ಕೇರಳ ಟೂರಿಸಂಗೆ ಟ್ರಂಪ್ ಮಾಡೆಲ್ !
ಐ ಎ ಎಸ್ ಅಧಿಕಾರಿ ಅಮಿತಾಬ್ ಕಾಂತ್ ಕೇರಳ ಟೂರಿಸಮ್ಮನ್ನು ಎತ್ತರಕ್ಕೆ ಕೊಂಡೊಯ್ದ ಗಾಥೆ ಗೊತ್ತಿಲ್ಲದ್ದೇನಲ್ಲ. ಇಂದು ಕೇರಳ ಟೂರಿಸಂ ಪ್ರತಿಕ್ಷಣ ಹೊಸ ಆಲೋಚನೆಗಳಿಗೆ ಬಸಿರಾಗುತ್ತಿದೆ. ಆಕರ್ಷಕ ತಂತ್ರಗಾರಿಕೆ ಬಳಸಿ ಪ್ರವಾಸಿಗರನ್ನು ಸೆಳೆಯುತ್ತಿದೆ. ಕೇರಳಿಗರು ಯಾವುದೇ ಉದ್ಯಮವಾದರೂ ಅದರಲ್ಲಿ ಯಶಸ್ಸು ಕಾಣಬಲ್ಲ ಬುದ್ಧಿವಂತರು. ಕಣ್ಣಿಗೆ ಕಾಣುವ ಪ್ರತಿಯೊಂದನ್ನೂ ಹೇಗೆ ಲಾಭಕ್ಕೆ ಬಳಸಿಕೊಳ್ಳಬೇಕು ಎಂಬುದನ್ನು ಕೇರಳಿಗರಿಂದಲೇ ಕಲಿಯಬೇಕು.
ತನ್ನತ್ತ ತೂರಿದ ಕಲ್ಲುಗಳನ್ನೇ ಬಳಸಿ ಕಟ್ಟಡ ಕಟ್ಟಿಕೊಳ್ಳುವುದು ಬದುಕು ಕಲಿತವನ ಲಕ್ಷಣ ಅಂತಾರೆ. ಅದು ನಿಜ. ಎಲ್ಲ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೇ ಗೆದ್ದು ತೋರಿಸುವುದು ಹೆಚ್ಚುಗಾರಿಕೆ. ಪ್ರವಾಸೋದ್ಯಮಕ್ಕೂ ಇದು ಅನ್ವಯ. ಟೂರಿಸಮ್ಮಿಗೆ ಹೇಳಿ ಮಾಡಿಸಿದ ಪರಿಸ್ಥಿತಿ ಇದ್ದಾಗ ಗೆಲ್ಲುವುದು ಮಹಾನ್ ಸಾಧನೆ ಅಲ್ಲ. ಆದರೆ ಪ್ರಕೃತಿಯ ಮುನಿಸು, ಪ್ರಾಕೃತಿಕ ವೈರುಧ್ಯಗಳು ಇದ್ದಾಗಲೂ ಪ್ರವಾಸೋದ್ಯಮ ಗೆಲ್ಲಬೇಕು ಅಂದರೆ ಅಲ್ಲಿ ತಂತ್ರಗಾರಿಕೆ ಮತ್ತು ಅದನ್ನು ಅನುಷ್ಠಾನಕ್ಕೆ ತರುವ ಸಾಮರ್ಥ್ಯ ಮುಖ್ಯವಾಗುತ್ತದೆ.
ಐ ಎ ಎಸ್ ಅಧಿಕಾರಿ ಅಮಿತಾಬ್ ಕಾಂತ್ ಕೇರಳ ಟೂರಿಸಮ್ಮನ್ನು ಎತ್ತರಕ್ಕೆ ಕೊಂಡೊಯ್ದ ಗಾಥೆ ಗೊತ್ತಿಲ್ಲದ್ದೇನಲ್ಲ. ಇಂದು ಕೇರಳ ಟೂರಿಸಂ ಪ್ರತಿಕ್ಷಣ ಹೊಸ ಆಲೋಚನೆಗಳಿಗೆ ಬಸಿರಾಗುತ್ತಿದೆ. ಆಕರ್ಷಕ ತಂತ್ರಗಾರಿಕೆ ಬಳಸಿ ಪ್ರವಾಸಿಗರನ್ನು ಸೆಳೆಯುತ್ತಿದೆ. ಕೇರಳಿಗರು ಯಾವುದೇ ಉದ್ಯಮವಾದರೂ ಅದರಲ್ಲಿ ಯಶಸ್ಸು ಕಾಣಬಲ್ಲ ಬುದ್ಧಿವಂತರು. ಕಣ್ಣಿಗೆ ಕಾಣುವ ಪ್ರತಿಯೊಂದನ್ನೂ ಹೇಗೆ ಲಾಭಕ್ಕೆ ಬಳಸಿಕೊಳ್ಳಬೇಕು ಎಂಬುದನ್ನು ಕೇರಳಿಗರಿಂದಲೇ ಕಲಿಯಬೇಕು.
ಪ್ರವಾಸೋದ್ಯಮವೂ ಅದಕ್ಕೆ ಹೊರತಲ್ಲ. ಜಾಹೀರಾತುಗಳಲ್ಲಿ ಪ್ರಸ್ತುತ ಟ್ರೆಂಡ್ ಬಳಸುವುದು, ರಾಜಕೀಯ ಬೆಳವಣಿಗೆಗಳನ್ನು ತಮ್ಮ ಪ್ರಚಾರದಲ್ಲಿ ಆಕರ್ಷಣೀಯವಾಗಿ ಬಳಸಿಕೊಳ್ಳುವುದು ಇವೆಲ್ಲದಕ್ಕೂ ಕೇರಳ ಪ್ರವಾಸೋದ್ಯಮವೇ ಮಾದರಿ. ಕಳೆದ ಜುಲೈ ತಿಂಗಳಲ್ಲಿ ಬ್ರಿಟಿಷ್ ಜೆಟ್ ವಿಮಾನ ಎಫ್ -34B ಅನಿವಾರ್ಯ ಕಾರಣಗಳಿಂದ ಕೇರಳದ ತಿರುವನಂತಪುರದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡುವಂತಾಯ್ತು. ಬೇರೆಯವರ ಕಣ್ಣಿಗೆ ಇದೊಂದು ರಕ್ಷಣಾ ಇಲಾಖೆಗೆ ಸಂಬಂಧಿಸಿದ ಸುದ್ದಿ ಅಥವಾ ಜಸ್ಟ್ ಒಂದು ಕಾಮನ್ ಸುದ್ದಿ. ಆದರೆ ಕೇರಳ ಪ್ರವಾಸೋದ್ಯಮಕ್ಕೆ ಇದು ಪ್ರಚಾರಕ್ಕೆ ಬಳಸಿಕೊಳ್ಳುವ ಸುದ್ದಿಯಾಗಿ ಕಾಣಿಸಿತು. ಮರುದಿನವೇ ಕೇರಳ ಟೂರಿಸಂ ಡಿಪಾರ್ಟ್ ಮೆಂಟ್ ಒಂದು ಜಾಹೀರಾತು ಹೊರಡಿಸಿತು. ಬ್ರಿಟಿಷ್ ಜೆಟ್ ನ ಫೊಟೋ ಹಾಕಿ, ’ಕೇರಳ ಎಂಥ ಅದ್ಭುತ ಜಾಗ ಅಂದರೆ ಇಲ್ಲಿಂದ ಬೇರೆಡೆಗೆ ಹೋಗೋಕೆ ಮನಸ್ಸೇ ಬರುವುದಿಲ್ಲ. ಡೆಫಿನೆಟ್ಲೀ ರೆಕಮೆಂಡ್’ ಎಂಬ ಕ್ಯಾಪ್ಷನ್ ಹಾಕಿ ಜಾಹೀರಾತು ಸಿದ್ಧಪಡಿಸಿಬಿಟ್ಟಿತು. ಈ ಜಾಹೀರಾತು ದೇಶಾದ್ಯಂತ ವೈರಲ್ ಆಗಿಯೂಬಿಟ್ಟಿತು.
ಬ್ರಿಟಿಷ್ ವಿಮಾನ ಕೇರಳ ಟೂರಿಸಮ್ಮಿಗೆ ಫೈವ್ ಸ್ಟಾರ್ ರಿವ್ಯೂ ಕೊಟ್ಟಿದೆ ಎಂಬ ಈ ತಮಾಷೆಯ ಜಾಹೀರಾತು ಸೋಷಿಯಲ್ ಮೀಡಿಯಾದಲ್ಲಿ ಲಕ್ಷ ಲಕ್ಷ ವೀಕ್ಷಣೆ ಪಡೆಯಿತು. ಲಾಭವಾಗಿದ್ದು ಕೇರಳ ಪ್ರವಾಸೋದ್ಯಮಕ್ಕೆ. ಜಾಹೀರಾತು ಮಾಡೋಕೆ ಕ್ರಿಯೇಟಿವ್ ಸರಕು ಸಿಗದಿದ್ದಾಗ, ಸಿಕ್ಕ ಸರಕುಗಳಲ್ಲೇ ಸೃಜನಶೀಲತೆ ಮೆರೆಯಬೇಕು. ಅಂಥದ್ದೇ ಮತ್ತೊಂದು ಕ್ರಿಯೇಟಿವ್ ಜಾಹೀರಾತು ಇದೀಗ ಮತ್ತೊಮ್ಮೆ ಕೇರಳ ಪ್ರವಾಸೋದ್ಯಮದಿಂದ ಹೊರಬಂದಿದ್ದು, ವ್ಯಾಪಕವಾಗಿ ಸುದ್ದಿಯಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ರೂಪದರ್ಶಿಯಾಗಿ ಬಳಸಿ ಟ್ರಾವೆಲ್ ಫಾರ್ ಪೀಸ್ ಎಂಬ ಜಾಹೀರಾತು ಮಾಡಿದೆ ಕೇರಳ ಪ್ರವಾಸೋದ್ಯಮ. ಶಾಂತಿಗಾಗಿ ಪ್ರವಾಸ ಎಂಬ ಈ ಜಾಹೀರಾತಿನಲ್ಲಿ ಮಲಯಾಳಿಯೊಬ್ಬ ಆನೆಯೊಂದಿಗೆ ನಿಂತು ನಗೆ ಬೀರುತ್ತಿದ್ದರೆ, ಪ್ರವಾಸಿಗನಾಗಿ ಬಂದಿರೋ ಟ್ರಂಪ್ ನಗೆಗೆ ಪ್ರತಿನಗೆ ಬೀರಿದ್ದಾರೆ. ಉಕ್ರೇನ್-ರಷ್ಯಾ, ಇಸ್ರೇಲ್-ಹಮಾಸ್, ಭಾರತ-ಪಾಕ್ ಈ ಎಲ್ಲ ಸಂಘರ್ಷಗಳಲ್ಲೂ ಮಧ್ಯಸ್ಥಿಕೆ ವಹಿಸುವ ಆಸಕ್ತಿ ತೋರಿ, ಯುದ್ಧ ನಿಲ್ಲಿಸಿದ್ದು ತಾವೇ ಎಂಬ ಕ್ರೆಡಿಟ್ ತೆಗೆದುಕೊಳ್ಳುವ ಟ್ರಂಪ್ ಹಪಾಹಪಿ ಸಾಕಷ್ಟು ಚರ್ಚೆಗೆ, ಗೇಲಿಗೆ ಮತ್ತು ಟ್ರೋಲ್ ಗೆ ಆಹಾರವಾಗಿತ್ತು.
ನೊಬೆಲ್ ಶಾಂತಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದ ಟ್ರಂಪ್ ಅವರನ್ನೇ ಗುರಿಯಾಗಿಸಿಟ್ಟುಕೊಂಡು, ಕೇರಳ ಟೂರಿಸಂ ’ಲೆಟ್ ಹುಮ್ಯಾನಿಟಿ ಟ್ರಂಪ್ ವಾರ್’ ಎಂಬ ಘೋಷವಾಕ್ಯ ಬರೆಯಿತು. ಜಾಹೀರಾತನ್ನು ಇನ್ನಷ್ಟು ಆಕರ್ಷಕವಾಗಿಸಲು ಟ್ರಂಪ್ ಅವರ ಎ ಐ ಫೊಟೋ ಕೂಡ ಬಳಸಿತು. ಇದು ಈಗ ಮತ್ತೊಮ್ಮೆ ವೈರಲ್ ಆಗಿದೆ. ಪ್ರವಾಸೋದ್ಯಮಕ್ಕೆ ಲಾಭವಾಗಿದೆ. ಕೇರಳ ಪ್ರವಾಸೋದ್ಯಮ ಕ್ಲಿಕ್ ಆಗುತ್ತಿರುವುದರ ಹಿಂದೆ ಏನೇನೆಲ್ಲ ಕಾರಣಗಳಿವೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅಲ್ವೇ?