ಭಲೇ ಭಲೇ.. ದಕ್ಷಿಣಕನ್ನಡ
ಈ ವರ್ಷಾಂತ್ಯದಲ್ಲಿ ದಕ್ಷಿಣ ಕನ್ನಡದ ಕರಾವಳಿಯ ಐದು ಬೀಚುಗಳು ಪ್ರವಾಸಿಗರಿಗಾಗಿ ಸಡಗರದಿಂದ ಸಜ್ಜುಗೊಂಡಿವೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಕ್ರಿಸ್ ಮಸ್ ಮತ್ತು ಹೊಸವರ್ಷ ಎರಡನ್ನೂ ಗಮನದಲ್ಲಿರಿಸಿಕೊಂಡು ಎರಡು ತಿಂಗಳು ಪ್ರವಾಸಿಗರನ್ನು ಸೆಳೆಯಲು ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ. ಇದಕ್ಕೆ ಸರಕಾರದ ಸಹಕಾರ ಮತ್ತು ಸಹಭಾಗಿತ್ವವೂ ಸಿಕ್ಕಿದೆ. ಡಿಸೆಂಬರ್ ಇಪ್ಪತ್ತರಿಂದ ಕರಾವಳಿ ಉತ್ಸವವೂ ಆರಂಭವಾಗುತ್ತಿರುವುದರಿಂದ, ಅದಕ್ಕೂ ಹೊಂದಿಕೆ ಆಗುವ ಹಾಗೆ ಕರಾವಳಿಯ ಐದು ಬೀಚುಗಳಲ್ಲಿ ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ಮತ್ತು ಆಟಗಳನ್ನು ಆಯೋಜಿಸುವ ಮೂಲಕ ರಾಜ್ಯದ ಪ್ರವಾಸಿಗರನ್ನು ಸೆಳೆಯಲು ಸಜ್ಜಾಗಿದೆ ಪ್ರವಾಸೋದ್ಯ
ಪ್ರವಾಸಿ ಪ್ರಪಂಚ ಸಂಪಾದಕೀಯದಲ್ಲಿ ಸದಾ ಸರಕಾರಕ್ಕೆ ಮತ್ತು ಪ್ರವಾಸೋದ್ಯಮ ಇಲಾಖೆಗೆ ಕಿವಿಮಾತುಗಳು, ರಾಜ್ಯಪ್ರವಾಸೋದ್ಯಮದ ಕುರಿತು ಟೀಕೆಟಿಪ್ಪಣಿಗಳೇ ಇರುತ್ತವೆ ಎಂದು ಓದುಗರಿಗೂ ಅನಿಸಿದ್ದಿರಬಹುದು, ಇಲಾಖೆಯ ಅಧಿಕಾರಿಗಳಿಗೂ ಅನಿಸಿದ್ದಿರಬಹುದು. ಪ್ರವಾಸಿ ಪ್ರಪಂಚ ಎಂಬುದು ಪ್ರವಾಸಿ ತಾಣಗಳ ಅಥವಾ ಆತಿಥ್ಯ ಕ್ಷೇತ್ರಗಳ ಬ್ರೋಶರ್ ಅಲ್ಲ. ಸರಕಾರದ ಅಥವಾ ಪ್ರವಾಸೋದ್ಯಮ ಇಲಾಖೆಯ ಮುಖವಾಣಿಯೂ ಅಲ್ಲ. ಆದರೆ ಇವರೆಲ್ಲರ ಅತ್ಯುತ್ತಮ ಗೆಳೆಯ ಅನ್ನಬಹುದು. ತಪ್ಪುಗಳನ್ನು ನೇರವಾಗಿ ತಿದ್ದುತ್ತಾ, ಸರಿದಾರಿಯಲ್ಲಿದ್ದಾಗ ಬೆನ್ತಟ್ಟುತ್ತಾ, ಪ್ರವಾಸೋದ್ಯಮಕ್ಕೆ ಪೂರಕವಾದ ಕೆಲಸಗಳಿಗೆ ಬೆಂಬಲಿಸುತ್ತಾ ನಡೆಯುವುದು ಜವಾಬ್ದಾರಿಯುತ ಮಾಧ್ಯಮವಾಗಿ ಪ್ರವಾಸಿ ಪ್ರಪಂಚದ ಕಾಯಕವಾಗಿದೆ.
ಇದನ್ನೂ ಓದಿ: ಟ್ರಂಪಣ್ಣ ಏನೋ ಕೇಳ್ತಿದ್ದಾನೆ ನೋಡಿ!
ಈ ನಿಟ್ಟಿನಲ್ಲಿ ಇಂದು ರಾಜ್ಯ ಪ್ರವಾಸೋದ್ಯಮ ಇಲಾಖೆಯನ್ನು ಹೊಗಳುವ ಸಂದರ್ಭವೊಂದು ಸಿಕ್ಕಿದೆ. ಸಚಿವರಾದ ಹೆಚ್ ಕೆ ಪಾಟೀಲರು ಬಹಳಷ್ಟು ಬಾರಿ ಹೇಳಿದ ಒಂದು ಮಾತನ್ನು ಇಲ್ಲಿ ನೆನಪಿಸಿಕೊಳ್ಳಬೇಕಿದೆ. ಕರ್ನಾಟಕದಲ್ಲಿ ಇಷ್ಟೊಂದು ಸಮುದ್ರತೀರಗಳಿದ್ದರೂ, ಬೀಚ್ ಟೂರಿಸಮ್ಮನ್ನು ಗೋವಾ ಮಾದರಿಯಲ್ಲಿ ಯಾಕೆ ಮಾಡಿಲ್ಲ? ಗೋವಾ ಬೀಚ್ ಗಳ ರೀತಿ ಕರ್ನಾಟಕದ ಬೀಚ್ ಗಳನ್ನು ಯಾಕೆ ಕಮರ್ಷಿಯಲ್ ಆಗಿ ಬದಲಿಸಿಲ್ಲ ಎಂದು ಸಚಿವರಿಗೆ ಹಲವು ಬಾರಿ ಪ್ರಶ್ನಾಬಾಣ ತಾಕಿದ್ದಿದೆ. ಆದರೆ ಹೆಚ್ ಕೆ ಪಾಟೀಲರು ಬಹಳ ಸ್ಪಷ್ಟವಾಗಿ ಹೇಳಿದ್ದರು. ಕಮರ್ಷಿಯಲೈಸ್ ಮಾಡುವ ಸಲುವಾಗಿ ಕರ್ನಾಟಕದ ಬೀಚ್ ಗಳ ಪಾವಿತ್ರ್ಯವನ್ನು ಕೆಡಿಸುವುದಿಲ್ಲ. ಬೀಚ್ ಗಳನ್ನು ಕುಡುಕರ ಮತ್ತು ಅನೈತಿಕ ಚಟುವಟಿಕೆಗಳ ಅಡ್ಡೆಯನ್ನಾಗಿ ಮಾಡುವುದಿಲ್ಲ ಎಂದು. ಆದರೆ ಸಂಸ್ಕೃತಿಗೆ ಪೂರಕವಾಗಿ ಬೀಚ್ ಗಳನ್ನು ಖಂಡಿತವಾಗಿಯೂ ಉತ್ತಮ ಪ್ರವಾಸಿ ತಾಣಗಳನ್ನಾಗಿ ಮಾಡುವ ಪ್ರಯತ್ನವಿದೆ ಎಂಬ ಮಾತನ್ನೂ ಸೇರಿಸಿದ್ದರು. ಆದರೆ ಅದು ಯಾವಾಗ ಹೇಗೆ ಎಂಬ ಉತ್ತರ ದೊರೆತಿರಲಿಲ್ಲ.
ಈಗ ಉತ್ತರ ಸಿಗುತ್ತಿದೆ. ಈ ವರ್ಷಾಂತ್ಯದಲ್ಲಿ ದಕ್ಷಿಣ ಕನ್ನಡದ ಕರಾವಳಿಯ ಐದು ಬೀಚುಗಳು ಪ್ರವಾಸಿಗರಿಗಾಗಿ ಸಡಗರದಿಂದ ಸಜ್ಜುಗೊಂಡಿವೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಕ್ರಿಸ್ ಮಸ್ ಮತ್ತು ಹೊಸವರ್ಷ ಎರಡನ್ನೂ ಗಮನದಲ್ಲಿರಿಸಿಕೊಂಡು ಎರಡು ತಿಂಗಳು ಪ್ರವಾಸಿಗರನ್ನು ಸೆಳೆಯಲು ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ. ಇದಕ್ಕೆ ಸರಕಾರದ ಸಹಕಾರ ಮತ್ತು ಸಹಭಾಗಿತ್ವವೂ ಸಿಕ್ಕಿದೆ. ಡಿಸೆಂಬರ್ ಇಪ್ಪತ್ತರಿಂದ ಕರಾವಳಿ ಉತ್ಸವವೂ ಆರಂಭವಾಗುತ್ತಿರುವುದರಿಂದ, ಅದಕ್ಕೂ ಹೊಂದಿಕೆ ಆಗುವ ಹಾಗೆ ಕರಾವಳಿಯ ಐದು ಬೀಚುಗಳಲ್ಲಿ ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ಮತ್ತು ಆಟಗಳನ್ನು ಆಯೋಜಿಸುವ ಮೂಲಕ ರಾಜ್ಯದ ಪ್ರವಾಸಿಗರನ್ನು ಸೆಳೆಯಲು ಸಜ್ಜಾಗಿದೆ ಪ್ರವಾಸೋದ್ಯಮ ಇಲಾಖೆ.

ತಣ್ಣೀರುಬಾವ, ಬ್ಲೂಫ್ಲ್ಯಾಗ್ ಬೀಚ್, ಸಸಿ ಹಿತ್ಲು, ಪಣಂಬೂರು, ಉಳ್ಳಾಲ, ಸೋಮೇಶ್ವರ ಬೀಚುಗಳಲ್ಲಿ ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ಕಲ್ಚರಲ್, ಫುಡ್, ವೈನ್, ಎಂಟರ್ಟೇನ್ ಮೆಂಟ್, ಅಡ್ವೆಂಚರ್ ಹೀಗೆ ಹಲವು ಬಗೆಯ ಆಕರ್ಷಣೆಗಳನ್ನು ಪ್ರವಾಸಿಗರಿಗೆ ಒಡ್ಡಲಾಗಿದೆ. ಬೀಚ್ ವಾಲಿಬಾಲ್, ಬೀಚ್ ಫುಟ್ ಬಾಲ್, ಕಯಾಕಿಂಗ್, ಪ್ಯಾಡ್ಲಿಂಗ್, ಕಂಟ್ರಿಬೋಟ್ ರೇಸ್ ಹೀಗೆ ನಮ್ಮ ಕರಾವಳಿಯ ಬೀಚುಗಳು ಹಬ್ಬ ಮಾಡುತ್ತಿವೆ. ಹೆಸರಾಂತ ಗಾಯಕರಿಂದ ಸಂಗೀತ ಕಾರ್ಯಕ್ರಮ, ಕೇಕ್ ಫೆಸ್ಟಿವಲ್, ವೈನ್ ಫೆಸ್ಟಿವಲ್, ಸ್ಥಳೀಯ ಸಾಂಪ್ರದಾಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಇವೆಲ್ಲವೂ ದಕ್ಷಿಣ ಕನ್ನಡದ ಕಡಲ ಕಿನಾರೆಗಳನ್ನು ರಂಗುಗೊಳಿಸಲಿವೆ. ಇದು ಸರಕಾರ ಮತ್ತು ಪ್ರವಾಸೋದ್ಯಮ ಇಲಾಖೆಗೆ ಶಭಾಸ್ ಗಿರಿ ಕೊಡಲೇಬೇಕಾದ ವಿಷಯ.
ಸರಕಾರದಿಂದ ಇಂಥದ್ದೊಂದು ಸಲಹೆ ಬಂದು ಜಿಲ್ಲಾಡಳಿತ ಈ ಕೆಲಸಕ್ಕೆ ಮುಂದಾಯಿತೋ ಅಥವಾ ಜಿಲ್ಲಾಡಳಿತವೇ ಹೀಗೊಂದು ಪ್ರಪೋಸಲ್ ಸರಕಾರದ ಮುಂದಿಟ್ಟು ಯೋಜನೆಗೆ ಒಪ್ಪಿಗೆ ಪಡೆಯಿತೋ ಗೊತ್ತಿಲ್ಲ. ಆದರೆ ಇದೊಂದು ಸ್ವಾಗತಾರ್ಹ ಸಾಂಘಿಕ ಯೋಜನೆ ಮತ್ತು ಆಯೋಜನೆ ಎಂಬುದರಲ್ಲಿ ಎರಡು ಮಾತಿಲ್ಲ. ರಾಜ್ಯದ ಪ್ರತಿ ಜಿಲ್ಲೆಯೂ ತನ್ನಲ್ಲಿನ ಪ್ರಾಕೃತಿಕ, ಐತಿಹಾಸಿಕ, ಪೌರಾಣಿಕ ಹಿರಿಮೆಯನ್ನು ಅರಿತು, ಅದರತ್ತ ಪ್ರವಾಸಿಗರನ್ನು ಸೆಳೆಯುವ ಯತ್ನ ಮಾಡಿದರೆ, ಇಂಥ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಿದರೆ, ಅದು ರಾಜ್ಯ ಪ್ರವಾಸೋದ್ಯಮಕ್ಕೆ, ಎಕಾನಮಿಗೆ ದೊಡ್ಡ ಲಾಭ ತಂದುಕೊಡುತ್ತದೆ. ಜತೆಗೆ ಪ್ರವಾಸಿ ತಾಣಗಳಿಗೆ ಜಾಗತಿಕ ಮಟ್ಟದಲ್ಲಿ ಪ್ರಚಾರವೂ ಸಿಗುತ್ತದೆ. ದಕ್ಷಿಣ ಕನ್ನಡದ ಈ ನಡೆ ಇಡೀ ರಾಜ್ಯಕ್ಕೆ ಪ್ರವಾಸೋದ್ಯಮ ದೃಷ್ಟಯಿಂದ ಮಾದರಿಯಾಗಲಿ. ಪ್ರವಾಸಿಗರು ಜವಾಬ್ದಾರಿಯುತ ಪ್ರವಾಸೋದ್ಯಮವನ್ನು ತಲೆಯಲ್ಲಿಟ್ಟುಕೊಂಡು ಇಂಥ ಕಾರ್ಯಕ್ರಮಗಳನ್ನು ಗೆಲ್ಲಿಸುವಂತಾಗಲಿ.