ಭಾರತದ ಮಶ್ರೂಮ್ ಸಿಟಿಯಲ್ಲಿದೆ ಈ ಐತಿಹಾಸಿಕ ತಾಣಗಳು..
ಭಾರತದ ಮಶ್ರೂಮ್ ಸಿಟಿ ಎಂದೇ ಕರೆಸಿಕೊಳ್ಳುವ ಹಿಮಾಚಲ ಪ್ರದೇಶದ ಸೋಲನ್ ಪಟ್ಟಣ ಅನೇಕ ಪ್ರವಾಸಿ ತಾಣಗಳನ್ನು ಒಡಲಲ್ಲಿ ತುಂಬಿಕೊಂಡಿದೆ. ಹಿಮಾಚಲ ಪ್ರದೇಶದ ಪ್ರವಾಸದಲ್ಲಿ ತಪ್ಪದೇ ನೀವು ನೋಡಬೇಕಿರುವ ಸೋಲನ್ ಪಟ್ಟಣದ ತಾಣಗಳಿವು..
ಭಾರತದ ಯಾವುದೇ ರಾಜ್ಯವನ್ನು ನೋಡಿ, ಒಂದಿಲ್ಲೊಂದು ಐತಿಹಾಸಿಕ ತಾಣಗಳು, ನಿಸರ್ಗಧಾಮ, ಗಿರಿಧಾಮಗಳು ಕೋಟೆ-ಕೊತ್ತಲಗಳು, ದೇವಾಲಯಗಳು ಕಾಣಸಿಗುತ್ತವೆ. ಅವು ನಮ್ಮ ದೇಶದ ನೆಲದ ಇತಿಹಾಸವನ್ನು, ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಅಂತಹ ವಿಭಿನ್ನವಾದ ತಾಣ ಹಿಮಾಚಲ ಪ್ರದೇಶದಲ್ಲಿರುವ ಸೋಲನ್ ನಗರ.
ಮಶ್ರೂಮನ್ನು ಹೆಚ್ಚಾಗಿ ಬೆಳೆಯುವ ಈ ಪಟ್ಟಣವನ್ನು ʻಭಾರತದ ಮಶ್ರೂಮ್ ಸಿಟಿʼ ಎಂಬುದಾಗಿಯೂ ಕರೆಯುತ್ತಾರೆ. ಆದರೆ ಇಲ್ಲಿನ ಪ್ರಮುಖ ಪ್ರವಾಸಿ ತಾನಗಳು ಯಾವುವು ಎಂಬ ಮಾಹಿತಿ ನಿಮಗಿದೆಯಾ? ಇಲ್ಲಿದೆ ಮಾಹಿತಿ.
ನಲಗಢ ಅರಮನೆ
ಸೋಲನ್ ನಲ್ಲಿ ಭೇಟಿ ನೀಡಲೇಬೇಕಿರುವ ತಾಣಗಳ ಪೈಕಿ ಪ್ರಮುಖವಾದುದು ನಲಗಢ ಅರಮನೆ. ವಿಶೇಷವಾದ ವಾಸ್ತುಶಿಲ್ಪ ಹಾಗೂ ರಾಜಮನೆತನದ ಒಳಾಂಗಣಗಳನ್ನು ಹೊಂದಿರುವ ಈ ಅರಮನೆಯು ಪ್ರವಾಸಿಗರಿಗೆ ಮರೆಯಲಾಗದ ಅನುಭವಗಳನ್ನು ನೀಡುತ್ತಿದೆ. 1421 ರಲ್ಲಿ ಚಂದೇಲ ರಜಪೂತರಿಂದ ನಿರ್ಮಾಣಗೊಂಡ ಈ ಅರಮನೆ, ನಂತರ 17 ನೇ ಶತಮಾನದಲ್ಲಿ ನಲಗಢದ ರಾಜಮನೆತನದವರಿಂದ ಇದನ್ನು ಸ್ವಾಧೀನಪಡಿಸಿಕೊಳ್ಳಲಾಯಿತು. ಪ್ರಸ್ತುತ ಅರಮನೆಯನ್ನು ಈಗ ಪಾರಂಪರಿಕ ರೆಸಾರ್ಟ್ ಆಗಿ ಪರಿವರ್ತಿಸಲಾಗಿದ್ದು, ಸೋಲನ್‌ಗೆ ಭೇಟಿ ನೀಡುವ ಸಂದರ್ಭದಲ್ಲಿ ನೀವು ಈ ರಾಜಮನೆತನದ ವಾಸ್ತವ್ಯದ ಅನುಭವವನ್ನು ಪಡೆಯಬಹುದು.

ಮೋಹನ್ ಶಕ್ತಿ ಹೆರಿಟೇಜ್ ಪಾರ್ಕ್
ಸೋಲನ್ ನಿಂದ ಕೇವಲ ಅರ್ಧ ಗಂಟೆಯ ಪ್ರಯಾಣದ ದೂರದಲ್ಲಿರುವ ಮೋಹನ್ ಶಕ್ತಿ ಹೆರಿಟೇಜ್ ಪಾರ್ಕ್ ಭೇಟಿ ನೀಡಲು ಅತ್ಯುತ್ತಮ ಸ್ಥಳವಾಗಿದೆ. ಉತ್ತರ ಭಾರತದ ಮೊಟ್ಟಮೊದಲ ಪ್ರಾಚೀನ ಹೆರಿಟೇಜ್ ಪಾರ್ಕ್ ಇದಾಗಿದ್ದು, ಪ್ರಾಚೀನ ಹಳ್ಳಿಗಳು ಹೇಗಿದ್ದವು ಎಂದು ನೋಡಲು ಬಯಸುವವರು ಇಲ್ಲಿಗೆ ತಪ್ಪದೇ ಭೇಟಿ ನೀಡಬಹುದು. ಇಲ್ಲಿ ಪಕ್ಷಿ ವೀಕ್ಷಣೆಯ ಜೊತೆಗೆ ಪುರಾತತ್ವ ಸ್ಥಳಗಳನ್ನು ಕಣ್ತುಂಬಿಕೊಳ್ಳಬಹುದು. ಪಾರ್ಕ್‌ನ ಒಳಗಿರುವ ಕಾಳಿ ಕಾ ಟಿಬ್ಬಾ ದೇವಾಲಯಕ್ಕೆ ಭೇಟಿ ನೀಡಬಹುದು.
ಶೂಲಿನಿ ಮಾತಾ ದೇವಾಲಯ
ಸೋಲನ್ ಭೇಟಿಯ ವೇಳೆ ಅಲ್ಲಿನ ಪ್ರಮುಖ ಹಿಂದೂ ದೇವಾಲಯವಾದ ಶೂಲಿನಿ ಮಾತಾ ದೇವಾಲಯಕ್ಕೆ ತಪ್ಪದೇ ಭೇಟಿ ನೀಡಿ. ಶೂಲಿನಿ ಮಾತಾ ದೇವಾಲಯವು ದುರ್ಗಾ ದೇವಿಯ ಅವತಾರವಾದ ಶೂಲಿನಿ ಮಾತಾಗೆ ಸಮರ್ಪಿತವಾಗಿದೆ. ಆಕೆಯ ಕಪ್ಪು ಮೈಬಣ್ಣದ ಕಾರಣದಿಂದ ಕಾಳಿ ದೇವಿಯಾಗಿ ಚಿತ್ರಿಸಲಾಗಿದೆ.

ದಗ್ಶೈ ಜೈಲು ವಸ್ತು ಸಂಗ್ರಹಾಲಯ
ಈ ಸಂಗ್ರಹಾಲಯವು ಹಿಂದಿನ ಕಾಲದಲ್ಲಿ ಬ್ರಿಟಿಷ್ ಜೈಲಾಗಿದ್ದು, ಈಗ ಪ್ರವಾಸಿಗರು ಭೇಟಿ ನೀಡುವ ವಸ್ತು ಸಂಗ್ರಹಾಲಯವಾಗಿದೆ. ಅಂಡಮಾನ್‌ನಲ್ಲಿರುವ ಸೆಲ್ಯುಲಾರ್ ಜೈಲನ್ನು ಹೊರತುಪಡಿಸಿ, ಇದು ಭಾರತದ ಏಕೈಕ ಜೈಲು ವಸ್ತುಸಂಗ್ರಹಾಲಯವೆನ್ನಿಸಿಕೊಂಡಿದೆ. 1849 ರಲ್ಲಿ ಇಲ್ಲಿ ಜೈಲಿನ ನಿರ್ಮಾಣ ಪ್ರಾರಂಭವಾಯಿತು.ಒಟ್ಟು 54 ಸೆಲ್ಯುಲಾರ್ ಸೆಲ್‌ಗಳನ್ನು ಈ ಜೈಲು ಮ್ಯೂಸಿಯಂ ಒಳಗೊಂಡಿದೆ.
ಜಟೋಲಿ ಶಿವ ದೇವಾಲಯ
ನಗರದಿಂದ ಕೇವಲ 6 ಕಿ.ಮೀ ದೂರದಲ್ಲಿರುವ ಜಟೋಲಿ ಶಿವ ದೇವಾಲಯವು ಸೋಲನ್‌ನ ಪ್ರಸಿದ್ಧ ಪವಿತ್ರ ತಾಣಗಳಲ್ಲಿ ಒಂದಾಗಿದ್ದು, ಏಷ್ಯಾದ ಅತಿ ಎತ್ತರದ ಶಿವ ದೇವಾಲಯವೆಂದು ಎಂದೇ ಜನಪ್ರಿಯವಾಗಿದೆ. ಶಿವನ ಉದ್ದನೆಯ ಜಟ (ಕೂದಲು) ದಿಂದ ಈ ದೇವಾಲಯಕ್ಕೆ ಜಟೋಲಿ ಎಂಬ ಹೆಸರು ಬಂದಿದೆ ಎಂಬ ನಂಬಿಕೆಯಿದೆ. ಅಲ್ಲದೆ ಈ ದೇವಾಲಯವು ಒಂದು ಕಾಲದಲ್ಲಿ ಶಿವನ ವಿಶ್ರಾಂತಿ ಸ್ಥಳವಾಗಿತ್ತು ಎಂದು ನಂಬಲಾಗಿದೆ. ಈ ದೇವಾಲಯವು ದಕ್ಷಿಣ-ದ್ರಾವಿಡ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲ್ಪಟ್ಟಿದ್ದು, ದೇವಾಲಯದ ನಿರ್ಮಾಣ ಪೂರ್ಣಗೊಳ್ಳಲು 39 ವರ್ಷಗಳು ಬೇಕಾಯಿತು.

ಕೃಷ್ಣ ಭವನ ದೇವಸ್ಥಾನ
ಕೃಷ್ಣ ಪರಮಾತ್ಮನಿಗೆ ಅರ್ಪಿತವಾಗಿರುವ ಈ ದೇವಾಲಯವನ್ನು 1926 ರಲ್ಲಿ ನಿರ್ಮಿಸಲಾಯಿತು. ಈ ದೇವಾಲಯದ ವಾಸ್ತುಶಿಲ್ಪವು ಭಾರತೀಯ ಮತ್ತು ಯುರೋಪಿಯನ್ ಶೈಲಿಯ ವಿಶಿಷ್ಟ ಮಿಶ್ರಣವಾಗಿದ್ದು, ಕೆಲವು ಭಾಗಗಳು ಚರ್ಚ್‌ಗೆ ಹೋಲಿಕೆಯೆಂಬಂತಿದೆ.
ಕುಥಾರ್ ಕೋಟೆ
800 ವರ್ಷಗಳಷ್ಟು ಹಳೆಯದಾದ ಈ ಕೋಟೆಯು ಶಿಮ್ಲಾದಿಂದ ಕೆಲವೇ ಗಂಟೆಗಳ ದೂರದಲ್ಲಿದೆ. ಈ ಕೋಟೆಯು ಒಂದು ಕಾಲದಲ್ಲಿ ಕುಥಾರ್ ಕುಟುಂಬದ ರಾಜ ನಿವಾಸವಾಗಿ ಕಾರ್ಯನಿರ್ವಹಿಸುತ್ತಿತ್ತು. 52.8 ಚದರ ಕಿ.ಮೀ ವಿಸ್ತೀರ್ಣದಲ್ಲಿರುವ ಈ ಕೋಟೆಯೊಳಗೆ ಸುಂದರವಾದ ಉದ್ಯಾನ, ಸಿಹಿನೀರಿನ ಬುಗ್ಗೆಗಳು ಮತ್ತು ಪ್ರಾಚೀನ ದೇವಾಲಯವನ್ನು ನೋಡಬಹುದು. ಆದರೆ ಅದರ ಒಂದು ಭಾಗವನ್ನು ಖಾಸಗೀಕರಣಗೊಳಿಸಿ ರೆಸಾರ್ಟ್ ಆಗಿ ಪರಿವರ್ತಿಸಲಾಗಿದೆ. ಇದು ರಾಜಸ್ಥಾನ ವಾಸ್ತುಶಿಲ್ಪದ ಉತ್ತಮ ಉದಾಹರಣೆಯಾಗಿದ್ದು, ರಜಪೂತ ಕಲಾಕೃತಿಯ ಅಈವ್ಯಕ್ತಿಯೆಂದರೂ ತಪ್ಪಾಗಲಾರದು.

ಬಾನ್ ಮಠ
ಸೋಲನ್‌ನಲ್ಲಿರುವ ಬಾನ್ ಮಠವು ವಿಶ್ವದ ಎರಡನೇ ಅತ್ಯಂತ ಹಳೆಯ ಬಾನ್ ಮಠವಾಗಿದೆ. ಈ ಮಠವನ್ನು 1969 ರಲ್ಲಿ ಮಠಾಧೀಶ ಲುಂಗ್ಟಾಗ್ ಟೆನ್ಪೈ ನ್ಯಿಮಾ ಸ್ಥಾಪಿಸಿದರು.ಈ ಮಠವನ್ನು ಬಾನ್ ಸಮುದಾಯದ ಜನರು ಬಹಳ ಪೂಜಿಸುತ್ತಾರೆ. ಬಾನ್ ಸಮುದಾಯವು ಬೌದ್ಧ ಸಮುದಾಯಕ್ಕಿಂತಲೂ ಹಳೆಯದಾಗಿದ್ದು ತತ್ವಗಳು ಒಂದೇ ಆಗಿವೆ. ಬೆಟ್ಟದ ತುದಿಯಲ್ಲಿರುವ ಬಾನ್ ಮಠವು ಪಟ್ಟಣದ ಮತ್ತು ಹಿಮದಿಂದ ಆವೃತವಾದ ಪರ್ವತಗಳ ಸುಂದರವಾದ ನೋಟಗಳನ್ನು ನೀಡುತ್ತದೆ.