ಬೆಟ್ಟದ ಮೇಲೊಂದು ಹೊಟೇಲ್ ಮಾಡಿ..
ಚಾರಣಕ್ಕೆ ಹೋದಾಗ ಬೆಟ್ಟದ ತುದಿಯಲ್ಲೊಂದು ಹೊಟೇಲ್ ಸಿಕ್ಕರೆ ಎಷ್ಟು ಮಜವಾಗಿರಬಹುದು ಅಲ್ವಾ? ಅಂಥದ್ದೊಂದು ಅನುಭವ ಬೇಕು ಎಂದರೆ ಇಟಲಿಗೆ ಹೋಗಬೇಕು. ಅಲ್ಲಿನ ವಿಶೇಷ ಜಾಗದ ಬಗ್ಗೆ ಮಾಹಿತಿ ಇಲ್ಲಿದೆ.
ಯಾವುದಾದರೊಂದು ಬೆಟ್ಟಕ್ಕೆ ಚಾರಣ ಹೋಗಿ, ಸುಸ್ತಾಗಿ ಅಲ್ಲಿ ತಿನ್ನಲು ಅಥವಾ ಕುಡಿಯಲು ಏನೂ ಸಿಗದಿದ್ದಾಗ ಗೆಳೆಯರ ಜತೆ ʼಇಲ್ಲೊಂದು ಮ್ಯಾಗಿ ಅಂಗಡಿ ಅಥವಾ ಯಾವುದಾದರೊಂದು ಕೆಫೆ ಇದ್ದರೆ ಎಷ್ಟು ಸಕತ್ತಾಗಿರತ್ತೆ ಅಲ್ವಾʼ ಎಂಬ ಮಾತುಕತೆ ಮಾಡುವುದು ಸಾಮಾನ್ಯ. ಆದರೆ, ಇಂಥದ್ದೊಂದು ಪ್ರಯತ್ನವನ್ನು ಇಟಾಲಿಯನ್ ಆಲ್ಪ್ಸ್‌ನಲ್ಲಿ ಮಾಡಲಾಗಿದೆ. ಬಿವಾಕೊ ಗೆರ್ವಾಸುತ್ತಿ (Bivacco Gervasutti) ಎಂಬ ಹೊಟೇಲ್ ಬೆಟ್ಟದ ತುದಿಯಲ್ಲಿದೆ. ಇದೊಂದು ರೀತಿ ಅಸಾಮಾನ್ಯ ಹೊಟೇಲ್ ಎನ್ನಬಹುದು.
ಸಮುದ್ರ ಮಟ್ಟದಿಂದ 9,300 ಅಡಿ ಎತ್ತರದಲ್ಲಿರುವ ಮೌಂಟ್ ಬ್ಲಾಂಕ್ ಪರ್ವತ ಶ್ರೇಣಿಯಲ್ಲಿ ಈ ಹೊಟೇಲ್ ಇದೆ. ಇಟಲಿಯ ವ್ಯಾಲ್ ಫೆರೆಟ್‌ನಲ್ಲಿರುವ ಫ್ರೆಬೌಡ್ಜ್ ಹಿಮನದಿಯ ಮೇಲಿನ ಬಂಡೆಗೆ ಅಂಟಿಕೊಂಡಿದ್ದು, ಫ್ಯೂಚರಿಸ್ಟಿಕ್ ಹೊಟೇಲ್ ಎಂದೇ ಇದನ್ನು ಕರೆಯಬಹುದು. ಪರ್ವತಾರೋಹಿಗಳಿಗೆ, ಅಡ್ವೆಂಚರ್ ಪ್ರಿಯರಿಗೆ ಮತ್ತು ವಿಶೇಷವಾಗಿ ಏನನ್ನೋ ಬಯಸುವವರಿಗೆಂದೇ ಇಂಥದ್ದೊಂದು ಹೊಟೇಲ್ ಕಲ್ಪನೆ ವಾಸ್ತವಕ್ಕೆ ಬಂದಂತಿದೆ.
ಯಾವ ಕಾಲದಿಂದಲೋ ಇದೆ
ನೋಡಲು ಹೊಸ ರೀತಿಯಲ್ಲಿ ಕಂಡರೂ ಇದಕ್ಕೊಂದು ಇತಿಹಾಸ ಕೂಡ ಇದೆ. 1948ರಲ್ಲಿ ಇದೊಂದು ಸಣ್ಣ ಗುಡಿಸಲಾಗಿತ್ತು. ಆ ಕಾಲಕ್ಕೆ ಇಷ್ಟೆತ್ತರದಲ್ಲಿ ಗುಡಿಸಲು ಸಾಮಾನ್ಯವಾಗಿತ್ತು. ಆದರೆ,ಬಳಿಕ 2011ರಲ್ಲಿ ಇದಕ್ಕೆ ಹೊಸ ರೂಪ ನೀಡಲಾಯಿತು. ಚೆಂದದ ಕ್ಯಾಪ್ಸೂಲ್ ರೀತಿ ಇದನ್ನು ನಿರ್ಮಿಸಲಾಯಿತು. ಇಟಾಲಿಯನ್ ಪರ್ವತಾರೋಹಿ ಜಿಯುಸ್ಟೊ ಗೆರ್ವಾಸುತ್ತಿ ಹೆಸರನ್ನೇ ಈ ಜಾಗಕ್ಕೆ ಇಡಲಾಯಿತು. ಗೆರ್ವಾಸುತ್ತಿ ಸಾಹಸ ಹಾಗೂ ಸಾಧನೆಗೆ ಗೌರವ ನೀಡುವ ಉದ್ದೇಶದಿಂದ ಅವರ ಹೆಸರನ್ನೇ ಇದಕ್ಕಿಟ್ಟಿದ್ದು.
ವಿಶ್ವದ ಅತ್ಯಂತ ಪುರಾತನ ಹೊಟೇಲ್ ಜಪಾನಿನಲ್ಲಿದೆ..
ಲುಕಾ ಜೆಂಟಿಲ್ಕೋರ್ ಮತ್ತು ಸ್ಟೆಫಾನೊ ಟೆಸ್ಟಾ ಎಂಬ ಇಬ್ಬರು ಆರ್ಕಿಟೆಕ್ಟ್ಸ್ ಈ ಹೊಟೇಲ್ ವಿನ್ಯಾಸ ಮಾಡಿದವರು. ಈ ಹೊಟೇಲ್ ಪರ್ವತದ ಪಾರ್ಶ್ವದಲ್ಲಿ ಸಿಲುಕಿಕೊಂಡಿರುವ ಕೆಂಪು ಮತ್ತು ಬಿಳಿ ಬಣ್ಣದ ಬಾಹ್ಯಾಕಾಶ ನೌಕೆಯಂತೆ ಕಾಣುತ್ತದೆ. ಈ ಹೊಟೇಲ್ ಅನ್ನು ಕಣಿವೆಯಲ್ಲಿ ವಿನ್ಯಾಸ ಮಾಡಿ ಹಾಗು ಅಲ್ಲೇ ಪೂರ್ತಿಯಾಗಿ ಸಿದ್ಧಗೊಳಿಸಿದ ಬಳಿಕ ಈ ಜಾಗಕ್ಕೆ ತಂದು ಸ್ಥಾಪಿಸಲಾಗಿದೆ. ಹೆಲಿಕಾಪ್ಟರ್ ಮೂಲಕ ಇದನ್ನು ಇಲ್ಲಿಗೆ ತರಲಾಗಿದೆ. ಸುಮಾರು 30 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿರುವ ಈ ಹೊಟೇಲ್ ಆಕರ್ಷಕ ಹಾಗೂ ಸುರಕ್ಷಿತ ಎರಡೂ ಹೌದು.

ಆಧುನಿಕ ತಂತ್ರಜ್ಞಾನ:
ದೂರದ ಯಾವುದೋ ಬೆಟ್ಟದಲ್ಲಿರುವುದರಿಂದ ಇಲ್ಲಿ ಯಾವುದೇ ಸೌಕರ್ಯಗಳಿಲ್ಲ ಎಂದರ್ಥವಲ್ಲ. ದೂರದ ಪ್ರದೇಶದಲ್ಲಿದ್ದರೂ, ಈ ಕ್ಯಾಪ್ಸುಲ್ ಆಧುನಿಕ ತಂತ್ರಜ್ಞಾನವನ್ನು ಹೊಂದಿದೆ. ಸೌರಶಕ್ತಿಯನ್ನು ಇಲ್ಲಿ ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿದ್ದು, ಅದರಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಇದು ಎಲ್ಇಡಿ ದೀಪಗಳು, ಸಂವಹನ ವ್ಯವಸ್ಥೆಗಳು ಮತ್ತು ಇತರ ಸೌಲಭ್ಯಗಳಿಗೆ ಉಪಯುಕ್ತ. ಇಲ್ಲಿಗೆ ಹೋಗಿದ್ದನ್ನು ಕೂಡಲೇ ಇನ್‌ಸ್ಟಾಗ್ರಾಂ ಸ್ಟೋರಿಗೆ ಹಾಕಬೇಕು ಅಥವಾ ಗೆಳೆಯರಿಗೆ ವಾಟ್ಸಪ್ ಮಾಡಿ ಖುಷಿ ಹಂಚಿಕೊಳ್ಳಬೇಕು ಎಂದುಕೊಂಡವರಿಗೆ ಇಲ್ಲಿ ಇಂಟರ್‌ನೆಟ್ ವ್ಯವಸ್ಥೆ ಕೂಡ ಇದೆ. ಹೀಗಾಗಿ ಯಾರಾದರೂ ಅಲ್ಲಿಗೆ ಹೋಗಿ ಅನುಭವವನ್ನು ಕೂಡಲೇ ಹಂಚಿಕೊಳ್ಳಬೇಕು ಎಂದುಕೊಂಡರೆ ಫೋಟೋ ಮತ್ತು ಲೇಖನವನ್ನು ಪ್ರವಾಸಿ ಪ್ರಪಂಚಕ್ಕೆ ಸುಲಭವಾಗಿ ಕಳಿಸಬಹುದು.

ಹೋಗುವುದು ಸುಲಭವಲ್ಲ:
ಬಿವಾಕೊ ಗೆರ್ವಾಸುತ್ತಿ ತಲುಪುವುದೇ ಒಂದು ದೊಡ್ಡ ಸಾಹಸ. ಇಲ್ಲಿಗೆ ತಲುಪಲು ಯಾವುದೇ ರಸ್ತೆಗಳಿಲ್ಲ ಅಥವಾ ಕೇಬಲ್ ಕಾರ್‌ಗಳಿಲ್ಲ. ದೊಡ್ಡ ಪರ್ವತವನ್ನು ಹತ್ತುವುದೊಂದೇ ದಾರಿ. ವ್ಯಾಲ್ ಫೆರೆಟ್‌ನಿಂದ ಇಲ್ಲಿಗೆ ಏರಲು ಸಾಮಾನ್ಯವಾಗಿ 3 ರಿಂದ 6 ಗಂಟೆಗಳ ಕಾಲ ತೆಗೆದುಕೊಳ್ಳುತ್ತದೆ. ಅಲ್ಲಿಗೆ ಹೋಗುವ ದಾರಿಗಳು ಕೂಡ ಕಿರಿದಾಗಿರುತ್ತವೆ ಹಾಗೂ ಹಿಮನದಿಗಳನ್ನು ದಾಟಿ ಹೋಗಬೇಕು. ಕೆಲವು ಕಡೆ ಹಗ್ಗಗಳ ಸೇತುವೆ ಇದೆ. ಅದನ್ನು ಬಹಳ ಎಚ್ಚರಿಕೆಯಿಂದ ದಾಟಬೇಕು.
ಪರ್ವತಾರೋಹಿಗಳು ಕ್ರಾಂಪನ್ಸ್, ಹೆಲ್ಮೆಟ್‌ಗಳು ಮತ್ತು ಹಗ್ಗಗಳು ಸೇರಿದಂತೆ ಸರಿಯಾದ ಗೇರ್‌ಗಳೊಂದಿಗೆ ಸಜ್ಜಿತರಾಗಿ ಹೋಗುವುದು ಉತ್ತಮ. ಅಲ್ಲಿನ ಹವಾಮಾನ ಕ್ಷಣಕ್ಷಣಕ್ಕೂ ಬದಲಾಗಬಹುದು. ಇದಕ್ಕೆ ಸರಿಯಾದ ತಯಾರಿ ಮಾಡಿಕೊಳ್ಳುವುದು ಅಗತ್ಯ. ಕೊನೆಯ ಸ್ವಲ್ಪ ದೂರದ ಮಾರ್ಗ ಬಹಳ ಕಷ್ಟವಿರುವುದರಿಂದ ಮಾನಸಿಕವಾಗಿ ಸಿದ್ಧರಾಗಿ ಹೋಗಬೇಕು.

ವಿಭಿನ್ನ ಅನುಭವ
ಬೆಟ್ಟದ ಮೇಲಿರುವ ಹೊಟೇಲ್ ಎಂದು ಕಲ್ಪಿಸಿಕೊಳ್ಳುವುದೇ ವಿಭಿನ್ನವಾಗಿರುತ್ತದೆ. ಈ ಹೊಟೇಲ್ ಕೂಡ ಮಾಮೂಲಿ ಹೊಟೇಲ್‌ಗಳಿಗಿಂತ ವಿಭಿನ್ನ. ಭೇಟಿ ನೀಡಿ ಅಲ್ಲಿ ಉಳಿದುಕೊಳ್ಳಲು ಕೂಡ ವ್ಯವಸ್ಥೆಯಿದೆ. ಕನಿಷ್ಠ ಶುಲ್ಕ ನೀಡಿ ಬುಕ್ ಮಾಡಿರಬೇಕು. ಇದು ಪರ್ವತಾರೋಹಿಗಳಿಗೆ ಆಶ್ರಯ ತಾಣವಾಗಿ ವರ್ಷವಿಡೀ ತೆರೆದಿರುತ್ತದೆ. ಭೇಟಿ ನೀಡುವವರು ಇಲ್ಲಿನ ಅನುಭವವನ್ನು "ಬೇರೆ ಪ್ರಪಂಚದ ಅನುಭವ" ಎಂದು ವಿವರಿಸುತ್ತಾರೆ. ಇಲ್ಲಿ ಐಷಾರಾಮಿ ವ್ಯವಸ್ಥೆಗಳಿಲ್ಲ. ಸವಾಲುಗಳನ್ನು ಎದುರಿಸಲು ಇಚ್ಛಿಸುವವರು ಹೋಗಬಹುದು.
ಇತ್ತೀಚಿನ ವರ್ಷಗಳಲ್ಲಿ, ಇದು ಹೆಚ್ಚು ಜನಪ್ರಿಯತೆ ಪಡೆದುಕೊಂಡು ಗಮನ ಸೆಳೆದಿದೆ. ಈ ಜನಪ್ರಿಯತೆಯಿಂದ ಅನುಭವವಿಲ್ಲದ ಅನೇಕ ಚಾರಣಿಗರು ಸರಿಯಾದ ಸಿದ್ಧತೆ ಇಲ್ಲದೆ ಈ ಕಠಿಣ ಪರ್ವತವನ್ನು ಏರಲು ಪ್ರಯತ್ನಿಸುತ್ತಿದ್ದಾರೆ. ಇದು ಅಪಾಯಕಾರಿ. ಆದರೂ, ನುರಿತ ಸಾಹಸಿಗಳಿಗಾಗಿ ಬಿವಾಕೊ ಗೆರ್ವಾಸುತ್ತಿ ಆಲ್ಪೈನ್ ವಿಶೇಷವಾಗಿ ಕಾಣಿಸುತ್ತದೆ.
ನಾವೀನ್ಯತೆ, ಸುಸ್ಥಿರತೆ ಮತ್ತು ಶುದ್ಧ ಕಾಡಿನ ಪರಿಪೂರ್ಣ ಮಿಶ್ರಣವಾಗಿದೆ. ಇದು ಕೇವಲ ಮಲಗುವ ಸ್ಥಳವಲ್ಲ, ಆದರೆ "ಹೋಟೆಲ್" ಎಂಬ ಕಲ್ಪನೆಯನ್ನೇ ಬದಲಿಸುವ ಒಂದು ತಾಣವಾಗಿದೆ.
ಸೌಲಭ್ಯಗಳು:
- ಸಣ್ಣ ಪ್ರವೇಶ ದ್ವಾರ
- ಸಾಮುದಾಯಿಕ ಭೋಜನದ ವ್ಯವಸ್ಥೆ.
- ಸುಮಾರು 12 ಜನರಿಗೆ ಅವಕಾಶ ಕಲ್ಪಿಸುವ ಬಂಕ್ ಬೆಡ್‌ಗಳನ್ನು ಹೊಂದಿರುವ ಎರಡು ಮಲಗುವ ಕೋಣೆಗಳು.
- ದೊಡ್ಡ ವೃತ್ತಾಕಾರದ ಕಿಟಕಿಗಳು ಹೊರಗಿನ ಹಿಮನದಿಗಳು ಮತ್ತು ಪರ್ವತ ಶಿಖರಗಳ ವಿಹಂಗಮ ನೋಟವನ್ನು ನೀಡುತ್ತವೆ. ಇದು ಪ್ರವಾಸಿಗರಿಗೆ ಪರ್ವತಗಳ ಮೇಲೆ ತೇಲುತ್ತಿರುವಂಥ ಅನುಭವವನ್ನು ನೀಡುತ್ತದೆ.