ಪ್ರವಾಸೋದ್ಯಮಕ್ಕಿದೆ Xಪರ್ಟ್ ಗಳ ಅಗತ್ಯ
ಇದು ಡಿಜಿಟಲ್ ಯುಗ. ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಕೆಎಸ್‌ಟಿಡಿಸಿ, ಜೆಎಲ್‌ಆರ್, ಮತ್ತು ಸಂಬಂಧಿತ ಸಚಿವಾಲಯಗಳು ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಪ್ರಚಾರದಲ್ಲಿ ಈ ಪರಿ ಹಿಂದುಳಿದಿರುವುದು ಗಂಭೀರ ವಿಚಾರ. ಯಾವುದೇ ಉದ್ಯಮಕ್ಕೆ ಪ್ರಚಾರವೇ ಜೀವಾಳ. ಪ್ರವಾಸೋದ್ಯಮಕ್ಕಂತೂ ಇದು ಅತ್ಯಗತ್ಯ.
ಎಕ್ಸ್ ಪ್ಲಾಟ್ ಫಾರ್ಮ್ ಮತ್ತು ಫೇಸ್ ಬುಕ್ ತೆಗೆದು ಕರ್ನಾಟಕ ಪ್ರವಾಸೋದ್ಯಮದ ಬಗ್ಗೆ ಏನಾದರೂ ಮಾಹಿತಿ ಹುಡುಕಾಡಿದರೆ ನಮಗೆ ಸಿಗುವುದು ನಿರಾಸೆ ಮತ್ತು ನಿರಾಸೆ. ಖಾಸಗಿ ಬ್ಲಾಗರ್ ಗಳು ಇನ್ ಸ್ಟಾ ಇನ್ ಫ್ಲುಯೆನ್ಸರ್ ಗಳು, ಪ್ರವಾಸಿ ಪ್ರಿಯರು ಹಾಕಿದ ಬರಹಗಳೇನೋ ಸಾಕಷ್ಟು ಸಿಗುತ್ತದೆ. ಆದರೆ ಕರ್ನಾಟಕ ಪ್ರವಾಸೋದ್ಯಮ ಎಷ್ಟು ಸಕ್ರಿಯವಾಗಿದೆ ಎಂದು ಪ್ರಶ್ನಿಸಿದರೆ ಸಿಗುವುದು ನಕಾರಾತ್ಮಕ ಉತ್ತರ. ಇಷ್ಟೊಂದು ಪ್ರಾಕೃತಿಕ ಐತಿಹಾಸಿಕ ಶ್ರೀಮಂತಿಕೆ ಉಳ್ಳ ರಾಜ್ಯ ಸಾಮಾಜಿಕ ಜಾಲತಾಣಗಳ ಬಗ್ಗೆ ಯಾಕಿಷ್ಟು ಉಪೇಕ್ಷೆ ಹೊಂದಿದೆ? ಪ್ರವಾಸೋದ್ಯಮ ಅಧಿಕಾರಿಗಳು, ಸಚಿವರು, ಇಲಾಖೆಯ ಅಧಿಕೃತ ಅಕೌಂಟುಗಳು ಎಲ್ಲವೂ ಬಹುತೇಕ ನಿಷ್ಕ್ರಯತೆಯಿಂದ ಸೊರಗಿವೆ. ಹುಣ್ಣಿಮೆಗೊಂದು ಅಮಾವಾಸ್ಯೆಗೊಂದು ಅಪ್ಡೇಟ್ ಕಾಣುತ್ತಿವೆ.
ಇದು ಡಿಜಿಟಲ್ ಯುಗ. ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಕೆಎಸ್‌ಟಿಡಿಸಿ, ಜೆಎಲ್‌ಆರ್, ಮತ್ತು ಸಂಬಂಧಿತ ಸಚಿವಾಲಯಗಳು ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಪ್ರಚಾರದಲ್ಲಿ ಈ ಪರಿ ಹಿಂದುಳಿದಿರುವುದು ಗಂಭೀರ ವಿಚಾರ. ಯಾವುದೇ ಉದ್ಯಮಕ್ಕೆ ಪ್ರಚಾರವೇ ಜೀವಾಳ. ಪ್ರವಾಸೋದ್ಯಮಕ್ಕಂತೂ ಇದು ಅತ್ಯಗತ್ಯ.

ಪಕ್ಕದ ರಾಜ್ಯ ಕೇರಳ ತನ್ನ “ಗಾಡ್ಸ್ ಓನ್ ಕಂಟ್ರಿ” ಕ್ಯಾಂಪೇನ್‌ನೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಆಕರ್ಷಕ ವಿಡಿಯೋಗಳು, ಫೋಟೋಗ್ರಾಫಿ, ಮತ್ತು ಇನ್‌ಫ್ಲುಯೆನ್ಸರ್‌ಗಳ ಸಹಯೋಗದ ಮೂಲಕ ವಿಶ್ವಾದ್ಯಂತ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಂಥ ರಾಜ್ಯಗಳು ತಮ್ಮ ರಾಜ್ಯದ ಪ್ರಾಕೃತಿಕ ಸೌಂದರ್ಯವನ್ನು ಡಿಜಿಟಲ್ ವೇದಿಕೆಗಳಲ್ಲಿ ಸಮರ್ಥವಾಗಿ ಪ್ರದರ್ಶಿಸುತ್ತಿವೆ. ಗುಜರಾತ್ ತನ್ನ “ಖುಷ್‌ಬೂ ಗುಜರಾತ್ ಕೀ” ಅಭಿಯಾನದ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿದೆ. ಆದರೆ ಕರ್ನಾಟಕ ಮಾತ್ರ ಇದರಲ್ಲಿ ಹಿಂದುಳಿದುಕೊಂಡಿದೆ. ಆಧುನಿಕ ತಂತ್ರಗಾರಿಕೆಗಳ ಕೊರತೆ ಸ್ಪಷ್ಟವಾಗಿ ಕಂಡುಬರುತ್ತಿದೆ.
ಇಂದಿನ ಯುವ ಜನಾಂಗ ಮತ್ತು ಜಾಗತಿಕ ಪ್ರವಾಸಿಗರು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿದ್ದಾರೆ. ಇನ್‌ಸ್ಟಾಗ್ರಾಮ್, ಟ್ವಿಟರ್, ಯೂಟ್ಯೂಬ್ ವೇದಿಕೆಗಳಲ್ಲಿ ಆಕರ್ಷಕ ವ್ಲಾಗ್ಸ್, ಲೈವ್ ಸ್ಟ್ರೀಮಿಂಗ್, ಮತ್ತು ಇನ್‌ಫ್ಲುಯೆನ್ಸರ್‌ಗಳ ಸಹಯೋಗ ಪ್ರವಾಸಿಗರ ಗಮನ ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ತಾಣಗಳನ್ನು ಬಳಸಿ ಆಧುನಿಕ ತಂತ್ರಗಳ ಮೂಲಕ ಪ್ರಚಾರ ಮಾಡಿದರೆ ಮಾತ್ರ ಜಾಗತಿಕ ಪ್ರವಾಸಿಗರ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಬಹುದು.
ಕರ್ನಾಟಕ ಸರ್ಕಾರವು ಈಗಲೇ ಎಚ್ಚೆತ್ತು, ಡಿಜಿಟಲ್ ಮಾರ್ಕೆಟಿಂಗ್ ತಂಡವನ್ನು ರಚಿಸಿ, ಆಕರ್ಷಕ ವಿಷಯ ರಚನೆಗೆ ಒತ್ತು ನೀಡಬೇಕು. ಸ್ಥಳೀಯ ಇನ್‌ಫ್ಲುಯೆನ್ಸರ್‌ಗಳು, ವಿಡಿಯೋಗ್ರಾಫರ್‌ಗಳು, ಮತ್ತು ಕಂಟೆಂಟ್ ಕ್ರಿಯೇಟರ್‌ಗಳೊಂದಿಗೆ ಕೊಲ್ಯಾಬೊರೇಟ್ ಮಾಡಿ, ಕರ್ನಾಟಕದ ಪ್ರವಾಸಿ ಸ್ಥಳಗಳನ್ನು ಪ್ರೊಮೋಟ್ ಮಾಡಬೇಕು. ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ, ಜಾಗತಿಕ ಪ್ರವಾಸೋದ್ಯಮ ಸ್ಪರ್ಧೆಯಲ್ಲಿ ಕರ್ನಾಟಕ ಮತ್ತಷ್ಟು ಹಿಂದೆ ಬೀಳುವ ಆತಂಕವಿದೆ. ಕರ್ನಾಟಕದ ಪ್ರವಾಸೋದ್ಯಮ ಸರಕಾರದ ಮಟ್ಟದಲ್ಲಿ ಡಿಜಿಟಲ್ ವೇದಿಕೆ ಮುಖಾಂತರ ಈಗಿಂದೀಗಲೇ ಸಕ್ರಿಯವಾಗಿ, ಸೃಜನಶೀಲ ಮತ್ತು ಆಕರ್ಷಕ ವಿಡಿಯೋ,ಫೋಟೋ ಮತ್ತು ಕಂಟೆಂಟು ಕೊಡಲು ಪ್ರಾರಂಭಿಸಬೇಕು. ಹೊರಗುತ್ತಿಗೆ ಕೊಟ್ಟಾದರೂ ಸರಿ, ಸಾಮಾಜಿಕಜಾಲತಾಣಗಳಲ್ಲಿ ಹೈಪರ್ ಆಕ್ಟಿವ್ ಆಗಲೇಬೇಕು.