯವಿದ್ದರೆ ಇಲ್ಲಿಗೆ ಬರಬಾರದು. ಕನಿಷ್ಠ ಐದು ಗಂಟೆಯಾದರೂ ಬೇಕು! ಅಂಥ ಅಪರೂಪದ ಪುಸ್ತಕದ ಮಳಿಗೆಯಿದು.

ಕಿನೋಕುನಿಯ ಜಪಾನಿನ ಪ್ರಸಿದ್ಧ ಮತ್ತು ವಿಶ್ವವಿಖ್ಯಾತ ಪುಸ್ತಕದ ಮಳಿಗೆಯ ಜಾಲವಾಗಿದೆ. ಇದು ಪಠ್ಯಪುಸ್ತಕಗಳು, ಸಾಹಿತ್ಯ, ಮಾಧ್ಯಮ, ಕಲೆ, ಸಂಸ್ಕೃತಿ ಮತ್ತು ಅಂತಾರಾಷ್ಟ್ರೀಯ ಸಾಹಿತ್ಯವನ್ನು ಒಂದೆಡೆ ಸೇರಿಸುವ ಮಾದರಿ ಪುಸ್ತಕ ಮಳಿಗೆಯಾಗಿದೆ. ಜಪಾನಿನಲ್ಲಿ ಮಾತ್ರವಲ್ಲದೆ, ಅನೇಕ ದೇಶಗಳಲ್ಲಿ ಇದರ ಶಾಖೆಗಳಿವೆ. ಕಿನೋಕುನಿಯದ ಮೂಲ 1927ರಲ್ಲಿ ಟೋಕಿಯೊ ನಗರದ ಶಿಂಜುಕು ಪ್ರದೇಶದಲ್ಲಿ ಇಚಿಗೋಕು ಕಿನೋಕುನಿಯ ಶೋಟೆನ್ ಎಂಬ ಮಳಿಗೆಯ ರೂಪದಲ್ಲಿ ಸ್ಥಾಪನೆ ಯಾಯಿತು.
ಇದರ ಸ್ಥಾಪಕ ಮೊಯೋಶಿ ಮಾಸ್ಜೆ. ಆ ಕಾಲದಲ್ಲಿ ಇದು ಒಂದು ಸಣ್ಣ, ಆದರೆ ವೈಶಿಷ್ಟ್ಯ ಪೂರ್ಣ ಪುಸ್ತಕ ಮಳಿಗೆಯಾಗಿತ್ತು. 1945ರಲ್ಲಿ ದ್ವಿತೀಯ ಮಹಾಯುದ್ಧದ ಸಮಯದಲ್ಲಿ ಮಳಿಗೆ ಧ್ವಂಸ ವಾಯಿತು, ಆದರೆ 1947ರಲ್ಲಿ ಪುನಃ ನಿರ್ಮಿಸಲಾಯಿತು. ಅದಾದ ಬಳಿಕದ ಬೆಳವಣಿಗೆ ಗಣನೀಯವಾಗಿದೆ. ಕಿನೋಕುನಿಯ ಸಂಸ್ಥೆಯ ಮುಖ್ಯ ಉದ್ದೇಶ ಎಂದರೆ, ಜ್ಞಾನವನ್ನು ಸಾಮಾನ್ಯ ಜನರಿಗೆ ಸೌಲಭ್ಯವಾಗಿ ಒದಗಿಸುವುದು. ಜಪಾನಿನ ಉನ್ನತ ಓದುಗರಿಗೆ ತಕ್ಕಂತೆ ವಿವಿಧ ಭಾಷೆಗಳಲ್ಲಿನ ಪುಸ್ತಕಗಳನ್ನು, ನವೀನ ತಂತ್ರಜ್ಞಾನವನ್ನು ಹಾಗೂ ಶಿಕ್ಷಣ-ಸಂಸ್ಕೃತಿಯ ಬೆಳವಣಿಗೆಗೆ ಸಹಾಯವಾಗುವ ರೀತಿಯ ಪುಸ್ತಕಗಳನ್ನು ಈ ಮಳಿಗೆಯು ಪೂರೈಸುತ್ತದೆ.
ಇಂದು ಇದರ ವ್ಯಾಪ್ತಿ ಜಪಾನಿನ ಓದುಗರಿಗೆ ಮಾತ್ರ ಸೀಮಿತವಲ್ಲ. ಅಮೆರಿಕ, ಸಿಂಗಾಪುರ, ಇಂಡೋ ನೇಷಿಯಾ, ಮಲೇಶಿಯಾ, ಯುಎಇ, ಆಸ್ಟ್ರೇಲಿಯಾ, ತೈವಾನ್, ಥಾಯ್ಲೆಂಡ್ ಮೊದಲಾದ ರಾಷ್ಟ್ರಗಳಲ್ಲಿ ಶಾಖೆಗಳಿವೆ. ಕಿನೋಕುನಿಯದ ಯಾವುದೇ ಶಾಖೆಗೆ ನೀವು ಹೋದರೆ, ತಕ್ಷಣವೇ ಗಮನ ಸೆಳೆಯುವುದು ಅಂದದ ವಿನ್ಯಾಸ, ಪುಸ್ತಕಗಳ ವರ್ಗೀಕರಣ ಹಾಗೂ ಶಾಂತಿಯುತ ವಾತಾ ವರಣ. ಪ್ರತಿ ವಿಭಾಗವೂ ಹೆಚ್ಚು ವಿವರವಾಗಿ ಗುರುತಿಸಲ್ಪಟ್ಟಿದೆ.
ಇಲ್ಲಿ ಜಪಾನಿ ಸಾಹಿತ್ಯದ ಶ್ರೇಷ್ಠ ಕೃತಿಗಳಿಂದ ಹಿಡಿದು ಅಂತಾರಾಷ್ಟ್ರೀಯ ಲೇಖಕರ ಕೃತಿಗಳವರೆಗೆ ಎಲ್ಲವೂ ಸಿಗುತ್ತದೆ. ಮುರಾಕಾಮಿ ಹರುಕಿಯ ಕೃತಿಗಳಿಂದ ಹಿಡಿದು ಟೋಲ್ಕಿಯನ್ ಅಥವಾ ಝುಂಜಿ ಇತೋವರೆಗೆ, ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ವೈದ್ಯಶಾಸ್ತ್ರ, ಇತಿಹಾಸ, ರಾಜಕೀಯ, ಸಮಾಜಶಾಸ್ತ್ರ ಮೊದಲಾದ ಎಲ್ಲ ವಿಷಯಗಳ ಕುರಿತಾದ ಪಠ್ಯಪುಸ್ತಕಗಳು ಇಲ್ಲಿ ಇವೆ.

ಇಂಗ್ಲಿಷ್, ಫ್ರೆಂಚ್, ಜರ್ಮನ್, ಚೈನೀಸ್ ಮತ್ತು ಕೊರಿಯನ್ ಭಾಷೆಗಳ ಪುಸ್ತಕಗಳೂ ಲಭ್ಯವಿವೆ. ವಿದೇಶಿ ಓದುಗರಿಗೆ ಮುಕ್ತವಾಗಿದ್ದು ಅನುಕೂಲಕರವಾಗಿದೆ. ಗ್ರಾಫಿಕ್ ಡಿಸೈನ್ ಹಿಡಿದು ಎಲ್ಲ ವಿಷಯಗಳ ಪುಸ್ತಕಗಳನ್ನು ಉತ್ತಮವಾಗಿ ವಿಂಗಡಿಸಲಾಗಿದೆ. ಕಿನೋಕುನಿಯ ಸಂಸ್ಥೆಯು ಡಿಜಿಟಲ್ ಯುಗವನ್ನು ಅರ್ಥಮಾಡಿಕೊಂಡು, ತನ್ನ ಕಾರ್ಯವ್ಯವಸ್ಥೆಯನ್ನು ಆಧುನೀಕರಿಸಿಕೊಳ್ಳುತ್ತಿದೆ. ಇವುಗಳಲ್ಲಿ ಪ್ರಮುಖವಾಗಿರುವುದು ಆನ್‌ಲೈನ್ ಖರೀದಿ ವ್ಯವಸ್ಥೆ.
Kinokuniya.com ಎಂಬ ವೆಬ್‌ಸೈಟ್‌ನಲ್ಲಿ ಸಾವಿರಾರು ಪುಸ್ತಕಗಳನ್ನು ಗ್ರಾಹಕರು ಅನಾಯಾಸ ವಾಗಿ ಆರ್ಡರ್ ಮಾಡಬಹುದಾಗಿದೆ. ಜಪಾನಿನ ಪುಸ್ತಕ ಮಳಿಗೆಗಳ ಸಂಸ್ಕೃತಿಯಲ್ಲಿ ‘ತಟಸ್ಥತೆ’ ಮತ್ತು ‘ಗಂಭೀರತೆ’ ಬಹುಮುಖ್ಯವಾಗಿವೆ. ಗ್ರಾಹಕರು ಪುಸ್ತಕವನ್ನು ಪರಿಶೀಲಿಸಲು ಬಹಳ ಸಮಯ ಕಳೆಯುತ್ತಾರೆ, ಯಾವ ಪಾಠ, ಯಾವ ಲೇಖಕ, ಯಾವ ಪ್ರಕಾರ ಇತ್ಯಾದಿಗಳನ್ನು ಸಮಗ್ರವಾಗಿ ನೋಡುವ ಪರಿಪಾಠವಿದೆ. ಕಿನೋಕುನಿಯ ಈ ನೈಜ ಮನಸ್ಥಿತಿಗೆ ತಕ್ಕಂತೆ ತನ್ನ ಸೇವೆಗಳನ್ನು ರೂಪಿಸಿಕೊಂಡಿದೆ.
ಬುದ್ಧಿವಂತರಿಗೆ, ವಿದ್ಯಾರ್ಥಿಗಳಿಗೆ, ಲೇಖಕರಿಗೆ, ಸಂಶೋಧಕರಿಗೆ ಇದು ಜ್ಞಾನದ ಕಿಟಕಿಯಾಗಿದೆ. ಕಿನೋಕುನಿಯವು ಕೇವಲ ವ್ಯಾಪಾರ ಕೇಂದ್ರವಲ್ಲ. ಅದು ಸಂಸ್ಕೃತಿಯ ಮೌಲ್ಯಗಳನ್ನು ಉತ್ತೇಜಿಸುವ ತಾಣವೂ ಆಗಿದೆ. ಈ ಮಳಿಗೆಯಲ್ಲಿ ಪುಸ್ತಕ ಬಿಡುಗಡೆ ಸಮಾರಂಭಗಳು, ಲೇಖಕರೊಂದಿಗೆ ಸಂವಾದ, ಚರ್ಚಾ ಕಾರ್ಯಕ್ರಮಗಳು, ಮಕ್ಕಳ ಓದು ಬೆಳೆಸುವ ಉಪಕ್ರಮಗಳು ನಡೆಯುತ್ತವೆ. ಇದರಿಂದ ಜನತೆಗೂ ಓದುಗರಿಗೂ ಸಂಬಂಧ ಉಂಟಾಗುತ್ತದೆ.