Friday, October 3, 2025
Friday, October 3, 2025

ವಿಶ್ವದ ಅತ್ಯಂತ ಪುರಾತನ ಹೊಟೇಲ್‌ ಜಪಾನಿನಲ್ಲಿದೆ..

ಜಪಾನಿನ ಯಮಾನಾಶಿ ಪ್ರಿಫೆಕ್ಟರ್‌ನ ಹಯಾಕಾವಾ ಪಟ್ಟಣದಲ್ಲಿ 'ವಿಶ್ವದ ಅತ್ಯಂತ ಹಳೆಯ ಹೊಟೇಲ್' ಇದೆ. ಈ ಹೊಟೇಲ್ ಕ್ರಿಸ್ತಶಕ 705ರಲ್ಲಿ ಸ್ಥಾಪನೆಯಾಗಿ, 1300 ವರ್ಷಗಳಿಗೂ ಹೆಚ್ಚು ಕಾಲದಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ.

ಜಪಾನಿಗೆ ಹೋದರೆ 'ನಿಶಿಯಾಮಾ ಓನ್ಸೆನ್ ಕೆಯುನೈನ್' ಎಂಬ ಹೆಸರಿನ ಹೊಟೇಲಿಗೆ ಹೋಗಿ ಬನ್ನಿ ಎಂದು ಸ್ನೇಹಿತರೊಬ್ಬರು ಹೇಳಿದ್ದರು. ಆದರೆ ಅಲ್ಲಿಗೆ ಹೋಗಲು ನನಗೆ ಸಾಧ್ಯವಾಗಲಿಲ್ಲ, ಕಾರಣ ಆ ಹೊಟೇಲ್ ಇರುವ ನಗರಕ್ಕೆ ಹೋಗುವುದು ನನ್ನ ಪ್ರವಾಸದಲ್ಲಿ ಸೇರಿರಲಿಲ್ಲ. ''ಜಪಾನಿನಲ್ಲಿ ಹಲವು ವರ್ಷಗಳಿಂದ ಇದ್ದವರೂ ಆ ಹೊಟೇಲಿಗೆ ಹೋಗುವುದು ಅಪರೂಪ. ಹೀಗಾಗಿ ನೀವು ಅಲ್ಲಿಗೆ ಹೋದರೆ, ಖಂಡಿತವಾಗಿಯೂ ಖುಷಿಪಡುತ್ತೀರಿ'' ಎಂದು ಅವರು ಹೇಳಿದ್ದರು. ನನಗೆ ಅಲ್ಲಿಗೆ ಹೋಗಲು ಸಾಧ್ಯವಾಗದ್ದಕ್ಕೆ ಬೇಸರವಾಯಿತು.

hq720

ನಂತರ ಅವರೇ ಆ ಹೊಟೇಲಿನ ವೈಶಿಷ್ಟ್ಯದ ಬಗ್ಗೆ ಹೇಳಿದ್ದನ್ನು ಕೇಳಿ ನಾನು ಕೆಲವು ಟಿಪ್ಪಣಿ ಮಾಡಿಕೊಂಡಿದ್ದೆ. ಅದು ಹೀಗಿದೆ: ಜಪಾನಿನ ಯಮಾನಾಶಿ ಪ್ರಿಫೆಕ್ಟರ್‌ನ ಹಯಾಕಾವಾ ಪಟ್ಟಣದಲ್ಲಿ 'ವಿಶ್ವದ ಅತ್ಯಂತ ಹಳೆಯ ಹೊಟೇಲ್' ಇದೆ. ಈ ಹೊಟೇಲ್ ಕ್ರಿಸ್ತಶಕ 705ರಲ್ಲಿ ಸ್ಥಾಪನೆಯಾಗಿ, 1300 ವರ್ಷಗಳಿಗೂ ಹೆಚ್ಚು ಕಾಲದಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಇದು ಗಿನ್ನೆಸ್ ವಿಶ್ವದಾಖಲೆಯಲ್ಲಿ 'ವಿಶ್ವದ ಅತ್ಯಂತ ಹಳೆಯ ಮತ್ತು ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಹೊಟೇಲ್' ಎಂಬ ಮಾನ್ಯತೆಯನ್ನು ಪಡೆದಿದೆ. ಈ ಹೊಟೇಲ್‌ನ ಸ್ಥಾಪನೆಯು ಫುಜಿವಾರಾ ಮಹಿತೋ ಎಂಬ ಸಮುರಾಯಿ ಯೋಧನಿಂದ ಆಯಿತು. ಆತ ಜಪಾನಿನ ಅತ್ಯಂತ ಪ್ರಭಾವಿ ಮಿಲಿಟರಿ ನಾಯಕರುಗಳಾದ ಟಾಕೆಡಾ ಶೋಗುನ್‌ಗಳಿಗೆ ಸೇವೆ ಸಲ್ಲಿಸುತ್ತಿದ್ದ. ಆತ ಈ ಪ್ರದೇಶದ ಬಿಸಿನೀರಿನ ಬುಗ್ಗೆ (ಹಾಟ್ ಸ್ಟ್ರಿಂಗ್) ಗಳನ್ನು ಕಂಡು, ಯೋಧರ ವಿಶ್ರಾಂತಿ ಮತ್ತು ಪುನಶ್ಚತನಕ್ಕಾಗಿ ಈ ಹೊಟೇಲ್ ಅನ್ನು ಸ್ಥಾಪಿಸಿದ. 'ನಿಶಿಯಾಮಾ ಓನ್ಸೆನ್ ಕೆಯುನ್ಮನ್ ಹೊಟೇಲ್' ತನ್ನ ಸ್ಥಾಪನೆಯಿಂದ ಇಂದಿನವರೆಗೆ, ಸುಮಾರು 52 ತಲೆಮಾರುಗಳ ಕಾಲ ಒಂದೇ ಕುಟುಂಬದವರಿಂದ ನಿರ್ವಹಿಸಲ್ಪಡುತ್ತಿರುವುದು ವಿಶೇಷ.

9c602b6549814382c6bd9ebc7c2d9a0c

ಈ ಹೊಟೇಲ್ ತನ್ನ ಪರಂಪರೆ ಮತ್ತು ಸಂಸ್ಕೃತಿ ಯನ್ನು ಉಳಿಸಿಕೊಂಡು, ಆಧುನಿಕ ಸೌಲಭ್ಯಗಳನ್ನು ಕೂಡ ಒದಗಿಸುತ್ತಿದೆ. ಇಲ್ಲಿ 37 ಅತಿಥಿ ಕೊಠಡಿಗಳಿದ್ದು, ಪ್ರತಿಯೊಂದು ಕೊಠಡಿಗೂ ಖಾಸಗಿ ಬಿಸಿನೀರು ಸ್ನಾನಗೃಹ (ಒನ್ಸೆನ್) ಸೌಲಭ್ಯವನ್ನು ಕಲ್ಪಿಸಲಾಗಿದೆ. ಹೊಟೇಲ್‌ನ ವಿನ್ಯಾಸವು ಪಾರಂಪರಿಕ ಜಪಾನಿ ಶೈಲಿಯಲ್ಲಿ ನಿರ್ಮಿತವಾಗಿದ್ದು, ಟಾಟಾಮಿ ಚಾಪೆ, ಶೋಜಿ ಬಾಗಿಲುಗಳು ಮತ್ತು ನೈಸರ್ಗಿಕ ವಸ್ತುಗಳನ್ನು ಬಳಸಲಾಗಿದೆ. ಅತಿಥಿಗಳಿಗೆ ಶಾಂತಿಯುತ ಮತ್ತು ಆರಾಮದಾಯಕ ವಾತಾವರಣವನ್ನು ಒದಗಿಸಲು, ಹೊಟೇಲ್ ತನ್ನ ಸುತ್ತಲಿನ ನೈಸರ್ಗಿಕ ಸೌಂದರ್ಯವನ್ನು ಉಳಿಸಿಕೊಂಡಿದೆ. 'ನಿಶಿಯಾಮಾ ಓನ್ಸೆನ್ ಕೆಯುನ್ಮನ್ ಹೊಟೇಲ್' ಜಪಾನಿನ ಸಂಸ್ಕೃತಿ, ಪರಂಪರೆ ಮತ್ತು ಆತಿಥ್ಯದ ಪ್ರತಿಬಿಂಬ ಎಂದೇ ಪ್ರಸಿದ್ಧ. ಇದು ಆ ದೇಶದ ಪಾರಂಪರಿಕ ಹೊಟೇಲ್‌ಗಳ (ರಿಯೋಕಾನ್) ಶ್ರೇಷ್ಠ ಉದಾಹರಣೆ ಎಂಬುದರಲ್ಲಿ ಎರಡು ಮಾತಿಲ್ಲ. ಇಲ್ಲಿ ವಾಸ್ತವ್ಯ ಹೂಡುವ ಮೂಲಕ, ಅತಿಥಿಗಳು ಜಪಾನಿನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಖುದ್ದಾಗಿ ಅನುಭವಿಸಬಹುದು.

expediav2-415447-d71511-962258

ಆ ಹೊಟೇಲಿನಲ್ಲಿ ತಂಗಲೆಂದೇ ವಿಶ್ವದ ಮೂಲೆಮೂಲೆಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಹಲವು ದೇಶಗಳ ರಾಷ್ಟ್ರಾಧ್ಯಕ್ಷರು, ಪ್ರಧಾನಿಗಳು ಗಣ್ಯರು ಈ ಹೊಟೇಲಿನಲ್ಲಿ ವಾಸ್ತವ್ಯ ಹೂಡಿದ್ದು ಅದರ ಅಗ್ಗಳಿಕೆ. 'ವಿಶ್ವದ ಅತ್ಯಂತ ಪುರಾತನ' ಎಂಬ ಭಾವನೆಯೇ ಎಂಥವರಲ್ಲಾದರೂ ಪುಳಕ ಮೂಡಿಸುತ್ತದೆ. ಈ ಹೊಟೇಲ್‌ನ ನಿರಂತರ ಕಾರ್ಯನಿರ್ವಹಣೆ, ಅದರ ಕುಟುಂಬದ ಸಮರ್ಪಣೆ, ಜಪಾನಿನ ಆತಿಥ್ಯ ಮತ್ತು ಅನನ್ಯ ಪರಂಪರೆಯ ಪ್ರತೀಕವಾಗಿರುವ ಈ ಹೊಟೇಲ್, ಆ ದೇಶದ ಪ್ರಮುಖ ಹೆಗ್ಗುರುತಾಗಿರುವುದು ಗಮನಾರ್ಹ.

01h8cgj9zdpvn02rxypz

ಬೆಟ್ಟಗಳ ಮಧ್ಯೆ, ನದಿಯ ದಡದಲ್ಲಿ, ನಿಸರ್ಗದ ತುಂಬು ಮಡಿಲಿನಲ್ಲಿರುವ ಈ ಹೊಟೇಲ್ನಲ್ಲಿ ಹಿಮಪಾತದ ಸಂದರ್ಭದಲ್ಲಿ ತಂಗುವುದು ಒಂದು ಅಪರೂಪದ ಅನುಭವ. ಕೆಲವು ಸಲ ಆ ಹೋಟೆಲಿನಲ್ಲಿ ಉಳಿಯಲು 7-8 ತಿಂಗಳು ಕಾಯಬೇಕಾಗುತ್ತದೆ. ಹಾಗಂತ ಆ ಹೊಟೇಲಿನ ರೂಮ್ ಬಾಡಿಗೆ ತೀರಾ ದುಬಾರಿಯೇನಲ್ಲ. ಒಂದು ದಿನಕ್ಕೆ ಮೂವತ್ತು ಸಾವಿರದಿಂದ ಐವತ್ತು ಸಾವಿರದವರೆಗಿನ ರೂಮುಗಳು ಲಭ್ಯ. ಇದು ಪುರಾತನ, ಐತಿಹಾಸಿಕ ಎಂದ ಮಾತ್ರಕ್ಕೆ ಎಲ್ಲವೂ ಹಳೆಯದು ಎಂದು ಭಾವಿಸಬೇಕಿಲ್ಲ. ಈ ಹೊಟೇಲ್ ಕಾಲ ಕಾಲಕ್ಕೆ ಮೇಲ್ದರ್ಜೆಗೆ ಏರುತ್ತಾ ಆಧುನಿಕತೆಯ ಸ್ಪರ್ಶವನ್ನೂ ಪಡೆದು ಕೊಂಡಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ಹೊಟೇಲ್‌ನಲ್ಲಿ ವೈಫೈ, ಖಾಸಗಿ ಒನ್ಸೆನ್ ಬಾತ್‌ಗಳು, ಕ್ಲಾಸಿಕ್ ಡೈನಿಂಗ್ ಹಾಲ್, ಬಿಜಿನೆಸ್ ಸೆಂಟರ್, ಹೈ-ಕ್ವಾಲಿಟಿ ಜಪಾನಿ ಊಟಗಳು ಎಲ್ಲವೂ ಲಭ್ಯ. ಅಲ್ಲಿ ಉಳಿಯುವುದೆಂದರೆ, ಕಾಲನ ಜತೆ ಪಯಣಿಸಿದಂತೆ ಎಂಬ ಮಾತು ಸುಳ್ಳಲ್ಲ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

Read Previous

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!

Read Next

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!