ಜ್ಞಾನ ಮತ್ತು ವೈಚಾರಿಕತೆಯ ನೆಲೆ
ಡಾ. ಹೆಚ್. ನರಸಿಂಹಯ್ಯ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರವು ವಿಜ್ಞಾನದ ಪ್ರಚಾರಕ್ಕೆ ಮತ್ತು ಹೊಸ ಪೀಳಿಗೆಯಲ್ಲಿ ವೈಚಾರಿಕ ಮನೋಭಾವವನ್ನು ಬೆಳೆಸಲು ಒಂದು ಪರಿಣಾಮಕಾರಿ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ. ಜೀವನದುದ್ದಕ್ಕೂ ಮೂಢನಂಬಿಕೆಗಳ ವಿರುದ್ಧ ಹೋರಾಡಿದ ಡಾ. ಹೆಚ್. ನರಸಿಂಹಯ್ಯನವರ ವೈಜ್ಞಾನಿಕ ಮನೋಭಾವ ಮತ್ತು ಸಂಶೋಧನಾತ್ಮಕ ಕಲಿಕೆಯ ಮೇಲಿನ ಅವರ ಆಸಕ್ತಿಯನ್ನು ಈ ಕೇಂದ್ರ ಪ್ರತಿಬಿಂಬಿಸುತ್ತದೆ.
- ಹೊಸ್ಮನೆ ಮುತ್ತು
ಯುವ ಮನಸ್ಸುಗಳಲ್ಲಿ ವೈಜ್ಞಾನಿಕ ಕುತೂಹಲವನ್ನು ಹೊತ್ತಿಸಿ, ಪ್ರಶ್ನಿಸುವ ಮನೋಭಾವವನ್ನು ಬೆಳೆಸಿ, ಮೂಢನಂಬಿಕೆಗಳನ್ನು ಮೀರಿದ ಸತ್ಯಾನ್ವೇಷಣೆಗೆ ಕರೆ ನೀಡಿದವರು ನಮ್ಮ ನಾಡಿನ ಶ್ರೇಷ್ಠ ಚಿಂತಕರು, ಹಿರಿಯ ಶಿಕ್ಷಣ ತಜ್ಞರು, ಭೌತಶಾಸ್ತ್ರಜ್ಞರೂ ಆದ ಡಾ. ಹೆಚ್. ನರಸಿಂಹಯ್ಯನವರು. ಅವರ ಜನ್ಮಭೂಮಿಯಾದ ಗೌರಿಬಿದನೂರಿನ ಹೊಸೂರು ಗ್ರಾಮದಲ್ಲಿ, ಅವರ ಹೆಸರಿನಲ್ಲಿ ಸ್ಥಾಪಿತವಾದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರವು ಗ್ರಾಮೀಣ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಮಹತ್ವದ ಶೈಕ್ಷಣಿಕ ವೇದಿಕೆಯಾಗಿದೆ.
ಈ ಕೇಂದ್ರವು ವಿಜ್ಞಾನದ ಸಂಕೀರ್ಣ ವಿಷಯಗಳನ್ನು ಸರಳ, ಸಂವಾದಾತ್ಮಕ ಹಾಗೂ ಮನೋರಂಜನಾತ್ಮಕ ರೀತಿಯಲ್ಲಿ ಪರಿಚಯಿಸುತ್ತದೆ. ಬಾಹ್ಯಾಕಾಶದ ವಿಸ್ಮಯಗಳಿಂದ ಹಿಡಿದು ಭೂಗರ್ಭದ ರಹಸ್ಯಗಳವರೆಗೆ, ಇಡೀ ವಿಶ್ವವನ್ನು ಒಂದೇ ಕಡೆ ತಿಳಿದುಕೊಳ್ಳುವ ಅವಕಾಶ ಇಲ್ಲಿದೆ. ಡಾ. ಹೆಚ್.ಎನ್. ಅವರ ವೈಚಾರಿಕತೆಗೆ ಅನುಗುಣವಾಗಿ ಈ ವಿಭಾಗಗಳಿದ್ದು, ಈ ಕೇಂದ್ರದ ಪ್ರತಿಯೊಂದು ಪ್ರದರ್ಶನವೂ ಹೊಸ ಜ್ಞಾನಕ್ಕೆ ದಾರಿ ತೆರೆದು, ಹೊಸ ಪ್ರಶ್ನೆಯ ಹುಟ್ಟಿಗೆ ಕಾರಣವಾಗುತ್ತದೆ. ಇದು ಕೇವಲ ವಿಜ್ಞಾನ ಕೇಂದ್ರವಾಗಿರದೆ, ಯುವ ಮನಸ್ಸುಗಳಿಗೆ ವೈಜ್ಞಾನಿಕ ಮನೋಭಾವವನ್ನು ಮತ್ತು ನರಸಿಂಹಯ್ಯನವರ ಮೌಲ್ಯಗಳನ್ನು ತುಂಬುವ ಕಲಿಕಾ ಕ್ಷೇತ್ರವಾಗಿದೆ.

ಅನನ್ಯ ಆಕರ್ಷಣೆಗಳ ಸಂಗ್ರಹ
ವಿಜ್ಞಾನದ ಮೂಲಭೂತ ಪರಿಕಲ್ಪನೆಗಳನ್ನು ಜನಸಾಮಾನ್ಯರಿಗೆ ಮತ್ತು ವಿದ್ಯಾರ್ಥಿಗಳಿಗೆ ತಲುಪಿಸಲು ಈ ವಿಜ್ಞಾನ ಕೇಂದ್ರವು ವಿಶಿಷ್ಟವಾದ ಪ್ರದರ್ಶನಗಳನ್ನು ಒಳಗೊಂಡಿದೆ. ಇಲ್ಲಿ ಹೊರಾಂಗಣ ಪ್ರದರ್ಶನಗಳು, ಕಲ್ಲಿನ ಗ್ಯಾಲರಿ, ಮಾನವ ವಿಕಸನ ವಿಭಾಗ, ಬಾಹ್ಯಾಕಾಶ ವಿಭಾಗ, ಮೋಜಿನ ವಿಜ್ಞಾನ ಸಂವಾದಾತ್ಮಕ ಪ್ರದರ್ಶನಗಳು ಮತ್ತು ಮಿನಿ-ಗ್ರಹಾಲಯದಂಥ ಪ್ರಮುಖ ವಿಭಾಗಗಳನ್ನು ಹೊಂದಿದೆ. ಇಲ್ಲಿ ಇಂಡೋರ್ ಮತ್ತು ಔಟ್‌ಡೋರ್ ಪ್ರದರ್ಶನಗಳು, ವಿಜ್ಞಾನ ಪ್ರಯೋಗಗಳು, ಶೋಗಳು, ಹಾಗೂ ಆಕಾಶ-ವೀಕ್ಷಣಾ ಕಾರ್ಯಾಗಾರಗಳಂಥ ಚಟುವಟಿಕೆಗಳು ಲಭ್ಯವಿವೆ.
ಹೊರಾಂಗಣ ವಿಜ್ಞಾನ ಉದ್ಯಾನ
ಇಲ್ಲಿರುವ ದೊಡ್ಡ ಪ್ರಮಾಣದ ಮಾದರಿಗಳು ಮತ್ತು ಪ್ರದರ್ಶನಗಳು ಮುಖ್ಯವಾಗಿ ಭೌತಶಾಸ್ತ್ರದ ತತ್ವಗಳಾದ ಚಲನೆ, ಶಕ್ತಿ ಮತ್ತು ಯಾಂತ್ರಿಕತೆಯನ್ನು ದೈನಂದಿನ ಜೀವನದ ಉದಾಹರಣೆಗಳ ಮೂಲಕ ವಿವರಿಸುತ್ತವೆ. ಸೌರಶಕ್ತಿ, ಧ್ವನಿಯ ತರಂಗಗಳು ಮತ್ತು ಯಾಂತ್ರಿಕ ಸಾಧನಗಳ ಕಾರ್ಯಾಚರಣೆಯಂಥ ಭೌತಿಕ ತತ್ವಗಳನ್ನು ಪ್ರಕೃತಿಯ ನಡುವೆಯೇ ಪ್ರಾಯೋಗಿಕವಾಗಿ ಅರಿತುಕೊಳ್ಳಬಹುದು. ತೆರೆದ ಆಕಾಶದಡಿ ಪ್ರಯೋಗಗಳನ್ನು ವೀಕ್ಷಿಸುವುದು ಇಲ್ಲಿನ ವಿಶೇಷ ಅನುಭವ.

ಮಾನವ ವಿಕಸನ ವಿಭಾಗ ಮತ್ತು ಕಲ್ಲಿನ ಗ್ಯಾಲರಿ
ಮಾನವ ವಿಕಸನ ವಿಭಾಗವು ಮಾನವನ ಮೂಲ, ವಿಕಸನದ ಹಂತಗಳು ಮತ್ತು ಕಾಲಾಂತರದಲ್ಲಿ ಆದ ಬದಲಾವಣೆಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಚಿತ್ರಿಸಿದೆ. ಕಲ್ಲಿನ ಗ್ಯಾಲರಿಯು, ಭೂ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುತ್ತದೆ. ಇಲ್ಲಿ ಭೂಮಿಯ ರಚನೆ, ಖನಿಜಗಳು ಮತ್ತು ಬಂಡೆಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇನ್ನು ಇಲ್ಲಿ ಬಾಹ್ಯಾಕಾಶ ವಿಭಾಗವು ಖಗೋಳಶಾಸ್ತ್ರ ಮತ್ತು ಬ್ರಹ್ಮಾಂಡದ ಕುರಿತು ಜ್ಞಾನವನ್ನು ವಿಸ್ತರಿಸುತ್ತದೆ. ಸೌರವ್ಯೂಹ, ನಕ್ಷತ್ರಗಳು ಮತ್ತು ಗ್ಯಾಲಕ್ಸಿಗಳ ಕುರಿತಾದ ಮಾದರಿಗಳು ಹಾಗೂ ಮಾಹಿತಿ ಫಲಕಗಳು ಇಲ್ಲಿ ಲಭ್ಯ.
ಮೋಜಿನ ವಿಜ್ಞಾನ ಪ್ರದರ್ಶನಗಳು
ಈ ವಿಭಾಗವು 'ಕೈಯಿಂದ ಮಾಡಿ ಕಲಿಯಿರಿ' (Hands-on Learning) ಎಂಬ ತತ್ವವನ್ನು ಆಧರಿಸಿದೆ. ವಿಜ್ಞಾನ ಎಂದರೆ ಕೇವಲ ಸಿದ್ಧಾಂತಗಳಲ್ಲ, ಅದೊಂದು ಮೋಜಿನ ಪ್ರಯೋಗ ಎಂಬುದನ್ನು ಇದು ಸಾಬೀತುಪಡಿಸುತ್ತದೆ. ಗಣಿತ ಮತ್ತು ಭೌತಶಾಸ್ತ್ರದ ಕ್ಲಿಷ್ಟ ಪರಿಕಲ್ಪನೆಗಳನ್ನು ಸರಳ ಆಟಿಕೆಗಳು ಮತ್ತು ಸಂವಾದಾತ್ಮಕ ಮಾದರಿಗಳ ಮೂಲಕ ಮನರಂಜನೆಯಾಗಿ ಪರಿವರ್ತಿಸುತ್ತದೆ. ಉದಾಹರಣೆಗೆ: ಮಿರರ್ ಇಲ್ಯೂಷನ್, ಮ್ಯಾಜಿಕ್ ಟ್ಯಾಪ್ ಇತ್ಯಾದಿ. ಇಲ್ಲಿ ಮಕ್ಕಳು ಹಾಗೂ ವಿದ್ಯಾರ್ಥಿಗಳು ಸ್ವತಃ ಪ್ರದರ್ಶನಗಳೊಂದಿಗೆ ಸಂವಹನ ನಡೆಸಿ ವಿಜ್ಞಾನ ತತ್ವಗಳನ್ನು ಪ್ರಾಯೋಗಿಕವಾಗಿ ಕಲಿಯುವ ಅವಕಾಶವಿದೆ.
ಮಿನಿ ತಾರಾಲಯ (ಪ್ಲಾನೆಟೇರಿಯಂ)
ಇಲ್ಲಿನ ಪ್ರಮುಖ ಆಕರ್ಷಣೆಯೆಂದರೆ ಮಿನಿ-ಗ್ರಹಾಲಯ. ಇದು ಸಾರ್ವಜನಿಕರಿಗೆ ಬ್ರಹ್ಮಾಂಡದ ಅದ್ಭುತ ನೋಟಗಳನ್ನು ಮತ್ತು ಆಕಾಶಕಾಯಗಳ ಚಲನೆಯನ್ನು ವೀಕ್ಷಿಸಲು ಅವಕಾಶ ನೀಡುತ್ತದೆ. ನಕ್ಷತ್ರಗಳು, ಗ್ರಹಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗುತ್ತದೆ. ಇಲ್ಲಿನ ಆಡಿಟೋರಿಯಂನಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳು ಮತ್ತು ಪ್ರದರ್ಶನಗಳು ನಡೆಯುತ್ತವೆ.
ಡಾ. ಹೆಚ್. ನರಸಿಂಹಯ್ಯ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರವು ವಿಜ್ಞಾನದ ಪ್ರಚಾರಕ್ಕೆ ಮತ್ತು ಹೊಸ ಪೀಳಿಗೆಯಲ್ಲಿ ವೈಚಾರಿಕ ಮನೋಭಾವವನ್ನು ಬೆಳೆಸಲು ಒಂದು ಪರಿಣಾಮಕಾರಿ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ. ಜೀವನದುದ್ದಕ್ಕೂ ಮೂಢನಂಬಿಕೆಗಳ ವಿರುದ್ಧ ಹೋರಾಡಿದ ಡಾ. ಹೆಚ್. ನರಸಿಂಹಯ್ಯನವರ ವೈಜ್ಞಾನಿಕ ಮನೋಭಾವ ಮತ್ತು ಸಂಶೋಧನಾತ್ಮಕ ಕಲಿಕೆಯ ಮೇಲಿನ ಅವರ ಆಸಕ್ತಿಯನ್ನು ಈ ಕೇಂದ್ರ ಪ್ರತಿಬಿಂಬಿಸುತ್ತದೆ. ಈ ವಿಜ್ಞಾನ ಕೇಂದ್ರವು ಕೇವಲ ಶಾಲಾ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ವಿಜ್ಞಾನದ ಕುರಿತು ಕುತೂಹಲ ಹೊಂದಿರುವ ಪ್ರತಿಯೊಬ್ಬರಿಗೂ ಮುಕ್ತವಾಗಿದ್ದು, ವಿಜ್ಞಾನದ ವಿವಿಧ ಪರಿಕಲ್ಪನೆಗಳನ್ನು ಪ್ರಾಯೋಗಿಕವಾಗಿ ಕಲಿಯಲೂ, ವಿಜ್ಞಾನದ ವಿಶೇಷತೆಗಳನ್ನು ಕಣ್ಣಾರೆ ಕಂಡು ಅರಿಯಲೂ ಅಪೂರ್ವ ಅವಕಾಶ ನೀಡುತ್ತದೆ. ಇಲ್ಲಿನ ಪ್ರತಿ ಪ್ರದರ್ಶನವೂ 'ಪ್ರಶ್ನಿಸು, ಪ್ರಯೋಗ ಮಾಡು ಮತ್ತು ಸತ್ಯವನ್ನು ಕಂಡುಕೊ' ಎಂಬ ಡಾ. ಹೆಚ್.ಎನ್. ರವರ ಸಂದೇಶವನ್ನು ಸಾರುತ್ತವೆ.

ಎಚ್.ಎನ್. ನೆನಪು:
ವಿಜ್ಞಾನ ಕೇಂದ್ರದ ಆವರಣವು ಕೇವಲ ವೈಜ್ಞಾನಿಕ ಪ್ರದರ್ಶನಗಳಿಗೆ ಮಾತ್ರ ಸೀಮಿತವಾಗಿಲ್ಲ, ಇದು ಸುಂದರವಾದ ಮತ್ತು ಪ್ರಶಾಂತವಾದ ಪರಿಸರವನ್ನು ಹೊಂದಿದೆ. ವಿಜ್ಞಾನ ಕೇಂದ್ರದ ಆವರಣದ ಒಂದು ಚಿಕ್ಕ ಕೊಳದ ಬಳಿ, ಡಾ. ಎಚ್. ನರಸಿಂಹಯ್ಯನವರ ಪೂರ್ಣ-ಪ್ರಮಾಣದ ಸುಂದರವಾದ ಪ್ರತಿಕೃತಿಯನ್ನು ಸ್ಥಾಪಿಸಲಾಗಿದೆ. ಈ ಪ್ರತಿಕೃತಿಯು ವಿದ್ಯಾರ್ಥಿಗಳ ನಡುವೆ ನಿಂತು ಅವರಿಗೆ ಏನನ್ನೋ ಬೋಧಿಸುವ ಭಂಗಿಯಲ್ಲಿದ್ದು, ಇದು ಡಾ. ಎಚ್.ಎನ್. ರವರು ಶಿಕ್ಷಣ ಮತ್ತು ಸರಳ ಜೀವನಕ್ಕೆ ನೀಡಿದ ಮಹತ್ವವನ್ನು ಬಿಂಬಿಸುತ್ತದೆ. ಈ ಸ್ಥಳವು ಸಂದರ್ಶಕರಿಗೆ ಡಾ. ಎಚ್.ಎನ್. ರವರ ನೆನಪು ಮತ್ತು ಅವರ ವಿಚಾರಧಾರೆಗಳನ್ನು ನೆನಪಿಸಲು ಒಂದು ಸ್ಫೂರ್ತಿಯ ಮೂಲವಾಗಿದೆ.
ಭೇಟಿಯ ಮಾಹಿತಿ
ಜ್ಞಾನಾಸಕ್ತರಿಗೆ ಸದಾ ಸ್ಫೂರ್ತಿ ನೀಡುವ ಡಾ. ಎಚ್. ನರಸಿಂಹಯ್ಯ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರವು ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆ, ಗೌರಿಬಿದನೂರು ತಾಲೂಕಿನ ಹೊಸೂರು ಗ್ರಾಮದಲ್ಲಿದೆ. ಬೆಂಗಳೂರಿನಿಂದ: ಸುಮಾರು 95 ಕಿಮೀ ದೂರದಲ್ಲಿದ್ದು, ಗೌರಿಬಿದನೂರಿನಿಂದ ಸುಮಾರು 15 ಕಿಮೀ. ದೂರದಲ್ಲಿದೆ. ಈ ಕೇಂದ್ರವು ಪ್ರತಿದಿನ ಬೆಳಿಗ್ಗೆ 10:30 ರಿಂದ ಸಂಜೆ 5:00 ರವರೆಗೆ ತೆರೆದಿರುತ್ತದೆ. ಮಂಗಳವಾರ ರಜಾ ದಿನ. ಪ್ರವೇಶ ಶುಲ್ಕ ಒಬ್ಬರಿಗೆ 20ರೂ. ಪ್ಲಾನೆಟೇರಿಯಂ ಶೋಗೆ ಒಬ್ಬರಿಗೆ 10ರೂ. ಪ್ರಸ್ತುತ ಇಲ್ಲಿ ಊಟೋಪಚಾರದ ವ್ಯವಸ್ಥೆ ಲಭ್ಯವಿಲ್ಲ. ಆದ್ದರಿಂದ, ಪ್ರವಾಸಿಗರು ತಮ್ಮದೇ ಆದ ತಿಂಡಿ-ತಿನಿಸುಗಳನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುವುದು ಅನುಕೂಲಕರ. ಊಟದ ಸೌಲಭ್ಯಕ್ಕಾಗಿ, ಹತ್ತಿರದ ತಾಲೂಕು ಕೇಂದ್ರಕ್ಕೆ ಪ್ರಯಾಣಿಸುವುದು ಉತ್ತಮ ಪರ್ಯಾಯವಾಗಿದೆ.